Site icon Vistara News

Health Tips: ಈ ಆಹಾರಗಳನ್ನು ಸೇವಿಸಿದರೆ ಸರಸದ ಸಮಯ ಆದೀತು ವಿರಸಮಯ!

couple

ಸೆಕ್ಸ್‌ ಅಥವಾ ಲೈಂಗಿಕ ಸಂಪರ್ಕಕ್ಕೂ ಮುನ್ನ ಕೆಲವು ಆಹಾರಗಳಿಂದ ದೂರವಿರುವುದು ಒಳ್ಳೆಯದು ಎಂಬ ಸತ್ಯ ನಿಮಗೆ ತಿಳಿದಿದೆಯೇ? ಹೌದು. ನಮ್ಮ ಭಾರತೀಯ ಮೂಲದ ಪುರಾತನ ಆಯುರ್ವೇದವೂ (Ayurveda tips) ಕೂಡಾ ಇದನ್ನು ಪುಷ್ಟೀಕರಿಸುತ್ತದೆ ಎಂದರೆ ನೀವಿದನ್ನು ನಂಬಲೇಬೇಕು. ಯಾಕೆಂದರೆ, ಲೈಂಗಿಕ ಸಂಪರ್ಕ (Sexual activity) ಎಂದರೆ ಅತ್ಯಂತ ಹೆಚ್ಚು ಶಕ್ತಿಯ ಅಗತ್ಯವಿರುವ ಮನುಷ್ಯ ಸಹಜವಾದ ಕ್ರಿಯೆ. ಇಂತಹ ಕ್ರಿಯೆಗೂ ಮುನ್ನ ನಮ್ಮ ದೇಹ ತಯಾರಾಗಿರುವುದೂ ಕೂಡಾ ಅಷ್ಟೇ ಮುಖ್ಯ. ಈ ಕ್ರಿಯೆಯು ಸುಲಲಿತವಾಗಿ ಸಂತೋಷದಾಯಕವಾಗಿ ಆಗಬೇಕೆಂದರೆ ನಾವು ನಮ್ಮ ಆಹಾರದ ಮೇಲೆಯೂ ಗಮನ ನೀಡಬೇಕು. ಸಿಕ್ಕಿದ್ದನ್ನೆಲ್ಲ ಹೊಟ್ಟೆಬಿರಿಯ ಮುಕ್ಕಿದರೆ, ಈ ಕ್ರಿಯೆ ಅಂದುಕೊಂಡಂತೆ ಸಹಜವಾಗಿ ಆಗದು. ಅದಕ್ಕಾಗಿಯೇ, ಕೆಲವು ಆಹಾರಗಳನ್ನು ದೂರವಿಟ್ಟರೆ ಒಳ್ಳೆಯದು. ಬನ್ನಿ, ಯಾವೆಲ್ಲ ಆಹಾರದಿಂದ (foods to avoid before sex) ಸೆಕ್ಸ್‌ಗೂ ಮುನ್ನ ದೂರವಿದ್ದರೆ ಒಳ್ಳೆಯದು (health tips) ಎಂಬುದನ್ನು ನೋಡೋಣ.

1. ದೈಹಿಕ ಸಾಂಗತ್ಯ ಎಂಬುದೊಂದು ಸುಖಕರ ಕ್ರಿಯೆಯಾಗಬೇಕಾದರೆ, ದೇಹಕ್ಕೆ ಸರಿಯಾಗಿ ನೀರಿನಂಶ ಸಿಗಬೇಕು. ದೇಹ ಹೈಡ್ರೇಟ್‌ ಆಗಿರಬೇಕು. ವ್ಯಾಯಾಮದಲ್ಲಿ ಬೆವರಿಳಿದಂತೆ ನೀರಿನ ಸೇವನೆಯೂ ಮುಖ್ಯವೆಂಬುದು ನಮಗೆ ಹೇಗೆ ತಿಳಿದಿದೆಯೋ ಹಾಗೆಯೇ ಇದೂ ಕೂಡಾ. ಹೀಗಾಗಿ, ಆದಷ್ಟೂ ಹೊಟ್ಟೆ ಲಘುವಾಗಿರುವುದು ಮುಖ್ಯ. ಹೊಟ್ಟೆ ಹಗುರವಾಗಿದ್ದು, ಅತ್ಯಧಿಕ ಹೆವೀ ಅನಿಸುವ ಆಹಾರದಿಂದ ದೂರವಿದ್ದಷ್ಟೂ ಒಳ್ಳೆಯದು. ಅತಿಯಾಗಿ ತಿಂದಷ್ಟೂ ನಿದ್ದೆ ಎಳೆಯುತ್ತದೆ. ಆಗ ಅಲ್ಲಿ, ಅನುನಯದ ಮಾತುಗಳಿಗೆ, ಸರಸ ಸಲ್ಲಾಪಗಳಿಗೆ ಆಸ್ಪದ ಕಡಿಮೆ. ಅತಿಯಾದ ಜಿಡ್ಡುಯುಕ್ತ ಆಹಾರಗಳಿಂದ, ಹೊಟ್ಟೆ ಭಾರವೆನಿಸುವ ಸಿಹಿ ತಿನಿಸುಗಳಿಂದ ದೂರವಿರುವುದು ಅತ್ಯಂತ ಅವಶ್ಯಕ.

