ಕಲ್ಪವೃಕ್ಷದಿಂದ ಬರುವ ಎಳನೀರು (Tender coconut) ಅಮೃತವೆಂದರೆ ತಪ್ಪಿಲ್ಲ ನಿಜ. ನಿಸರ್ಗದತ್ತವಾಗಿ ಲಭ್ಯವಿರುವ ಪೋಷಕಾಂಶಯುಕ್ತ (Nutrient rich) ಪಾನೀಯವಿದು. ನಮ್ಮ ದಾಹ ತಣಿಸುವ ಅಷ್ಟೇ ಅಲ್ಲದೆ, ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಖನಿಜ ಲವಣಗಳನ್ನು ಪೂರೈಸುವ ಈ ಪಾನೀಯ ನಿಜಕ್ಕೂ ನೈಸರ್ಗಿಕ ಅದ್ಭುತಗಳಲ್ಲಿ ಒಂದು. ಇದರಲ್ಲಿ, ರೋಗನಿರೋಧಕ ಶಕ್ತಿ (Immunity power) ನಮ್ಮನ್ನು ಹಲವು ರೋಗಗಳಿಂದ ರಕ್ಷಿಸುವುದಲ್ಲದೆ, ದೇಹಕ್ಕೆ ದಿಢೀರ್ ಶಕ್ತಿಯನ್ನೂ ಚೈತನ್ಯವನ್ನೂ ನೀಡುತ್ತದೆ. ಇಂತಹ ಎಳನೀರು ಅಮೃತವೆಂದು ಸಿಕ್ಕಾಪಟ್ಟೆ ಕುಡಿದರಾದೀತೇ ಹೇಳಿ? ಅಮೃತ ವಿಷವಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾದರೆ, ಬನ್ನಿ, ಈ ʻಮ್ಯಾಜಿಕ್ ಡ್ರಿಂಕ್ʼ ಎಳನೀರಿನಿಂದ ಲಾಭಗಳಿರುವಷ್ಟೇ, ತೊಂದರೆಗಳೂ ಇವೆ. ಅವು ಯಾವುವು, ಹೇಗೆ, ಅದನ್ನು ತಪ್ಪಿಸುವುದು ಹೇಗೆ (Health tips) ಎಂಬುದನ್ನು ಇಲ್ಲಿ ನೋಡೋಣ.
1. ಅತಿಯಾಗಿ ಎಳನೀರು ಕುಡಿಯುವುದರಿಂದ ನಮ್ಮ ಜೀರ್ಣಾಂಗವ್ಯೂಹಕ್ಕೆ ತೊಂದರೆಯಾಗುತ್ತದೆ. ಇದರಲ್ಲಿ ಲಾಕ್ಸೇಟಿವ್ ಗುಣಗಳೂ ಇರುವುದರಿಂದ ಅತಿಯಾಗಿ ಕುಡಿದ ತಕ್ಷಣ ಅಜೀರ್ಣವಾಗಿ ಭೇದಿ ಶುರುವಾಗಬಹುದು. ಅಷ್ಟೇ ಅಲ್ಲ, ದೇಹ ಅತಿಯಾಗಿ ತಂಪಾಗಿ ಮೊದಲೇ ಶೀತಪ್ರಕೃತಿಯ ದೇಹವಿರುವ ಮಂದಿಗಂತೂ ಇದು ಥಂಡಿಗೆ ತಿರುಗಬಹುದು. ಹೀಗಾಗಿ ಎಳನೀರು ಅತಿಯಾಗದಂತೆಯೂ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.
