ಬೆಂಗಳೂರು: ಚಹಾ ಯಾರಿಗೆ ಇಷ್ಟವಿಲ್ಲ ಹೇಳಿ. ಚಹಾ (Health Tips Kannada) ಬಯಸದವರಿಗಿಂತಲೂ ಚಹಾ ಬಯಸುವ ಮಂದಿಯೇ ಹೆಚ್ಚು. ನಿತ್ಯವೂ ಎದ್ದ ಕೂಡಲೇ ಚಹಾ ಕುಡಿಯದಿದ್ದರೆ ಏನೋ ಕಳೆದುಕೊಂಡ ಭಾವ ಅನೇಕರಿಗೆ. ಅದೇನೋ, ಚಹಾ ಕುಡಿದ ತಕ್ಷಣ ಆ ದಿನ ಆರಂಭವಾದ ಸೂಚನೆ, ಒಂದು ಪಾಸಿಟಿವ್ ಆರಂಭ. ಚಹಾ ಕೊಡುವ ಒಂದು ಆಪ್ತ ಭಾವ, ನಮ್ಮದೇ ಆದ ಕ್ಷಣಗಳು ಬೇರೆ ಯಾವುದರಲ್ಲಿಯೂ ದಕ್ಕದು. ಚಹಾ ಪ್ರಿಯರಿಗೆ ಚಹಾವೆಂದರೆ ಅದು ಕೇವಲ ಪೇಯವಂತೂ ಖಂಡಿತ ಅಲ್ಲ. ಅದೊಂದು ಭಾವ. ಅದಕ್ಕೇ, ಚಹಾ ಬಿಡಲು ಹೊರಟರೂ ಅನೇಕರಿಗೆ ಅದು ಸಾಧ್ಯವಾಗುವುದೇ ಎಲ್ಲ. ಜೀವನದುದ್ದಕ್ಕೂ ಅದು ಅಂಟಿಕೊಂಡೇ ಇರುತ್ತದೆ.
ಆದರೆ, ಹೀಗೆ ಚಹಾ ಪ್ರಿಯರಾದವರಿಗೆಲ್ಲರಿಗೂ ಚಹಾವನ್ನು ಹೀಗೆ ಕುಡಿಯುವ ಭಾಗ್ಯ ದಕ್ಕದು. ಯಾಕೆಂದರೆ ಹಲವರಿಗೆ ಚಹಾ ಕುಡಿದರೆ ಅಸಿಡಿಟಿಯ ಸಮಸ್ಯೆ. ಹೀಗಾಗಿ, ಇಷ್ಟದ ಪೇಯವಾದರೂ ಅನೇಕರಿಗೆ ಈ ಸಮಸ್ಯೆಯಿಂದಾಗಿ ದೂರವಿರಬೇಕಾದ ಅನಿವಾರ್ಯತೆ. ಇನ್ನೂ ಕೆಲವರಿಗೆ ಚಹಾದಿಂದ ಅಸಿಡಿಟಿ ಎಂಬುದೇ ತಮಾಷೆಯಾಗಿ ಕಂಡರೆ ಆಶ್ಚರ್ಯವಿಲ್ಲ. ಆದರೆ, ಚಹಾದಿಂದ ಕೆಲವರಿಗೆ ಅಸಿಡಿಟಿ ಸಮಸ್ಯೆ ಉಂಟಾಗುವುದು ಸತ್ಯ. ಬನ್ನಿ, ಚಹಾದಿಂದ ಅಸಿಡಿಟಿ ನಿಮಗಾಗಿದ್ದರೆ ನೀವು ಈ ಐದು ತಪ್ಪುಗಳನ್ನು ಮಾಡುತ್ತಿರಲೂಬಹುದು.
1. ಚಹಾವನ್ನು ಮಾಡುವ ಕ್ರಮದಲ್ಲೇ ವ್ಯತ್ಯಾಸವಾಗುವುದರಿಂದಲೂ ಈ ಸಮಸ್ಯೆ ಬರಬಹುದು. ಚಹಾ ಪುಡಿಯನ್ನು ಹಾಕಿ ಸಿಮ್‌ನಲ್ಲಿಟ್ಟು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚೇ ಕುದಿಸುವುದು ಕೂಡಾ ಇದಕ್ಕೆ ಕಾರಣ. ಸ್ಟ್ರಾಂಗ್ ಖಡಕ್ ಚಹಾ ಮಾಡುವ ಉತ್ಸಾಹದಲ್ಲಿ ಅನೇಕರು ಚಹಾ ಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದುಂಟು. ಹಾಲಿನಲ್ಲಿ ಚಹಾಪುಡಿಯನ್ನು ಹೆಚ್ಚು ಹೊತ್ತು ಕುದಿಸುವುದರಿಂದ ಪ್ರೊಟೀನ್ ಹಾಗೂ ಲ್ಯಾಕ್ಟೋಸ್ ಬ್ರೇಕ್‌ಡೌನ್ ಆಗುವುದರಿಂದ ಅಸಿಡಿಟಿ ಆಗುವುದುಂಟು. ಚಹಾಪುಡಿಯನ್ನು ಸ್ವಲ್ಪ ನೀರಿನಲ್ಲಿ ಕುದಿಸಿಕೊಂಡ ಮೇಲೆ ಹಾಲು ಹಾಕಿ ಚಹಾ ಮಾಡಿ. ಇದರಿಂದ ಹಾಲಿನ ಸತ್ವವೂ ಹಾಗೆಯೇ ಉಳಿಯುತ್ತದೆ.
