Site icon Vistara News

Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!

stomach health

ಆಯುರ್ವೇದದಲ್ಲಿ ಒಂದು ಮಾತಿದೆ. ಬೆಳಗ್ಗೆ ಎದ್ದ ಕೂಡಲೇ ಶೌಚಾದಿ ಕ್ರಿಯೆಗಳು ಸಹಜವಾಗಿ ಆದರೆ, ಆ ವ್ಯಕ್ತಿಯ ಪಚನಶಕ್ತಿ ಸರಿಯಾಗಿದೆ (stomach health) ಹಾಗೂ ಆತ/ಕೆ ಆರೋಗ್ಯವಾಗಿದ್ದಾರೆ ಎಂದು. ಬೆಳಗಿನ ಶೌಚವೊಂದೇ ನಮ್ಮ ಆರೋಗ್ಯದ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ಹೇಳಿಬಿಡುತ್ತದೆ. ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜಿದಷ್ಟೇ ಸಹಜವಾಗಿ ನಿತ್ಯಕರ್ಮವನ್ನೂ ಮಾಡಿ ಮುಗಿಸಿದರೆ, ದೇಹ ಹಗುರ, ಲವಲವಿಕೆಯಿಂದ ಚುರುಕಾಗಿ ಇಡೀ ದಿನ ಚೈತನ್ಯದಾಯಕವಾಗಿರುತ್ತದೆ. ಇಂಥದ್ದೊಂದು ಸರಳ, ಸಹಜ ಕ್ರಿಯೆ ಬಹಳಷ್ಟು ಮಂದಿಗೆ ಅಷ್ಟು ಸರಳವಲ್ಲ. ಬೆಳಗ್ಗೆ ಎದ್ದ ಕೂಡಲೇ ಮಲವಿಸರ್ಜನೆ ಆದರೂ ಆಗಬಹುದು, ಆಗದೆಯೂ ಇರಬಹುದು. ದಿನದ ಎಷ್ಟೋ ಹೊತ್ತಿಗೆ ಅಥವಾ ಯಾವುದೋ ಒಂದು ಹೊತ್ತಿನಲ್ಲಿ ನಿತ್ಯವೂ ಆಗಬಹುದು, ಅಥವಾ ಇನ್ನೂ ಕೆಲವರಿಗೆ ಎದ್ದು ಸ್ವಲ್ಪ ಹೊತ್ತಿನ ನಂತರ ಬಿಸಿನೀರು ಕುಡಿದರಷ್ಟೇ ವಿಸರ್ಜನೆಯಾಗಬಹುದು. ಇನ್ನೂ ಕೆಲವರಿಗೆ ತಿಂಡಿ ತಿಂದರಷ್ಟೇ ಶೌಚ ರೆಡಿಯಾಗಬಹುದು. ಬಗೆಬಗೆಯ ರೂಢಿಗಳಿಗೆ ದೇಹ ಹೊಂದಿಕೊಂಡಿಬಿಟ್ಟಿರುತ್ತದೆ. ಆದರೂ, ಎದ್ದ ಕೂಡಲೇ ನಿತ್ಯಕರ್ಮಗಳು ಸರಾಗವಾಗಿ ಆಗಿಬಿಡುವುದು ಆರೋಗ್ಯದ ಲಕ್ಷಣ.

ಹಾಗಾದರೆ, ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯೇ? ಅಥವಾ, ಇದು ನನ್ನ ದೇಹಕ್ಕೆ ಸರಿ ಹೊಂದುವುದಿಲ್ಲ, ನನ್ನ ಅಭ್ಯಾಸ ಹೀಗೆಯೇ ಎನ್ನುತ್ತೀರಾ? ಆದರೆ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾ ಬಂದರೆ ಶೌಚಾದಿ ಕ್ರಿಯೆಗಳು ಸಹಜವಾಗಿ ಬೆಳಗ್ಗೆಯೇ ಆಗಿಬಿಡುತ್ತದೆ. ಅಂತಹ ಸರಳ ವಿಧಾನಗಳು ಯಾವುವು ಎಂಬುದನ್ನು ನೋಡೋಣ.

1. ಸರಿಯಾಗಿ ನೀರು ಕುಡಿಯಿರಿ: ದೇಹಕ್ಕೆ ನೀರು ಅತ್ಯಂತ ಅಗತ್ಯ. ನೀರು ಸರಿಯಾಗಿ ಕುಡಿಯದಿರುವುದಕ್ಕೂ ನಿಮ್ಮ ಶೌಚಕ್ಕೂ ಸಂಬಂಧವಿದೆ. ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀರು ದೇಹದ ಕಶ್ಮಲಗಳನ್ನು ಸುಲಭವಾಗಿ ಹೊರಕ್ಕೆ ಕಳಿಸಲು ಸಹಾಯ ಮಾಡುತ್ತದೆ. ಪಚನಕ್ರಿಯೆಯನ್ನೂ ಚುರುಕುಗೊಳಿಸುತ್ತದೆ.

