ಬೆಂಗಳೂರು: ಬೇಸಿಗೆಯಲ್ಲಿ ನಾವು ತಂಪಾಗಿ (Health Tips in Kannada) ಕುಡಿಯಬಹುದಾದ ಹಲವು ಹಣ್ಣಿನ ರಸಗಳ ಪೈಕಿ ಟೊಮ್ಯಾಟೊ ಜ್ಯೂಸ್ ಸಹ ಒಂದು. ಟೊಮ್ಯಾಟೊ ಹಣ್ಣೊ, ತರಕಾರಿಯೊ ಎಂಬ ಅನಾದಿ ಕಾಲದ ಗೊಂದಲ ಇನ್ನೂ ಇದ್ದರೆ, ಅದು ತರಕಾರಿಯಂತೆ ಉಪಯೋಗಿಸಲಾಗುವ ಹಣ್ಣು. ಹೌದು, ನಿಜಕ್ಕೂ ಅದು ಹಣ್ಣೇ. ಹಾಗಾಗಿ ಬೇಸಿಗೆಯಲ್ಲಿ ಉಳಿದೆಲ್ಲ ಹಣ್ಣಿನ ರಸಗಳ ಜೊತೆಗೆ ಟೊಮ್ಯಾಟೊ ರಸವನ್ನೂ ಖುಷಿಯಾಗಿ ಗುಟುಕರಿಸಬಹುದು. ಇದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕಾಗುವ ಲಾಭಗಳ ವಿಷಯದಲ್ಲೂ ಎತ್ತಿದ ಕೈ. ಏನು ಪ್ರಯೋಜನಗಳಿವೆ ಟೊಮೇಟೊ ಜ್ಯೂಸ್ ಕುಡಿಯುವುದರಿಂದ?
ಋತುಮಾನದಲ್ಲಿ ಕಾಡುವ ಸೋಂಕು ರೋಗಗಳನ್ನು ದೂರ ಮಾಡುವುದರಿಂದ ಹಿಡಿದು, ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವವರೆಗೆ ಹಲವು ರೀತಿಯ ಉಪಕಾರವನ್ನು ಟೊಮ್ಯಾಟೊ ನಮಗೆ ಮಾಡುತ್ತದೆ. ಲೈಕೋಪೇನ್‌ನಂಥ ಪ್ರಬಲ ಉತ್ಕರ್ಷಣ ನಿರೋಧಕವು ಹೃದಯದ ಆರೋಗ್ಯ ರಕ್ಷಣೆಯಲ್ಲಿ ಸಹಾಯ ಮಾಡುತ್ತದೆ. ಜೊತೆಗೆ, ಹೇರಳವಾದ ವಿಟಮಿನ್ ಸಿ, ಎ, ಬಿ ಮತ್ತು ಖನಿಜಗಳು ಟೊಮ್ಯಾಟೊ ದಿಂದ ದೊರೆಯುತ್ತವೆ. ಇವೆಲ್ಲ ಟೊಮ್ಯಾಟೊ ಬೆರೆಸಿದ ರುಚಿಕರ ಖಾದ್ಯಗಳಿಂದಲೂ ನಮಗೆ ದೊರೆಯುವುದಕ್ಕೆ ಸಾಧ್ಯವಿದೆ.
ಇದನ್ನೂ ಓದಿ: Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು
ಟೊಮ್ಯಾಟೊ ಜ್ಯೂಸ್
ಸಿದ್ಧ ಮಾಡುವುದು ಕಷ್ಟವಿಲ್ಲ. 2-3 ಜ್ಯಾಮ್ ಟೊಮ್ಯಾಟೊ ತೆಗೆದುಕೊಳ್ಳಿ. ಇದಕ್ಕೆ ಕೊಂಚ ಪುದೀನಾ ಎಲೆಗಳು, ಚಿಟಿಕೆ ಉಪ್ಪು, ಸ್ವಲ್ಪ ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. ನಾರಿನಂಶ ಬೇಡ ಎನಿಸಿದರೆ ಸೋಸಿಕೊಳ್ಳಿ. ದಾಹ ತಣಿಸಿಕೊಳ್ಳಲು ತಂಪಾದ ಐಸ್ ಬೇಕಿದ್ದರೆ ತೇಲಿಸಿ. ಇವಿಷ್ಟು ಮಾಡಿದರೆ ಟೊಮ್ಯಾಟೊ ಜ್ಯೂಸ್ ಸಿದ್ಧ.
