ಜೀವನಶೈಲಿಯ ದೋಷಗಳಿಂದಾಗಿ ಹಲವಾರು ರೋಗಗಳು ನಮಗೆ ಗಂಟಿಕ್ಕಿಕೊಳ್ಳುತ್ತಿವೆ. ಆಹಾರ ಕ್ರಮದಲ್ಲಿನ ದೋಷ ಮತ್ತು ವ್ಯಾಯಾಮ ಇಲ್ಲದಿರುವಂಥ ಕಾರಣದಿಂದ ದೇಹದಲ್ಲಿ ಜಮೆಯಾಗುವ ಕೊಬ್ಬು ಹೆಚ್ಚುತ್ತಿದೆ. ನಮ್ಮ ಶರೀರ ಚೆನ್ನಾಗಿ ಕೆಲಸ ಮಾಡಲು ಸಣ್ಣ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಅಗತ್ಯವಿದೆ. ಅದು ನಮಗೆ ನಿತ್ಯದ ಆಹಾರದಿಂದಲೇ ದೊರೆಯುತ್ತದೆ. ಆದರೆ ಅತಿಯಾದ ಕೊಬ್ಬಿನ ಆಹಾರದ ಸೇವನೆ, ಸಂಸ್ಕರಿತ ಸಕ್ಕರೆಯ ಮೇಲಿನ ನಮ್ಮ ಪ್ರೀತಿಯಿಂದಾಗಿ ಶರೀರದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಹೃದಯದ ತೊಂದರೆ ಮತ್ತು ಪಾರ್ಶ್ವವಾಯುವಿನಂಥ ಮಾರಣಾಂತಿಕ ಸಮಸ್ಯೆಗಳು ಗಂಟಿಕ್ಕಿಕೊಳ್ಳಬಹುದು. ಇದಕ್ಕಾಗಿ ವೈದ್ಯರು ಸೂಚಿಸುವ ಔಷಧಿ ಮತ್ತು ವ್ಯಾಯಾಮ ಕಡ್ಡಾಯವಾಗಿ ಬೇಕಾಗುತ್ತದೆ. ಇದಲ್ಲದೆ, ಇನ್ನೂ ಕೆಲವು ಆಹಾರದ ಬದಲಾವಣೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ನಾರು ಹೆಚ್ಚಿರುವ ಆಹಾರಗಳು, ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವುಳ್ಳವು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಿರುವ ಆಹಾರಗಳಿಂದ ಈ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸ್ವಾಸ್ಥ್ಯ ಪರಿಣಿತರು. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಾವು ದೇಹಕ್ಕೆ ನೀಡುವಂಥ ಆಹಾರಗಳು ಹಲವು ರೀತಿಯಲ್ಲಿ ಮಹತ್ವವನ್ನು ಪಡೆದಿವೆ. ಅದರಲ್ಲೂ ಬೆಳಗಿನ ಪೇಯಗಳು ಕೊಲೆಸ್ಟ್ರಾಲ್ ಕಡಿತ ಮಾಡುವುದಕ್ಕೆ ಸೂಕ್ತವಾದಂಥವು. ಎಂಥ ಪೇಯಗಳನ್ನು ಬೆಳಗಿನ ಹೊತ್ತು ದೇಹಕ್ಕೆ ನೀಡಿದರೆ (Health Tips Kannada) ಸೂಕ್ತ?
ಗ್ರೀನ್ ಟೀ
ಹಲವು ರೀತಿಯ ಉತ್ತಮ ಪಾಲಿಫೆನಾಲ್‌ಗಳನ್ನು ಹೊಂದಿರುವ ಗ್ರೀನ್ ಟೀ, ಉತ್ಕರ್ಷಣ ನಿರೋಧಕಗಳ ಖಜಾನೆಯಂತಿದೆ. ಅದರಲ್ಲೂ ಗ್ರೀನ್ ಟೀದಲ್ಲಿರುವ ಕೆಟಿಚಿನ್ ಅಂಶಗಳು ಕೊಲೆಸ್ಟ್ರಾಲ್‌ಗಳ ಜೊತೆ ಕೆಲಸ ಮಾಡುತ್ತವೆ. ಇದರಿಂದ ಆಹಾರದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ದೇಹ ಹೀರಿಕೊಳ್ಳುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಹಾಗಾಗಿ ನಿಯಮಿತವಾಗಿ ಗ್ರೀನ್ ಟೀ ಕುಡಿಯುವುದರಿಂದ ದೇಹದಲ್ಲಿ ಎಲ್‌ಡಿಎಲ್ ಮತ್ತು ಒಟ್ಟಾರೆ ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.
ಚಿಯಾ ಬೀಜ ಮತ್ತು ಸೋಯ್ ಹಾಲು
ಈ ಮಿಶ್ರಣ ಕೊಲೆಸ್ಟ್ರಾಲ್ ನಿರ್ವಹಣೆಯಲ್ಲಿ ಸಾಕಷ್ಟು ದಕ್ಷತೆಯನ್ನು ಪ್ರದರ್ಶಿಸಿದೆ. ನಾರು, ಪ್ರೊಟೀನ್ ಮತ್ತು ಒಮೇಗಾ ೩ ಕೊಬ್ಬಿನಾಮ್ಲಗಳ ಜೊತೆಗೆ ಹಲವು ಸೂಕ್ಷ್ಮ ಸತ್ವಗಳು ಇದರಿಂದ ದೇಹ ಸೇರುತ್ತವೆ. ದೇಹದಲ್ಲಿ ಎಚ್‌ಡಿಎಲ್ ಅಥವಾ ಉತ್ತಮ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆ ಚಿಯಾ ಬೀಜಗಳಿಗಿದೆ. ಎಲ್‌ಡಿಎಲ್ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಕ್ಷಮತೆ ಸೋಯಾ ಹಾಲಿಗಿದೆ. ಹಾಗಾಗಿ ಈ ಮಿಶ್ರಣವನ್ನೂ ಬೆಳಗಿನ ಪೇಯವಾಗಿ ಉಪಯೋಗಿಸಬಹುದು.
