ಇತ್ತೀಚೆಗಿನ ದಿನಗಳಲ್ಲಿ ತಾಮ್ರದ ಬಾಟಲಿಗಳಲ್ಲಿ (copper vessel) ನೀರು ಕುಡಿಯುವುದು (drinking water) ಟ್ರೆಂಡ್. ತಾಮ್ರದ ಪಾತ್ರೆಗಳಲ್ಲಿ, ಬಾಟಲಿಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಕುಡಿಯುವುದರಿಂದ ದೇಹಕ್ಕೆ ತಾಮ್ರವೆಂಬ ಖನಿಜಾಂಶ ಪೂರೈಕೆಗೊಂಡು ರಕ್ತ ವೃದ್ಧಿಯಾಗಿ, ಮೂಳೆಗಳು ಬಲಗೊಂಡು ಸ್ನಾಯುಗಳಲ್ಲೂ ಶಕ್ತಿ ಹೆಚ್ಚುತ್ತದೆ ಎಂಬ ಸಾಮಾನ್ಯ ಜ್ಞಾನ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಹಾಗೂ ಸ್ಟೀಲ್ ಬಾಟಲಿಗಳ ಬದಲಾಗಿ ಆಫೀಸಿಗೆ, ಶಾಲೆಗೆ, ವಾಕಿಂಗ್, ಜಿಮ್‌ಗಳಿಗೆ ಹೋಗುವಾಗ ಎಲ್ಲರ ಕೈಗಳಲ್ಲೂ ಇದೀಗ ತಾಮ್ರದ ಬಾಟಲಿಗಳು ಬರತೊಡಗಿವೆ. ಪ್ರತಿಯೊಬ್ಬರೂ ಅವರವರ ಆರೋಗ್ಯದ ಕಾಳಜಿ (health care) ವಹಿಸುವುದು ಒಳ್ಳೆಯದೇ. ಹಿಂದಿನ ಕಾಲದಲ್ಲೂ ನಮ್ಮ ಹಿರಿಯರು ತಾಮ್ರದ ಪಾತ್ರೆಗಳ್ನು ಬಳಸುತ್ತಿದ್ದರು. ಆಯುರ್ವೇದವೂ ತಾಮ್ರದ ಮಹತ್ವವನ್ನು ಹೇಳಿದೆ. ಇಷ್ಟೆಲ್ಲಾ ಆರೋಗ್ಯಕರ (health tips) ಲಾಭಗಳಿರುವಾಗ, ಯಾರು ತಾನೇ ಇದರಿಂದ ಪ್ರೇರಣೆಗೊಂಡು ಪಾಲಿಸದೆ ಇದ್ದಾರು ಹೇಳಿ. ಆದರೆ, ಇದೇ ಇಂದು ಮಾರುಕಟ್ಟೆಯ ಸರಕೂ ಆಗಿ ಎಲ್ಲೆಡೆ ತಾಮ್ರ ಸ್ವಲ್ಪ ಹೆಚ್ಚೇ ಹೊಳೆಯಲಾರಂಭಿಸಿದೆ. ಆದರೆ, ನೆನಪಿಡಿ. ಅತಿಯಾದರೆ ಅಮೃತವೂ ವಿಷ ಅಲ್ಲವೇ! ಹಾಗೆಯೇ, ತಾಮ್ರ ಎಂಬ ಅಮೃತವೂ ಅತಿಯಾದರೆ ವಿಷವಾದೀತೇ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ? ನಿತ್ಯವೂ ತಾಮ್ರದ ಬಾಟಲಿಯಲ್ಲೇ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಅಷ್ಟು ಪ್ರಮಾಣದಲ್ಲಿ ನಮ್ಮ ದೇಹಕ್ಕೆ ನಿತ್ಯವೂ ತಾಮ್ರದ ಅಗತ್ಯವಿದೆಯೇ? ತಾಮ್ರದ ನಿತ್ಯದ ಬಳಕೆಯಿಂದ ದೇಹದ ಮೇಲೆ ಅಡ್ಡ ಪರಿಣಾಮಗಳಿವೆಯೇ ಎಂಬಿತ್ಯಾದಿ ಬಗೆಗೆ ಯೋಚನೆ ಮಾಡಿರದಿದ್ದರೆ, ಈಗ ಯೋಚಿಸುವ ಸಮಯ. ಬನ್ನಿ, ತಾಮ್ರದ ಅವಗುಣಗಳ ಬಗ್ಗೆಯೂ ತಿಳಿಯೋಣ!
