ಪುರಾತನ ಕಾಲದಲ್ಲಿ ಬೇಸಿಗೆಯಲ್ಲಿ ಉತ್ತಮ ಆರೋಗ್ಯ, ಉಷ್ಣವನ್ನು ಹೊಡೆದೋಡಿಸಿ ದೇಹವನ್ನು ಒಳಗಿನಿಂದ ತಂಪು ಮಾಡಲು ಬಳಸುತ್ತಿದ್ದ ಆಹಾರಗಳ ಪೈಕಿ ಬಾರ್ಲಿಯೂ ಒಂದು. ಹಲವು ನಾಗರೀಕತೆಗಳ ಕಾಲದಲ್ಲಿ ಇದನ್ನು ಬಳಸುತ್ತಿದ್ದುದಕ್ಕೆ ಉಲ್ಲೇಖಗಳು ಸಿಗುತ್ತವೆ. ಬಾರ್ಲಿ ಎಂಬ ಧಾನ್ಯ ಹೆಚ್ಚಾಗಿ ಬೀರು ಹಾಗೂ ಕೆಲವು ಪೌಷ್ಟಿಕ ಆಹಾರಗಳ ತಯಾರಿಕೆಗೆ ಹಿಂದಿನಿಂದಲೂ ನಮ್ಮ ಪೂರ್ವಜರು ಬಳಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ಸಲಾಡ್‌ಗಳಲ್ಲಿ, ಸ್ಟರ್ ಫ್ರೈಗಳಲ್ಲಿ ಸೇರಿದಂತೆ ಅನೇಕ ಹೊಸ ವಿಧಾನಗಳೂ ಬಾರ್ಲಿ ಬಳಕೆಗೆ ಬಂದಿವೆ. ಆದರೂ ಪುರಾತನ ಪಾರ್ಲಿ ನೀರು ಎಂದಿಗೂ ದೇಹಕ್ಕೆ ತಂಪುಕಾರಕ ಆರೋಗ್ಯವರ್ಧಕ.
ಹಾಗೆ ನೋಡಿದರೆ ಬಾರ್ಲಿ ನೀರು ಪುರಾತನ ಕಾಲದಲ್ಲಿ ಕೇವಲ ಭಾರತದಲ್ಲಿ ಮಾತ್ರ ಬಳಕೆಯಾಗಿರುವುದು ಅಂದುಕೊಳ್ಳಬೇಡಿ. ವಿಶ್ವದೆಲ್ಲೆಡೆ ಬಾರ್ಲಿಗೆ ಇತಿಹಾಸವಿದೆ. ಗ್ರೀಕ್, ಬ್ರಿಟನ್, ಪೂರ್ವ ಹಾಗೂ ಆಗ್ನೇಯ ಏಷ್ಯಾಗಳಲ್ಲಿ ಬಾರ್ಲಿಯನ್ನು ಬಳಸುತ್ತಿದ್ದುದರ ಬಗೆಗೆ ಉಲ್ಲೇಖಗಳು ಸಿಗುತ್ತವೆ. ಗ್ರೀಸ್‌ನಲ್ಲಿ ಪುರಾತನ ಕಾಲದಲ್ಲಿ ಬಾರ್ಲಿ ನೀರು ಹಲವು ರೋಗಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿತ್ತಂತೆ. ಬ್ರಿಟನ್‌ನಲ್ಲಿ ಬಾರ್ಲಿ ನೀರು ಕಾಫಿ, ಚಹಾದಂತೆ ಬಿಸಿಯಾದ ಪೇಯವಂತೆ ಬಳಸುತ್ತಿದ್ದರು. ಅಥ್ಲೀಟ್‌ಗಳಿಗೂ ಶಕ್ತಿವರ್ಧಕವಾಗಿ ಬಾರ್ಲಿ ನೀರನ್ನು ಕೊಡಲಾಗುತ್ತಿತ್ತಂತೆ. ಇನ್ನು ಏಷ್ಯಾದಲ್ಲಿ ಬಿಸಿ ಹಾಗೂ ತಣ್ಣಗೆ ಎರಡೂ ಬಗೆಯಲ್ಲಿ ಬಾರ್ಲಿ ನೀರನ್ನು ಬಳಸಲಾಗುತ್ತಿತ್ತಂತೆ. ಆಯುರ್ವೇದದ ಪ್ರಕಾರ ಇದು ಮೂತ್ರಕೋಶದ ಇನ್ಫೆಕ್ಷನ್‌ಗಳಿಗೆ, ಉರಿಮೂತ್ರದಂತಹ ಸಮಸ್ಯೆಗಳಿಗೆ, ಬೇಸಿಗೆಯ ಉಷ್ಣಕ್ಕೆ ಉಂಟಾಗುವ ಮೂತ್ರದ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಹಾಗಾಗಿ ಬಾರ್ಲಿ ನೀರು ಎಂಬುದು ಉತ್ತಮ ಆರೋಗ್ಯವರ್ಧಕ ಪೇಯಗಳ ಸಾಲಿನಲ್ಲಿ ನಿಲ್ಲುತ್ತದೆ. ಇದರಲ್ಲಿ ಹೆಚ್ಚು ನಾರಿನಂಶವಿದ್ದು ಕ್ಯಾಲ್ಶಿಯಂ, ಕಬ್ಬಿಣಾಂಶ, ಮ್ಯಾಂಗನೀಸ್, ಮೆಗ್ನೀಶಿಯಂ, ಝಿಂಕ್ ಹಾಗೂ ಕಾಪರ್ ಇದ್ದು ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ ಫೈಟೋ ಕೆಮಿಕಲ್‌ಗಳನ್ನೂ ಹೊಂದಿದೆ. ಹೃದಯದ ಸಮಸ್ಯೆ, ಮಧುಮೇಹದಂತ ತೊಂದರೆಗಳನ್ನು ಹತ್ತಿರ ಸುಳಿಯದಂತೆ ನೋಡಿಕೊಳ್ಳುವ ಸಾಮರ್ಥ್ಯ ಬಾರ್ಲಿಗಿದೆ. ಹಾಗಾದರೆ ಬನ್ನಿ, ಬಾರ್ಲಿಯ ಸಂಪೂರ್ಣ ಪ್ರಯೋಜನಗಳ ಬಗ್ಗೆ ತಿಳಿಯೋಣ.
