Site icon Vistara News

Health Tips: ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ರಾಮಬಾಣ: ಇಂಗು ಹಾಗೂ ಓಮದ ನೀರು!

asfoetida and ajwain water

ಸೂಕ್ಷ್ಮ ಜೀರ್ಣಕ್ರಿಯೆಯ ಮಂದಿಗೆ ಅಥವಾ ಸರಿಯಾದ ಆಹಾರಕ್ರಮದ ಶಿಸ್ತಿಲ್ಲದ ಮಂದಿಗೆ ಆಗಾಗ ಹೊಟ್ಟೆ ಕೆಡುವುದು ಸಾಮಾನ್ಯ. ಹೊಟ್ಟೆನೋವು, ಗ್ಯಾಸ್‌, ಅಸಿಡಿಟಿ, ಹೊಟ್ಟೆಯುಬ್ಬರ ಮತ್ತಿತರ ಸಮಸ್ಯೆಗಳು ಸಾಮಾನ್ಯ. ಇಂತಹ ತೊಂದರೆಗಳು ಸಾಮಾನ್ಯ ಇರುವಾಗ ಅವಕ್ಕೆ ಸರಳ ಪರಿಹಾರಗಳೂ ಮನೆಗಳಲ್ಲಿ ಸಾಮಾನ್ಯ. ಭಾರತೀಯರ ಸಾಂಬಾರ ಬಟ್ಟ್ಲ ಮಹಿಮೆಯೇ ಅಂಥದ್ದು. ಇಲ್ಲಿ ಎಲ್ಲ ಸಮಸ್ಯೆಗಳಿಗೂ ಚಿಟಿಕೆಯಲ್ಲಿ ಪರಿಹಾರವಿದೆ. ಮಕ್ಕಳಿಗಾಗಲೀ, ದೊಡ್ಡವರಿಗಾಗಲೀ ಏನೇ ಸಮಸ್ಯೆಗಳಾದರೂ ನಾವು ಹೆಚ್ಚು ತಲೆ ಕಡಿಸಿಕೊಳ್ಳದೆ ನಾವು ನಮ್ಮ ಮಸಾಲೆ ಡಬ್ಬಿಯಲ್ಲಿಯೇ ನಾವು ಪರಿಹಾರ ಕಂಡುಕೊಳ್ಳುತ್ತೇವೆ. ಇಂಗು, ಓಂಕಾಳು ಅಥವಾ ಓಮ, ಜೀರಿಗೆ ಮೊದಲಾದ ಅಡುಗೆಯ ಸಾಮಾನ್ಯ ಪದಾರ್ಥಗಳು ನಮ್ಮ ಆರೋಗ್ಯವನ್ನು ನಿರ್ಣಯಿಸುವ ಮುಖ್ಯ ಭೂಮಿಕೆಗೆ ಬಂದು ನಿಲ್ಲುತ್ತವೆ. ಹಾಗಾದರೆ ಬನ್ನಿ, ಯಾವುದೇ ಜೀರ್ಣಕ್ರಿಯೆಯ ಸಮಸ್ಯೆಗೂ ರಾಮಬಾಣದಂತೆ ಕೆಲಸ ಮಾಡುವ ಸಿಂಪಲ್‌ ಇಂಗು ಅಥವಾ ಓಂಕಾಳಿನ ನೀರಿನ ಪೂರ್ಪಾಪರಳನ್ನು ತಿಳಿಯೋಣ ಬನ್ನಿ.

ಇಂಗು ಎಂಬ ಘಮ್ಮನೆಯ ಅಂಟಿನಲ್ಲಿ ಆಂಟಿ ವೈರಲ್‌ ಹಾಗೂ ಆಂಟಿ ಬ್ಯಾಕ್ಟೀರಿಯಲ್‌ ಗುಣವಿದೆ. ಅದಕ್ಕಾಗಿಯೇ ಹಲವು ಆರೋಗ್ಯ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವುದರೊಳಗೆ ಸರಿಪಡಿಸುವ ಶಕ್ತಿಯನ್ನೂ ಇದು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜನಗೊಳಿಸಿ ವೇಗವಾಗಿ ಜೀರ್ಣವಾಗುವಂತೆ ಮಾಡುವುದಷ್ಟೇ ಅಲ್ಲದೆ, ಹಲವು ಸಮಸ್ಯೆಗಳನ್ನು ಬಂದಷ್ಟೇ ವೇಗವಾಗಿ ದೂರ ಮಾಡುತ್ತದೆ.