ಇದರಲ್ಲಿರುವ ಸತ್ವಗಳನ್ನು ಗಮನಿಸುವುದಾದರೆ, ಸುಮಾರು 250 ಗ್ರಾಂ ಟೊಮ್ಯಾಟೊ ಜ್ಯೂಸ್‌ನಲ್ಲಿ, 45 ಕ್ಯಾಲರಿ ಶಕ್ತಿ ದೊರೆಯುತ್ತದೆ. 2 ಗ್ರಾಂ ಪ್ರೊಟೀನ್, 2 ಗ್ರಾಂ ನಾರು, ದಿನದ ಶೇ. 22ರಷ್ಟು ವಿಟಮಿನ್ ಎ, ಶೇ. 74ರಷ್ಟು ವಿಟಮಿನ್ ಸಿ, ಶೇ. 7ರಷ್ಟು ವಿಟಮಿನ್ ಕೆ, ಹಲವು ರೀತಿಯ ಬಿ ವಿಟಮಿನ್‌ಗಳು, ಫೋಲೇಟ್, ಮೆಗ್ನೀಶಿಯಂ, ಪೊಟಾಶಿಯಂ, ತಾಮ್ರ ಮತ್ತು ಮ್ಯಾಂಗನೀಸ್‌ನಂಥ ಖನಿಜಗಳು ದೇಹಕ್ಕೆ ದೊರೆಯುತ್ತವೆ.
ಕೆರೊಟಿನಾಯ್ಡ್‌ಗಳು
ಇದರಲ್ಲಿ ಹಲವು ರೀತಿಯ ಪಾಲಿಫೆನಾಲ್‌ಗಳು ಮತ್ತು ಕೆರೊಟಿನಾಯ್ಡ್‌ಗಳಿವೆ. ಇವೆಲ್ಲವೂ ವಿಟಮಿನ್ ಎ ರೂಪಕ್ಕೆ ದೇಹದೊಳಗೆ ಪರಿವರ್ತನೆಗೊಳ್ಳುವಂಥವು. ಕಣ್ಣಿನ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದ ಸತ್ವಗಳಿವು. ಮಾತ್ರವಲ್ಲ, ದೇಹದೊಳಗೆ ಮುಕ್ತ ಕಣಗಳು ಸೃಷ್ಟಿಯಾಗದಂತೆ ಮಾಡುವ ಸಾಮರ್ಥ್ಯ ಇವುಗಳಿಗಿದೆ. ಇದರಿಂದ ಕ್ಯಾನ್ಸರ್‌ನಂಥ ಮಾರಕ ರೋಗಗಳ ಭೀತಿಯಿಂದ ಪಾರಾಗಬಹುದು.
ಉತ್ಕರ್ಷಣ ನಿರೋಧಕಗಳು
ಟೊಮ್ಯಾಟೊದಲ್ಲಿ ಲೈಕೋಪೇನ್ ಎಂಬ ಪ್ರಬಲ ಉತ್ಕರ್ಷಣ ನಿರೋಧಕವೊಂದಿದೆ. ಒಂದು ಗ್ಲಾಸ್ ಸಾಂದ್ರವಾದ ಟೊಮೇಟೊ ರಸದಲ್ಲಿ ಅಂದಾಜು 22 ಎಂ.ಜಿ. ಲೈಕೋಪೇನ್ ದೊರೆಯಬಹುದು. ಈ ಲೈಕೋಪೇನ್‌ಗಳ ಉರಿಯೂತ ನಿವಾರಣೆಯ ಸಾಮರ್ಥ್ಯದ ಬಗ್ಗೆ ಹಲವು ಅಧ್ಯಯನಗಳನ್ನು ವಿಜ್ಞಾನಿಗಳು ನಡೆಸಿದ್ದಾರೆ. ಅವೆಲ್ಲದರಲ್ಲೂ, ಇದೊಂದು ಸಮರ್ಥವಾದ ಉರಿಯೂತ ಶಾಮಕ ಎಂಬುದು ಸಾಬೀತಾಗಿದೆ. ಕೀಲುಗಳ ಆರೋಗ್ಯದಿಂದ ಹಿಡಿದು, ಹೃದಯದ ಯೋಗಕ್ಷೇಮ ನೋಡಿಕೊಳ್ಳುವವರೆಗೆ ಇದರ ಸಾಮರ್ಥ್ಯ ವಿಸ್ತರಿಸಿದೆ.
