ಬೇಸಿಗೆಯ ಬಿಸಿ ಏರುತ್ತಿದ್ದಂತೆ ಎಲ್ಲೆಡೆ ಮದುವೆಗಳ ಭರಾಟೆ. ಮದುವೆ ಛತ್ರಗಳೆಲ್ಲವೂ ಝಗಮಗ. ಎಲ್ಲರೂ ಭರ್ಜರಿಯಾಗಿ ಉಂಡು, ಡರ್ರನೆ ತೇಗುತ್ತಾ ಛತ್ರದಿಂದ ಹೊರಬರುವ ದೃಶ್ಯ ಸಾಮಾನ್ಯ. ದಿನವೂ ಇಂಥ ಮದುವೆಗಳಲ್ಲಿ ಪಾನಿಪುರಿಯಿಂದ ಹಿಡಿದು ಐಸ್‌ಕ್ರೀಂ ಗುಲಾಬ್ ಜಾಮೂನಿನವರೆಗೆ ಬಗೆಬಗೆಯ ಸಿಹಿ ತಿಂಡಿಗಳು, ಚೆನ್ನಾಗಿ ಎಣ್ಣೆ ಹಾಕಿ ಮಾಡಿದ ಜಿಡ್ಡು ಭರಿತ ಆಹಾರ ಪದಾರ್ಥಗಳನ್ನು ತಿಂದೂ ತಿಂದೂ ಒಂದೆಡೆ ಗಡದ್ದಾಗಿ ತೂಕ ಏರಿಸಿಕೊಂಡರೆ ಇನ್ನೊಂದೆಡೆ, ಇದರಿಂದಾಗಿ ಚರ್ಮದ ಮೇಲೆ ಮೊಡವೆ ಇತ್ಯಾದಿಗಳ ಸಮಸ್ಯೆಯೂ ಎದ್ದು ಕುಣಿಯಲಾರಂಭಿಸುತ್ತದೆ. ನಾಲಿಗೆಗೆ ರುಚಿಯೇನೋ ಹೌದಾದರೂ, ಚರ್ಮಕ್ಕೆ, ದೇಹಕ್ಕೆ ಇವೆಲ್ಲ ಹಿತಕರವಲ್ಲ ಎಂಬ ಸತ್ಯ ಎಲ್ಲ ಸುಂದರಿಯರಿಗೂ ತಿಳಿದಿದೆ. ಆದರೆ, ಮದುವೆಗೆ ಹೋಗಿ ಉಣ್ಣದೆ ಬಂದರೆ ಮನಸ್ಸು ದೇಹ ಒಪ್ಪೀತೇ ಹೇಳಿ? ಹಾಗಾದರೆ, ಇದರಿಂದಾಗಿ ತೊಂದರೆ ಅನುಭವಿಸುವ ಚರ್ಮವನ್ನು ಮತ್ತೆ ಸುಸ್ಥಿತಿಗೆ ತಂದು (skin care) ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವೇ.