ಓಮ ಅಥವಾ ಓಂಕಾಳಿನಲ್ಲಿರುವ ಥೈಮೋಲ್‌ ಜೀರ್ಣಕ್ರಿಯೆಯನ್ನು ಚುರುಕು ಮಾಡುವ ಶಕ್ತಿ ಹೊಂದಿದೆ. ಇದು ಜೀರ್ಣರಸವನ್ನು ಹೆಚ್ಚು ಉತ್ಪಾದಿಸುವಂತೆ ಪ್ರಚೋದಿಸಿ ಜೀರ್ಣಕ್ರಿಯೆಗೆ ಚುರುಕು ಮುಟ್ಟಿಸುತ್ತದೆ. ಅದರಲ್ಲೂ, ಓಂಕಾಳನ್ನು ಇಂಗಿನ ಜೊತೆಗೆ ಸೇರಿಸಿದಾಗ ಇದರ ಶಕ್ತಿ ದುಪ್ಪಟ್ಟಾಗಿ, ಈ ಕೆಲಸವನ್ನು ಅತ್ಯಂತ ನಿಷ್ಟೆಯಿಂದ ಮಾಡುತ್ತವೆ. ಜೀರ್ಣಕ್ರಿಯೆ ಸುಲಭವಾಗಿ ಆಗಿ, ಆಹಾರ ಬೇಗ ಜೀರ್ಣವಾಗಿ ಹೊಟ್ಟೆ ನೆಮ್ಮದಿಯ ಅನುಭವ ನೀಡುತ್ತದೆ.

ಓಂಕಾಳನ್ನು ನೀರಿನಲ್ಲಿ ನೆನೆಹಾಕುವುದರಿಂದ ಆಥವಾ ನೀರಿನಲ್ಲಿ ಕುದಿಸುವುದರಿಂದ ಇದರಲ್ಲಿರುವ ಪೋಷಕಾಂಶಗಳು ನೀರಿಗೆ ಬಿಡುಗಡೆಯಾಗುತ್ತವೆ. ಇದರ ಜೊತೆಗೆ ಚಿಟಿಕೆ ಇಂಗನ್ನೂ ಇದಕ್ಕೆ ಸೇರಿಸಿದರೆ ಎರಡೂ ಮಸಾಲೆಗಳಲ್ಲಿರುವ ಪೋಷಕ ಸತ್ವಗಳು ನೀರಿನಲ್ಲಿ ಸೇರಿಕೊಂಡು ಈ ನೀರು ಕುಡಿದಾಗ ಸರಿಯಾದ ಪ್ರಯೋಜನ ಪಡೆಯಬಹುದು. ಈ ನೀರು ತಯಾರಿಸುವುದು ಬಲು ಸರಳ. ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಲು ಒಲೆ ಮೇಲಿಟ್ಟು ಅದಕ್ಕೆ ಒಂದು ಚಮಚ ಓಂಕಾಳನ್ನು ಹಾಕಿ. ನೀರು ಕುದಿಯುವಾಗ ಅದಕ್ಕೆ ಚಿಟಿಕೆ ಇಂಗನ್ನು ಸೇರಿಸಿ. ಪಾತ್ರೆ ಕೆಳಗಿಳಿಸಿ ಸೋಸಿಕೊಂಡು, ಈ ನೀರನ್ನು ಬೆಚ್ಚಗೆ ಇರುವಾಗಲೇ ಕುಡಿಯಿರಿ.

ಇಂಗು ಹಾಗೂ ಓಂಕಾಳಿನ ನೀರಿನ ಪ್ರಯೋಜನಗಳು ಕೇವಲ ಜೀರ್ಣಕ್ರಿಯೆಯ ಸಮಸ್ಯೆಗಳಾದ ಗ್ಯಾಸ್‌, ಅಸಿಡಿಟಿ, ಮಲಬದ್ಧತೆ, ಅಜೀರ್ಣದಂತಹ ತೊಂದರೆಗಳ ಪರಿಹಾರಕ್ಕೆ ಸೀಮಿತವಾಗಿಲ್ಲ. ಇದನ್ನು ಸರಿಯಾಗಿ ಬಳಸಿಕೊಂಡರೆ, ಅಪರಿಮಿತ ಪ್ರಯೋಜನವೂ ದೊರೆಯುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ನಮ್ಮ ದೇಹದಲ್ಲಿ ಹೆಚ್ಚು ಮಾಡುತ್ತದೆ. ಉಸಿರಾಟದ ಸಮಸ್ಯೆಗಳಾದ ಕೆಮ್ಮು, ನೆಗಡಿ, ಶೀತ ಹಾಗೂ ಅಸ್ತಮಾದಂತಹ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ದೇಹದ ಭಾಗಗಳ ಉರಿಯೂತಕ್ಕೂ ಇದು ಉತ್ತಮ ಮನೆಮದ್ದು. ಅಷ್ಟೇ ಅಲ್ಲ, ತೂಕ ಇಳಿಸಬೇಕೆನ್ನುವ ಮಂದಿಗೆ ಇದು ವರವೂ ಹೌದು. ನಿಯಮಿತ ವ್ಯಾಯಾಮದ ಜೊತೆಜೊತೆಗೇ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಬೊಜ್ಜು ಕರಗಿಸಿಕೊಂಡು ತೂಕವನ್ನೂ ಇಳಿಸಬಹುದು. 

Exit mobile version