Site icon Vistara News

Health Tips: ಗ್ಯಾಸ್‌, ಹೊಟ್ಟೆಯುಬ್ಬರ ಸಮಸ್ಯೆಯ ನಿಯಂತ್ರಣಕ್ಕೆ ಸುಲಭೋಪಾಯಗಳು!

gastric

ಒಂದು ಭರ್ಜರಿ ಊಟ ಮಾಡಿದ ಖುಷಿ ಕೆಲವೊಮ್ಮೆ ಆ ಕ್ಷಣಕ್ಕಷ್ಟೇ ಆಗಿರುತ್ತದೆ. ಉಂಡು ಕೈ ತೊಳೆಯುವ ಹೊತ್ತಿಗಾಗಲೇ ಹೊಟ್ಟೆಯಲ್ಲಿ ಗುಡುಗುಡು ಶುರುವಾಗಿರುತ್ತದೆ. ಹೊಟ್ಟೆಯೇಕೋ ಭಾರ, ಎತ್ತಲು ಸಾಧ್ಯವಿಲ್ಲ, ಇನ್ನು ಹೊಟ್ಟೆಯನ್ನು ಎತ್ತಿಕೊಂಡು ನಡೆಯುವುದು ದೂರದ ಮಾತು ಎಂದು ಗಡದ್ದಾಗಿ ನಿದ್ದೆ ಹೊಡೆಯುತ್ತೇವೆ. ಆದರೆ ಒಂದೆರಡು ಗಂಟೆ ಬಿಟ್ಟು ಎದ್ದರೂ ಹೊಟ್ಟೆಯ ಭಾರದಲ್ಲೇನೂ ಗಮನಾರ್ಹ ಬದಲಾವಣೆಯಾಗಿರುವುದಿಲ್ಲ. ಡರ್‌ ಡರ್‌ ಹುಳಿ ತೇಗು, ಹೊಟ್ಟೆಯಲ್ಲೇನೋ ತಳಮಳ ಶುರುವಾಗಿರುತ್ತದೆ. ಹೊಟ್ಟೆಯುಬ್ಬರ (Gastric) ಎಂಬ ಈ ಸಮಸ್ಯೆ ವಿಶ್ವದ 10ರಿಂದ 30 ಪ್ರತಿಶತ ಮಂದಿಗೆ ಇರುವ ಸಾಮಾನ್ಯ ಸಮಸ್ಯೆಯಂತೆ. ಈ ಹೊಟ್ಟೆಯುಬ್ಬರದ ಸಮಸ್ಯೆ ಕಾಡುವುದು ಜೀರ್ಣಕ್ರಿಯೆಯಲ್ಲೇನೋ ಸಮಸ್ಯೆ ಇದ್ದಾಗ ಮಾತ್ರವಷ್ಟೇ ಅಲ್ಲ, ಸರಿಯಾದ ಸಮಯಕ್ಕೆ ಊಟ ಮಾಡಿ ಅಭ್ಯಾಸವಿಲ್ಲದ ಮಂದಿಗೂ ಆಗುತ್ತದೆ. ಇದನ್ನು ಸರಿಯಾದ ಜೀವನಕ್ರಮ ಹಾಗೂ ಆಹಾರಕ್ರಮದ ಮೂಲಕ ತಾಳ್ಮೆಯಿಂದ ಸರಿ ಮಾಡಿಕೊಳ್ಳಬಹುದು. ಆದರೆ, ಇವೆಲ್ಲಕ್ಕಿಂತ ಮೊದಲು ಈ ಹೊಟ್ಟೆಯುಬ್ಬರಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ.

