ಅತಿಸಾರ ಅಥವಾ ಭೇದಿ (Diarrhea, Loose motion) ಆದಾಗಲೆಲ್ಲ, ಪ್ರತಿಯೊಬ್ಬರೂ, ನನ್ನ ಶತ್ರುವಿಗೂ ಈ ತೊಂದರೆ ಮಾತ್ರ ಕೊಡಬೇಡ ದೇವರೇ ಎಂದು ಹೇಳುವುದುಂಟು. ಯಾಕೆಂದರೆ, ಭೇದಿಯೆಂಬ ಸಂಕಟದ ತೊಂದರೆಯೇ ಅದು. ಏನೂ, ತಿನ್ನಲಾರದ, ಶಕ್ತಿಹೀನ ಪರಿಸ್ಥಿತಿಯದು. ಇಂಥ ಸಂದರ್ಭ ಬಹಳಷ್ಟು ಮಂದಿಗೆ ಏನು ತಿನ್ನಬೇಕು ಅಥವಾ ಏನು ತಿನ್ನಬಾರದು ಎಂಬುದೇ ತಿಳಿದಿರುವುದಿಲ್ಲ. ಸಾಮಾನ್ಯ ಊಟವನ್ನೇ ಮಾಡುತ್ತಿದ್ದೇನಲ್ಲ, ಆದರೂ ಯಾಕೆ ಭೇದಿ ನಿಲ್ಲುತ್ತಿಲ್ಲ ಎಂದು ಅನಿಸಬಹುದು. ಆದರೆ, ನೆನಪಿಡಿ, ನಿಮ್ಮ ನಿತ್ಯದ ಸಾಮಾನ್ಯ ಊಟವೂ ಕೂಡಾ, ಭೇದಿಯ ತೀವ್ರತೆಯನ್ನು ಹೆಚ್ಚಿಸಬಹುದು. ಬೇದಿ ಕಡಿಮೆಯಾಗಬೇಕೆಂದರೆ, ಔಷಧಿ, ಮಾತ್ರೆಗಳ ಸೇವನೆಯ (home remedies for loose motion) ಜೊತೆಗೇ ಸರಿಯಾದ ಆಹಾರ ಸೇವನೆಯೂ (Foods in time of loose motion) ಕೂಡಾ ಭೇದಿ ಬೇಗ ಗುಣವಾಗುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹಾಗಾದರೆ ಬನ್ನಿ, ಯಾವೆಲ್ಲ ಆಹಾರವನ್ನು ಭೇದಿಯ ಸಮಯದಲ್ಲಿ ತಿನ್ನುವುದು ಒಳ್ಳೆಯದು (health guide) ಎಂಬುದನ್ನು ನೋಡೋಣ ಬನ್ನಿ.
1. ಖಿಚಡಿ: ಹೌದು, ಖಿಚಡಿ ಎಂದ ತಕ್ಷಣ ನೆನಪಾಗುವುದು ಆರೋಗ್ಯ ಸರಿ ಇಲ್ಲದ ದಿನಗಳೇ. ಭಾರತೀಯರ ಬಹುತೇಕರ ಮನೆಗಳಲ್ಲಿ, ಆರೋಗ್ಯ ಸರಿ ಇಲ್ಲದಾಗ ಸಹಾಯಕ್ಕೆ ಬರುವ ಏಕೈಕ ಆಹಾರವೆಂದರೆ ಅದು ಖಿಚಡಿ. ಹೆಸರು ಬೇಳೆ ಹಾಗೂ ಅಕ್ಕಿಯನ್ನು ಬೇಯಿಸಿ ಒಗ್ಗರಣೆ ಹಾಕಿ ಮಾಡಿದ ಪೌಷ್ಠಿಕ ಆಹಾರವಿದು. ಕೆಲವು ತರಕಾರಿಗಳನ್ನೂ ಇದಕ್ಕೆ ಹಾಕಿ ಚೆನ್ನಾಗಿ ಮೆದುವಾಗಿ ಬೇಯಿಸಿ ಮಾಡಿದರೆ, ರುಚಿಕರವಾಗಿರುತ್ತದೆ. ತುಪ್ಪ ಹಾಕಿ, ಮಸಾಲೆಗಳನ್ನು ಅಷ್ಟಾಗಿ ಹಾಕದೆ ಮಾಡಿದ ಈ ಖಿಚಡಿ ಹೊಟ್ಟೆಗೆ ಹದವಾಗಿರುತ್ತದೆ. ಬೇದಿಯಂತ ಸಂದರ್ಭಗಳಲ್ಲಿ ಜೀರ್ಣಕ್ರಿಯೆ ಸಂಪೂರ್ಣ ಹದಗೆಟ್ಟಿದ್ದಾಗ ಸುಲಭವಾಗಿ ಜೀರ್ಣವಾಗುವ ಆಹಾರವಿದು. ಖಿಚಡಿ ಮಾಡಲು ಬರದಿದ್ದರೆ, ಮಾಡಿಕೊಳ್ಳುವಷ್ಟು ಶಕ್ತಿ ಇಲ್ಲದಿದ್ದರೆ, ಕೇವಲ ಗಂಜಿ ಊಟವನ್ನು ಮಾಡುವುದು ಒಳ್ಳೆಯದು. ಅನ್ನವನ್ನು ಗಂಜಿ ಇರುವಂತೆ ಮೆದುವಾಗಿ ಬೇಯಿಸಿಕೊಂಡು ಉಪ್ಪು ಹಾಗೂ ತುಪ್ಪ ಹಾಕಿ ಉಣ್ಣುವುದು ಕೂಡಾ ಸಾಕಷ್ಟು ಶಕ್ತಿಯನ್ನು ಕೊಡುತ್ತದೆ.