ಕೊಲೆಸ್ಟ್ರಾಲ್ ಕಡಿತ
ಈ ಹಣ್ಣಿನಲ್ಲಿರುವ ಬೀಟಾ ಕ್ಯಾರೊಟಿನ್ ಅಂಶವು ಲೈಕೋಪೇನ್ ಜೊತೆಗೆ ಸೇರಿ ಕೆಲವು ಉತ್ತಮ ಫಲಿತಾಂಶಗಳನ್ನು ನೀಡಬಲ್ಲದು. ಅಂದರೆ, ರಕ್ತದೊತ್ತಡ ಕಡಿಮೆ ಮಾಡುವುದರ ಜೊತೆಗೆ ಕೊಲೆಸ್ಟ್ರಾಲ್ ಜಮೆಯಾಗಿದ್ದನ್ನೂ ಕಡಿತಗೊಳಿಸುತ್ತದೆ. ಕೊಲೆಸ್ಟ್ರಾಲ್ ಕಡಿತಕ್ಕೆ ಟೊಮೇಟೊ ನೆರವಾಗುವುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ಜೊತೆಗೆ ರಕ್ತದೊತ್ತಡ ನಿಯಂತ್ರಣಕ್ಕೂ ನೆರವಾಗುವುದರಿಂದ ಹೃದಯ ಸ್ನೇಹಿತನಂತೆ ವರ್ತಿಸುತ್ತದೆ.
ಅತಿ ಬೇಡ
ಇಷ್ಟೆಲ್ಲ ಸದ್ಗುಣಗಳು ಟೊಮ್ಯಾಟೊದಲ್ಲಿದ್ದರೂ, ದಿನವೂ ಟೊಮೇಟೊ ರಸ ಕುಡಿಯುವ ಮುನ್ನ ಸ್ವಲ್ಪ ಜಾಗ್ರತೆ ಮಾಡುವುದು ಒಳ್ಳೆಯದು. ಮನೆಯಲ್ಲೇ ಮಾಡಿಕೊಂಡರೆ ಅಷ್ಟೇನೂ ಸಮಸ್ಯೆಯಾಗದು. ಆದರೆ ಅಂಗಡಿಯಿಂದ ತರುವ ಟೋಮೇಟೋ ಜ್ಯೂಸ್‌ಗಳಲ್ಲಿ ಸೋಡಿಯಂ ಅಂಶ ಹೆಚ್ಚಿರಬಹುದು. ಮನೆಯಲ್ಲಿ ಮಾಡಿದಾಗ ನಾರಿನಂಶ ತೆಗೆಯದೆ ಕುಡಿಯುವ ಆಯ್ಕೆ ಇರುತ್ತದೆ. ಆದರೆ ಅಂಗಡಿಯಿಂದ ತರುವ ಯಾವುದೇ ಬ್ರಾಂಡ್‌ಗಳಲ್ಲಿ ನಾರಿನಂಶವನ್ನು ಸಂಪೂರ್ಣ ತೆಗೆಯಲಾಗುತ್ತದೆ. ಇದು ಅಂಥಾ ಒಳ್ಳೆಯದೇನಲ್ಲ. ಐಬಿಎಸ್ ಅಥವಾ ಜಿಇಆರ್‌ಡಿ ಯಂಥ ಜೀರ್ಣಾಂಗಗಳ ಸಮಸ್ಯೆ ಇರುವವರು ಟೋಮೇಟೊ ರಸವನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಇದರಲ್ಲಿರುವ ಹುಳಿ ಅಂಶದಿಂದ ಜೀರ್ಣಾಂಗಗಳ ತೊಂದರೆ ಹೆಚ್ಚಬಹುದು.