ನಮ್ಮ ದೇಹದ ಅತ್ಯಂತ ದೊಡ್ಡ ಅಂಗ ಎಂದರೆ ಅದು ಚರ್ಮ. ಚರ್ಮದಷ್ಟು ವಿಸ್ತಾರವಾಗಿ ಹಬ್ಬಿದ ಇನ್ನೊಂದು ಅಂಗ ನಮ್ಮ ದೇಹದಲ್ಲಿಲ್ಲ. ಇದು ದೇಹದ ಎಲ್ಲ ಅಂಗಗಳಿಗೂ ರಕ್ಷಾಕವಚವಿದ್ದಂತೆ. ವಾತಾವರಣದಲ್ಲಿರುವ ಕಲುಶಿತ ಪದಾರ್ಥಗಳನ್ನು ದೂರವಿರಿಸಿ ನಮ್ಮನ್ನು ಚೆನ್ನಾಗಿಟ್ಟಿರುವ ಈ ಚರ್ಮವನ್ನು ನಾವೂ ಚೆನ್ನಾಗಿಡಬೇಕು. ಚರ್ಮದ ಪ್ರಾಮುಖ್ಯತೆಯನ್ನು ಅರಿತು, ಚರ್ಮಕ್ಕೆ ಪೂರಕವಾದ ಆಹಾರವನ್ನೂ ನಾವು ಆಗಾಗ ಚರ್ಮಕ್ಕೆ ಕೊಡುತ್ತಿರಬೇಕು. ಕಾಳಜಿ ಮಾಡಬೇಕು. ಆದರೆ, ವಿಪರ್ಯಾಸವೆಂದರೆ ಚರ್ಮದಷ್ಟು ನಾವು ನಿರ್ಲಕ್ಷ್ಯ ಮಾಡುವ ಇನ್ನೊಂದು ಅಂಗವೂ ಇಲ್ಲ. ಹಾಗಾಗಿ ಚರ್ಮವೂ ಕೂಡಾ ನಮ್ಮ ಲಕ್ಷ್ಯ, ಕಾಳಜಿಯನ್ನು ಬಯಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಚರ್ಮದ ಅಂತರಂಗವನ್ನು ಚೆನ್ನಾಗಿಟ್ಟರೆ, ಬಾಹ್ಯ ಚರ್ಮವು ಫಳಫಳಿಸುತ್ತದೆ. ಕಿಂಚಿತ್ ನಮ್ಮ ಸಮಯವನ್ನು, ಉತ್ತಮ ಜೀವನಶೈಲಿಯನ್ನು ಚರ್ಮದ ಕಾಳಜಿಗೆ ಕೊಡುವ ಮನಸ್ಸು ಮಾಡಬೇಕು, ಅಷ್ಟೇ.
ಹಾಗಾದರೆ, ಮದುವೆಗೆ ಹೋಗಿ ಬಂದ ಮೇಲೆ ಚೆನ್ನಾಗಿ ತಿಂದ ಶರೀರದ ಚರ್ಮದಿಂದ ಹಿಡಿದು ದೇಹದ ಕಾಳಜಿ ನಾವು ವಹಿಸಬೇಕಾಗುತ್ತದೆ. ಆ ಬಗೆಗಿನ ಸರಳ, ಸುಲಭ ಟಿಪ್ಸ್ ಇಲ್ಲಿವೆ.
1. ಗಡದ್ದಾಗಿ ಮದುವೆಯೂಟ ಮಾಡಿ ಬಂದು ಮಲಗಿ ಮಾರನೇ ದಿನ ಎದ್ದರೆ ಕಣ್ಣುಗಳೆಲ್ಲ ಊದಿಕೊಂಡಂತೆ ಕಾಣಿಸುತ್ತಿದೆಯಾ? ಹಾಗಾದರೆ, ಒಂದು ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಕಣ್ಣ ಮೇಲಿರಿಸಿ ೧೦ ನಿಮಿಷ ಕಣ್ಮುಚ್ಚಿ ರಿಲ್ಯಾಕ್ಸ್ ಮಾಡಿ. ಸೌತೆಕಾಯಿಯ ಬದಲಿಗೆ ಒದ್ದೆ ಮಾಡಿ ಫ್ರಿಡ್ಜಲ್ಲಿಟ್ಟ ಗ್ರೀನ್ ಟೀ ಬ್ಯಾಗ್ ಅಥವಾ ಬೀಟ್‌ರೂಟ್ ತುಂಡನ್ನೂ ಕಣ್ಣ ಮೇಲಿರಿಸಿಕೊಳ್ಳಬಹುದು.
2. ಅತಿಯಾಗಿ ಸಿಕ್ಕಿದ್ದನ್ನೆಲ್ಲ ರುಚಿನೋಡುವ ಧಾವಂತದಲ್ಲಿ ಹೊಟ್ಟೆ ಬಿರಿಯ ಉಂಡು ಬಂದಿದ್ದೀರಾ? ಈಗ ಹೊಟ್ಟೆಯುಬ್ಬರದ ಅನುಭವ ಉಂಟಾಗುತ್ತಿದೆಯಾ? ಹಾಗಿದ್ದರೆ ಕೊತ್ತಂಬರಿ ಕಾಳನ್ನು ನೀರಿನಲ್ಲಿ ನೆನೆಹಾಕಿಡಿ. ರಾತ್ರಿ ಮಲಗುವ ಮೊದಲು ನೆನೆ ಹಾಕಿ ಮಲಗಿ, ಬೆಳಗ್ಗೆ ಎದ್ದ ಕೂಡಲೇ ಈ ನೀರನ್ನು ಕುಡಿಯುವುದರಿಂದ ಹೊಟ್ಟೆಯುಬ್ಬರದ ಸಮಸ್ಯೆ ಮಾಯ.
