Site icon Vistara News

Health Tips: ಒಣಹಣ್ಣು ಹಾಗೂ ಬೀಜಗಳನ್ನು ನೆನೆಹಾಕಿ ತಿನ್ನಬೇಕೇ? ನಿಮ್ಮ ಗೊಂದಲಕ್ಕೆ ಉತ್ತರ ಇಲ್ಲಿದೆ!

dry fruits

ಸಣ್ಣವರಿದ್ದಾಗಿನಿಂದ ನಾವು ಒಣಬೀಜಗಳನ್ನೂ, ಒಣ ಹಣ್ಣುಗಳನ್ನೂ (Dry fruits) ತಿನ್ನುತ್ತಲೇ ಬಂದಿದ್ದೇವೆ. ನಮ್ಮ ಮಕ್ಕಳಿಗೂ ತಿನ್ನಲು ಕೊಡುತ್ತೇವೆ. ತೂಕ ಇಳಿಸಿಕೊಳ್ಳುವ (weight loss) ಮಂದಿ, ಆರೋಗ್ಯದ ಬಗ್ಗೆ ಕಾಳಜಿ (healthy eating) ಇರುವ ಪ್ರತಿಯೊಬ್ಬರೂ ಕುರುಕಲು ತಿಂಡಿಯ (junk foods) ಬದಲಾಗಿ, ಬಿಡುವಿನ ವೇಳೆಯಲ್ಲಿ ತಿನ್ನಲು, ಇವುಗಳನ್ನು ಆರೋಗ್ಯಕರ ಆಯ್ಕೆಯಾಗಿ ಪರ್ಯಾಯವಾಗಿ ಬಳಸುವುದೂ ಇದೆ. ಇದು ಒಳ್ಳೆಯ ಅಭ್ಯಾಸವೇ. ಆದರೆ ಬಹುತೇಕರಿಗೆ ಇವುಗಳನ್ನು ನೆನೆಹಾಕಿ ತಿನ್ನಬೇಕೋ ಹಾಗೆಯೇ ತಿನ್ನಬೇಕೋ ಎಂಬ ಬಗ್ಗೆ ಗೊಂದಲಗಳಿವೆ. ನೆನೆಹಾಕುವುದರಿಂದ ಆಗುವ ಲಾಭಗಳಾದರೂ ಏನು ಎಂಬ ಕುತೂಹಲಗಳೂ ಇವೆ. ಆದರೆ, ತಜ್ಞರ ಪ್ರಕಾರ, ಬಹುತೇಕ ಎಲ್ಲ ಒಣಬೀಜ ಹಾಗೂ ಒಣಹಣ್ಣುಗಳನ್ನು ಹಾಗೆಯೇ ತಿನ್ನುವುದಕ್ಕಿಂತ ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳು (health tips) ಹೆಚ್ಚು. ಹಾಗೆಯೇ ತಿನ್ನುವುದರಿಂದ ಕೆಲವರು ಕೆಲವು ಸಮಸ್ಯೆಗಳನ್ನು ಆಹ್ವಾನಿಸುವುದೂ ಇವೆ. ಆದರೆ, ನೆನೆಹಾಕುವುದರಿಂದ ಅವುಗಳು ಸುಲಭವಾಗಿ ಜೀರ್ಣವಾಗಿ ಆರೋಗ್ಯ ವೃದ್ಧಿಯಾಗಿ, ಇವುಗಳಲ್ಲಿರುವ ಎಲ್ಲ ಪೋಷಕಾಂಶಗಳ ಸಮರ್ಪಕ ಬಳಕೆಯನ್ನು ನಮ್ಮ ದೇಹ ಮಾಡಬಲ್ಲದು. ಹಾಗಾಗಿ, ಬಾದಾಮಿ, ಪಿಸ್ತಾ, ಗೋಡಂಬಿ, ಖರ್ಜೂರ, ಅಂಜೂರ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಎಲ್ಲ ಒಣಬೀಜ ಹಾಗೂ ಹಣ್ಣುಗಳನ್ನು ನೆನೆಹಾಕಿ ಸೇವಿಸಿ ಅವುಗಳ ಪೂರ್ಣ ಪ್ರಮಾಣವನ್ನು ಪಡೆಯಿರಿ. ಬನ್ನಿ, ಈ ಕೆಳಗಿನ ಬೀಜಗಳು ಹಾಗೂ ಒಣ ಹಣ್ಣುಗಳು ನೆನೆದಾಗ ಯಾವೆಲ್ಲ ಲಾಭಗಳಿವೆ ಎಂಬುದನ್ನು ನೋಡೋಣ.