2. ಬಹಳಷ್ಟು ಮಂದಿ ಈ ವಿಚಾರದಲ್ಲಿ ಎಡವುವುದೇ ಹೆಚ್ಚು. ಆಲ್ಕೋಹಾಲ್‌ ಸೇವಿಸಿದರೆ, ಸೆಕ್ಸ್‌ ಇನ್ನಷ್ಟು ಮಧುರವಾಗಿ, ಅದ್ಭುತವಾಗಿ ಇರುತ್ತದೆ ಎಂದು ಯೋಚಿಸುವವರೇ ಹೆಚ್ಚು. ಹೀಗಾಗಿ ಅನೇಕರು ಸೆಕ್ಸ್‌ ಜೊತೆಗೆ ಗುಂಡು ಹಾಕುವ ಯೋಚನೆ ಮಾಡುವುದು ಸಹಜ. ಆದರೆ, ಇದು ನಿಜವಲ್ಲ. ಹಾಗೆ ನೋಡಿದರೆ, ಆಲ್ಕೋಹಾಲ್‌ ಲೈಂಗಿಕ ಕ್ರಿಯೆಯನ್ನು ಇನ್ನಷ್ಟು ಉದ್ದೀಪಿಸುವಂತೆ ಮಾಡುವುದಿಲ್ಲ. ಬದಲಾಗಿ ನಿದ್ರೆಗೆ ದೂಡುತ್ತದೆ. ಯಾಕೆಂದರೆ ಆಲ್ಕೋಹಾಲ್‌ ಸೇವನೆಯಿಂದ ನಿಮ್ಮ ಲೈಂಗಿಕಾಸಕ್ತಿಯಲ್ಲಿ ಖಂಡಿತವಾಗಿಯೂ ಬದಲಾವಣೆ ಆಗುತ್ತದೆ. ಇದು ಮೆಲಟೋನಿನ್‌ ಹಾರ್ಮೋನನ್ನೂ ಉದ್ದೀಪನಗೊಳಿಸಿ ನಿದ್ರೆಗೆ ನೂಕುತ್ತದೆ.

3. ಸೆಕ್ಸ್‌ಗೂ ಮುನ್ನ ಅತಿಯಾದ ಮಸಾಲೆಯುಕ್ತ, ಸ್ಪೈಸೀ ಆಹಾರ ತಿನ್ನುವುದೂ ಕೂಡಾ ಒಳ್ಳೆಯದಲ್ಲ. ನಿಮ್ಮ ಸೆಕ್ಸ್‌ ಲೈಫ್‌ ಸ್ಪೈಸೀಯಾಗಿರಬೇಕೆಂದರೆ, ಸ್ಪೈಸೀ ಆಹಾರಗಳಿಂದ ದೂರವಿರಿ. ತಮಾಷೆಯೆನಿಸಿದರೂ ಸತ್ಯವಿದು. ಅತೀ ಮಸಾಲೆಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಆಸಿಡ್‌ಗಳ ಉತ್ಪತ್ತಿಯನ್ನು ಹೆಚ್ಚು ಮಾಡುವುದಷ್ಟೇ ಅಲ್ಲ, ಇದರ ಪರಿಣಾಮವಾಗಿ ಆಗಾಗ ಮೂತ್ರವಿಸರ್ಜನೆಯಂತಹ ಸಮಸ್ಯೆಗಳು ಬರುತ್ತವೆ. ಹೊಟ್ಟೆ ಸಹಜವಾಗಿ, ಲೈಟಾಗಿ ಇರಲಾರದು. ಇದು ಸೆಕ್ಸ್‌ಗೆ ಬಾಧೆಯಾಗುತ್ತದೆ.

