Site icon Vistara News

Health Tips: ತುಪ್ಪ ಒಳ್ಳೆಯದಾ, ಬೆಣ್ಣೆಯಾ? ಜಿಜ್ಞಾಸೆಗೊಂದು ಉತ್ತರ!

ghee butter

ಮಾರುಕಟ್ಟೆಯ ವಿವಿಧ ಬಗೆಯ ಎಣ್ಣೆಗಳ ಜಾಹಿರಾತಿನಿಂದ ತತ್ತರಿಸಿದ್ದ ತುಪ್ಪ ನಿಧಾನವಾಗಿ ಇತ್ತೀಚೆಗಿನ ದಿನಗಳಲ್ಲಿ ಮತ್ತೆ ಮನೆಗಳಲ್ಲಿ ತನ್ನ ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯುತ್ತಿದೆ. ತುಪ್ಪ ತಿಂದರೆ ದಪ್ಪಗಾಗುತ್ತೇವೆ ಹಾಗೂ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನೇ ಕೆಲವು ವರ್ಷಗಳಿಂದ ನಂಬಿಕೊಂಡಿದ್ದ ಮಂದಿಯೆಲ್ಲ ತುಪ್ಪವನ್ನು ಬಳಸುವುದನ್ನು ಬಹುತೇಕ ಬಿಟ್ಟೇ ಬಿಟ್ಟಿದ್ದು ನಿಜವೇ. ಆದರೆ, ಈಗ ನಿಧಾನವಾಗಿ ನಮ್ಮ ಭಾರತೀಯ ಅಡುಗೆಯಲ್ಲಿ ಮುಖ್ಯ ಸ್ಥಾನ ಪಡೆದಿದ್ದ, ಹಿರಿಯರು ನಂಬಿಕೊಂಡಿದ್ದ ತತ್ವಕ್ಕೂ, ತುಪ್ಪ ಎಂಬುದೊಂದು ಸೂಪರ್‌ ಫುಡ್‌ ಎಂದು ವಿಜ್ಞಾನ ಕಂಡುಕೊಂಡದ್ದಕ್ಕೂ ತಾಳೆಯಾಗಿ ಜನರು ಮತ್ತೆ ನಿಧಾನವಾಗಿ ತುಪ್ಪದೆಡೆಗೆ ಹೊರಳುತ್ತಿದ್ದಾರೆ.

ಆಹಾರ ತಜ್ಞರೂ ಇಂದಿಗೂ ತುಪ್ಪ ಹಿತಮಿತವಾಗಿ ನಿತ್ಯ ತಿನ್ನುವುದು ಒಳ್ಳೆಯದು (ghee benefits) ಎಂದು ಹೇಳುತ್ತಿದ್ದಾರೆ. ತುಪ್ಪದಲ್ಲಿ ದೇಹಕ್ಕೆ ಅಗತ್ಯವಾಗಿರುವ ಒಳ್ಳೆಯ ಕೊಬ್ಬು ಇರುವುದರಿಂದ ಪ್ರತಿನಿತ್ಯ ಸ್ವಲ್ಪ ತುಪ್ಪ ದೇಹಕ್ಕೆ ಹೋಗುವುದು ಒಳ್ಳೆಯದು ಎನ್ನುತ್ತಾರೆ. ಅಷ್ಟೇ ಅಲ್ಲ, ಸಂಶೋಧನೆಗಳೂ ಕೂಡಾ ತುಪ್ಪ ಕೆಟ್ಟ ಕೊಲೆಸ್ಟೆರಾಲ್‌ನ ಮಟ್ಟವನ್ನು ದೇಹದಲ್ಲಿ ತಗ್ಗಿಸಲು ನೆರವಾಗುತ್ತದೆ ಎಂದು ಹೇಳಿದೆ. ಹಾಗಾದರೆ, ತುಪ್ಪ ಒಳ್ಳೆಯದೇನೋ ನಿಜ. ತುಪ್ಪ ಮಾಡಿದ್ದು ಬೆಣ್ಣೆಯಿಂದ ತಾನೇ? ಬೆಣ್ಣೆಯೂ ಒಳ್ಳೆಯದಾ ಎಂಬ ಸಂಶಯ ನಿಮ್ಮನ್ನು ಕಾಡದೆ ಇರದು. ಮೊಸರಿನಿಂದ ಬೆಣ್ಣೆ ತೆಗೆಯುವಾಗ ಮಾಡಿದ ಮಜ್ಜಿಗೆಯೇನೋ ದೇಹಕ್ಕೆ ಒಳ್ಳೆಯದು. ಹಾಗಾದರೆ ಬೆಣ್ಣೆ? (butter benefits) ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

ಇದನ್ನೂ ಓದಿ: Skin Care: ಕೊಲಾಜೆನ್‌ಯುಕ್ತ ಆಹಾರ ಸೇವಿಸಿ: ಸಹಜ ಸೌಂದರ್ಯದಿಂದ ಕಂಗೊಳಿಸಿ!

