Site icon Vistara News

Health Tips: ರಾತ್ರಿಯೂಟದ ಸಂದರ್ಭ ಯಾವೆಲ್ಲ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

dinner

ಬಹಳಷ್ಟು ಮಂದಿ ಬೆಳಗಿನ ಉಪಹಾರವನ್ನು ನಿರ್ಲಕ್ಷ್ಯ ಮಾಡಿ ರಾತ್ರಿಯ ಊಟವೇ (dinner) ಬಹಳ ಮುಖ್ಯ ಎಂದು ಅಂದುಕೊಳ್ಳುತ್ತಾರೆ. ಇಡೀ ದಿನ ಕಚೇರಿ, ಕೆಲಸ ಎಂದು ಸುತ್ತಿ, ಸುಸ್ತಾಗಿ ಮನೆಗೆ ಬರುವಾಗ ಮನೆಮಂದಿಯ ಜೊತೆಗೆ ಕೂತು ಉಂಡರೆ ಒಂದು ಸಂತೋಷ ನೆಮ್ಮದಿ ನಮಗೆ ಸಿಗುತ್ತದೆ. ಇಡೀ ದಿನದ ಸುಸ್ತೆಲ್ಲ ಕಳೆದಂತೆ ಶಾಂತಿಯೂ ಇಲ್ಲಿ ಸಿಗುತ್ತದೆ ನಿಜ. ಹಾಗಾಗಿಯೇ, ಬಹುತೇಕ ಎಲ್ಲರೂ ನಮ್ಮ ನಮ್ಮ ಕುಟುಂಬದ ಜೊತೆ ಕುಳಿತು ತಿನ್ನುವಾಗ ಮಾತನಾಡುತ್ತಾ, ಕಾಲೆಳೆಯುತ್ತಾ ಅಂದುಕೊಂಡದ್ದಕ್ಕಿಂತ ಹೆಚ್ಚು ತಿಂದು ಬಿಡುತ್ತೇವೆ. ಪ್ರೀತಿಪಾತ್ರರಿಗೆ ಚೆನ್ನಾಗಿ ತಿನ್ನು ಎಂದು ಪ್ರೀತಿಯಲ್ಲಿ ಒತ್ತಾಯ ಮಾಡಿ ಬಡಿಸುತ್ತೇವೆ. ಆದರೆ, ಈ ಊಟ ಕರಗುವ ಮುನ್ನವೇ ಸುಸ್ತಿನಲ್ಲಿ ಮಲಗಿಯೂ ಬಿಡುತ್ತೇವೆ. ಸರಿಯಾಗಿ ಕರಗಲು ನಾವು ಆಸ್ಪದವನ್ನೂ ಕೊಡುವುದಿಲ್ಲ. ಇದರಿಂದಾಗಿಯೇ ಬೊಜ್ಜು ಸೇರಿದಂತೆ ಅನೇಕ ಜೀರ್ಣದ ತೊಂದರೆಗಳೂ ನಮ್ಮನ್ನು ಕಾಡುತ್ತದೆ. ಇಂತಹ ತೊಂದರೆಗಳು ನಿಮ್ಮನ್ನು ಕಾಡಿದರೆ, ಈ ಕೆಳಗಿ ಕೆಲವು ಆಹಾರಗಳನ್ನು ರಾತ್ರಿಯೂಟದ ಸಂದರ್ಭ ತಿನ್ನುವುದನ್ನು ಕಡಿಮೆ ಮಾಡಿ.

1. ಕರಿದ ತಿಂಡಿಗಳು: ಕರಿದ ತಿಂಡಿಗಳು ರುಚಿಯಾಗಿರುತ್ತವೆ ನಿಜ, ನಮ್ಮನ್ನು ತಮ್ಮ ಕಡೆಗೆ ಆಕರ್ಷಿಸುತ್ತವೆ ಎಂಬುದೂ ನಿಜ. ಆದರೆ, ಕೋಫ್ತಾ, ಫ್ರೈಡ್‌ ಫಿಶ್‌, ಫ್ರೈಡ್‌ ಚಿಕನ್‌, ಆಲೂಗಡ್ಡೆ ಫ್ರೈ ಮತ್ತಿತರ ಆಹಾರಗಳು ರಾತ್ರಿಯೂಟದ ಸಂದರ್ಭ ತಿಂದರೆ ಕರಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇಂತಹ ಆಹಾರವನ್ನು ರಾತ್ರಿಯೂಟದ ಸಂದರ್ಭ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ.

2. ಕೊಬ್ಬಿನ ಆಹಾರಗಳು: ಒಳ್ಳೆಯ ಕೊಬ್ಬು ಒಳ್ಳೆಯದು ನಿಜ. ಆದರೆ, ಸ್ಯಾಚುರೇಟೆಡ್‌ ಫ್ಯಾಟ್‌ ಎಂಬ ಕೆಟ್ಟ ಕೊಬ್ಬು ನಮ್ಮ ದೇಹದಲ್ಲಿ ಸಂಗ್ರಹವಾಗುವಂತಹ ಆಹಾರವನ್ನು ನಾವು ರಾತ್ರಿಯೂಟದಲ್ಲಿ ಕಡಿಮೆ ಮಾಡಬೇಕು. ಇದರಿಂದಲೇ ಕೊಲೆಸ್ಟೆರಾಲ್‌ ಮಟ್ಟ ಏರುತ್ತದೆ. ಹಾಗಾಗಿ ಇಂತಹ ಕೊಬ್ಬು ಹೆಚ್ಚಿರುವ ಕುಕ್ಕೀಸ್‌, ಕೇಕ್‌ಗಳಂತಹ ಡೆಸರ್ಟ್‌ಗಳನ್ನು ರಾತ್ರಿ ಕಡಿಮೆ ಮಾಡಿ.