4. ಪ್ರೆಂಚ್‌ ಫ್ರೈಸ್‌ ನಂತಹ ಜಂಕ್‌ಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಪ್ರತಿಯೊಬ್ಬನಿಗೂ ತಿಳಿದಿರುತ್ತದೆ ನಿಜ. ಆದರಿದು, ಸೆಕ್ಸ್‌ಗೂ ಮುನ್ನ ಕೂಡಾ ಒಳ್ಳೆಯದಲ್ಲ. ಫ್ರೆಂಚ್‌ ಫ್ರೈಸ್‌ನಂತಹ ಜಂಕ್‌ಗಳು ಮುಖ್ಯವಾಗಿ ಪುರುಷರ ಸೆಕ್ಸ್‌ ಹಾರ್ಮೋನು ಟೆಸ್ಟೋಸ್ಟೀರಾನ್‌ ಮಟ್ಟವನ್ನು ನಿಗ್ರಹಿಸುವುದಷ್ಟೇ ಅಲ್ಲ, ರಕ್ತ ಪರಿಚಲನೆಯ ಚುರುಕುತನವನ್ನೂ ಕಡಿಮೆಗೊಳಿಸುತ್ತದೆ.

5. ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಿಂದು ಲೈಂಗಿಕ ಸಂಪರ್ಕದ ಸಾಧ್ಯತೆ ಕಡಿಮೆ ಎಂಬ ಸತ್ಯ ಎಂತಹವನಿಗೂ ಗೊತ್ತಿದೆ ನಿಜವೇ. ಯಾಕೆಂದರೆ, ಇವೆರಡರ ಸೇವನೆಯ ಬಳಿಕ ಬಾಯಿಯಿಂದ ಬರುವ ದುರ್ನಾತದೊಂದಿಗೆ ಯಾರಿಗೂ ಸೆಕ್ಸ್‌ ಸಹವಾಸ ಸಾಧ್ಯವಾಗದು. ಹಾಗಾಗಿ, ಸಹಜವಾಗಿಯೇ ಸೆಕ್ಸ್‌ಗೂ ಮುನ್ನ, ಈರುಳ್ಳಿ ಬೆಳ್ಳುಳ್ಳಿ ನಿಮಗೆಷ್ಟೇ ಪ್ರಿಯವಾಗಿದ್ದರೂ ದೂರ ಇರುವುದೇ ಒಳ್ಳೆಯದು.

6. ಶಕ್ತಿವರ್ಧಕ ಪೇಯಗಳನ್ನು ಕುಡಿದು ಶಕ್ತಿ ವರ್ಧಿಸಿಕೊಂಡು ಲೈಂಗಿಕ ಸಂಪರ್ಕಕ್ಕೆ ರೆಡಿಯಾಗುತ್ತೇನೆ ಎಂದುಕೊಂಡರೆ ನಿಮ್ಮಷ್ಟು ಬೆಪ್ಪುತಕಡಿಗಳೂ ಯಾರೂ ಇಲ್ಲ. ಯಾಕೆಂದರೆ, ಶಕ್ತಿವರ್ಧಕಗಳಲ್ಲಿ ಅತಿಯಾಗಿ ಸಕ್ಕರೆ ಹಾಗೂ ಕೃತಕ ಸಿಹಿಕಾರಕಗಳಿರುವುದರಿಂದ ಇವು ತಾತ್ಕಾಲಿಕವಾಗಿ ದಿಢೀರ್‌ ಶಕ್ತಿಯನ್ನು ನೀಡುವಲ್ಲಿ ಮಾತ್ರ ಸಹಾಯ ಮಾಡುತ್ತವೆ. ಆದರೆ ಇವು ನಿಮ್ಮ ಆರೋಗ್ಯಕ್ಕೆ ದೀರ್ಘಕಾಲಿಕವಾಗಿ ಯಾವ ಸಹಾಯವನ್ನೂ ಮಾಡಲಾರದು ಹಾಗೂ ಒಳ್ಳೆಯದೂ ಅಲ್ಲ. ಇದರಿಂದ ಆಗಾಗ ಮೂತ್ರವಿಸರ್ಜನೆಯ ಬಯಕೆ ಹೆಚ್ಚಾಗಿ, ಲೈಂಗಿಕ ಸಂಪರ್ಕದ ಸುಸಮಯವೂ ಹಾಳಾಗುತ್ತದೆ ಎಂಬುದನ್ನು ನೆನಪಿಡಿ.

ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

Exit mobile version