ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ ಚಹಾ ಹಿಡಿದು ಸ್ವಲ್ಪ ಹೊತ್ತು ಕೂರುವ ಸುಖವನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಭಾರತೀಯರ ಮನೆಗಳಲ್ಲಿ ಚಹಾಕ್ಕೊಂದು ವಿಶೇಷ ಸ್ಥಾನವಿದೆ. ಚಹಾ ಹೆಚ್ಚು ಕುಡಿಯಬಾರದು ಎಂಬ ಸತ್ಯ ನಮಗೆ ಗೊತ್ತಿದ್ದರೂ, ದಿನಕ್ಕೆ ಕನಿಷ್ಟ ಎರಡು ಬಾರಿ ಚಹಾ ಹೀರದಿದ್ದರೆ, ಬಹುತೇಕರಿಗೆ ನೆಮ್ಮದಿ ಸಿಗಲಾರದು. ಅದಕ್ಕಾಗಿಯೇ ಚಹಾ ಪ್ರಿಯರು ಚಹಾವನ್ನು ಕೇವಲ ಪೇಯವನ್ನಾಗಿ ನೋಡದೆ, ಅದೊಂದು ಭಾವನೆ ಎಂದೇ ನಂಬುತ್ತಾರೆ. ಇಂತಹ ಚಹಾ ಕುಡಿಯುವಾಗ (Tea time) ಬಹುತೇಕರು ಹಲವು ತಪ್ಪುಗಳನ್ನು ಮಾಡುತ್ತಾರೆ. ಚಹಾದ ಜೊತೆ ಹೊಂದದ ಕೆಲವನ್ನು ಹೊಟ್ಟೆಗೆ (snacks with tea) ಸೇರಿಸುತ್ತಾರೆ. ಇದರಿಂದ ಸಮಸ್ಯೆಗಳು (Health problems) ಉದ್ಭವಿಸುತ್ತವೆ. ಹಾಗಾದರೆ, ಬನ್ನಿ, ಯಾವೆಲ್ಲ ಆಹಾರವನ್ನು ಚಹಾದ ಜೊತೆಗೆ ಸೇವಿಸಬಾರದು (Health Tips) ಎಂಬುದನ್ನು ನೋಡೋಣ.
1. ಅಸಿಡಿಕ್ ಆಹಾರಗಳು: ಸಿಟ್ರಸ್ ಹಣ್ಣುಗಳಾದ ನಿಂಬೆ, ಕಿತ್ತಲೆ, ಮೂಸಂಬಿ ಸೇರಿದಂತೆ ಅಸಿಡಿಕ್ ಪ್ರಕೃತಿಯ ಆಹಾರಗಳನ್ನು ಚಹಾದ ಜೊತೆಗೆ ಸೇವಿಸುವುದು ಒಳ್ಳೆಯದಲ್ಲ. ಚಹಾ ಕುಡಿಯುವ ಸ್ವಲ್ಪ ಮೊದಲು, ಅಥವಾ ಚಹಾ ಕುಡಿದ ತಕ್ಷಣ ಇಂತಹ ಆಹಾರ ಸೇವನೆಯಿಂದ ಚಹಾದಲ್ಲಿರುವ ಆಂಡಿ ಆಕ್ಸಿಡೆಂಟ್‌ಗಳು ದೇಹಕ್ಕೆ ಸೇರದೆ ವ್ಯರ್ಥವಾಗುತ್ತದೆ. ದೇಹವು ಇದರಲ್ಲಿರುವ ಪೋಷಕಾಂಶಗಳನ್ನು ಸಮರ್ಪಕವಾಗಿ ಹೀರಲು ಸಾಧ್ಯವಾಗುವುದಿಲ್ಲ.
2. ಹಸಿರು ತರಕಾರಿಗಳು: ಹಸಿರು ತರಕಾರಿಗಳನ್ನು ಸೇವಿಸಿದ ತಕ್ಷಣ, ಮೊದಲು ಅಥವಾ ಜೊತೆಗೆ ಚಹಾ ಸೇವನೆ ಒಳ್ಳೆಯದಲ್ಲ. ಯಾಕೆಂದರೆ ಚಹಾದಲ್ಲಿರುವ ಟ್ಯಾನಿನ್ ಹಾಗೂ ಆಕ್ಸಲೇಟ್ ಎಂಬ ಪದಾರ್ಥಗಳು ಹಸಿರು ತರಕಾರಿಗಳಲ್ಲಿರುವ ಕಬ್ಬಿಣಾಂಶ ಹಾಗೂ ಪೋಷಕಾಂಶಗಳನ್ನು ಹೀರುವಲ್ಲಿ ಅಡ್ಡಗಾಲು ಹಾಕುತ್ತದೆ. ಹೀಗಾಗಿ, ನಾವು ಸೇವಿಸಿದ ಹಸಿರು ಸೊಪ್ಪು ತರಕಾರಿಯಲ್ಲಿರುವ ಉತ್ತಮ ಪೋಷಕತತ್ವಗಳೆಲ್ಲವೂ ದೇಹಕ್ಕೆ ಸೇರದೆ ವ್ಯರ್ಥವಾಗಿಬಿಡುತ್ತವೆ.