ಇದನ್ನೂ ಓದಿ: Health Tips: ನಿಮ್ಮ ಪ್ರಿಯವಾದ ಆಹಾರದಿಂದಲೂ ನಿಮಗೆ ಅಲರ್ಜಿಯಿರಬಹುದು ಗೊತ್ತೇ?!

3. ಮಾಂಸ: ಮಾಂಸ ಪ್ರಿಯರಿಗೆ ಎಷ್ಟು ಹೊತ್ತಿಗೆ ಮಾಂಸದೂಟ ಬಡಿಸಿದರೂ ಸಂತೋಷದಿಂದ ತಿನ್ನುತ್ತಾರೆ ನಿಜ. ಆದರೆ, ಮಾಂಸವನ್ನು ರಾತ್ರಿಯೂಟಕ್ಕೆ ಕಡಿಮೆ ಮಾಡುವುದು ಒಳ್ಳೆಯದು. ಮಾಂಸ ಕರಗಲು ಹೆಚ್ಚು ಹೊತ್ತು ಬೇಕಾಗುವುದರಿಂದ ಜೀರ್ಣದ ಸಮಸ್ಯೆಗಳೂ ಬರಬಹುದು. ತೂಕ ಹೆಚ್ಚಾಗಲೂ ಇದೂ ಒಂದು ಕಾರಣ. ಮಾಂಸ ರಾತ್ರಿ ಹೊತ್ತು ತಿನ್ನುವವರು, ಅದರ ಜೊತೆಗೆ ಕ್ಯಾರೆಟ್‌, ಬ್ರೊಕೋಲಿಯಂತಹ ಸಸ್ಯಾಹಾರವನ್ನೂ ತೆಗೆದುಕೊಳ್ಳಿ.

4. ಸಿಹಿತಿಂಡಿಗಳು: ಸಕ್ಕರೆ ಹಾಕಿದ ವಸ್ತುಗಳು, ಅತಿಯಾದ ಸಿಹಿ ಪದಾರ್ಥಗಳು, ಕೇಕ್‌, ಐಸ್‌ಕ್ರೀಂಗಳನ್ನು ರಾತ್ರಿಯ ಹೊತ್ತು ಊಟದ ನಂತರ ತಿನ್ನುವುದು ಖುಷಿ ಕೊಡುತ್ತದೆ ನಿಜ. ಆದರೆ, ಇವುಗಳನ್ನು ಊಟದ ನಂತರ ರಾತ್ರಿ ಸೇವಿಸುವುದು ಒಳ್ಳೆಯದಲ್ಲ. ನೀವು ಸಿಹಿ ಪ್ರಿಯರಾಗಿದ್ದಲ್ಲಿ, ಸಿಹಿತಿಂಡಿಗಳನ್ನು, ಮಧ್ಯಾಹ್ನ ಅಥವಾ ಸ್ನ್ಯಾಕ್‌ ಟೈಮ್‌ನಲ್ಲಿ ತಿನ್ನಬಹುದು.

5. ಅತಿಯಾದ ಕಾರ್ಬೋಹೈಡ್ರೇಟ್‌ ಇರುವ ಆಹಾರಗಳು: ಅತಿಯಾದ ಕಾರ್ಬೋಹೈಡ್ರೇಟ್‌ ಇರುವ ಆಹಾರಗಳಾದ, ಆಲೂಗಡ್ಡೆ, ಗೋಧಿ, ಅಕ್ಕಿ, ಬ್ರೆಡ್‌ ಇತ್ಯಾದಿಗಳನ್ನು ರಾತ್ರಿ ತಿನ್ನುವುದನ್ನು ಕಡಿಮೆ ಮಾಡಬಹುದು. ಆಥವಾ ಇವುಗಳು ನಿತ್ಯಾಹಾರವಾಗಿದ್ದಲ್ಲಿ, ಇವುಗಳ ಜೊತೆಗೆ ಸರಿಯಾದ ಪ್ರಮಾಣದಲ್ಲಿ ಬೇಯಿಸಿದ ತರಕಾರಿ, ಮೊಳಕೆ ಕಾಳುಗಳನ್ನೂ ಸೇವಿಸಿ.

6. ಡೈರಿ ಉತ್ಪನ್ನಗಳು: ಡೈರಿ ಉತ್ಪನ್ನಗಳಾದ ಚೀಸ್‌, ಪನೀರ್‌ ಇತ್ಯಾದಿಗಳನ್ನೂ ರಾತ್ರಿ ಸಮಯದಲ್ಲಿ ತಿನ್ನುವುದನ್ನು ಕಡಿಮೆ ಮಾಡುವುದು ಉತ್ತಮ. ಯಾಕೆಂದರೆ ಇದರಿಂದ ಹೊಟ್ಟೆಯುಬ್ಬರ, ಜೀರ್ಣಕ್ರಿಯೆಯ ಸಮಸ್ಯೆಗಳೂ ಹಲವರಿಗೆ ಬರಬಹುದು. ಹಾಗಾಗಿ ರಾತ್ರಿ ಲಘು ಆಹಾರ ಒಳ್ಳೆಯದು.

ಇದನ್ನೂ ಓದಿ: Health Tips: ಇವುಗಳ ಮೂಲಕ ಶೀತ, ಜ್ವರ, ನೆಗಡಿಯಿಂದ ದೂರವಿರಲು ರೋಗ ನಿರೋಧಕತೆ ಹೆಚ್ಚಿಸಿಕೊಳ್ಳಿ!

Exit mobile version