ಇದನ್ನೂ ಓದಿ: Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು
2. ಆಗಷ್ಟೇ ಮಾಡಿದ ಚಹಾವನ್ನು ಗಂಟೆಗಟ್ಟಲೆ ಹಾಗೆಯೇ ಇಟ್ಟು ಆಮೇಲೆ ಕುಡಿಯುವುದರಿಂದಲೂ ಅಸಿಡಿಟಿ ಉಂಟಾಗಬಹುದು. ಚಹಾ ಯಾವಾಗಲೂ ಮಾಡಿದ ತಕ್ಷಣ ಬಿಸಿಬಿಸಿ ಹಾಗೆಯೇ ಕುಡಿದು ಬಿಡಬೇಕು. ಮಾಡಿದ ಮೇಲೆ ೧೦ ನಿಮಿಷಗಳೊಳಗಾಗಿ ಚಹಾ ಕುಡಿದುಬಿಡಿ.
3. ಬೆಳಗ್ಗೆ ಮಾಡಿದ ಚಹಾ ಉಳಿಯಿತು ಎಂದು ಸಂಜೆಗೆ ತೆಗೆದಿಡಬೇಡಿ. ಕುದಿಸಿ ಕುಡಿದರಾಯಿತು ಎಂದು ನೀವು ಅಂದುಕೊಳ್ಳಬಹುದು. ಆದರೆ ಚಹಾವನ್ನು ಮತ್ತೆ ಕುದಿಸಿ ಕುಡಿಯುವುದು ಖಂಡಿತ ಆರೋಗ್ಯಕ್ಕೆ ಒಳ್ಳೆಯದಲ್ಲ. ಮುಖ್ಯವಾಗಿ ಹಾಲು ಹಾಕಿದ ಚಹಾವನ್ನು ಹಾಗೆಯೇ ಇಟ್ಟು ಮತ್ತೆ ಬಿಸಿ ಮಾಡಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆಗಳು ಹೆಚ್ಚಾಗುತ್ತವೆ.
4. ಅತಿಯಾಗಿ ಚಹಾ ಕುಡಿಯಬೇಡಿ. ಯಾರಾದರೂ ಜೊತೆಗೊಂದು ಬೈಟೂ ಚಹಾ ಕುಡಿಯೋಣ ಎಂದು ಪ್ರೀತಿಯಿಂದ ಕರೆದರೆ ಇಲ್ಲ ಎನ್ನಲಾಗುವುದಿಲ್ಲ ನಿಜ. ಆದರೆ, ದಿನಕ್ಕೆ ನೀವೆಷ್ಟು ಚಹಾ ಕುಡಿಯುತ್ತೀರಿ ಎಂಬ ಬಗ್ಗೆ ನಿಗಾ ಇರಲಿ. ಬೆಳಗ್ಗೆ ಒಂದು ಚಹಾ, ಸಂಜೆ ಇನ್ನೊಂದು ಕಪ್ ಸಾಕು. ಅಗತ್ಯ ಬಿದ್ದಲ್ಲಿ ಕಚೇರಿಯಲ್ಲಿ ಗೆಳೆಯರ ಜೊತೆ ಮಧ್ಯದಲ್ಲೊಂದು ಚಹಾ ಕುಡಿಯಬಹುದು ಅಷ್ಟೇ. ಮೂರಕ್ಕಿಂತ ಹೆಚ್ಚು ಕಪ್ ಚಹಾ ಒಳ್ಳೆಯದಲ್ಲ. ನಿಮ್ಮ ಅಸಿಡಿಟಿಯ ಮೂಲ ಅತಿಯಾದ ಚಹಾ ಕುಡಿಯುವುದೂ ಕೂಡಾ ಇರಬಹುದು ನೆನಪಿಡಿ.
5 ಕೆಲವು ಆಹಾರಗಳನ್ನು ಚಹಾದ ಜೊತೆ ಸೇವಿಸಬೇಡಿ. ಪಾಲಕ್, ಬ್ರೊಕೋಲಿಯಂತಹ ಹಸಿರು ಸೊಪ್ಪು ತರಕಾರಿಗಳಿಂದ ತಯಾರಿಸಿದ ಆಹಾರಗಳನ್ನು ಚಹಾದ ಜೊತೆಗೆ ಸೇವಿಸಬೇಡಿ. ತಂಪಾದ ಫ್ರುಟ್ ಸಲಾಡ್‌ಗಳು, ಸಲಾಡ್‌ಗಳು, ನಿಂಬೆಹಣ್ಣಿನ ಆಹಾರ ಪದಾರ್ಥಗಳು, ಅರಿಶಿನ, ಮೊಸರು ಇತ್ಯಾದಿಗಳನ್ನು ಚಹಾದ ಜೊತೆ ಸೇವಿಸಬೇಡಿ.