ಬೆಂಗಳೂರು: ಬೇಸಿಗೆಯ ಬಿಸಿಗೆ ದೇಹ ತಂಪಾಗಬೇಕು. ಆಗಷ್ಟೇ ಆರೋಗ್ಯ ಸರಿಯಾಗುತ್ತದೆ (Health Tips in Kannada). ಹೊರಗಿನ ಉಷ್ಣತೆಯ ಜೊತೆಗೆ ದೇಹಕ್ಕೂ ನಾವು ಉಷ್ಣ ಪ್ರಕೃತಿಯ ಆಹಾರವನ್ನೇ ನೀಡಿದರೆ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ ನಿಜವಾದ ತಂಪು ಸಿಗುವುದಿಲ್ಲ. ದೇಹವನ್ನು ತಂಪಾಗಿರಿಸಬೇಕೆಂದರೆ, ನಾವು ಬೇಸಗೆಯಲ್ಲಿ ಕೆಲವು ಆಹಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ಸೇವಿಸಬೇಕು. ಬನ್ನಿ, ನಿಮ್ಮ ದೇಹಕ್ಕೆ ಬೇಸಿಗೆಯಲ್ಲಿ ಬೇಕಾದ್ದೇನು ಎಂಬುದನ್ನು ನೋಡೋಣ.
ಹೆಚ್ಚು ನೀರು ಸೇವಿಸಿ
ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚು ನೀರು ಬೇಕು. ಬಾಯಾರಿದಾಗಲೆಲ್ಲ ದೇಹಕ್ಕೆ ನೀರು ಕೊಡಲೇಬೇಖು. ಬೇಸಿಗೆಯ ಧಗೆ ಬಾಯಾರುವುದೂ ಕೂಡಾ ಹೆಚ್ಚು. ಇಂಥ ಸಂದರ್ಭದಲ್ಲಿ ಸಕ್ಕರೆ ಹೆಚ್ಚಿರುವ ಜ್ಯೂಸ್‌ಗಳ ಮೊರೆ ಹೋಗುವ ಬದಲು ಹೆಚ್ಚಾಗಿ ನೀರನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ದಿನಕ್ಕೆ ಕಡಿಮೆಯೆಂದರೂ ಎಂಟರಿಂದ ಹತ್ತು ಗ್ಲಾಸ್ ನೀರನ್ನು ನಾವು ಸೇವಸಲೇಬೇಕು.
ನೀರಿನಂಶ ಹೆಚ್ಚಿರುವ ಹಣ್ಣು ಸೇವಿಸಿ
ಬೇಸಿಗೆಯಲ್ಲಿ ಹಣ್ಣು ತಂದು ಹಣ್ಣಿಗೆ ಒಂದಷ್ಟು ಸಕ್ಕರೆ ಸುರಿದು ಜ್ಯೂಸ್ ಮಾಡಿ ಕುಡಿಯುವ ಬದಲು ಹಣ್ಣನ್ನು ಹಾಗೆಯೇ ಸೇವಿಸಿ. ಅಥವಾ ಹಣ್ಣಿನ ರಸ ಹಿಂಡಿಯೂ ಸೇವಿಸಬಹುದು. ಆದರೆ, ಈ ಆಯ್ಕೆಯನ್ನು ಮಾಡುವಾಗ ರಸಭರಿತ, ನೀರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ, ಬೇಸಿಗೆ ಬಂದ ಕೂಡಲೇ ಮಾರುಕಟ್ಟೆಗೆ ಬರುವ ಕಲ್ಲಂಗಡಿ, ಖರ್ಬೂಜ, ಲಿಚಿ, ಮಾವು, ಹಲಸು, ನಿಂಬೆ ಮತ್ತಿತರ ಹಣ್ಣುಗಳು. ಜೊತೆಗೆ ಸೌತೆಕಾಯಿಯಂತಹ ತರಕಾರಿಗಳು. ಇವುಗಳಲ್ಲಿ ಹೆಚ್ಚು ನೀರಿನಂಶ ಇದ್ದು, ಇವು ದೇಹವನ್ನು ತಂಪಾಗಿರಿಸುತ್ತವೆ. ಜೊತೆಗೆ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುತ್ತವೆ.
ಇದನ್ನೂ ಓದಿ: Health Tips in Kannada: ಬೆಂಡೆಕಾಯಿ ನೀರನ್ನು ಕುಡಿಯೋದರಿಂದ ಏನೆಲ್ಲ ಲಾಭಗಳಿವೆ ತಿಳಿದುಕೊಳ್ಳಿ
ತಂಪಾಗಿರಿಸುವ ಮೂಲಿಕೆಗಳನ್ನು ಆಯ್ಕೆ ಮಾಡಿ
ದೇಹವನ್ನು ತಂಪಾಗಿರಿಸಲು, ಕೆಲವು ಮೂಲಿಕೆಗಳೂ ಸಹಾಯ ಮಾಡುತ್ತವೆ. ಉದಾಹರಣೆಗೆ ಪುದಿನ, ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು, ಬಡೇಸೋಂಪು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳಲ್ಲಿ ತಂಪುಕಾರಕ ಗುಣಗಳಿವೆ. ಇವುಗಳನ್ನು ಆಹಾರಗಳನ್ನು ಬಳಸಿ. ಚಹಾ ಮಾಡಿ ಕುಡಿಯಿರಿ. ಮಜ್ಜಿಗೆ ಅಥವಾ ಇತರ ತಂಪು ಪೇಯಗಳಿಗೆ ಹಾಕಿ.
