Site icon Vistara News

Health Tips: ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು ಗೊತ್ತೇ?

sprouts

ಬಹಳ ಹಿಂದಿನಿಂದಲೂ ಮೊಳಕೆ ಕಾಳುಗಳು (sprouts) ನಮ್ಮ ಆಹಾರದ ಭಾಗವಾಗಿವೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್‌ ಹಾಗೂ ಇತರ ಪೋಷಕಾಂಶಗಳ ಕಾರಣದಿಂದಾಗಿ ಮೊಳಕೆಕಾಳುಗಳು ಇತ್ತೀಚೆಗಿನ ದಿನಗಳಲ್ಲಿ ಮತ್ತೆ ಬಳಕೆಗೆ ಬರುತ್ತಿವೆ. ಮುಖ್ಯವಾಗಿ ಸಸ್ಯಾಹಾರಿಗಳು ತಮ್ಮ ನಿತ್ಯದ ಪ್ರೊಟೀನ್‌ ಮೂಲಕ್ಕಾಗಿ ಮೊಳಕೆಕಾಳುಗಳ ಮೊರೆ ಹೋಗುತ್ತಿರುವುದು ಹೆಚ್ಚುತ್ತಿದೆ. ಕಡಲೆ, ಹೆಸರು ಸೇರಿದಂತೆ ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸುವ ಮೂಲಕ ಹೊಸಜೀವ ಅಂದರೆ ಸಸ್ಯ ಉಗಮವಾಗುವ ಹೊತ್ತಿನಲ್ಲಿ ಅತ್ಯಧಿಕವಾಗಿರುವ ಪ್ರೊಟೀನನ್ನು ಪಡೆಯುವ ಈ ಆಹಾರ ಕ್ರಮದ ಬಗ್ಗೆ ಹಲವು ಚರ್ಚೆಗಳೂ ಇವೆ. ಕೆಲವರು ಇದು ಒಳ್ಳೆಯದಲ್ಲ ಎಂದರೆ ಇನ್ನೂ ಕೆಲವರು, ಮೊಳಕೆ ಕಾಳುಗಳನ್ನು ನಿತ್ಯ ಸೇವಿಸಬೇಕು ಎನ್ನುವವರಿದ್ದಾರೆ. ಹಲವು ಬಾರಿ ಇಂತಹ ಚರ್ಚೆಗಳೇ ಗೊಂದಲಗಳನ್ನು ಹುಟ್ಟಿಸಿ ಏನು ಮಾಡಬೇಕು ಎಂದು ಅರಿವಾಗದೆ ಸಾಮಾನ್ಯರು ಪರದಾಡುವುದುಂಟು. ಅದರಲ್ಲೂ, ಹಸಿಯಾಗಿ ತಿನ್ನಬಹುದೇ ಬೇಯಿಸಿ ತಿನ್ನಬಹುದೇ ಎಂಬ ಸಂದಿಗ್ಧಗಳೂ ಕೂಡಾ ಎಲ್ಲರ ಬಳಿ ಇರುವಂಥದ್ದೇ. ಬನ್ನಿ, ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು (sprouts benefits) ಎಂಬುದನ್ನು ನೋಡೋಣ.

ಅಂತರ್ಜಾಲವನ್ನು ಜಾಲಾಡಿದಾಗ ಮೊಳಕೆ ಕಾಳುಗಳನ್ನು ಯಾವೆಲ್ಲ ಮಾದರಿಯಲ್ಲಿ ಹೊಟ್ಟೆ ಸೇರಿಸಬಹುದು ಎಂಬುದಕ್ಕೆ ನೂರಾರು ರೆಸಿಪಿಗಳು, ಉದಾಹರಣೆಗಳು ಸಿಗುತ್ತವೆ. ಆದರೆ, ಯಾವುದನ್ನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಸಿಗುವುದಿಲ್ಲ. ಹೀಗಾಗಿ ಬಹುತೇಕರು ಅವರದ್ದೇ ಮಾದರಿಯಲ್ಲಿ ಅವರವರದ್ದೇ ರಿಸಿಪಿಗಳನ್ನು ಪ್ರಯತ್ನಿಸುತ್ತಾ, ಹಸಿಯಾಗಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಇದರಲ್ಲಿರುವ ಪ್ರೊಟೀನ್‌ನ ಬಹುತೇಕ ಲಾಭಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರಗಳನ್ನು ಹಾಕುತ್ತಾರೆ. ಆದರೆ, ಕೆಲವು ತಜ್ಞರ ಪ್ರಕಾರ, ಹಸಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಫುಡ್‌ ಪಾಯ್ಸನಿಂಗ್‌ (ವಿಷಾಹಾರ) ಸಮಸ್ಯೆಗಳೂ ಉಂಟಾಗಬಹುದಂತೆ. ಮೊಳಕೆ ಬರುವ ಕ್ರಿಯೆಗೆ ಕೊಂಚ ಬೆಚ್ಚಗಿನ ಹಾಗೂ ವಾತಾವರಣದಲ್ಲಿ ನೀರಿನಂಶ ಇರುವ ಅಗತ್ಯವೂ ಇರುವುದರಿಂದ ಈ ಸಂದರ್ಭ ಬ್ಯಾಕ್ಟೀರಿಯಾಗಳ ಬೆಳವಣಿಗೆಯೂ ಇದರಲ್ಲಿ ಆಗುವ ಸಂಭವ ಹೆಚ್ಚು ಎನ್ನುತ್ತಾರೆ. ಇ ಕೊಲೈ, ಸಾಲ್ಮೊನೆಲ್ಲಾ ಮತ್ತಿತರ ಬ್ಯಾಕ್ಟೀರಿಯಾಗಳೂ ಕೂಡಾ ಮೊಳಕೆ ಕಾಳುಗಳಲ್ಲಿ ಇರುವ ಸಂಭವ ಇದೆ. ಹಾಗಾಗಿ, ಹಸಿಯಾಗಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಇಂಥ ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆ ಸೇರುವ ಸಂಭವ ಹೆಚ್ಚಿರುವುದರಿಂದ ವಾಂತಿ, ಹೊಟ್ಟೆನೋವು, ಬೇಧಿಯೂ ಉಂಟಾಗಬಹುದು.

