Site icon Vistara News

Health Tips: ನಿಮ್ಮ ಬಾಯಿಚಪಲದ ನಿಗ್ರಹ ನಿಮ್ಮ ಕೈಯಲ್ಲಿದೆಯಾ?

binge eating

ಎಷ್ಟೋ ಬಾರಿ ಏನಾದರಾಗಲಿ, ಸೊಂಟದ ಸುತ್ತ ಬೆಳೆದಿರುವ ಬೊಜ್ಜು, ಬೆಳೆದ ಗುಂಡಗಿನ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ, ಈ ಸಾರಿ ಡಯಟ್‌ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು (health tips) ಖಂಡಿತ ಎಂದು ನಮಗೆ ನಾವೇ ಅಂದುಕೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರೂ ಆಗಿ, ಭರ್ಜರಿ ಶಾಪಿಂಗ್‌ ಮಾಡಿ, ಬಗೆಬಗೆಯ, ಒಣಹಣ್ಣುಗಳು, ಬೀಜಗಳು, ತರಕಾರಿ ಸೊಪ್ಪು ಹಣ್ಣುಗಳು, ಕಾಳುಗಳು ಹೀಗೆ ಎಲ್ಲವನ್ನು ಖರೀದಿಸಿ ತಂದು ತುಂಬಿಸಿಬಿಡುತ್ತೇವೆ. ಹಸಿವಾದಾಗ, ಏನಾದರೂ ತಿನ್ನಬೇಕೆಂದು ಅನಿಸಿದಾಗ (binge eating) ಇನ್ನು ಆರೋಗ್ಯಕ್ಕೆ ಒಳ್ಳೆಯದಾದದ್ದನ್ನಷ್ಟೇ ತಿನ್ನುತ್ತೇನೆ ಎಂದುಕೊಳ್ಳುತ್ತೇವೆ. ಮನೆಯಲ್ಲಿ ಇವೆಲ್ಲ ರಾಶಿ ಬಿದ್ದಿದ್ದರೂ, ಒಂದೆರಡು ದಿನ ಹೇಗೋ ಕಷ್ಟಪಟ್ಟು ನಾಲಿಗೆ ಹಿಡಿದುಕೊಂಡು ತಿನ್ನುತ್ತೇವೆ ಕೂಡಾ. ಆದರೆ, ಮೂರನೇ ದಿನ ಸಾಧ್ಯವಾಗುವುದಿಲ್ಲ. ಮತ್ತೆ ಎಂದಿನಂತೆ, ಸ್ಪೈಸೀ, ಸಾಲ್ಟೀ ಚಿಪ್ಸು, ಚಕ್ಕುಲಿ, ಕೋಡುಬಳೆ, ಸಂಜೆಯ ಹೊತ್ತಿನ ಚಾಟ್‌ಗಳು, ಬೋಂಡ ಬಜ್ಜಿಗಳು ಇನ್ನಿಲ್ಲದಂತೆ ನಮ್ಮನ್ನು ಆಕರ್ಷಿಸುತ್ತವೆ. ನಮಗೆ ನಾವೇ ಹೇಳಿಕೊಂಡದ್ದಲ್ಲವಾ, ಮೆಲ್ಲಗೆ ನಮ್ಮ ಪ್ರಾಮಿಸ್‌ಗಳನ್ನು ನಾವೇ ಮುರಿದುಕೊಳ್ಳುತ್ತಾ ಚಿಪ್ಸು ಬಾಯಿಗಿಡುತ್ತೇವೆ. ಚಾಟ್‌ಗಳನ್ನು ಸವಿಸವಿದು ತಿನ್ನುತ್ತೇವೆ. ವೀಕೆಂಡು ಪಿಜ್ಜಾಕ್ಕೆ ತನುಮನಧನ ಅರ್ಪಿಸುತ್ತೇವೆ!