ತಾಮ್ರದ ಬಾಟಲಿಗಳಲ್ಲೇ ನಿತ್ಯವೂ ನೀರು ಕುಡಿಯುವುದರಿಂದ ಅಥವಾ ತಾಮ್ರದ ಪಾತ್ರೆಗಳಲ್ಲೇ ನಿತ್ಯವೂ ಆಹಾರ ಸೇವಿಸುವುದರಿಂದ ತಾಮ್ರದ ಬಳಕೆ ಹೆಚ್ಚು ಮಾಡಿದಲ್ಲಿ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆದಾವು. ತಲೆಸುತ್ತು, ವಾಂತಿ, ಬೇದಿ, ಇತ್ಯಾದಿಗಳೂ ಕಂಡುಬರಬಹುದು. ಇಂತಹ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ದೇಹದಲ್ಲಿ ತಾಮ್ರದ ಅಂಶಗಳು ಹೆಚ್ಚಾಗಿ, ತಾಮ್ರ ದೇಹಕ್ಕೆ ವಿಷಕಾರಿಯಾಗಿ ಪರಿವರ್ತನೆಯಾಗಿದೆ ಎಂದರ್ಥ. ಇದು ಪಿತ್ತಕೋಶ ಹಾಗೂ ಕಿಡ್ನಿಯ ಆರೋಗ್ಯವನ್ನೂ ಏರುಪೇರಾಗಿಸುವ ಸಂಭವವಿದೆ.
ತಜ್ಞರ ಪ್ರಕಾರ, ಮನುಷ್ಯನ ದೇಹಕ್ಕೆ ಪ್ರತಿದಿನ ಬೇಕಾಗುವ ತಾಮ್ರ 1.3 ಮಿಲಿಗ್ರಾಂಗಳಷ್ಟು. ಆದರೆ, ಎಲ್ಲ ತಾಮ್ರದ ಬಾಟಲಿಗಳು ಒಂದೇ ತೆರನಾಗಿರುವುದಿಲ್ಲ. ಕೆಲವು ಬಾಟಲಿಗಳು ಹೆಚ್ಚಾಗಿ ತಾಮ್ರವನ್ನು ನೀರಿಗೆ ಬಿಡುಗಡೆ ಮಾಡುತ್ತವೆ. ಕೆಲವು ಕಡಿಮೆ ಬಿಡುಗಡೆ ಮಾಡುತ್ತವೆ. ಹಾಗಾಗಿ ತಾಮ್ರದ ಬಾಟಲಿಗಳನ್ನು ಸರಿಯಾಗಿ ತೊಳೆಯದೆ ಬಳಸುತ್ತಲೇ ಇದ್ದರೆ ಹೆಚ್ಚು ತಾಮ್ರವನ್ನು ಬಿಡುಗಡೆ ಮಾಡುವ ಸಂಭವವೂ ಇರುವುದರಿಂದ ದೇಹಕ್ಕೆ ಹೆಚ್ಚು ತಾಮ್ರವು ನಿತ್ಯವೂ ಸೇರಿ, ಇದು ವಿಷಕಾರಿಯಾಗಿ ಬದಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ)ಯ ಪ್ರಕಾರ, ಹೆಚ್ಚೆಂದರೆ ದೇಹಕ್ಕೆ ಪ್ರತಿದಿನಕ್ಕೆ ಒಂದು ಲೀಟರ್ ನೀರಿಗೆ 2 ಮಿಲಿಗ್ರಾಂಗಳಷ್ಟು ತಾಮ್ರವನ್ನು ಸಹಿಸುವ ತಾಕತ್ತಿದೆ. ಅದಕ್ಕಿಂತ ಹೆಚ್ಚಾಗಬಾರದು. ಹೆಚ್ಚಾದರೆ ಆರೋಗ್ಯ ಸಮಸ್ಯೆಗಳು ಬರಬಹುದು ಎಂದಿದೆ.