ಹಾಗೆ ನೋಡಿದರೆ, ಹಸಿ ಮೊಳಕೆ ಕಾಳುಗಳನ್ನು ನಮ್ಮ ಹೊಟ್ಟೆ ಜೀರ್ಣಿಸಿಕೊಳ್ಳುವುದು ಬಹಳ ನಿಧಾನ. ಜೀರ್ಣಕ್ರಿಯೆ ಸರಿಯಾಗಿಲ್ಲದ ಮಂದಿ, ಅಸಿಡಿಟಿ ಹಾಗೂ ಇತರ ಜೀರ್ಣಕ್ರಿಯೆ ಸಮಸ್ಯೆಗಳನ್ನು ಮೊದಲೇ ಹೊಂದಿರುವ ಮಂದಿ ಈ ಹಸಿ ಮೊಳಕೆ ಕಾಳುಗಳನ್ನು ಸೇವಿಸಿದರೆ ಸಮಸ್ಯೆಗಳುಂಟಾಗಬಹುದು. ಹಾಗಾಗಿ ಇಂಥವರು ಬೇಯಿಸಿ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುವುದಷ್ಟೇ ಅಲ್ಲ, ಬ್ಯಾಕ್ಟೀರಿಯಾಗಳೂ ಹೊಟ್ಟೆ ಸೇರಿ ಹೊಟ್ಟೆ ಕೆಡುವುದು ತಪ್ಪುತ್ತದೆ.

ಹಾಗಾದರೆ, ಬಹಳಷ್ಟು ಮಂದಿ ಈಗ ಯೋಚಿಸಬಹುದು, ಬೇಯಿಸಿ ಮೊಳಕೆ ಕಾಳುಗಳನ್ನು ತಿಂದರೆ ಹಸಿಯಲ್ಲಿರುವ ಹೆಚ್ಚಿನ ಎಲ್ಲ ಪೋಷಕಾಂಶಗಳೂ ನಷ್ಟವಾಗುತ್ತದಲ್ಲ ಎಂದು ಯೋಚಿಸಬಹುದು. ಇದು ನಿಜ ಕೂಡಾ, ಬೇಯಿಸುವಾಗ, ಕೆಲವು ಪೋಷಕಾಂಶಗಳು ನಷ್ಟವಾಗುತ್ತವೆ ನಿಜ. ಆದರೆ, ಹಸಿಯಲ್ಲಿರುವ ಎಲ್ಲ ಪೋಷಕಾಂಶಗಳನ್ನೂ ನಮ್ಮ ದೇಹ ಸರಿಯಾಗಿ ಬಳಸಿಕೊಳ್ಳುವುದಿಲ್ಲ, ಅವು ಕೂಡಾ ದೇಹ ಸೇರಿದ ಮೇಲೆ ನಷ್ಟವಾಗುತ್ತದೆ ಎಂಬುದೂ ಕೂಡಾ ನಿಜವೇ. ಹಾಗಾಗಿ, ಪೋಷಕಾಂಶ ನಷ್ಟವಾಗುತ್ತದೆ ಎಂದು ಚಿಂತಿಸುವವರು, ಮೊಳಕೆ ಕಾಳನ್ನು ಪೂರ್ಣವಾಗಿ ಬೇಯಿಸದಿದ್ದರೂ, ಬಾಣಲೆಯಲ್ಲೊಮ್ಮೆ ಹಾಕಿ ಅರೆ ಬೇಯಿಸದಂತೆ ಮಾಡಿಯೋ ಅಥವಾ ಕೊಂಚ ಬಾಡಿಸಿಕೊಂಡು ತಿನ್ನಬಹುದು. ಆಗ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಮಾತ್ರ ಸಾಯುತ್ತವೆ, ಹೊಟ್ಟೆ ಕೆಡುವುದು ತಪ್ಪುತ್ತದೆ. ಅಲ್ಲದೆ, ಪೂರ್ತಿ ಬೇಯಿಸುದಕ್ಕಿಂದ ಕಡಿಮೆ ಪ್ರಮಾಣದ ಪೋಷಕಾಂಶ ಇದರಲ್ಲಿ ನಷ್ಟವಾಗುತ್ತದೆ.  ಹಾಗಾಗಿ ಯಾವಾಗಲೂ, ಮೊಳಕೆ ಕಾಳುಗಳನ್ನು ಹಾಗೆಯೇ ಹಸಿಯಾಗಿ ತಿನ್ನುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳುವ ತಂತ್ರಗಳನ್ನು ನೆನಪಿನಲ್ಲಿಡಿ.

ಇದನ್ನೂ ಓದಿ: Food Tips: ಮೊಳಕೆ ಕಾಳುಗಳನ್ನು ಕೆಡದಂತೆ ಹೆಚ್ಚು ಕಾಲ ಇಡಲು ಇಲ್ಲಿವೆ ಟಿಪ್ಸ್‌!

Exit mobile version