3. ಗಾಢ ಮಸಾಲೆಯುಕ್ತ ಆಹಾರಗಳು: ಚಹಾದ ಸ್ವಾದವನ್ನು ಅನುಭವಿಸಬೇಕೆಂದಿದ್ದರೆ, ಮಸಾಲೆಯುಕ್ತ, ಖಾರವಾದ ಪದಾರ್ಥಗಳನ್ನು ಜೊತೆಗೆ ತಿನ್ನಬಾರದು. ಖಾರದ ಜೊತೆಗೆ ಚಹಾದ ಯಾವ ರುಚಿಯೂ ಹತ್ತುವುದಿಲ್ಲ. ಇಂತಹ ತಿಂಡಿಗಳ ಜೊತೆಗೆ ಚಹಾ ಕುಡಿಯುವುದು ವೇಸ್ಟ್.
4. ಒಣಹಣ್ಣುಗಳು ಹಾಗೂ ಬೀಜಗಳು: ಬೀಜಗಳು ಹಾಗೂ ಒಣಹಣ್ಣುಗಳನ್ನು ಚಹಾ ಸಮಯಕ್ಕೆಂದು ಇಡಬೇಡಿ. ನೀವು ತಿಂದ ಅಷ್ಟೂ ಒಳ್ಳೆಯ ಪೋಷಕಾಂಶಗಳಿರುವ ಬೀಜಗಳು ಯಾವ ಪ್ರಯೋಜನವನ್ನೂ ನಿಮ್ಮ ದೇಹಕ್ಕೆ ಕೊಡುವುದಿಲ್ಲ. ಅಂದರೆ, ಚಹಾದಲ್ಲಿರುವ ಟ್ಯಾನಿನ್ ಎಂಬ ಅಂಶವು ಬೀಜಗಳಲ್ಲಿರುವ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳಲು ಆಸ್ಪದ ನೀಡುವುದಿಲ್ಲ. ಹೀಗಾಗಿ, ಒಳ್ಳೆಯ ಪೋಷಕಾಂಶಗಳು ಚಹಾದ ದೆಸೆಯಿಂದ ದೇಹ ಸೇರಿದರೂ ಒಳ್ಳೆಯ ಕೆಲಸ ಮಾಡುವುದಿಲ್ಲ.
5. ಬಜ್ಜಿ, ಬೋಂಡಾ ಹಾಗೂ ಕುರುಕಲು ತಿಂಡಿಗಳು: ಬಹಳಷ್ಟು ಮಂದಿಗೆ ಚಹಾದ ಜೊತೆಗೊಂದು ಕರುಕಲು ತಿಂಡಿ ಇರಬೇಕು. ಇಲ್ಲವಾದಲ್ಲಿ ಚಹಾಕ್ಕೆ ಬೆಲೆ ಇಲ್ಲ ಎಂಬ ಮನಸ್ಥಿತಿ ಇದೆ. ಸಂಜೆಯ ಹೊತ್ತಿನ ಕಾಫಿಗೆ ಏನಾದರೊಂದು ಮೆಲ್ಲಲು ಇಂತಹ ಬಜ್ಜಿ, ಬೋಡಾಗಳಿದ್ದರೆ ಅದರ ಗಮ್ಮತ್ತೇ ಬೇರೆ ಎಂದು ನಿಮಗನಿಸಬಹುದು. ಹೊರಗೆ ಮಳೆ ಜೋರು ಸುರಿಯುತ್ತಿದ್ದರೆ, ಬಿಸಿಬಿಸಿ ಹಬೆಯಾಡುವ ಚಹಾದ ಜೊತೆಗೆ ಬಜ್ಜಿ ಬೋಂಡಾ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು ಎಂದೂ ನಿಮಗೆ ಅನಿಸುವುದು ಸಹಜವೇ. ಆದರೆ, ನಿಜವಾಗಿ ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಈ ಬಜ್ಜಿ ಬೋಂಡಾ ಹಾಗೂ ಎಣ್ಣೆಯಲ್ಲಿ ಕರಿದ ಕುರುಕಲು ತಿಂಡಿಗಳ ಜೊತೆಗೆ ಚಹಾ ಸೇವಿಸಿದರೆ, ಜೀರ್ಣಕ್ರಿಯೆಯ ಸಮಸ್ಯೆಗಳು ನಿಮಗೆ ಎದುರಾಗಬಹುದು. ಮೊದಲೇ ಜೀರ್ಣಕ್ರಿಯೆ ಸಮಸ್ಯೆ ಇರುವ ಮಂದಿ ಇದರಿಂದ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸಬಹುದು. ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಎದೆಯುರಿ, ಮಲಬದ್ಧತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ: Masala Tea : ಹಸಿವು ನಿಯಂತ್ರಿಸಿ ದೇಹದ ತೂಕ ಇಳಿಸುವ ಮಸಾಲೆ ಚಹಾ!