2. ನಾರಿನಂಶವನ್ನು ಆಹಾರದಲ್ಲಿ ಸೇರಿಸಿ: ಸರಿಯಾಗಿ ಸಹಜವಾಗಿ ಮಲವಿಸರ್ಜನೆ ಆಗುತ್ತಿಲ್ಲ ಎಂದಾದರೆ ನೀವು ಸರಿಯಾಗಿ ನಾರಿನಂಶವನ್ನು ದೇಹಕ್ಕೆ ಪೂರೈಕೆ ಮಾಡುತ್ತಿಲ್ಲ ಎಂದರ್ಥ. ಹಾಗಾಗಿ ಆಹಾರದಲ್ಲಿ ನಾರಿನಂಶವನ್ನೂ ಸೇರಿಸಿ. ಧಾನ್ಯ, ಬೇಳೆಕಾಳು, ಸಾಕಷ್ಟು ಹಣ್ಣು ತರಕಾರಿಗಳಿರಲಿ.

3. ಸಮಯ ಪಾಲನೆ ಮಾಡಿ: ಆಹಾರ ಸೇವನೆಗೆ ಒಂದು ನಿಗದಿತ ಸಮಯವಿರಲಿ. ಬೆಳಗಿನ ಉಪಹಾರ, ಮಧ್ಯಾಹ್ನದೂಟ, ರಾತ್ರಿಯೂಟ ಎಲ್ಲವನ್ನೂ ಸರಿಯಾದ ಸಮಯಕ್ಕೆ ಶಿಸ್ತಿನಿಂದ ಮಾಡಿ. ದೇಹದ ಜೀರ್ಣಾಂಗ ವ್ಯವಸ್ಥೆ ಆ ಸಮಯಕ್ಕೆ ಹೊಂದಿಕೊಳ್ಳಲಿ. ಆಗ ಮಲವಿಸರ್ಜನೆಯೂ ಸಹಜವಾಗಿ ಆಗುತ್ತದೆ.

ಇದನ್ನೂ ಓದಿ: Health tips: ಮಾನಸಿಕ ಒತ್ತಡ, ಉದ್ವೇಗಕ್ಕೆ ಖಂಡಿತ ಬೇಕು ಈ ಹಣ್ಣುಗಳು!

4. ವ್ಯಾಯಾಮ ಮಾಡಿ: ದೇಹವನ್ನು ಚುರುಕಾಗಿಟ್ಟಿರಿ. ದಿನದ ಅರ್ಧ ಗಂಟೆಯಾದರೂ ವ್ಯಾಯಾಮಕ್ಕೆ ಮೀಸಲಿಡಿ. ನಡಿಗೆಯಾದರೂ ಸರಿ, ಯೋಗವಾದರೂ ಸರಿ, ಒಟ್ಟಿನಲ್ಲಿ ಕ್ರಿಯಾಶೀಲರಾಗಿರಿ.

5. ನೈಸರ್ಗಿಕ ಪ್ರಚೋದಕಗಳನ್ನು ಬಳಸಿ: ನೈಸರ್ಗಿಕವಾಗಿ ನಮ್ಮ ದೇಹದ ಪಚನವನ್ನು ಪ್ರಚೋದನೆಗೊಳಿಸುವ ಬಿಸಿನೀರು, ಶುಂಠಿ ಚಹಾ ಇತ್ಯಾದಿಗಳ ಸೇವನೆಯನ್ನೂ ಆಹಾರ ಸೇವನೆಯ ಸ್ವಲ್ಪ ಹೊತ್ತಿನ ನಂತರ ಮಾಡಬಹುದು. ಜೀರಿಗೆ ನೀರು ಕುಡಿಯಬಹುದು. ದೇಹದಲ್ಲಿ ಆಹಾರ ಪಚನವಾಗಲು ಸಹಾಯ ಮಾಡುವ ನೈಸರ್ಗಿಕ ವಿಧಾನಗಳ್ನು ಬಳಸಬಹುದು.

ಇವೆಲ್ಲವುಗಳ ಜೊತೆಗೆ ಶಿಸ್ತುಬದ್ಧ ಜೀವನಕ್ರಮ, ಉತ್ತಮ ಆರೋಗ್ಯಕರ ಆಹಾರ, ಮಾನಸಿಕ ಒತ್ತಡಗಳಿಂದ ದೂರವಿರುವುದು ಇತ್ಯಾದಿಗಳ ಮೇಲೆ ಗಮನ ಇಟ್ಟರೆ ಶೌಚ ಕಷ್ಟದ್ದೇನಲ್ಲ. ನೆನಪಿಡಿ, ಸರಿಯಾಗಿ ಶೌಚ ಆದಲ್ಲಿ ಆರೋಗ್ಯವು ಕೈಬಿಡುವುದಿಲ್ಲ.

ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕೋಲ್ಡ್ ವಾಟರ್ ಕುಡಿಯುವುದು ಅಪಾಯಕಾರಿಯೆ?

Exit mobile version