ಬೆಂಗಳೂರು: ಮಧುಮೇಹ (Health Tips For Diabetes) ಈಗ ಬಹಳ ಸಾಮಾನ್ಯ. ಆದರೆ ಸಾಮಾನ್ಯ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾತ್ರ ಸಲ್ಲ. ಆರೋಗ್ಯದ ವಿಚಾರದಲ್ಲಿ ಎಲ್ಲವನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಲು ಕೊಂಚ ಶ್ರಮ ವಹಿಸಬೇಕು. ಯಾಕೆಂದರೆ ಮಧುಮೇಹವೇ ಹೃದ್ರೋಗ, ಪಾರ್ಶ್ವವಾಯು, ಕೈಕಾಲಿನ ಸಮಸ್ಯೆಗಳು ಇತ್ಯಾದಿಗಳಿಗೆ ನೇರವಾಗಿ ಕಾರಣವಾಗುತ್ತದೆ. ಟೈಪ್ ೨ ಮಧುಮೇಹವನ್ನು ನಮ್ಮ ಆರೋಗ್ಯಕರ ಆಹಾರಾಭ್ಯಾಸಗಳಿಂದ ನಿಯಂತ್ರಣದಲ್ಲಿರಿಸಲು ಹಾಗೂ ಬರದಂತೆ ತಡೆಯಲು ಸಾಧ್ಯವಿದೆ.
ನಿಯಮಿತ ವ್ಯಾಯಾಮ, ಧೂಮಪಾನದಂಥ ಅಭ್ಯಾಸಗಳಿಂದ ದೂರವಿರುವುದು, ಆರೋಗ್ಯಕರ ಆಹಾರ ಇಲ್ಲಿ ಬಹುಮುಖ್ಯ. ಔಷಧ, ವೈದ್ಯರ ಸಲಹೆ ಹಾಗೂ ನಿಯಮಿತವಾಗಿ ಪರೀಕ್ಷೆಗಳೂ ಕೂಡಾ ಸಮತೋಲನದಲ್ಲಿರಿಸುತ್ತದೆ. ಮಧುಮೇಹದ ಲಕ್ಷಣ ಕಾಣಿಸುತ್ತಿದ್ದರೆ, ಮಧುಮೇಹ ಬರಬಹುದಾದ ಎಲ್ಲ ಲಕ್ಷಣಗಳಿವೆ ಎಂದು ವೈದ್ಯರು ಹೇಳಿದ್ದರೆ, ಅಂಥವರು ಮೊದಲೇ ಯಾವೆಲ್ಲ ಆಹಾರಗಳನ್ನು ಆದಷ್ಟು ಸೇವಿಸದೆ ಇರುವುದು ಒಳಿತು ಎಂದು ತಿಳಿದಿರುವುದು ಬಹಳ ಮುಖ್ಯ. ಅವುಗಳು ಇವು.
ಪ್ಯಾಕ್ಡ್ ಡ್ರಿಂಕ್ಸ್, ಕಾಕ್‌ಟೇಲ್‌ಗಳು
ಪ್ಯಾಕ್ ಆಗಿ ಬರುವ ಪೇಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದವರು ಕಡಿಮೆ. ಆದರೂ ಇದನ್ನು ಸೇವಿಸುವವರ ಪ್ರಮಾಣ ದೊಡ್ಡದಿದೆ. ಸೋಡಾ, ಜ್ಯೂಸ್, ಸಿಹಿಯಾದ ಕಾಫಿಯಂತಹ ಪೇಯಗಳು, ಲೆಮನೇಡ್, ಮಿಕ್ಸ್‌ಡ್ ಆಲ್ಕೋಹಾಲ್ ಕಾಕ್‌ಟೇಲ್‌ಗಳು, ಎನರ್ಜಿ ಡ್ರಿಂಕ್‌ಗಳು, ಸ್ಪೋರ್ಟ್ಸ್ ಡ್ರಿಂಕ್‌ಗಳನ್ನು ಬಳಸದೆ ಇರುವುದು ಹಿತ. ಕೃತಕ ಸಿಹಿಯನ್ನು ಬಳಸುವುದೂ ಕೂಡಾ ಒಳ್ಳೆಯದಲ್ಲ.
ಜಂಕ್ ಫುಡ್
ಫಾಸ್ಟ್ ಫುಡ್ ಇಂದು ಜನರ ನಿತ್ಯ ಬದುಕಿನಲ್ಲಿ ಎಷ್ಟು ಸೇರಿಕೊಂಡಿದೆ ಎಂದರೆ, ಇವುಗಳ ಅಭ್ಯಾಸವನ್ನು ಬಿಡುವುದೂ ಸವಾಲಿನ ಕೆಲಸವೇ. ಆದರೂ ಸತ್ಯವನ್ನು ಅರಗಿಸಿಕೊಂಡು ಆರೋಗ್ಯವನ್ನು ಮುಂದಿಡುವುದಾದರೆ, ಇವುಗಳಿಂದ ದೂರವಿರುವುದೇ ಒಳ್ಳೆಯದು. ಇದರಿಂದ ತೂಕವೂ ಹೆಚ್ಚಾಗುತ್ತದೆ. ಯಾಕೆಂದರೆ ಇದಕ್ಕೆ ಕಾರಣ ಅತಿಯಾದ ಮಾಂಸ ಸೇವನೆ ಹಾಗೂ ಇಂತಹ ಆಹಾರದಲ್ಲಿರುವ ಸೋಡಿಯಂ ಹಾಗೂ ಸ್ಯಾಚುರೇಟೆಡ್ ಫ್ಯಾಟ್.