ಯಾಕೆ ಹೀಗೆ? ಮನೆಯಲ್ಲಿ ಆರೋಗ್ಯಕರ ಆಹಾರ ತುಂಬಿ ತುಳುಕುತ್ತಿದ್ದರೂ ಇಂಥದ್ದಕ್ಕೇ ಮನಸ್ಸು ವಾಲುವುದೇಕೆ? ಕೈತುಂಬ ಒಮ್ಮೆ ಚಿಪ್ಸು ತಿನ್ನುವ, ಫ್ರೆಂಚ್‌ ಫ್ರೈಸ್‌ ಬಾಯಿಗಿಡುವ, ಆಹಾ, ಈ ಜೋರು ಮಳೆಗೆ ಬಜ್ಜಿ ಮಾಡಿ ತಿನ್ನುವ ಅಂತ ಅನಿಸುವುದೇಕೆ? ನಾವು ಮಾಡಿಕೊಂಡ ಪ್ರಾಮಿಸ್ಸುಗಳು ನಮಗೆ ಯಾಕೆ ದೊಡ್ಡದೆನಿಸುವುದಿಲ್ಲ? ನಾಳೆ ನಾಳೆಯೆಂಬಂತೆ ನಮ್ಮ ಡಯಟ್‌ ಪ್ಲಾನ್‌ ಗಣೇಶನ ಮದುವೆಯಾಗುವುದೇಕೆ?

ಯಾವಾಗಲಾದರೂ ಒಮ್ಮೆ ತಿನ್ನುವುದು ಅಂಥಾ ಸಮಸ್ಯೆಯೇನಲ್ಲ. ಆದರೆ, ಇದೇ ಬಾಯಿ ಚಪಲ ಚಟವಾದರೆ, ಇದರಿಂದ ಹೊರಬರುವುದು ಕಷ್ಟವೇ. ನಮ್ಮ ನೀರೂರುವ ಬಾಯಿಯ ಕಂಟ್ರೋಲ್‌ ನಮಗೇ ಸಿಗದಿದ್ದರಷ್ಟೆ ಆಗ ಸಮಸ್ಯೆ ಶುರುವಾಗುತ್ತದೆ. ಹಾಗಾದರೆ, ಈ ಕಂಟ್ರೋಲ್‌ ಯಾಕೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೋಡೋಣ.

1. ವೃತ್ತಿಯ ಒತ್ತಡ ಇರಬಹುದು ಮಾನಸಿಕ ಒತ್ತಡವಿರಬಹುದು, ಒಟ್ಟಿನಲ್ಲಿ ಒತ್ತಡ ಹೆಚ್ಚಾದರೆ ನಮಗೆ ತಿನ್ನುವ ಚಪಲ ಹೆಚ್ಚಾಗುತ್ತದೆ. ನಾವು ಬೆಟರ್‌ ಫೀಲ್‌ ಮಾಡಿಕೊಳ್ಳಲು ಏನಾದರೊಂದು ಬಾಯಾಡಿಸುತ್ತಿರಬೇಕು, ಅಥವಾ ತಿಂದುಬಿಡಬೇಕು ಎನಿಸುತ್ತದೆ. ಹೆಚ್ಚು ಸಕ್ಕರೆ ಇರುವ ಸಿಹಿತಿಂಡಿಗಳು ಅಥವಾ ಹೆಚ್ಚು ಮಸಾಲೆಯುಕ್ತ, ಉಪ್ಪಿರುವ ಕುರುಕಲು ತಿಂಡಿಗಳಷ್ಟೇ ಇಂಥ ಸಂದರ್ಭ ಖುಷಿಕೊಡುತ್ತದೆ. ನಾಲಿಗೆಗೆ ಹಿತವೆನಿಸಿದ್ದು ಮನಸ್ಸಿಗೂ ಹಿತವೆನಿಸಿ ನಿರಾಳರಾದಂತಾಗುತ್ತದೆ. ಅದಕ್ಕಾಗಿ ಚಪಲ ನಿಗ್ರಹಕ್ಕೆ ಮೊದಲು ನಿಮ್ಮ ಮಾನಸಿಕ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಿ. ಒತ್ತಡ ಕಡಿಮೆ ಮಾಡಿಕೊಳ್ಳುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಅದು ನಿಮ್ಮ ಗೆಳೆಯರಿಗೆ ಮಾಡುವ ಕರೆ ಇರಬಹುದು ಅಥವಾ ಚಿತ್ರಕಲೆಯೂ ಇರಬಹುದು!