ಬೀಟ್‌ರೂಟ್ ಮತ್ತು ಕ್ಯಾರೆಟ್ ರಸ
ಹೆಚ್ಚಿನ ನೈಟ್ರೇಟ್ ಅಂಶವಿರುವ ಬೀಟ್‌ರೂಟ್ ರಸ ಕೊಲೆಸ್ಟ್ರಾಲ್ ತಗ್ಗಿಸುವ ಸಾಧ್ಯತೆಯನ್ನು ಹೊಂದಿದೆ. ಇನ್ನು, ಬೀಟಾ ಕ್ಯಾರೋಟಿನ್‌ನಂಥ ಕೆರೋಟಿನಾಯ್ಡ್‌ಗಳನ್ನು ಹೊಂದಿರುವ ಕ್ಯಾರೆಟ್ ಸಹ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಿದ್ದು, ಪೂರಕ ಪರಿಣಾಮವನ್ನು ದಾಖಲಿಸಿವೆ.
ಶುಂಠಿ, ನಿಂಬೆ ರಸ
ಬೆಳಗಿನ ಹೊತ್ತು ಬೆಚ್ಚಗಿನ ನೀರಿಗೆ ಕೆಲವು ಹನಿ ನಿಂಬೆ ರಸ ಮತ್ತು ಅರ್ಧ ಚಮಚ ಶುಂಠಿ ರಸ ಸೇರಿಸಿ ಕುಡಿಯುವುದು ಸಹ ಉತ್ತಮ ಪರಿಣಾಮಗಳನ್ನ ತೋರಿಸಬಲ್ಲದು. ಉತ್ಕರ್ಷಣ ನಿರೋಧಕಗಳನ್ನು ನಿಂಬೆ ರಸ ದೇಹಕ್ಕೆ ನೀಡಿದರೆ, ಟ್ರೈಗ್ಲಸರೈಡ್ ಮತ್ತು ಎಲ್‌ಡಿಎಲ್ ತಗ್ಗಿಸುವ ಗುಣವನ್ನು ಶುಂಠಿ ಹೊಂದಿದೆ. ಜೊತೆಗೆ, ಬೆಳಗಿನ ಹೊತ್ತು ಚೈತನ್ಯವನ್ನು ನೀಡಿ, ವ್ಯಾಯಾಮ ಮಾಡುವ ಉತ್ಸಾಹವನ್ನೂ ಹೆಚ್ಚಿಸುತ್ತದೆ ಈ ಪೇಯ.
ಟೊಮೇಟೊ ರಸ
ಟೊಮೆಟೊದ ಕೆಂಪು ಬಣ್ಣಕ್ಕೆ ಕಾರಣವಾಗುವುದು ಅದರಲ್ಲಿರುವ ಲೈಕೊಪೇನ್ ಅಂಶ. ಇದು ಎಲ್‌ಡಿಎಲ್ ಕಡಿಮೆ ಮಾಡುವ ಗುಣವನ್ನು ಢಾಳಾಗಿ ತೋರಿಸಿದೆ. ಅಧ್ಯಯನಗಳ ಪ್ರಕಾರ, ಅತಿ ಹೆಚ್ಚು ಪ್ರಮಾಣದ ಲೈಕೊಪೇನ್ ಅಂಶವು (ದಿನಕ್ಕೆ 25 ಎಂಜಿಗಿಂತ ಹೆಚ್ಚು), ಕಡಿಮೆ ತೀವ್ರತೆಯ ಸ್ಟ್ಯಾಟಿನ್‌ಗಳು (ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧಿಗಳು) ಬೀರುವ ಪರಿಣಾಮವನ್ನೇ ತೋರುತ್ತವೆ.
ಅರಿಶಿನ ಮತ್ತು ಸೋಯ್ ಹಾಲು
ಸೋಯ್ ಹಾಲಿನಲ್ಲಿ ಎಲ್‌ಡಿಎಲ್ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವ ಸಾಧ್ಯತೆಯಿದೆ. ಇನ್ನು ಅರಿಶಿನದಲ್ಲಿರುವ ಕರ್ಕುಮಿನ್ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಎಲ್‌ಡಿಎಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ತಗ್ಗಿಸುವ ಗುಣವನ್ನು ತೋರಿಸಿದೆ. ಹಾಗಾಗಿ ಪ್ರಾಣಿಜನ್ಯ ಹಾಲಿಗೆ ಅರಿಶಿನ ಸೇರಿಸುವ ಬದಲು, ಸೋಯಾ ಹಾಲಿಗೆ ಅರಿಶಿನ ಸೇರಿಸಿ ಕುಡಿಯುವುದು ಕೊಲೆಸ್ಟ್ರಾಲ್ ತಗ್ಗಿಸುವುದಕ್ಕೆ ಒಳ್ಳೆಯ ಉಪಾಯ.
ಇದನ್ನೂ ಓದಿ: Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…