ಕೆಲವು ಆಹಾರಗಳು ತಮ್ಮಷ್ಟಕ್ಕೇ ತಾವು ಹೊಟ್ಟೆಗೇನೂ ಹಾನಿ ಮಾಡುವುದಿಲ್ಲ. ಆದರೆ ಇನ್ನೊಂದು ಆಹಾರದೊಂದಿಗೆ ಸೇರಿದಾಗ ಅವರು ಆರೋಗ್ಯವನ್ನು ಏರುಪೇರು ಮಾಡುತ್ತವೆ. ಮಾನವರಲ್ಲಿ ಸಹವಾಸ ದೋಷವಿದ್ದ ಹಾಗೆ! ವಿಪರ್ಯಾಸವೆಂದರೆ, ಹೀಗೆ ಒಟ್ಟಿಗೆ ಸೇವಿಸುವುದು ಸಲ್ಲದು ಎನ್ನುವಂಥ ಕೆಲವು ಕಾಂಬಿನೇಷನ್‌ಗಳು ಅತ್ಯಂತ ಜನಪ್ರಿಯ. ಉದಾ: ಹಾಲು ಮತ್ತು ಮೊಸರನ್ನು ಒಟ್ಟಿಗೇ ಸೇವಿಸುವುದು. ಅವುಗಳನ್ನು ಬೇರೆ ಬೇರೆ ಹೊತ್ತಿನಲ್ಲಿ ಸೇವಿಸಿದಾಗ ಆರೋಗ್ಯಕ್ಕೆ ಪುಷ್ಟಿಯನ್ನೇ ಕೊಡುವಂಥವಾದರೂ, ಒಟ್ಟಿಗೆ ಸೇವಿಸಿದಾಗ ಹೊಟ್ಟೆ ಹಾಳು ಮಾಡುತ್ತವೆ ಅಥವಾ ಬೇಕಾದ ಫಲಿತಾಂಶವನ್ನು ನೀಡುವುದಿಲ್ಲ. ಇಂಥ ಇನ್ನೂ ಕೆಲವು ಕಾಂಬಿನೇಷನ್‌ಗಳನ್ನು ತಜ್ಞರು ಪಟ್ಟಿ ಮಾಡುತ್ತಾರೆ.
ಬ್ರೆಡ್ ಮತ್ತು ಜ್ಯಾಮ್!
ಇದಂತೂ ಮಕ್ಕಳ ಪ್ರಿಯ ಕಾಂಬಿನೇಷನ್. ದೊಡ್ಡವರಿಗೂ ಬ್ರೆಡ್-ಜ್ಯಾಮ್ ಜೋಡಿ ಇಷ್ಟವೆಂದರೆ ತಪ್ಪಿಲ್ಲ. ಎಷ್ಟೋ ಜನರ ಬೆಳಗಿನ ತಿಂಡಿ ಇದು ಮತ್ತು ಇದು ಮಾತ್ರ. ಪ್ರೊಟೀನ್ ಮತ್ತು ಕೊಬ್ಬಿನಲ್ಲಿ ಖೋತಾ ಖಾತೆಯ ಬ್ರೆಡ್‌ನಲ್ಲಿರುವುದು ಸರಳ ಪಿಷ್ಟ ಮಾತ್ರ. ಇನ್ನು ಜ್ಯಾಮ್‌ನಲ್ಲಿರುವುದು ಸಕ್ಕರೆಯಂಶವಂತೂ ಮುಂದಿನ ಒಂದು ತಾಸಿನಲ್ಲಿ ಖಾಲಿಯಾಗಿ ಬಿಡುತ್ತದೆ. ಅಂದರೆ, ಈ ಉಪಾಹಾರ ಹೆಚ್ಚು ಸಮಯದವರೆಗೆ ನಮಗೆ ಶಕ್ತಿ ಒದಗಿಸುವುದಿಲ್ಲ. ಇದನ್ನು ತಿಂದ ಎರಡು ತಾಸಿನೊಳಗೆ ಮತ್ತೆ ಹಸಿವಾಗಿ, ಇನ್ನಷ್ಟು ತಿನ್ನಬೇಕು ಎಂಬ ಭಾವನೆ ಹೆಚ್ಚಿಸುತ್ತದೆ. ಹಾಗಾಗಿ ಜೊತೆಗಿಷ್ಟು ಪ್ರೋಟೀನ್, ನಾರು ಮತ್ತು ಕೊಬ್ಬಿನಂಶವಿದ್ದರೆ ಅನುಕೂಲ
ಕಾಫಿ/ ಚಹಾ ಮತ್ತು ಪಾಲಕ್ ಪರಾಟ