2. ಅಥ್ಲೀಟ್‌ಗಳಿಗೂ ಎಳನೀರು ಒಳ್ಳೆಯದಲ್ಲ. ನೀರಿಗೆ ಬದಲಾಗಿ ಎಳನೀರು ಕುಡಿದು ಆಟೋಟಗಳ ಅಭ್ಯಾಸ ಒಳ್ಳೆಯದಲ್ಲ. ಅದರ ಬದಲು ಅವರಿಗೆ ಖಾಲಿ ನೀರೇ ಒಳ್ಳೆಯದು. ಇದು ನೈಸರ್ಗಿಕವಾಗಿ ಸಿಗುವ ಎಲೆಕ್ಟ್ರೋಲೈಟ್ ಆಗಿದ್ದರೂ, ಇದರಲ್ಲಿ ಸಾಕಷ್ಟು ಖನಿಜ ಲವಣಗಳಿದ್ದರೂ ಇದು ಯುವ ಅಥ್ಲೀಟ್‌ಗಳಿಗೆ ಯಾವಾಗಲೂ ಒಳ್ಳೆಯದಲ್ಲ. ಅತಿಯಾದ ವರ್ಕೌಟ್ ಹಾಗೂ ನಿರಂತರ ತರಬೇತಿಗಳಿದ್ದ ಸಂದರ್ಭ ಶಕ್ತಿಗಾಗಿ ಇವನ್ನು ಕುಡಿಯಬಹುದೇ ಹೊರತು, ಸಾಮಾನ್ಯ ನಿತ್ಯದ ತರಬೇತಿಗಳಿಗೆ ನಿತ್ಯವೂ ಎಳನೀರಿನ ಅಗತ್ಯವಿಲ್ಲ. ಅದರ ಬದಲಾಗಿ ನೀರನ್ನೇ ಕುಡಿಯುವುದು ಅತ್ಯುತ್ತಮ ಎನ್ನುತ್ತಾರೆ ತಜ್ಞರು.
3. ಎಳನೀರಿನ ಇನ್ನೊಂದು ಸಮಸ್ಯೆ ಎಂದರೆ, ಇದನ್ನು ಕುಡಿದರೆ, ಆಗಾಗ ವಾಶ್‌ರೂಂ ಹೋಗಬೇಕಾಗುತ್ತದೆ ಎಂಬುದು. ಇದರ ಡೈಯೂರೆಟಿಕ್ ಗುಣಗಳಿಂದಾಗಿ ಇದು ಸಾಮಾನ್ಯ ನೀರಿಗಿಂತ ಆಗಾಗ ಮೂತ್ರವಿಸರ್ಜನೆಯನ್ನು ಪ್ರೇರೇಪಿಸುತ್ತದೆ.
4. ಇದು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ನಿಜವೇ ಆದರೂ, ಇದರಲ್ಲಿ ಹೇರಳವಾಗಿ ನೈಸರ್ಗಿಕ ಸಕ್ಕರೆಯ ಅಂಶವೂ ಇದೆ. ಹಣ್ಣುಗಳಿಗೆ ಹೋಲಿಸಿದರೆ, ಇದರಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾದರೂ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟುಗಳೂ ಇವೆ. ಹಾಗಾಗಿ ಇದು ಸಹಜವಾಗಿಯೇ ಹೆಚ್ಚು ಕ್ಯಾಲರಿಯ ಪೇಯ. ಒಂದು ಕಪ್ ಎಳನೀರಿನಲ್ಲಿ ಸುಮಾರು 60 ಕ್ಯಾಲರಿಗಳಿರುವುದರಿಂದ ಹಾಗೂ ಇದರಲ್ಲಿ ಹೇರಳವಾಗಿ ಪೊಟಾಶಿಯಂ ಹಾಗೂ ಸೋಡಿಯಂ ಕೂಡಾ ಇರುವುದರಿಂದ, ಕ್ಯಾಲರಿಯ ಆಧಾರದಲ್ಲಿ ಆಹಾರ ತೆಗೆದುಕೊಳ್ಳುವ ಮಂದಿಗೆ ಇದು ವರವಾಗಲಾರದು. ಹಾಗೆ ಯೋಚಿಸುವ ಮಂದಿಗೆ ದಾಹ ಇಳಿಸಲು ನೀರೇ ಸೂಕ್ತ.
ಆದರೆ, ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದು ಅಮೃತ ಎಂಬುದರಲ್ಲಿ ಅನುಮಾಣವಿಲ್ಲ. ಹಾಗಾಗಿ ನಿತ್ಯವೂ ಅಲ್ಲದಿದ್ದರೂ, ಆಗಾಗ ಹಿತಮಿತವಾಗಿ ಎಳನೀರಿನ ಸೇವನೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಆದರೆ, ಪೊಟಾಶಿಯಂ ಹಾಗೂ ಸೋಡಿಯಂ ಏರಿಳಿತದ ಸಮಸ್ಯೆಯಿರುವ ಮಂದಿ ಎಳನೀರು ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ: Health Tips: ಚಹಾದ ಜೊತೆಗೆ ಈ ಬಗೆಯ ಆಹಾರಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಗೊತ್ತೇ?!