ಇದನ್ನೂ ಓದಿ: Health Tips: ಇವುಗಳ ಮೂಲಕ ಶೀತ, ಜ್ವರ, ನೆಗಡಿಯಿಂದ ದೂರವಿರಲು ರೋಗ ನಿರೋಧಕತೆ ಹೆಚ್ಚಿಸಿಕೊಳ್ಳಿ!
3. ಅತಿಯಾಗಿ ತಿಂದ ಕಾರಣ ಉಷ್ಣವಾಗಿ ಮಲಬದ್ಧತೆ ಉಂಟಾಗಿದೆಯಾ? ಎಣ್ಣೆ ತಿಂಡಿ, ಸಿಹಿತಿಂಡಿ ಇತ್ಯಾದಿಗಳೆಲ್ಲವೂ ಹೊಟ್ಟೆ ಸೇರಿದ ಪರಿಣಾಮವಿದು. ಇಂಥ ಸಂದರ್ಭ ಅಗಸೆ ಬೀಜ ಅಥವಾ ಫ್ಲ್ಯಾಕ್ ಸೀಡನ್ನು ಹುರಿದು ಹುಡಿಮಾಡಿ ಅದನ್ನು ಮೊಸರಿನಲ್ಲಿ ಕಲಸಿ ತಿನ್ನಿ. ಸಮಸ್ಯೆ ಪರಿಹಾರವಾಗುತ್ತದೆ. ಅಥವಾ ೩೦ ಎಂ ಎಲ್‌ಗಳಾಗುವಷ್ಟು ನೆಲ್ಲಿಕಾಯಿ ರಸವನ್ನು ಒಂದು ಲೋಟ ನೀರಿನೊಂದಿಗೆ ಬೆರೆಸಿ ಕುಡಿಯಿರಿ.
4. ಮದುವೆಗೆ ಹೋಗುವ ಮುನ್ನ ಹೊಳಪಿನ ಚರ್ಮ ಇರಬೇಕೆಂದು ಬಯಸದವರಾರಿದ್ದಾರೆ ಹೇಳಿ? ಹಾಗಾದರೆ, ಮದುವೆಗೆ ಸ್ವಲ್ಪ ದಿನ ಮೊದಲೇ ನೀವು ದಾಳಿಂಬೆ ತಿನ್ನಲು ಆರಂಭಿಸಿ. ದಾಳಿಂಬೆ ಮುಖದಲ್ಲಿ ಕಾಂತಿಯನ್ನು ಚಿಮ್ಮಿಸುತ್ತದೆ. ಬಂದ ಮೇಲೂ ಸಾಕಷ್ಟು ದಾಳಿಂಬೆಯನ್ನು ತಿನ್ನಿ. ಇದು ಕೇವಲ ಚರ್ಮವನ್ನಷ್ಟೇ ಅಲ್ಲ, ಹೊಟ್ಟೆಯನ್ನೂ ಸರಿಪಡಿಸುತ್ತದೆ. ಹೊಟ್ಟೆ ಕೆಟ್ಟ್ ಅನುಭವವಾದರೆ, ದಾಳಿಂಬೆಯ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯಿರಿ. ಬೇದಿಯಂತಹ ತೊ ದರೆಯಿಂದ ಹಿಡಿದು, ಹೊಟ್ಟೆನೋವಿನವರೆಗಿನ ಸಮಸ್ಯೆಗಳು ಮಾಯವಾಗುತ್ತದೆ.
ಇದನ್ನೂ ಓದಿ: Health Tips: ರಾತ್ರಿಯೂಟದ ಸಂದರ್ಭ ಯಾವೆಲ್ಲ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ ಗೊತ್ತೇ?