ಹಾಗಾದರೆ, ದೇಹಕ್ಕೆ ಉಪಯೋಗಕರವಾಗಿ ತಾಮ್ರದ ಬಾಟಲಿಗಳನ್ನು ಬಳಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಅದಕ್ಕೆ ಪರಿಹಾರವೂ ಇಲ್ಲಿದೆ. ತಾಮ್ರದ ಬಾಟಲಿಗಳಲ್ಲಿ ನಿತ್ಯವೂ ನೀರು ಕುಡಿಯಿರಿ, ಆದರೆ, ಇಡೀ ದಿನ ತಾಮ್ರದ ಬಾಟಲಿಯಲ್ಲಿ ಮಾತ್ರವೇ ಸೇವಿಸುತ್ತಿರಬೇಡಿ. ಸ್ವಲ್ಪ ಪ್ರಮಾಣದಲ್ಲಿ ತಾಮ್ರದ ಬಾಟಲಿಯ ನೀರನ್ನು ಸೇರಿಸಿ, ನಂತರ ಸಾಮಾನ್ಯ ನೀರನ್ನೇ ಸೇವಿಸಿ. ಹೀಗೆ ಮಾಡಿದರೆ, ಅಗತ್ಯಕ್ಕಿಂತ ಹೆಚ್ಚು ತಾಮ್ರ ಹೊಟ್ಟೆ ಸೇರದು. ಅಷ್ಟೇ ಅಲ್ಲ, ಬಾಟಲಿಗಳನ್ನು ನಿತ್ಯವೂ ಚೆನ್ನಾಗಿ ತೊಳೆದು ಬಳಸಿ. ಸರಿಯಾಗಿ ತೊಳೆಯದಿದ್ದರೆ, ತಾಮ್ರವು ವಾತಾವರಣದ ಜೊತೆಗೆ ರಾಸಾಯನಿಕವಾಗಿ ಆಕ್ಸೈಡ್ ಆಗಿ ಪರಿವರ್ತನೆಯೂ ಆಗಿ ತಾಮ್ರದ ಆಕ್ಸೈಡ್ ಆಗಿ ಬದಲಾವಣೆಗೊಂಡು ನೀರಿನಲ್ಲಿ ತಾಮ್ರದ ಅಂಶವನ್ನು ಇನ್ನಷ್ಟು ಅಧಿಕಗೊಳಿಸುವಂತೆ ಮಾಡುತ್ತದೆ. ಇಂಥ ಬಾಟಲಿಗಳಲ್ಲಿ ನೀರನ್ನು ಹೆಚ್ಚು ಕಾಲ ಇಟ್ಟು ಕುಡಿಯುವುದರಿಂದಲೂ ಹೆಚ್ಚು ತಾಮ್ರ ನೀರಿಗೆ ಸೇರುವ ಸಂಭವವಿರುತ್ತದೆ. ಹಾಗಾಗಿ ಇಂಥ ಬಾಟಲಿಗಳನ್ನು ಅತಿಯಾಗಿ ಬಳಸದೆ, ಹಿತಮಿತವಾಗಿ ಬಳಸಿ, ತಾಮ್ರದ ಲಾಭಗಳನ್ನು ಪಡೆಯಿರಿ.
ಇದನ್ನೂ ಓದಿ: Copper Water Benefits: ತಾಮ್ರದ ಪಾತ್ರೆಯಿಂದ ನೀರು ಕುಡಿಯುವ ಲಾಭಗಳು ಗೊತ್ತೇ?