Site icon Vistara News

Health Tips: ಈ ಎಲ್ಲ ಸಾಮಾನ್ಯ ಆಹಾರಗಳನ್ನು ಜೊತೆಯಾಗಿ ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

binge eating

ಈಗ ಸಾಮಾಜಿಕ ಜಾಲತಾಣಗಳು, ಯುಟ್ಯೂಬ್‌ ಚಾನಲ್‌ಗಳಂತಹ ವಿವಿಧ ಆನ್‌ಲೈನ್‌ ವೇದಿಕೆಗಳು ಬಂದ ಮೇಲೆ ಅಡುಗೆ ಮಾಡುವುದನ್ನು ಕಲಿಯಲು (Cooking tips) ಅಮ್ಮನೇ ಹೇಳಿಕೊಡಬೇಕಾಗಿಲ್ಲ. ಯಾರೇ ಆದರೂ, ಗೂಗಲ್‌ ಮಾಡಿ, ವಿಡಿಯೋಗಳನ್ನೋ, ವೆಬ್‌ಸೈಟುಗಳಲ್ಲಿ ಸಿಗುವ ರೆಸಿಪಿಗಳನ್ನೋ, ಕುಕ್ಕಿಂಗ್‌ ಚಾನಲ್‌ಗಳನ್ನೋ ನೋಡಿ ಕಲಿತುಬಿಡುತ್ತೇವೆ. ಬಗೆಬಗೆಯ ದಿಢೀರ್‌ ಅಡುಗೆಗಳನ್ನು (instant foods) ಮಾಡುತ್ತೇವೆ. ಯಾವಯಾವುದೋ ಆಹಾರ ವಸ್ತುಗಳಿಗೆ ಇನ್ಯಾವುದನ್ನೋ ಮಿಕ್ಸ್‌ ಮಾಡಿ, ಆಹಾ ರುಚಿಕರವಾಗಿದೆ ಎಂದು ತಿಂದು ತೇಗುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲೋ, ಸ್ಟೇಟಸ್‌ಗಳಲ್ಲೋ ಫೋಟೋ ತೆಗೆದು ಹಂಚಿಕೊಳ್ಳುತ್ತೇವೆ. ಆದರೆ, ಕೆಲವೊಂದು ಒಂದಕ್ಕೊಂದು ಹೊಂದಿಕೊಳ್ಳದ ಆಹಾರ ವಸ್ತುಗಳನ್ನೂ ಮಿಕ್ಸ್‌ ಮಾಡಿ ಮಾಡಿರುವ ಬಗ್ಗೆ ನಮಗೆ ಅರಿವಿರುವುದಿಲ್ಲ. ನಿತ್ಯವೂ ಇಂತಹ ಕೆಲವು ತಪ್ಪುಗಳು ಆಗುತ್ತಲೇ ಇರುತ್ತದೆ ಹಾಗೂ ಇದು ನಮ್ಮ ದೇಹದ ಆರೋಗ್ಯದ ಮೇಲೆ (health guide) ದುಷ್ಪರಿಣಾಮವನ್ನೂ ಬೀರುತ್ತಿರುತ್ತದೆ. ಆದರೆ ನಮಗದರ ಅರಿವೇ ಇರುವುದಿಲ್ಲ. ಬನ್ನಿ, ಯಾವೆಲ್ಲ ಕೆಲವು ಆಹಾರ ವಸ್ತುಗಳನ್ನು ಪರಸ್ಪರ ಮಿಕ್ಸ್‌ ಆಗದಂತೆ ನೋಡಿಕೊಳ್ಳಬೇಕು ಎಂಬುದನ್ನು (Health tips) ನೋಡೋಣ.

1. ಮೊಸರು ಹಾಗೂ ತುಪ್ಪ: ಪರಾಠಾಗಳನ್ನು ತಿನ್ನುವಾಗ ಜೊತೆಯಲ್ಲಿ ಮೊಸರನ್ನು ಕೊಡುವುದು ಸಾಮಾನ್ಯ. ಈ ಪರಾಠಾದ ಮೇಲೆ ಸಾಕಷ್ಟು ತುಪ್ಪವನ್ನು ಸುರಿಯುವುದೂ ಕೂಡಾ ಸಾಮಾನ್ಯವೇ. ಆದರೆ, ಮೊಸರು ಹಾಗೂ ತುಪ್ಪ ಜೊತೆಯಾಗಿ ಸೇರಿದರೆ ಕರುಗುವುದು ಬಹಳ ನಿಧಾನವಂತೆ. ಮೊದಲೇ ಪರಾಠಾ ಕರಗಲು ಸಮಯ ಬೇಕು. ಜೊತೆಗೆ ಮೊಸರು ಹಾಗೂ ತುಪ್ಪ ಸೇರಿಕೊಂಡರೆ ನಿಮಗೆ ಆಲಸ್ಯ ಸುತ್ತಿಕೊಳ್ಳುವುದರಲ್ಲಿ ಎರಡು ಮಾತೇ ಇಲ್ಲ.