1. ಡಿಟಾಕ್ಸ್ ಮಾಡುತ್ತದೆ: ಬಾರ್ಲಿ ನೀರು ಕುಡಿಯುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹೋಗುವುದಲ್ಲದೆ, ಇದು ಮೂತ್ರನಾಳವನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಮೂತ್ರನಾಳದ ಯಾವುದೇ ಇನ್‌ಫೆಕ್ಷನ್ ಆಗದಂತೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ.
2. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಆಯುರ್ವೇದದ ಪ್ರಕಾರ ಜೀರ್ಣಕ್ರಿಯೆಯ ತಾಕತ್ತು ಕಡಿಮೆ ಇರುವ ಮಂದಿಗೆ ಬಾರ್ಲಿ ನೀರು ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆ, ಡಯಾರಿಯಾದಂತಹ ಸಮಸ್ಯೆಗಳಿಗೂ ಇದು ಒಳ್ಳೆಯದು.
3. ತೂಕ ಕಡಿಮೆಗೊಳಿಸುತ್ತದೆ: ಬಾರ್ಲಿ ನೀರಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಇದು ತೂಕ ಕಡಿಮೆಗೊಳಿಸುವ ಮಂದಿಗೂ ಉತ್ತಮ ಆಹಾರ. ಇದು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದಂತ ಫೀಲ್ ಕೊಡುವುದಲ್ಲದೆ, ಹೆಚ್ಚು ತಿನ್ನುವುದನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಇದು ಜೀರ್ಣಕ್ರಿಯೆಗೂ ಸಹಾಯ ಮಾಡುವುದಲ್ಲದೆ, ಕೊಬ್ಬನ್ನೂ ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಕೆಗೂ ಇದು ಪೂರಕ.
4. ಕೊಲೆಸ್ಟೆರಾಲ್, ಸಕ್ಕರೆಯನ್ನು ಕಡಿಮೆಗೊಳಿಸುತ್ತದೆ: ನಾರಿನಂಶ ಹೆಚ್ಚಿರುವಿದರಿಂದ ಬಾರ್ಲಿ ನೀರು ರಕ್ತದಲ್ಲಿರುವ ಕೊಲೆಸ್ಟೆರಾಲ್ ಹಾಗೂ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಹೃದಯವನ್ನೂ ಆರೋಗ್ಯವಾಗಿರಿಸುತ್ತದೆ.
ಹಾಗಾದರೆ ಈ ಬಾರ್ಲಿ ನೀರನ್ನು ಮಾಡುವುದು ಹೇಗೆ ಎನ್ನುತ್ತೀರಾ? ಹೆಚ್ಚು ಕಷ್ಟವಿಲ್ಲದೆ ಸುಲಭವಾಗಿ ತಯಾರಿಸಬಹುದಾದ ಪೇಯವಿದು. ಪಾತ್ರೆಯಲ್ಲಿ ನೀರು ತೆಗೆದುಕೊಂಡು ಬಿಸಿ ಮಾಡಲು ಇಡಿ. ನೀರು ಕುದಿಯಲು ಆರಂಭವಾಗುವಾಗ ಬಾರ್ಲಿ ಧಾನ್ಯವನ್ನು ತೊಳೆದು ಅದಕ್ಕೆ ಹಾಕಿ. ಇದು ಸಣ್ಣ ಉರಿಯಲ್ಲಿ ಸುಮಾರು ಅರ್ಧ ಗಂಟೆ ಚೆನ್ನಾಗಿ ಕುದಿಯಲಿ. ಬಾರ್ಲಿ ಕಾಳು ಬೆಂದು ಅನ್ನದಂತಾಗುತ್ತದೆ. ಒಂದು ಸೌಟಿನ ಮೂಲಕ ಸ್ವಲ್ಪ ಬಾರ್ಲಿಯನ್ನು ನೀರಿನ ಜೊತೆ ಅರೆಯಿರಿ. ಈಗ ಇದನ್ನು ಸೋಸಿಕೊಳ್ಳಿ. ಸೋಸಿದ ನೀರಿಗೆ ನಿಂಬೆಹಣ್ಣು ಹಿಂಡಿ. ಬೇಕಿದ್ದರೆ ಒಂದು ಚಮಚ ಜೇನುತುಪ್ಪ ಸೇರಿಸಿ. ತಂಪಾಗಿ ಕುಡಿಯಬೇಕೆನಿಸಿದರೆ ಫ್ರಿಡ್ಜ್‌ನಲ್ಲಿಟ್ಟು ಕುಡಿಯಬಹುದು. ಇದಕ್ಕೆ ಶುಂಠಿ, ಜೀರಿಗೆಯಂತಹ ಮಸಾಲೆಗಳನ್ನೂ ಸೇರಿಸಿಯೂ ಮಾಡಬಹುದು.
ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!