1. ಅತಿಯಾಗಿ ತಿನ್ನುವುದು: ಹೊಟ್ಟೆ ಉಬ್ಬರಿಸಿದಂತಾಗುವುದಕ್ಕೆ ಬಹಳ ಮುಖ್ಯವಾದ ಸಾಮಾನ್ಯ ಕಾರಣ ಎಂದರೆ ಅತಿಯಾಗಿ ತಿನ್ನುವುದು. ನಮ್ಮ ಮಿತಿಗಿಂತ ಹೆಚ್ಚು ತಿಂದಾಗ ಹೊಟ್ಟೆ ಉಬ್ಬರಿಸಿದಂತಾಗಿ, ಹೊಟ್ಟೆಯಲ್ಲಿ ಇನ್ನು ಜಾಗವೇ ಇಲ್ಲದಂತಾಗುತ್ತದೆ. ಆಗ ಆಗುವ ಸ್ಥಿತಿಯೂ ಇಂಥದ್ದೇ.

2. ಗಬಗಬನೆ ತಿನ್ನುವುದು: ಕೆಲವರಿಗೆ ಗಬಗಬನೆ ವೇಗವಾಗಿ ಉಣ್ಣುವ ಅಭ್ಯಾಸವಿರುತ್ತದೆ. ಇದರ ಪರಿಣಾಮ ಊಟದ ಜೊತೆಗೆ ಗಾಳಿಯೂ ಹೊಟ್ಟೆಯೊಳಗೆ ಪ್ರವೇಶಿಸಿ ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿದಂತಾಗುತ್ತದೆ. ಇದೂ ಕೂಡಾ ಹೊಟ್ಟೆಯುಬ್ಬರ, ಅಸಿಡಿಟಿಗೆ ಕಾರಣವಾಗುತ್ತದೆ.

3. ಗ್ಯಾಸ್‌ಕಾರಕ ಆಹಾರ ಸೇವನೆ: ಕೆಲವು ಆಹಾರಗಳಲ್ಲಿ ಗ್ಯಾಸ್‌ ಹೆಚ್ಚಿರುತ್ತದೆ. ಆಲೂಗಡ್ಡೆ, ಬಟಾಣಿ, ಬೀನ್ಸ್‌, ಬ್ರೊಕೋಲಿ, ಕ್ಯಾಬೇಜ್‌, ಈರುಳ್ಳಿ, ಕಾರ್ಬೋನೇಟೆಡ್‌ ಡ್ರಿಂಕ್‌ಗಳು ಇತ್ಯಾದಿಗಳಿಂದ ಗ್ಯಾಸ್‌ ಉತ್ಪತ್ತಿಯಾಗುತ್ತದೆ. ಇದು ಕೆಲವರಿಗೆ ಆಗಿ ಬರುವುದಿಲ್ಲ. ಹೊಟ್ಟೆಯುಬ್ಬರ ಶುರುವಾಗುತ್ತದೆ.

4. ವರ್ಜ್ಯ ಅಹಾರಗಳು: ಕೆಲವು ಆಹಾರಗಳು ಕೆಲವರಿಗೆ ಸರಿ ಹೊಂದುವುದಿಲ್ಲ. ಕೆಲವರಿಗೆ ಕೆಲವು ಆಹಾರದಿಂದ ಜೀರ್ಣಕ್ರಿಯೆ ಸಂಬಂಧೀ ತೊಂದರೆಗಳು ಕಂಡು ಬರುತ್ತವೆ. ಲ್ಯಾಕ್ಟೋಸ್‌, ಗ್ಲುಟೆನ್‌ ಇರುವ ಆಹಾರಗಳು ಕೆಲವರಿಗೆ ತೊಂದರೆ ಕೊಡುತ್ತದೆ. ಅಂತಹ ಆಹಾರಗಳಿಂದ ಆ ಕೆಲವರು ದೂರ ಇರುವುದು ಒಳ್ಳೆಯದು.