ಪಿಷ್ಠ(ಸ್ಟಾರ್ಚ್) ಹೆಚ್ಚಿರುವ ಆಹಾರಗಳು
ಪಿಷ್ಠ ಹೆಚ್ಚಿರುವ ಆಹಾರ ಪದಾರ್ಥಗಳಲ್ಲಿ ಒಳ್ಳೆಯ ಪೋಷಕಾಂಶಗಳೂ ಇವೆ. ಆದರೆ, ಇವುಗಳಲ್ಲಿ ಕಾರ್ಬೋಹೈಡ್ರೇಟ್ ಅಧಿಕವಾಗಿರುತ್ತದೆ. ಉದಾಹರಣೆಗೆ, ಆಲೂಗಡ್ಡೆ, ಜೋಳ, ಗೆಣಸು ಇತ್ಯಾದಿಗಳು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಆದರೂ ಒಂದು ಹಿಡಿತದಲ್ಲಿ ಇವುಗಳನ್ನು ತಿನ್ನಬಹುದು. ಅಂದರೆ, ಆಹಾರದಲ್ಲಿ ಕೊನೆಯ ಆಯ್ಕೆಯಾಗಿ ಬಳಸಬಹುದು.
ಇದನ್ನೂ ಓದಿ | AB-ARK | ಡಿಸೆಂಬರ್ ವೇಳೆಗೆ ರಾಜ್ಯದ ಶೇ.50 ಅರ್ಹರಿಗೆ ಆಯುಷ್ಮಾನ್ ಕಾರ್ಡ್ ನೀಡುವ ಗುರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಮೊದಲೇ ಮಾಡಿಟ್ಟ ಡೆಸರ್ಟ್‌ಗಳು
ಡೆಸರ್ಟ್ (ಸಿಹಿತಿನಿಸು) ಇಷ್ಟವಾಗದವರು ಯಾರು ಹೇಳಿ? ಆದರೆ, ಇದರಿಂದ ದೂರವಿರುವುದು ಆರೋಗ್ಯಕ್ಕೆ ಒಳ್ಳೆಯದು. ಮೊದಲೇ ಮಾಡಿ ಇಟ್ಟಿರುವ ಇವುಗಳಲ್ಲಿ ಸಕ್ಕರೆಯನ್ನು ಸಾಕಷ್ಟು ಸುರಿದಿರುತ್ತಾರೆ. ಅನಗತ್ಯ ಸಕ್ಕರೆ ಹೊಟ್ಟೆ ಸೇರುತ್ತದೆ. ಸಿಹಿ ತಿನ್ನಲು ಆಗಾಗ ಬಯಸುವ ಮಂದಿ ಮನೆಯಲ್ಲೇ ಸ್ಮೂದಿ, ಹಣ್ಣುಗಳ ಸಿಹಿ ಇತ್ಯಾದಿಗಳನ್ನು ಮಾಡಬಹುದು.
ರಿಫೈನ್ಡ್ ಧಾನ್ಯಗಳು
ಧಾನ್ಯಗಳು ಒಳ್ಳೆಯದು ನಿಜ. ಆದರೆ ರಿಫೈನ್ಡ್? ಖಂಡಿತ ಒಳ್ಳೆಯದಲ್ಲ. ವೈಟ್ ಬ್ರೆಡ್, ವೈಟ್ ಅಕ್ಕಿ, ವೈಟ್ ಪಾಸ್ತಾ ಇವೆಲ್ಲವೂ ದೇಹದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಇದರ ಬದಲು ಕುಚ್ಚಲಕ್ಕಿ, ಓಟ್ಸ್, ಗೋಧಿ, ರಾಗಿಯಂತಹ ಧಾನ್ಯಗಳ ಬಳಕೆ ಹೆಚ್ಚು ಮಾಡಬಹುದು.
ಬ್ರೇಕ್‌ಫಾಸ್ಟ್ ಸಿರಿಯಲ್ಸ್
ಬಹಳಷ್ಟು ಮಂದಿಯ ಬೆಳಗು ಆರಂಭವಾಗುವುದೇ ಒಂದು ಬೌಲ್ ಸಿರಿಯಲ್ ಹಾಗೂ ಹಾಲಿನ ಜೊತೆಗೆ. ಸಿರಿಯಲ್ಸ್ ಒಳ್ಳೆಯದೇನೋ ನಿಜ. ಆದರೆ ಬಹಳಷ್ಟು ಸಿರಿಯಲ್‌ಗಳು ಸಾಕಷ್ಟು ಸಕ್ಕರೆಯಿಂದ ತುಂಬಿಕೊಂಡು ಬಹುವಿಧಗಳಿಂದ ಸಂಸ್ಕರಿಸಿ ಬಂದಿರುತ್ತದೆ ಎಂಬುದನ್ನು ನಾವು ನೆನಪಿಡಬೇಕು. ಇಂತಹ ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ, ಹೈ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ದೇಹದಿಂದ ಅಗತ್ಯಕ್ಕಿಂತ ಹೆಚ್ಚು ಸಕ್ಕರೆಯ ಮಟ್ಟವನ್ನೂ, ಇನ್ಸುಲಿನ್ ಮಟ್ಟವನ್ನೂ ಏರಿಸುತ್ತದೆ.
ಇದನ್ನೂ ಓದಿ | World Diabetes Day | ಮಧುಮೇಹ ನಿಯಂತ್ರಣಕ್ಕೆ ಇಲ್ಲಿವೆ ಸರಳ ಉಪಾಯಗಳು