ತರಕಾರಿ ತರುವುದಕ್ಕೆ ಹೋಗುತ್ತೀರಿ. ಅಂಗಡಿಯ ಅಟ್ಟಲುಗಳಲ್ಲಿ ತಂಪಾಗಿ ಕುಳಿತಿದ್ದ ಸೊಪ್ಪು-ತರಕಾರಿಗಳು ನಿಮ್ಮ ಬುಟ್ಟಿ ಸೇರುವಾಗ ನಳನಳಿಸುತ್ತಲೇ ಇರುತ್ತವೆ. ಆದರೆ ನೀವು ಮನೆಗೆ ಬಂದು, ಸೆಕೆ ತಡೆಯಲಾರದೆ ಉಸ್ಸಪ್ಪಾ ಎಂದು ಕುಳಿತು, ನೀರು ಕುಡಿದು ಸುಧಾರಿಸಿಕೊಂಡು, ತಂದ ತರಕಾರಿಯನ್ನು ಎತ್ತಿಡುವುದಕ್ಕೆ ಹೋಗುವಷ್ಟರಲ್ಲಿ ಅವು ಬಾಡಿ, ತಲೆ ಮುದುರಿಕೊಂಡಿರುತ್ತವೆ. ಅರೆ! ಅಂಗಡಿಯಿಂದ ತರುವಾಗ ಚೆನ್ನಾಗೇ ಇದ್ದವಲ್ಲ ಎಂದು ಚಿಂತಿಸುತ್ತೀರಿ. ಕೆಲವೊಮ್ಮೆ ಮನೆಗೆ ತರುವಾಗಲೂ ತಾಜಾ ನಗುವನ್ನೇ ಬೀರುವ ಸೊಪ್ಪು-ತರಕಾರಿಗಳು, ಮನೆಗೆ ತಂದ ಒಂದೆರಡೇ ದಿನಗಳಲ್ಲಿ ಮುಖ ಬಾಡಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಮಳೆನೀರು ತಾಗಿದ ಕಾಯಿಪಲ್ಲೆಗಳು ಕೊಳೆಯುವುದು ಎಷ್ಟು ಸಹಜವೋ, ಬೇಸಿಗೆಯಲ್ಲಿ ಉರಿತಾಪಕ್ಕೆ ಕಾಯಿಪಲ್ಲೆಗಳು ಬಾಡುವುದೂ ಅಷ್ಟೇ ಸಹಜ.
ಬೇಸಿಗೆಯಲ್ಲಿ ತರಕಾರಿಗಳು ಯಾವ ಮಟ್ಟಿಗೆ ಬಾಡುತ್ತವೆ ಎಂದರೆ, ಕ್ಯಾರೆಟ್, ಹುರುಳಿಕಾಯಿ, ಆಲೂಗಡ್ಡೆ, ಸೋರೇಕಾಯಿಯಂಥವು ರಬ್ಬರಿನಂತಾಗಿ ಎಳೆದಷ್ಟೂ ಹಿಗ್ಗಿ ಮತ್ತೆ ಮೊದಲಿನ ಗಾತ್ರಕ್ಕೇ ಕುಗ್ಗುವ ಸ್ಥಿತಿಸ್ಥಾಪಕ ಗುಣವನ್ನು ಹೊಂದಿಬಿಡುತ್ತವೆ. ಸ್ವಲ್ಪ ಎಳೆಯ ತರಕಾರಿಗಳ ಕಥೆ ಹೀಗಾದರೆ, ಚೆನ್ನಾಗಿ ಬಲಿತವು ಮರದಂತಾಗಿ, ಅದನ್ನು ಕತ್ತರಿಸುವುದಕ್ಕೆ ಗರಗಸವೇ ಬೇಕು ಎಂಬ ಸ್ಥಿತಿ ಬರುತ್ತದೆ. ಇನ್ನು ಹಣ್ಣುಗಳಲ್ಲಂತೂ ರಸವೇ ಉಳಿಯದೆ, ನಿಸ್ಸಾರವಾಗಿ ಬಿಡುತ್ತವೆ. ಕಾಲಕ್ಕೆ ತಕ್ಕಂತೆ ಹಣ್ಣು-ತರಕಾರಿಗಳು ಇರುತ್ತವೆ ಎಂಬುದು ಸಹಜವಾದರೂ ಬಾಡಿದ್ದು, ಬೆಳೆದಿದ್ದು, ಕೊಳೆತಿದ್ದನ್ನೆಲ್ಲಾ ತಿನ್ನಲಾದೀತೇ? ಬೇಸಿಗೆಯ ತಾಪಕ್ಕೆ ಒಣಗಿ, ಚಿರುಟಿದಂತಾಗುವ ಹಣ್ಣು, ಕಾಯಿಪಲ್ಲೆಗಳನ್ನು ಕಾಪಾಡಿಕೊಳ್ಳುವುದು ಹೇಗೆ? (Health tips) ಅದರಲ್ಲಿರುವ ಪೋಷಕಾಂಶಗಳನ್ನು ಸಂರಕ್ಷಿಸಿಟ್ಟುಕೊಳ್ಳುವುದು ಸಾಧ್ಯವೇ?