ನೂರು ಗ್ರಾಂ ಬೆಣ್ಣೆಯಲ್ಲಿರುವ ಕ್ಯಾಲರಿ 717 ಆದರೆ, ತುಪ್ಪದಲ್ಲಿರುವ ಕ್ಯಾಲರಿ 900. ಆದರೆ, ಬೆಣ್ಣೆಯಲ್ಲಿರುವ ಒಳ್ಳೆಯ ಕೊಬ್ಬು ಶೇ. 51 ಆದರೆ, ತುಪ್ಪದಲ್ಲಿರುವ ಒಳ್ಳೆಯ ಕೊಬ್ಬು ಶೇ. 60. ತುಪ್ಪದಲ್ಲಿ ಟ್ರಾನ್ಸ್‌ ಫ್ಯಾಟ್‌ ಭಯವಿಲ್ಲ. ಆದರೆ ಬೆಣ್ಣೆಯಲ್ಲಿ ಮೂರು ಗ್ರಾಂ ಟ್ರಾನ್ಸ್‌ ಫ್ಯಾಟ್‌ ಇದೆ. ರುಚಿಯ ವಿಚಾರಕ್ಕೆ ಬಂದರೆ, ಬೆಣ್ಣೆ ಹಾಗೂ ತುಪ್ಪ ಎರಡರ ರುಚಿಯೂ ಬೇರೆ ಬೇರೆ. ಹಾಗಾಗಿ, ಇದರ ಉಪಯೋಗವೂ ಬೇರೆ ಬೇರೆ. ತುಪ್ಪವನ್ನು ಎಲ್ಲ ಬಗೆಯ ಅಡುಗೆಗೆಗೂ ಬಳಸಿದರೆ, ಬೆಣ್ಣೆಗೆ ಅದರದ್ದೇ ಆದ ಅಡುಗೆಗಳಿವೆ. ಎಲ್ಲವಕ್ಕೂ ಬೆಣ್ಣೆ ಹಾಕಲಾರೆವು. ತುಪ್ಪಕ್ಕೆ ಹೆಚ್ಚು ಉಷ್ಣತೆಗೆ ತಾಳಿಕೊಳ್ಳುವ ಶಕ್ತಿ ಇದ್ದು, ಇದನ್ನು ವಿಶೇಷ ಸಂದರ್ಭಗಳಲ್ಲಿ ಪೂರಿ, ಪರಾಠಾಗಳನ್ನು ಡೀಪ್‌ ಫ್ರೈ ಮಾಡುವುದಕ್ಕೂ ಬಳಸುವುದುಂಟು. ಇನ್ನು ಪೋಷಕಾಂಶಗಳ ವಿಷಯಕ್ಕೆ ಬಂದರೆ, ಬೆಣ್ಣೆಯಲ್ಲಿ ವಿಟಮಿನ್‌ ಎ, ಡಿ, ಇ, ಕ್ಯಾಲ್ಶಿಯಂ, ಮೆಗ್ನೀಶಿಯಂ, ಫಾಸ್ಪರಸ್‌ ಹಾಗೂ ಪೊಟಾಶಿಯಂ ಇದೆ. ತುಪ್ಪದಲ್ಲಿ ವಿಟಮಿನ್‌ ಎ, ಕೆ ಹಾಗೂ ಮುಖ್ಯವಾಗಿ ಒಮೆಗಾ ೩ ಫ್ಯಾಟಿ ಆಸಿಡ್‌ ಇವೆ. ಹಾಗಾಗಿ ಈ ಎಲ್ಲ ಕಾರಣಗಳಿಂದ, ಬೆಣ್ಣೆಯಿಂದಲೇ ತುಪ್ಪ ಮಾಡಿದ್ದು ಹೌದಾದರೂ, ಬೆಣ್ಣೆಗಿಂತ ಉತ್ತಮ ಆಯ್ಕೆ ತುಪ್ಪ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ತುಪ್ಪವನ್ನು ತಿಂಗಳುಗಟ್ಟಲೆ ಇಟ್ಟರೂ ಹಾಳಾಗದು. ಸರಿಯಾದ ಗಾಳಿಯಾಡದ ಡಬ್ಬದಲ್ಲಿ ಬಿಸಿಲಿಗೆ ತಾಗದಂತೆ ಹಾಕಿಟ್ಟರೆ ಐದಾರು ತಿಂಗಳವರೆಗೂ ಘಮ ಕೆಡುವುದಿಲ್ಲ. ಆದರೆ ಬೆಣ್ಣೆ ಹಾಗಲ್ಲ. ಇದನ್ನು ಫ್ರಿಡ್ಜ್‌ನಲ್ಲಿ ಇಡಬೇಕಾಗುತ್ತದೆ. ಬೆಣ್ಣೆಯನ್ನು ಗಟ್ಟಿಯಾದ ವೈಟ್‌ ಸಾಸ್‌ ಮಾಡಲು, ದೋಸೆ, ಚಪಾತಿ, ಪರಾಠಾಗಳ ಮೇಲೆ ಅಲಂಕಾರಿಕವಾಗಿ ಇಡಲು, ಬ್ರೆಡ್‌ ಜೊತೆಗೆ ಇತ್ಯಾದಿ ಕೆಲವೇ ಕೆಲವು ಅಡುಗೆಗಳಲ್ಲಿ ಅದ್ಭುತವಾದ ರುಚಿ ಕೊಡುತ್ತದೆ. ಪ್ರಾನ್‌, ಕ್ರಾಬ್‌, ಮೀನು ಇತ್ಯಾದಿಗಳ ಅಡುಗೆಗೂ ಬೆಣ್ಣೆ ಸರಿಯಾಗಿ ಹೊಂದಿಕೊಳ್ಳುತ್ತದೆ.  ಬೆಳ್ಳುಳ್ಳಿ ಹಾಗೂ ಕೆಲವು ಬಗೆಯ ಇಟಾಲಿಯನ್‌ ಮಸಾಲೆಗಳ ಜೊತೆಗೆ ಬೆಣ್ಣೆಯ ರುಚಿ ಘಮ ಇನ್ನೂ ಹೆಚ್ಚುತ್ತದೆ.

ಇದನ್ನೂ ಓದಿ: Honey benefits | ನಿತ್ಯದ ಆಹಾರಾಭ್ಯಾಸದಲ್ಲಿ ಬಳಸಿ ಕಲಿಗಾಲದ ಅಮೃತ ಜೇನುತುಪ್ಪ

Exit mobile version