ಊಟ ಅಥವಾ ಉಪಾಹಾರಕ್ಕೆ ಪರಾಟ ಸೇವಿಸುವುದು ಬಹಳ ಮಂದಿಯ ಆಹಾರ ಕ್ರಮ. ಇದರೊಂದಿಗೆ ಚಹಾ ಅಥವಾ ಕಾಫಿ ಕುಡಿಯುವ ಕ್ರಮವಿದ್ದರೆ, ಅದನ್ನು ತ್ಯಜಿಸುವುದು ಒಳ್ಳೆಯದು. ಕಾರಣ, ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದಂಶ ಹೇರಳವಾಗಿದೆ. ಚಹಾದಲ್ಲಿರುವ ಪಾಲಿಫೆನಾಲ್‌ಗಳು ಮತ್ತು ಟ್ಯಾನಿನ್‌ಗಳು ಹಾಗೂ ಕಾಫಿಯಲ್ಲಿರುವ ಕ್ಲೋರೊಜೆನಿಕ್ ಆಮ್ಲ ಕಬ್ಬಿಣದಂಶವನ್ನು ಹೀರಿಕೊಳ್ಳದಂತೆ ಶರೀರವನ್ನು ತಡೆಯುತ್ತದೆ. ಹಾಗಾಗಿ, ದೇಹಕ್ಕೆ ಕಬ್ಬಿಣ ಬೇಕೆಂದು ನಾವು ತಿನ್ನುವ ಪಾಲಕ್‌ನ ಸತ್ವ ನಮಗೆ ದೊರೆಯದೇ ಹೋಗುತ್ತದೆ.
ಹಾಲಿನೊಂದಿಗೆ ಸಿಟ್ರಸ್ ಹಣ್ಣು
ಮಿಲ್ಕ್‌ಶೇಕ್ ಮತ್ತು ಸ್ಮೂದಿ ಪ್ರಿಯರು ಕೆಲವೊಮ್ಮೆ ಯಾವುದೆಂದರೆ ಆ ಹಣ್ಣನ್ನು ಹಾಲಿನೊಂದಿಗೆ ಬೆರೆಸುವುದಿದೆ. ಇದರಿಂದ ಸೋಜಿಗದ ರುಚಿ ಹುಟ್ಟುತ್ತದೆ ಎನ್ನುವುದು ನಿಜವಾದರೂ, ಹಲವು ಬಾರಿ ಹೊಟ್ಟೆಗೆ ಸಮಸ್ಯೆಯಾಗುವುದಿದೆ. ಕಿತ್ತಳೆ, ಮೂಸಂಬಿಯಂಥ ಹುಳಿ ರುಚಿಯ ಯಾವುದೇ ಹಣ್ಣುಗಳನ್ನು ಹಾಲಿನೊಂದಿಗೆ ಬೆರೆಸಿದಾಗ ಅಜೀರ್ಣವಾಗುವ ಮತ್ತು ಹೊಟ್ಟೆಯ ಪಿಎಚ್ (pH) ಬದಲಾಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಈ ಕಾಂಬಿನೇಷನ್‌ನಿಂದ ದೂರ ಇದ್ದಷ್ಟೂ ಕ್ಷೇಮ
ಪಿಜ್ಜಾ ಮತ್ತು ಸೋಡ
ಈ ಜೋಡಿಯನ್ನು ಬೇರ್ಪಡಿಸಿದರೆ ಆಹಾರ ಪ್ರಿಯರು ಶಾಪ ಹಾಕಬಹುದು! ಆದರೆ ಸಮಸ್ಯೆಯೇನೆಂದರೆ, ಪಿಜ್ಜಾದಲ್ಲಿ ಸ್ಯಾಚುರೇಟೆಡ್ ಕೊಬ್ಬು ವಿಪುಲವಾಗಿದೆ ಮತ್ತು ಸೋಡಾದಲ್ಲಿ ಉಪ್ಪಿನಂಶ ಸಿಕ್ಕಾಪಟ್ಟೆ ಇದೆ. ಈ ಮಿಶ್ರಣ ನಮ್ಮ ಹೊಟ್ಟೆಯ ಜೀರ್ಣಕಾರಿ ಕಿಣ್ವಗಳನ್ನು ಹಾನಿಗೊಳಿಸಿ, ಪಚನ ವ್ಯವಸ್ಥೆಯನ್ನೇ ಬುಡಮೇಲು ಮಾಡಿಬಿಡಬಹುದು. ಇದರಿಂದ ಹೊಟ್ಟೆ ಉಬ್ಬರ, ನೋವು, ಅಜೀರ್ಣದಂಥ ತೊಂದರೆಗಳು ಎದುರಾಗುತ್ತವೆ.
ಇದನ್ನೂ ಓದಿ| Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!