Site icon Vistara News

Health Tips: ಮಲಬದ್ಧತೆ ಎಂಬ ಯಾತನೆ: ನಿತ್ಯ ಜೀವನದಲ್ಲಿದೆ ಸರಳ ಪರಿಹಾರ!

Constipation in winter

ಬೆಳಗಾದರೆ, ನಿತ್ಯವಿಧಿಗಳನ್ನು ಸರಿಯಾಗಿ ಪೂರೈಸುವುದು ಮನಸ್ಸಿಗೆ ದೇಹಕ್ಕೆ ಆರಾಮವನ್ನು ನೀಡುತ್ತದೆ. ನಿತ್ಯಕರ್ಮಗಳನ್ನು ಎದ್ದ ಕೂಡಲೇ ಮುಗಿಸಿಕೊಂಡರೆ, ದಿನವೊಂದನ್ನು ತಾಜಾ ಆಗಿ ಶುರು ಮಾಡಿದ ಅನುಭೂತಿ ನೀಡುತ್ತದೆ. ಆದರೆ ಎಷ್ಟೋ ಮಂದಿಗೆ ಇದು ಸುಲಭವಲ್ಲ. ಮುಖ್ಯವಾಗಿ, ಮಲಬದ್ಧತೆಯ ಸಮಸ್ಯೆ ಇದ್ದವರಿಗೆ ಪ್ರತಿ ಬೆಳಗೂ ಇಂಥ ತಾಜಾ ಅನುಭೂತಿಯನ್ನು ಹೊತ್ತು ತರುವುದಿಲ್ಲ. ಇದೊಂದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿ ಕಂಡರೂ ಇದರಿಂದ ಸಮಸ್ಯೆಗಳು ಬಹಳ. ಮಲಬದ್ಧತೆಯ (constipation) ಸಮಸ್ಯೆ ಹೊಂದಿರುವ ಮಂದಿಯ ಪಚನಕ್ರಿಯೆ ವ್ಯವಸ್ಥೆ ಸರಳವಾಗಿಲ್ಲ ಎಂದೇ ಅರ್ಥ. ಇದು ಸಣ್ಣ ಸಮಸ್ಯೆಯೇ ಆಗಿದ್ದರೂ ಇದು ಸೃಷ್ಟಿಸುವ ತೊಂದರೆಗಳು ಆರೋಗ್ಯ ಸಮಸ್ಯೆಗಳು (health tips) ಒಂದಕ್ಕೊಂದು ಸಂಬಂಧ ಹೊಂದಿರುವಂಥವುಗಳೇ.

ಪ್ರೊಬಯಾಟಿಕ್‌, ಧಾನ್ಯ, ಕಾಳುಗಳು, ಹಣ್ಣುಗಳು ಹಾಗೂ ಕೆಲವು ಆಹಾರ ಪದ್ಧತಿಯಿಂದ ಮಲಬದ್ಧತೆಯನ್ನು ಸರಿಪಡಿಸಬಹುದಾದರೂ, ಜೀವನಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತರದ ಹೊರತು ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗಾದರೆ, ಮಲಬದ್ಧತೆಯ ಸಮಸ್ಯೆ ನಿಮ್ಮ ನಿತ್ಯದ ಸಮಸ್ಯೆಯಾಗಿದ್ದರೆ, ಯಾವೆಲ್ಲ ಆಹಾರಗಳ ಮೂಲಕ ಪರಿಹಾರ ಪಡೆಯಬಹುದು ಎಂಬುದನ್ನು ನೋಡೋಣ.

1. ಮೊಸರು ಹಾಗೂ ಅಗಸೆ ಬೀಜದ ಹುಡಿ: ಮೊಸರಿನಲ್ಲಿ ದೇಹಕ್ಕೆ ಅಗತ್ಯ ಬೇಕಾಗುವ ಒಳ್ಳೆಯ ಬ್ಯಾಕ್ಟೀರಿಯಾಗಳಿವೆ. ಮೊಸರಿನಲ್ಲಿರುವ ಬೈಫೈಡೋಬ್ಯಾಕ್ಟೀರಿಯಂ ಲ್ಯಾಕ್ಟಿಸ್‌ ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಅಗಸೆ ಬೀಜದಲ್ಲಿ ಅತ್ಯಧಿಕ ನಾರಿನಂಶವಿದ್ದು ಇದು ಮಲವನ್ನು ಒಳಗಿನಿಂದಮೆದುವಾಗಿಸಿ ಹೊರಹೋಗುವಂತೆ ಮಾಡುತ್ತದೆ. ಕಷ್ಟವಾದ ಕೆಲಸ ಸುಲಭವಾಗುತ್ತದೆ.

2. ನೆಲ್ಲಿಕಾಯಿ ಜ್ಯೂಸ್‌: ೩೦ ಎಂ ಎಲ್‌ನಷ್ಟು ನೆಲ್ಲಿಕಾಯಿ ಜ್ಯೂಸ್‌ ಒಂದಿ ಲೋಟ ನೀರಿನ ಜೊತೆ ಸೇರಿಸಿ ಬೆಳಗ್ಗೆ ಕುಡಿಯುವುದರಿಂದ ಪಚನಕ್ರಿಯೆ ಸುಧಾರಿಸುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿಧಾನವಾಗಿ ಪರಿಹರಿಸುತ್ತದೆ.