ಮಸಾಲೆಯುಕ್ತ ಆಹಾರಗಳಿಂದ ದೂರವಿರಿ
ಮಸಾಲೆಯುಕ್ತ ಆಹಾರಗಳು ದೇಹವನ್ನು ಬಿಸಿಯಾಗಿಸುತ್ತವೆ. ಆದರೂ ನಿಮಗೆ ಇಂತಹ ಆಹಾರಗಳು ಬೇಕೆನಿಸಿದರೆ, ಕೊಂಚ ಕಡಿಮೆ ಮಸಾಲೆಯ ಆಹಾರಗಳನ್ನು ಬಳಸಿ. ಆದರೆ, ಖಾರವಾದ ತಿನಿಸುಗಳು ಅಥವಾ ಅತಿಯಾದ ಮಸಾಲೆ ಹಾಕಿದ ಊಟ ಬೇಸಿಗೆಯಲ್ಲಿ ಒಳ್ಳೆಯದಲ್ಲ.
ಎಲೆಕ್ಟ್ರೋಲೈಟ್‌ಯುಕ್ತ ಆಹಾರ ಸೇವಿಸಿ
ಎಲೆಕ್ಟ್ರೋಲೈಟ್‌ಗಳಾದ ಸೋಡಿಯಂ, ಪೊಟಾಶಿಯಂ, ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳಾದ, ಬಾಳೆಹಣ್ಣು, ಎಳನೀರು, ಸೊಪ್ಪು, ಮೊಸರು, ಮಜ್ಜಿಗೆ ಮತ್ತಿತರ ಆಹಾರಗಳನ್ನು ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶದ ಜೊತೆಗೆ ಶಕ್ತಿ ಸಾಮರ್ಥ್ಯವೂ ಹೆಚ್ಚುತ್ತದೆ.
ಆಲ್ಕೋಹಾಲ್, ಕೆಫೀನ್ ಕಡಿಮೆ ಮಾಡಿ
ಬೇಸಿಗೆಯಲ್ಲಿ ಕೆಫೀನ್‌ಯುಕ್ತ ಪೇಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಆಲ್ಕೋಹಾಲ್ ಬಿಟ್ಟರೆ ಒಳ್ಳೆಯದು. ನೀರು, ಹರ್ಬಲ್ ಚಹಾಗಳು, ಕಷಾಯ, ಹಣ್ಣಿನ ಪಾನಕಗಳು ಇತ್ಯಾದಿಗಳನ್ನು ಸೇವಿಸಿ. ರಾಗಿ ಅಂಬಲಿ, ಬಾರ್ಲಿ ನೀರು, ಬಾದಾಮಿ ಹಾಲು, ಮಜ್ಜಿಗೆ ನೀರು ಇತ್ಯಾದಿಗಳು ದೇಹವನ್ನು ತಂಪು ಮಾಡುತ್ತವೆ.
ಸಾಮಾನ್ಯ ಉಷ್ಣತೆಯ ಅಥವಾ ತಂಪಾದ ಆಹಾರ ಸೇವಿಸಿ
ಕೋಣೆಯ ಉಷ್ಣತೆಯ ಆಹಾರಗಳನ್ನು ಹೆಚ್ಚು ತಿನ್ನಿ. ಸಲಾಡ್, ತಂಬುಳಿ, ತಣ್ಣಗೆ ಮಾಡಿದ ಸೂಪ್‌ಗಳು, ಫ್ರುಟ್ ಸಲಾಡ್‌ಗಳು ಇತ್ಯಾದಿಗಳು ಒಳ್ಳೆಯದು. ಫ್ರಿಡ್ಜ್‌ನಲ್ಲಿಟ್ಟು ತಿನ್ನುವುದು, ಅಥವಾ ಹದ ಬಿಸಿಯ ಆಹಾರಗಳಾದರೆ ಸರಿ. ಬಿಸಿ ಬಿಸಿಯಾಗಿ ತಿನ್ನಬೇಕಾದ ಅಗತ್ಯವಿಲ್ಲ. ತಂಪಾದ ಆಹಾರವೆಂದರೆ, ಐಸ್‌ಕ್ರೀಂ ಅಲ್ಲ ಎಂಬುದು ನೆನಪಿರಲಿ!