5. ಮಲಬದ್ಧತೆ: ಮಲವಿಸರ್ಜನೆ ಸರಿಯಾಗಿ ಆಗಿರದಿದ್ದರೆ ಕೆಲವರಿಗೆ ಹೊಟ್ಟೆಯುಬ್ಬರ ಆಗುತ್ತದೆ. ಹೊಟ್ಟೆಯಲ್ಲಿ ಅಸಹಜ ನೋವು, ಗ್ಯಾಸ್‌ ತುಂಬಿದಂತಾಗುವುದು ಆಗಬಹುದು. ಇದೂ ಕೂಡಾ ಹೊಟ್ಟೆಯುಬ್ಬರದ ಪ್ರಮುಖ ಕಾರಣಗಳಲ್ಲೊಂದು.

ಹಾಗಾದರೆ, ಈ ಸಮಸ್ಯೆ ಇರುವ ಮಂದಿ ಸರಳವಾಗಿ ಆಹಾರ ಹಾಗೂ ಜೀವನಕ್ರಮದಿಂದ ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ನೋಡೋಣ.‌

ಇದನ್ನೂ ಓದಿ: Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!

1. ಸರಿಯಾಗಿ ನೀರು ಕುಡಿಯಿರಿ. ನೀರು ಕುಡಿಯುವುದರಿಂದ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ಸತ್ಯವೇ ನಮಗೆ ತಿಳಿದಿರುವುದಿಲ್ಲ. ಪ್ರತಿದಿನವೂ ಎಂಟು ಕಪ್‌ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

2. ನಿಧಾನವಾಗಿ ಉಣ್ಣುವುದನ್ನು ಅಭ್ಯಾಸ ಮಾಡಿಕೊಳ್ಳಿ. ಊಟವನ್ನು ಚೆನ್ನಾಗಿ ಜಗಿದು ನುಂಗುವುದನ್ನು ಅಭ್ಯಾಸ ಮಾಡಿಕೊಳ್ಳಿ.

3. ಒಳ್ಳೆಯ ಬ್ಯಾಕ್ಟೀರಿಯಾ ಇರುವ ಮೊಸರು, ಮಜ್ಜಿಗೆಯಂತಹ ಪ್ರೊಬಯಾಟಿಕ್‌ಗಳನ್ನು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿ. ಇವು ಹೊಟ್ಟೆಯುಬ್ಬರವನ್ನು ನಿಯಂತ್ರಿಸುತ್ತದೆ.

4. ಪುದಿನ ಚಹಾ ಈ ತೊದರೆಗೆ ಒಳ್ಳೆಯ ಮನೆಮದ್ದು. ಹೊಟ್ಟೆಯುಬ್ಬರವಾದಂತಾದಾಗ ಊಟದ ನಂತರ ಪುದಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಸಮಸ್ಯೆ ಕೊಂಚ ನಿಯಂತ್ರಣಕ್ಕೆ ಬರುತ್ತದೆ.

5. ಹೀಗೆ ಹೊಟ್ಟೆಯುಬ್ಬರದ ಸಮಸ್ಯೆ ಆಗಾಗ ಕಂಡುಬರುವ ಮಂದಿ ಉಪ್ಪಿನ ಸೇವನೆ ಕಡಿಮೆ ಮಾಡಿ. ಅಡುಗೆಗೆ ಕಡಿಮೆ ಉಪ್ಪು ಹಾಕಿ. ಪ್ಯಾಕೆಟ್ಟುಗಳಲ್ಲಿ ಬರುವ ಚಿಪ್ಸ್‌ ಇತ್ಯಾದಿ ಸಂಸ್ಕರಿಸಿದ ಆಹಾರ ಸೇವನೆ ಬಿಡಿ. ಇದರಿಂದಲೂ ಗಮನೀಯ ಬದಲಾವಣೆಯನ್ನು ನೀವು ಕಾಣಬಹುದು.

ಇದನ್ನೂ ಓದಿ: Food tips: ಅರಿಶಿನ ಹಾಗೂ ಬೆಲ್ಲ ಎಂಬ ಅಮೃತದಂಥ ಜೋಡಿ: ಮ್ಯಾಜಿಕ್‌ ಔಷಧಿ!

Exit mobile version