೧. ಖರ್ಜೂರ: ಖರ್ಜೂರವನ್ನು (dates) ರಾತ್ರಿ ನೆನೆಹಾಕಿ ಬೆಳಗ್ಗೆ ಅದನ್ನು ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಖರ್ಜೂರವನ್ನು ನೆನೆ ಹಾಕುವುದರಿಂದ ಅದರಲ್ಲಿರುವ ಕಬ್ಬಿಣಾಂಶ ನಮ್ಮ ದೇಹಕ್ಕೆ ಸಮರ್ಪಕವಾಗಿ ತಲುಪುತ್ತದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆಯನ್ನೂ ವೃದ್ಧಿಸುತ್ತದೆ. ಮೂಳೆಗಳಲ್ಲಿ ಶಕ್ತಿ ವರ್ಧನೆಯಾಗಿ, ಆಯಾಸದಂತಹ ಸಮಸ್ಯೆಗಳು ಪರಿಹಾರವಾಗುತ್ತದೆ. ಹಾಗಾಗಿ, ದಿನಕ್ಕೆ ಒಂದು ಖರ್ಜೂರವನ್ನು ನೆನೆಸಿ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

almond

೨. ಬಾದಾಮಿ: ಬಾದಾಮಿಯನ್ನು (Almond) ನೆನೆ ಹಾಕಿ ಅದರ ಸಿಪ್ಪೆ ಸುಲಿದು ತಿನ್ನುವ ಅಭ್ಯಾಸ ಬಹಳ ಮಂದಿಯಲ್ಲಿ ಚಾಲ್ತಿಯಲ್ಲಿದೆ. ಆದರೆ, ಇದು ಯಾಕೆ ಎಂಬ ವಿಚಾರ ಗೊತ್ತೇ. ಬಾದಾಮಿಯನ್ನು ಮುನ್ನಾ ದಿನವೇ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಬುದ್ಧಿ ಚುರುಕಾಗಿ, ನೆನಪುಶಕ್ತಿ ಜಾಸ್ತಿಯಾಗುತ್ತದೆ. ಇದರಲ್ಲಿ ಸಾಕಷ್ಟು ಪ್ರೊಟೀನ್‌ ಕೂಡಾ ಇದ್ದು, ಕಬ್ಬಿಣಾಂಶ, ಫಾಸ್ಪರಸ್‌ ಹಾಗೂ ನಾರಿನಂಶದಿಂದ ಆರೋಗ್ಯವೃದ್ಧಿಯಾಗುತ್ತದೆ.

೩. ಅಂಜೂರ: ಅಂಜೂರ ಅಥವಾ ಫಿಗ್‌ ಎಂಬ ಒಣಹಣ್ಣಿನಿಂದ ಆರೋಗ್ಯಕ್ಕೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ. ಮೆದುವಾದ, ಸುಲಭವಾಗಿ ಕರಗಬಲ್ಲ, ಸಾಕಷ್ಟು ನಾರಿನಂಶ ಹೊಂದಿರುವ ಅಂಜೂರ ಒಣಹಣ್ಣನ್ನು ನಿತ್ಯವೂ ಸೇವಿಸಿದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಶಃಕ್ತಿಯಂತಹ ಸಮಸ್ಯೆಗಳಿಗೂ ಇದು ಬಹಳ ಒಳ್ಳೆಯದು. ಮಲಬದ್ಧತೆಯ ತೊಂದರೆಯಿದ್ದವರಿಗೂ ಅಂಜೂರ ಅತ್ಯುತ್ತಮ ಪರಿಹಾರ ನೀಡುತ್ತದೆ.