2. ಟೊಮೆಟೋ ಹಾಗೂ ಸೌತೆಕಾಯಿ: ಸೌತೆಕಾಯಿ ಹಾಗೂ ಟೊಮೆಟೋವನ್ನು ಚಿಕ್ಕದಾಗಿ ಹೆಚ್ಚಿಕೊಂಡು ಸಲಾಡ್‌ ಮಾಡಿಕೊಂಡು ಹಸಿಯಾಗಿ ತಿನ್ನುತ್ತೇವೆ. ಆದರೆ, ಇವುಗಳನ್ನು ಜೊತೆಯಾಗಿ ತಿನ್ನಬಾರದಂತೆ. ಇವುಗಳು ಪರಸ್ಪರ ವಿರುದ್ಧ ಗುಣವನ್ನು ಹೊಂದಿರುವುದರಿಂದ ಎರಡಕ್ಕೂ ಕರಗಲು ಬೇರೆ ಬೇರೆ ಕಾಲಾವಕಾಶ ಬೇಕಿರುವುದರಿಂದ ಇವುಗಳನ್ನು ಜೊತೆಯಾಗಿ ತಿಂದರೆ ಅಸಿಡಿಟಿ, ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ತೊಂದರೆ ಕೊಡಬಹುದು.

3. ಮೀನು ಹಾಗೂ ಹಾಲು: ಮೀನು ಉಷ್ಣ ಪ್ರಕೃತಿಯನ್ನೂ, ಹಾಲು ಶೀತ ಪ್ರಕೃತಿಯನ್ನೂ ಹೊಂದಿರುವುದರಿಂದ ಇವೆರಡೂ ಪರಸ್ಪರ ವಿರುದ್ಧ ಗುಣ ಹೊಂದಿರುವುದರಿಂದ ದೇಹದಲ್ಲಿ ಜೀರ್ಣಕ್ಕೆ ತೊಂದರೆಯುಂಟಾಗಬಹುದು.

4. ಅನ್ನ ಹಾಗೂ ವಿನೆಗರ್:‌ ನಾವೆಲ್ಲ ಚೈನೀಸ್‌ ಫ್ರೈಡ್‌ ರೈಸ್‌ ಅನ್ನು ಬಹಳವಾಗಿ ಇಷ್ಟ ಪಡುತ್ತೇವೆ ನಿಜ. ಇದರಲ್ಲಿ ಅನ್ನ ಹಾಗೂ ವಿನೆಗರ್‌ ಜೊತೆಯಾಗಿದೆ ನಿಜ. ಆದರೆ, ನಿಜವಾಗಿಯೂ ಇವು ವಿರುದ್ಧ ಗುಣಗಳಿರುವ ಆಹಾರವಾದ್ದರಿಂದ ಜೀರ್ಣಕ್ಕೆ ತೊಂದರೆಯುಂಟು ಮಾಡುತ್ತವೆ.

ಇದನ್ನೂ ಓದಿ: Health Tips: ಈ ಆಹಾರಗಳನ್ನು ಸೇವಿಸಿದರೆ ಸರಸದ ಸಮಯ ಆದೀತು ವಿರಸಮಯ!

5. ಹಾಲು ಹಾಗೂ ಉಪ್ಪು: ಹಾಲಿಗೆ ಉಪ್ಪು ಹಾಕುವುದು ಕೆಲವು ಅಡುಗೆಗಳಲ್ಲಿ ಮಾಡಬಹುದು ಆದರೆ, ಹೀಗೆ ಮಾಡುವುದು ಒಳ್ಳೆಯದಲ್ಲ. ಇದು ರಕ್ತ ಶುದ್ಧಿಯ ಮೇಲೆ ಅಡ್ಡ ಪರಿಣಾಮ ಬೀರುತ್ತದಂತೆ.

6. ಬೆಲ್ಲ ಹಾಗೂ ಹಾಲು: ಹಾಲು ಹಾಕಿದ ಚಹಾಕ್ಕೆ ಸಕ್ಕರೆಯ ಬದಲಾಗಿ ಬೆಲ್ಲ ಹಾಕಿ ಕುಡಿಯುತ್ತೇವೆ. ಆದರೆ, ಬೆಲ್ಲದಲ್ಲಿ ಹುಳಿಯ ಗುಣಗಳಿರುವುದರಿಂದ ಇದು ಹಾಲನ್ನು ಒಡೆಯುವ ಗುಣವನ್ನೂ ಹೊಂದಿರುವುದರಿಂದ ಪರಸ್ಪರ ಒಂದಕ್ಕೊಂದು ಹೊಂದಿಕೆಯಾಗದವು. ಹಾಗಾಗಿ ಇವುಗಳನ್ನು ಜೊತೆ ಸೇರಿಸುವುದು ಒಳ್ಳೆಯದಲ್ಲ.

7. ನೆಲಗಡಲೆ ಹಾಗೂ ನೀರು: ಚೆನ್ನಾಗಿ ನೆಲಗಡಲೆ ತಿಂದ ಮೇಲೆ ನೀರು ಕುಡಿಯುವುದು ಒಳ್ಳೆಯದಲ್ಲ. ನೆಲಗಡಲೆಯಲ್ಲಿ ಎಣ್ಣೆಯಂಶ ಸಾಕಷ್ಟು ಇರುವುದರಿಂದ, ನೀರು ಕುಡಿದಾಗ ಈ ಎಣ್ಣೆಯಂಶ ಅನ್ನನಾಳದ ಬದಿಗಳಲ್ಲಿ ಹಾಗೆಯೇ ಅಂಟಿಕೊಳ್ಳುವ ಸಂಭವ ಹೆಚ್ಚಿರುವುದರಿಂದ ಹೀಗೆ ಜೊತೆಯಾಗಿ ಸೇವಿಸುವುದು ಒಳ್ಲೆಯದಲ್ಲ.

ಇದನ್ನೂ ಓದಿ: Health Tips: ಹಬ್ಬದ ಸಂದರ್ಭ ಅತಿಯಾಗಿ ತಿನ್ನದೆ ಆರೋಗ್ಯ ಕಾಪಾಡಲು ಈ ಟಿಪ್ಸ್‌ ನೆನಪಿಡಿ!

Exit mobile version