3. ಓಟ್ಸ್‌: ಓಟ್ಸ್‌ನಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಇದು ಮಲಬದ್ಧತೆಯ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ.

4. ತುಪ್ಪದ ಜೊತೆ ಹಾಲು: ಬಿಸಿ ಹಾಲಿನ ಜೊತೆಗೆ ಒಂದು ಚಮಚ ತುಪ್ಪ ಸೇರಿಸಿ ಕಲಕಿ ಮಲಗುವ ಮೊದಲು ಕುಡಿದರೆ ಬೆಳಗ್ಗೆ ಮಲ ವಿಸರ್ಜನೆ ಸುಲಭವಾಗಿ ಆಗುತ್ತದೆ. ತುಪ್ಪದಲ್ಲಿರುವ ಬುಟಿರಿಕ್‌ ಆಸಿಡ್‌ ಕರುಳಿನಲ್ಲಿ ಪಚನಕ್ರಿಯೆಯನ್ನು ಉದ್ದೀಪಿಸುವುದರಿಂದ ಸುಲಭವಾಗಿ ಪಚನವಾದ ಆಹಾರವನ್ನು ಮುಂದೆ ತಳ್ಳುತ್ತದೆ. ಇದರಿಂದ ಮಲ ಸುಲಭವಾಗಿ ಜಾರಿ ವಿಸರ್ಜನೆಯಾಗುತ್ತದೆ.

5. ಹಸಿರು ಸೊಪ್ಪು: ಸೊಪ್ಪು ಮಲಬದ್ಧತೆಯ ಮಂದಿಗೆ ಅತ್ಯುತ್ತಮ ಆಹಾರ. ಇದರಲ್ಲಿ ಫೋಲೇಟ್‌, ವಿಟಮಿನ್‌ ಸಿ, ಕೆ ಗಳು ಹೇರಳವಾಗಿದೆ. ಪ್ರತಿನಿತ್ಯದ ಆಹಾರದಲ್ಲಿ ಸೊಪ್ಪು, ಮೊಳಕೆ ಕಾಳುಗಳನ್ನು ಸೇರಿಸುತ್ತಾ ಬಂದಲ್ಲಿ, ಪಚನಕ್ರಿಯೆ ಸಮಸ್ಯೆಗಳೆಲ್ಲವೂ ಪರಿಹಾರವಾಗಿ, ಮಲವಿಸರ್ಜನೆ ನಿತ್ಯವೂ ಸರಿಯಾಗಿ ಆಗುತ್ತದೆ.

ಇದನ್ನೂ ಓದಿ: Health Tips For Fatty Liver Problem: ಫ್ಯಾಟಿ ಲಿವರ್ ಸಮಸ್ಯೆ ಶಮನಕ್ಕೆ ಇವು ಸಹಾಯಕ

6. ನೀರು: ನೀರು ಕುಡಿಯುವುದು ಎಲ್ಲ ಸಮಸ್ಯೆಗಳಿಗೂ ಅತ್ಯಂತ ಸುಲಭ ಹಾಗೂ ಸರಳ ಪರಿಹಾರ. ದೇಹಕ್ಕೆ ನೀರು ಅತ್ಯಂತ ಅವಶ್ಯಕ. ನಿತ್ಯವೂ ಹೆಚ್ಚು ನೀರು ಕುಡಿಯುವ ಅಭ್ಯಾಸ ಹಾಗೂ ನಾರಿನಂಶದ ಆಹಾರವನ್ನು ಅಭ್ಯಾಸ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ಯಾವ ವೈದ್ಯರ ನೆರವಿಲ್ಲದೆ ಸುಲಭವಾಗಿ ಪರಿಹಾರಮಾಡಿಕೊಳ್ಳಬಹುದು. ಕೊಂಚ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು.

7. ಬಾಳೆಹಣ್ಣು: ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಸೇವಿಸುವುದರಿಂದಲೂ ಮಲಬದ್ಧತೆಯಿಂದ ಪರಿಹಾರ ಕಂಡುಕೊಳ್ಳಬಹುದು. ಆದರೆ, ಗಟ್ಟಿಯಾಗಿರುವ ಸರಿಯಾಗಿ ಹಣ್ಣಾಗದ ಬಾಳೆಹಣ್ಣು ತಿಂದರೆ, ಇದರಿಂದ ಮಲಬದ್ಧತೆಗೆ ಸಿಗುವ ಪರಿಹಾರಕ್ಕಿಂತ ಸಮಸ್ಯೆಯೇ ಹೆಚ್ಚಾಗುವ ಸಾಧ್ಯತೆಯೂ ಇದೆ. ಹಾಗಾಗಿ, ಬಾಳೆಹಣ್ಣಿನ ಉಪಯೋಗದ ಸಂದರ್ಭ ಎಚ್ಚರಿಕೆ ಅತ್ಯಗತ್ಯ.

ಇದನ್ನೂ ಓದಿ: Health Tips: ಅತಿಯಾಗಿ ಉಂಡು ಹೊಟ್ಟೆಯುಬ್ಬರವೇ? ಹೊಟ್ಟೆ ಹಗುರಾಗಲು ಹೀಗೆ ಮಾಡಿ!

Exit mobile version