ಇದನ್ನೂ ಓದಿ: Health Tips For Monsoon: ಮಳೆಗಾಲದ ಸೋಂಕುಗಳನ್ನು ದೂರ ಇರಿಸುವುದು ಹೇಗೆ?

೪. ಒಣದ್ರಾಕ್ಷಿ: ಒಣದ್ರಾಕ್ಷಿಯನ್ನು ಹಾಗೆಯೇ ತಿನ್ನುವುದಕ್ಕಿಂತ ಅದನ್ನು ನೆನೆಸಿ ತಿನ್ನುವುದು ಅತ್ಯಂತ ಒಳ್ಳೆಯದು. ಇದರಲ್ಲಿರುವ ವಿಟಮಿನ್‌ ಹಾಗೂ ಖನಿಜಾಂಶಗಳು ನೀರಿನಲ್ಲಿ ಕರಗಿ ದೇಹದ ಅಂಗಾಂಗಗಳಿಗೆ ಸುಲಭವಾಗಿ ತಲುಪುತ್ತದೆ. ಹಾಗಾಗಿ, ದೇಹಕ್ಕೆ ಸೇರಬಲ್ಲ ಪೋಷಕಾಂಶದ ಪ್ರಮಾಣ ಇದನ್ನು ನೆನೆಸಿದಲ್ಲಿ ಹೆಚ್ಚಾಗುತ್ತದೆ.

೫. ವಾಲ್ನಟ್‌: ಒಮೆಗಾ ೩ ಫ್ಯಾಟಿ ಆಸಿಡ್‌ ಇರುವ ಕೆಲವೇ ಕೆಲವು ಆಹಾರಗಳ ಪೈಕಿ ವಾಲ್ನಟ್‌ ಪ್ರಮುಖವಾದುದು. ಇದರಲ್ಲಿ, ವಿಟಮಿನ್‌ ಇ, ಫೋಲಿಕ್‌ ಆಸಿಡ್‌, ಪ್ರೊಟೀನ್‌ ಹಾಗೂ ನಾರಿನಂಶವಿದ್ದು ಮಿದುಳಿನ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವಿರಿಸುತ್ತದೆ. ಅಷ್ಟೇ ಅಲ್ಲ, ಇದರಲ್ಲಿ, ಕ್ಯಾಲ್ಶಿಯಂ, ಪೊಟಾಶಿಯಂ, ಕಬ್ಬಿಣಾಂಶ, ತಾಮ್ರ ಹಾಗೂ ಝಿಂಕ್‌ ಹೇರಳವಾಗಿದೆ. ಹಾಗಾಗಿ ನೆನೆಹಾಕಿದ ವಾಲ್ನಟ್‌ ತಿನ್ನುವುದರಿಂದ ಮಧುಮೇಹವನ್ನು ಸಮತೋಲನದಲ್ಲಿಡಲು ಹಾಗೂ ಚಯಾಪಚಯ ಕ್ರಿಯೆ ಸರಾಗವಾಗಿ ಆಗಲು ನೆರವಾಗುತ್ತದೆ.

ಇದನ್ನೂ ಓದಿ: Health Tips: ತಾಮ್ರದ ಬಾಟಲಿಗಳಲ್ಲೇ ನಿತ್ಯವೂ ನೀರು ಕುಡಿಯುತ್ತೀರಾ? ಹಾಗಾದರೆ, ಪಿತ್ತಕೋಶ, ಕಿಡ್ನಿ ಹುಷಾರು!

Exit mobile version