ದಾರಿ ಯಾವುದು?
ಇದಕ್ಕೆ ಮಾರ್ಗಗಳು ಇಲ್ಲವೆಂದಲ್ಲ. ಮೊದಲನೇದಾಗಿ, ಸ್ಥಳೀಯವಾಗಿ ಬೆಳೆಯುವ ಕಾಯಿಪಲ್ಲೆಗಳಿಗೆ ಆದ್ಯತೆ ನೀಡಿ. ಯಾವುದೋ ದೂರದ ಊರಿನ ತರಕಾರಿಗಳು, ಬೇರೆ ದೇಶದ ಹಣ್ಣುಗಳನ್ನು ದುಬಾರಿ ಬೆಲೆ ತೆತ್ತು ತಂದರೂ, ಅವುಗಳ ಆಯಸ್ಸು ಹೆಚ್ಚಿರುವುದಿಲ್ಲ. ಕಾರಣ, ಶೀತಲ ಪೆಟ್ಟಿಗೆಯಲ್ಲೋ ಅಥವಾ ಪ್ರಿಸರ್ವೇಟಿವ್ ಹೊತ್ತೋ ಬರುವ ಈ ವಸ್ತುಗಳು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಹಿಂದೆಯೇ ಮೂಲ ಸಸ್ಯದಿಂದ ಬೇರೆಯಾದಂಥವು. ಹಾಗಾಗಿ ಸ್ಥಳೀಯ ಉತ್ಪನ್ನಗಳೇ ಹೆಚ್ಚು ತಾಜಾ ಆಗಿರಲು ಸಾಧ್ಯ. (Health tips) ಜೊತೆಗೆ, ತರಕಾರಿ-ಹಣ್ಣುಗಳನ್ನು ಮುಂದಿನ ನಾಲ್ಕಾರು ದಿನಗಳಿಗೆ ಮಾತ್ರವೇ ಖರೀದಿಸಿ. ವಾರಗಟ್ಟಲೆ ಆಗುವಷ್ಟು ಫ್ರಿಜ್‌ನಲ್ಲಿ ಇರಿಸಿದರೆ, ಶೇಖರಣೆ ಕಷ್ಟವಾದೀತು. ಅವುಗಳ ಸತ್ವಗಳೂ ನಶಿಸಿಯಾವು.
ಸೊಪ್ಪುಗಳನ್ನು ತಂದಾಗ, ಅವುಗಳ ಬೇರಿಗೆ ಮಣ್ಣು ಅಂಟಿದ್ದರೆ, ಅದನ್ನು ತೊಳೆದು ಶುಚಿ ಮಾಡಿ. ನಂತರ ಆ ಸೊಪ್ಪಿನ ಕಂತೆ ಬಿಚ್ಚಿ ಅದನ್ನು ಯಥಾವತ್ ಒಂದು ಪಾತ್ರೆ ನೀರಿನಲ್ಲಿ, ಬೇರು ಮುಳುಗುವಂತೆ ಇಡಿ. ಎಲೆಗಳಿಗೆ ನೀರು ತಾಗುವುದು ಬೇಡ. ಹೀಗಿಟ್ಟರೆ ಒಂದೆರಡು ದಿನಗಳವರೆಗೂ ಸೊಪ್ಪುಗಳು ಅಗ್ದಿ ತಾಜಾ ಆಗಿರಬಲ್ಲವು. ಬೇರು ಇಲ್ಲದಿದ್ದರೆ, ಅವುಗಳನ್ನು ಸೋಸಿ, ನೀರಿದ್ದರೆ ಆರಿಸಿ, ಫ್ರಿಜ್‌ನಲ್ಲಿ ಇಡಬಹುದು. ಆದರೆ ಈರುಳ್ಳಿ, ಆಲೂಗಡ್ಡೆ, ಗೆಣಸು, ಬೆಳ್ಳುಳ್ಳಿ, ಟೊಮೇಟೊಗಳನ್ನು ಫ್ರಿಜ್‌ನಲ್ಲಿ ಇರಿಸದೆ, ತಂಪಾದ ಸ್ಥಳದಲ್ಲಿ ಶೇಖರಿಸುವುದೇ ಸರಿ.