2. ಬಾಳೆಹಣ್ಣು: ಪೊಟಾಶಿಯಂ ಹಾಗೂ ಪೆಕ್ಟಿನ್ ಹೇರಳವಾಗಿರುವ ಬಾಳೆಹಣ್ಣು, ಮಲವನ್ನು ಗಟ್ಟಿಗೊಳಿಸುವ ಕೆಲಸವನ್ನೂ ಮಾಡುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟ್‌ಗಳು ದೇಹಕ್ಕೆ ಬೇಕಾದ ಶಕ್ತಿಯನ್ನೂ ನೀಡಿ, ಬೇದಿಯಿಂದ ಕಳೆದುಕೊಂಡ ಚೈತನ್ಯವನ್ನು ಮರಳಿ ನೀಡುವಲ್ಲಿ ಸಹಾಯ ಮಾಡುತ್ತವೆ.
3. ಮಜ್ಜಿಗೆ: ಪ್ರೊಬಯಾಟಿಕ್ ಆಹಾರಗಳು ಬೇದಿ ಸಮಯದಲ್ಲಿ ಒಳ್ಳೆಯದು. ಇದು ಜೀರ್ಣನಾಳದಲ್ಲಿ ಅಗತ್ಯವಾಗಿ ಬೇಕಾದ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ವೃದ್ಧಿಸಿ, ಜೀರ್ಣಾಂಗವ್ಯೂಹದ ಒಟ್ಟು ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಈ ಮಜ್ಜಿಗೆಗೆ, ಜೀರಿಗೆ ಪುಡಿ, ಶುಂಠಿಯಂತಹ ವಸ್ತುಗಳನ್ನೂ ಸೇರಿಸಿ ಕುಡಿದರೆ, ಇನ್ನೂ ಉತ್ತಮ ಸುಧಾರಣೆ ಕಾಣಬಹುದು.
4. ದಾಳಿಂಬೆ: ಬೇದಿಯ ಸಂದರ್ಭ ದಾಳಿಂಬೆಯಂತಹ ಒಳ್ಳೆಯ ಹಣ್ಣು ಬೇರೊಂದಿಲ್ಲ. ಬಹಳ ಸಂದರ್ಭಗಳಲ್ಲಿ, ಆರಂಭದ ಹಂತದಲ್ಲಿ ಕೇವಲ ದಾಳಿಂಬೆಯಿಂದ ಬೇದಿ ನಿಲ್ಲುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಬೇದಿಯ ಸಂದರ್ಭ ಬಹಳ ಸಹಾಯ ಮಾಡುತ್ತವೆ ಹಾಗೂ ಜೀರ್ಣಾಂಗವ್ಯೂಹದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ದಾಳಿಂಬೆಯ ರಸವನ್ನು ಸೇವಿಸುವುದರಿಂದ ಮಾತ್ರವಲ್ಲದೆ, ದಾಳಿಂಬೆಯ ಸಿಪ್ಪೆಯ ಚಹಾ ಮಾಡಿ ಕುಡಿಯುವುದರಿಂದ ಹೆಚ್ಚು ಪರಿಹಾರ ಕಾಣಬಹುದು.
5. ಬೇಯಿಸಿದ ಆಲೂಗಡ್ಡೆ: ತರಕಾರಿಗಳ ವಿಚಾರಕ್ಕೆ ಬಂದರೆ ಆಲೂಗಡ್ಡೆಯನ್ನು ಬೇದಿಯ ಸಂದರ್ಭ ತಿನ್ನಬಹುದು. ಆದರೆ, ಯಾವ ಮಸಾಲೆ ಅಥವಾ ಹೆಚ್ಚು ಜಿಡ್ಡಿನಿಂದ ಅಡುಗೆ ಮಾಡದೆ, ಕೇವಲ ಉಪ್ಪು ಹಾಕಿ ಬೇಯಿಸಿ ಮಾಡಿದ ಮಸಾಲೆ ರಹಿತ ಅಥವಾ ಕೇವಲ ಜೀರಿಗೆ ಅರಿಶಿನದಂತಹ ಜೀರ್ಣಕ್ರಿಯೆಗೆ ಪೂರಕ ಮಸಾಲೆಗಳನ್ನು ಹಾಕಿ ಮಾಡಿದ ಆಲೂಗಡ್ಡೆ ಪಲ್ಯವನ್ನು ಸೇವಿಸಬಹುದು. ಇದರಲ್ಲಿರುವ ಕಾರ್ಬೋಹೈಡ್ರೇಟ್, ಈ ಸಂದರ್ಭದಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಶಕ್ತಿಯನ್ನು ನೀಡುತ್ತದೆ.
ಇದನ್ನೂ ಓದಿ: Home Remedies for Loose Motions : ಭೇದಿ ತಡೆಗೆ ಸಿಂಪಲ್ ಮನೆಮದ್ದುಗಳು