2. ನಿಮ್ಮನ್ನು ನೀವು ಅತಿಯಾಗಿ ಉಪವಾಸ ಕೆಡವುತ್ತಿರುವುದೂ ಮೂಲ ಕಾರಣವಿರಬಹುದು. ಡಯಟ್‌ ಎಂಬ ಹೆಸರಿನಲ್ಲಿ, ಇದ್ದಕ್ಕಿದ್ದಂತೆ ಊಟ ಬಿಟ್ಟು, ಮೊಳಕೆ ಕಾಳು, ಒಂದೇ ಚಪಾತಿ, ಅನ್ನಕ್ಕೆ ಗುಡ್‌ಬೈ ಮತ್ತಿತರ ಹೊಸ ಬಗೆಯ ಆಹಾರ ಪದ್ಧತಿ ಶುರು ಮಾಡಿದ್ದಕ್ಕೆ ನಿಮ್ಮ ಹೊಟ್ಟೆಗೂ ಮನಸ್ಸಿಗೂ ಗೊಂದಲವಾಗಿ, ಅದು ಚಪಲದೆಡೆಗೆ ತಿರುಗುತ್ತದೆ. ಆಗ, ಸುಲಭವಾಗಿ ದಕ್ಕುವ ಚಿಪ್ಸು, ಸ್ವೀಟಿನಂತಹ ತಿಂಡಿಗಳ ಕಡೆಗೇ ಮನಸ್ಸು, ನಾಲಿಗೆ ಹೊರಳುತ್ತದೆ.

binge watching

3. ನಿಮ್ಮ ಅಭ್ಯಾಸಬಲವೂ ಇದಾಗಿರಬಹುದು. ನೀವು ಮೊದಲಿನಿಂದ ಇಂತಹ ತಿಂಡಿಗಳನ್ನೇ ಹೆಚ್ಚಾಗಿ ತಿನ್ನುತ್ತಿದ್ದರೆ, ನಿಮ್ಮ ದೇಹ ಹೆಚ್ಚು ಸೋಡಿಯಂಯುಕ್ತ ಆಹಾರಕ್ಕೆ ಒಗ್ಗಿಕೊಂಡಿದ್ದರೆ, ಇಂಥ ಚಪಲ ಸುಲಭಕ್ಕೆ ಹೋಗುವುದಿಲ್ಲ. ಅದಕ್ಕಾಗಿ, ಪ್ಯಾಕ್ಡ್‌ ಐಟಂಗಳ ಮೇಲೆ ಕಂಟ್ರೋಲ್‌ ಇರಲಿ. ನಿಧಾನಕ್ಕೆ ಬಳಕೆ ಕಮ್ಮಿ ಮಾಡುತ್ತಾ ಬನ್ನಿ. ಒಂದೇ ಇರುಳು ಬೆಳಗಾಗುವುದರೊಳಗೆ ಇವು ನಡೆಯುವುದಿಲ್ಲ. ತಾನು ಮಾಡುತ್ತೇನೆ ಎಂಬ ಛಲವೊಂದೇ ಸಾಕು, ನಿಧಾನವಾದರೂ ಗುರಿ ತಲುಪುತ್ತೀರಿ.

ಕೇವಲ ಇಷ್ಟಲ್ಲದೆ ಈ ಚಪಲವು ಇತರ ವಿಷಯಗಳಿಗೂ ಲಿಂಕ್‌ ಆಗಿರಬಹದುದು. ಉದಾಹರಣೆಗೆ, ನಿಮ್ಮ ಥೈರಾಯ್ಡ್‌ ಸಮಸ್ಯೆ, ಕಿಡ್ನಿ ಸಮಸ್ಯೆ, ಮಲಬದ್ಧತೆ, ಗರ್ಭಿಣಿಯಾಗಿರುವುದು, ಮೆನೋಪಾಸ್‌, ನಿದ್ದೆಯ ಕೊರತೆ ಇತ್ಯಾದಿಗಳೂ ಇರಬಹುದು. ಹಾಗಾಗಿ ಅವುಗಳ ಬಗ್ಗೆಯೂ ಗಮನ ಇರಲಿ.

ಕುರುಕಲು ಹಾಗೂ ಸಿಹಿತಿಂಡಿ ಎಂಬುದು ಯಾವಾಗಲೂ ಬಹು ಆಕರ್ಷಣೀಯವೆಂಬುದು ನಿಜವೇ. ಹಾಗಾಗಿ ಯಾವಾಗಲಾದರೊಮ್ಮೆ ಇಂಥದ್ದು ತಿನ್ನುವುದಕ್ಕೇನು ಅಡ್ಡಿಯಿಲ್ಲ. ಆದರೆ, ನಿಮ್ಮ ಚಪಲದ ನಿಗ್ರಹ ನಿಮ್ಮ ಕೈಯಲ್ಲಿದ್ದರೆ, ನಿಮ್ಮ ಆರೋಗ್ಯವೂ ನಿಮ್ಮ ಕೈಯಲ್ಲೇ ಇರುತ್ತದೆ.

ಇದನ್ನೂ ಓದಿ: Health Tips: ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು ಗೊತ್ತೇ?

Exit mobile version