ಮಾವು, ಬಾಳೆ, ಅವಕಾಡೊ, ಕಿವಿ, ಪೇರ್, ಪ್ಲಮ್ ಮುಂತಾದ ಹಣ್ಣುಗಳು ಕಳಿತಾಗ ಇಥಲೀನ್ ಅನಿಲ ಬಿಡುಗಡೆಯಾಗುತ್ತದೆ. ಇದರಿಂದ ಈ ಹಣ್ಣುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸೇಬುಹಣ್ಣು, ಕಲ್ಲಂಗಡಿ, ಗಜ್ಜರಿ, ಬ್ರೊಕೊಲಿಯಂಥ ಹಸಿರು ತರಕಾರಿ ಮುಂತಾದವುಗಳು ಇಥಲೀನ್‌ನಿಂದಾಗಿ ಅವಧಿಗೆ ಮೊದಲೇ ಆಯಸ್ಸು ಕಳೆದುಕೊಳ್ಳುತ್ತವೆ. ಹಾಗಾಗಿ ಈ ಎರಡು ಜಾತಿಯ ಹಣ್ಣ-ತರಕಾರಿಗಳನ್ನು ಪ್ರತ್ಯೇಕವಾಗಿಯೇ ಶೇಖರಿಸಿಡಿ.
ಕೆಲವರಿಗೆ ತಂದ ಹಣ್ಣು-ತರಕಾರಿಗಳನ್ನೆಲ್ಲಾ ತೊಳೆದು ಶುಚಿ ಮಾಡಿ ಶೇಖರಿಸುವ ಅಭ್ಯಾಸವಿರುತ್ತದೆ. ಆದರೆ ಬೆರ್ರಿಗಳು, ದ್ರಾಕ್ಷಿಯಂಥವನ್ನು ತಿನ್ನುವ ಮೊದಲಷ್ಟೇ ತೊಳೆದರೆ ಸಾಕು. ಮೊದಲೇ ಅವುಗಳನ್ನು ನೀರಿಗೆ ಹಾಕಿದರೆ, ಎಷ್ಟು ಪ್ರಯತ್ನಿಸಿದರೂ, ಅವುಗಳಲ್ಲಿನ ನೀರು ಆರಿಸುವುದು ಸಾಧ್ಯವಿಲ್ಲ. ಹಾಗಾಗಿ ಈ ಫಲಗಳು ಶೀಘ್ರವೇ ಕೊಳೆಯಲಾರಂಭಿಸುತ್ತವೆ. ಶುಂಠಿಯನ್ನು ಸಹ ಮಣ್ಣಿನೊಂದಿಗೇ ತಂಪಾದ ಜಾಗದಲ್ಲಿರಿಸಿ, ಬೇಕಾದಾಗ ತೊಳೆದು ಉಪಯೋಗಿಸಿದರೆ ಅದರ ಆಯಸ್ಸು ಹೆಚ್ಚು.
ಕ್ಯಾರೆಟ್, ಮೂಲಂಗಿ, ಬೀಟ್‌ನಂಥ ಗಡ್ಡೆಗಳನ್ನು ತಂದಾಗ, ಅವುಗಳ ಮೇಲೆ ಸೊಪ್ಪುಗಳಿರಬಹುದು. ಈ ಸೊಪ್ಪನ್ನು ಬೇರ್ಪಡಿಸಿಯೇ ಶೇಖರಿಸಿಡಿ. ಪ್ಲಾಸ್ಟಿಕ್ ಚೀಲಗಳಲ್ಲಿ ಫ್ರಿಜ್‌ನಲ್ಲಿಟ್ಟರೆ ಇವುಗಳನ್ನು ವಾರಗಟ್ಟಲೆ ಕೆಡದಂತೆ ಕಾಪಾಡಿಕೊಳ್ಳಬಹುದು.
ಹೂಕೋಸು, ಎಲೆಕೋಸು, ಬ್ರೊಕೊಲಿಯಂಥ ತರಕಾರಿಗಳನ್ನು ಡಬ್ಬಿಗಳಲ್ಲಿ ಬಿಗಿಯಾಗಿ ಮುಚ್ಚಿಡಿ. ಕತ್ತರಿಸದೇ ಇರುವುದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಬಹುದು. ಒಮ್ಮೆ ಕತ್ತರಿಸಿಯಾದ ಮೇಲೆ ಡಬ್ಬಿಗಳಲ್ಲಿ ಸೀಲ್ ಮಾಡಿ ಶೇಖರಿಸಿ. ಹಾಗಿಲ್ಲದಿದ್ದರೆ ಅವುಗಳು ಬೇಗನೇ ಕಪ್ಪಾಗುತ್ತವೆ.
ಇದನ್ನೂ ಓದಿ: Bone Health: ಮೂಳೆಗಳ ಬಲವರ್ಧನೆಗೆ ಏನು ಮಾಡಬೇಕು?