Site icon Vistara News

Health Tips: ದಿನಕ್ಕೊಂದು ಬಾಳೆಹಣ್ಣು: ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯ ಆಹಾರ!

banana

ಉತ್ತಮ ಆಹಾರ ಸೇವನೆಯ ಅಭ್ಯಾಸ ಯಾವಾಗಲೂ ಹಲವಾರು ಆರೋಗ್ಯ ಸಮಸ್ಯೆಗಳನ್ನೂ ಆರಂಭದಲ್ಲೇ ಸಮತೋಲನದತ್ತ ಕೊಂಡೊಯ್ಯುತ್ತದೆ. ಹಲವು ಸಮಸ್ಯೆಗಳು ನಮ್ಮ ಹತ್ತಿರ ಸುಳಿದಂತೆ ಮಾಡುವುದೂ ಕೂಡಾ ಉತ್ತಮ ಆಹಾರಾಭ್ಯಾಸಗಳೇ. ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವೆನಿಸವಂತಹ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಕೂಡಾ ಬದಲಾದ ಆಹಾರ ಪದ್ಧತಿಯ ಪರಿಣಾಮವೇ ಆಗಿದೆ. ಈ ಅಧಿಕ ರಕ್ತದದೊತ್ತಡದಿಂದಾಗಿ ಹೈಪರ್‌ ಟೆನ್ಶನ್‌ ಅಥವಾ ಒತ್ತಡದಂತಹ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಒಂದು ಸಮಸ್ಯೆಯಿಂದ ಇನ್ನೊಂದು ಸಮಸ್ಯೆಗೆ ದಾರಿಯಾಗುತ್ತದೆ. ಇವೆಲ್ಲವೂ ಬದಲಾದ ಲೈಫ್‌ಸ್ಟೈಲ್‌, ಆಹಾರ ಪದ್ಧತಿಯಿಂದಾದ ಸಮಸ್ಯೆಗಳೇ. ಹಾಗಾಗಿ ಮತ್ತೆ ನಮ್ಮ ಆಹಾರ ಪದ್ಧತಿಯತ್ತ ಒಮ್ಮೆ ಕಣ್ಣಾಡಿಸಬೇಕಾದ ಕಾಲ ಇದು. ಈ ಎಲ್ಲ ಸಮಸ್ಯೆಗಳಿಗೂ ಉತ್ತರ ಅಲ್ಲಿದೆ. ನಮ್ಮದೇ ನಿತ್ಯದ ಆಹಾರದಿಂದ ಕಾಣೆಯಾದ ಆಹಾರಗಳನ್ನು ಹುಡುಕಿ ಅವುಗಳ ಮಹತ್ವ ಅರಿಯುವುದೂ ಕೂಡಾ ಈಗ ಮುಖ್ಯವೇ ಆಗಿದೆ.

ಅಧಿಕ ರಕ್ತದೊತ್ತಡದಿಂದಾಗಿ (High BP) ಕಾಣಿಸಿಕೊಳ್ಳುವ ಹೈಪರ್‌ ಟೆನ್ಶನ್‌ ಅಥವಾ ಒತ್ತಡದಂತಹ ಕಾಯಿಲೆಗೆ ವೈದ್ಯರು ಕಡಿಮೆ ಕೊಬ್ಬಿನ ಆಹಾರಗಳನ್ನೇ ಸಲಹೆ ಮಾಡುತ್ತಾರೆ. ನಾರಿನಂಶ ಹೆಚ್ಚಿರುವ ಹಣ್ಣು ತರಕಾರಿಗಳು, ಪೊಟಾಶಿಯಂ ಹೆಚ್ಚಿರುವ ಹಣ್ಣುಗಳು ನಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲು ವೈದ್ಯರು ಹೇಳುತ್ತಾರೆ. ಬಾಳೆಹಣ್ಣು (Banana benefits) ಇಂತಹ ಸಂದರ್ಭ ನಮ್ಮ ಸಹಾಯಕ್ಕೆ ಬರುವ ಹಣ್ಣುಗಳ ಪೈಕಿ ಬಹುಮುಖ್ಯವಾದದ್ದು.

1. ಬಾಳೆಹಣ್ಣಿನಲ್ಲಿ ಅತ್ಯಂತ ಹೆಚ್ಚು ಪೋಷಕಾಂಶಗಳಿದ್ದು ಇದರಲ್ಲಿ ಕರಗಬಲ್ಲ ನಾರಿನಂಶವೂ ಹೆಚ್ಚಿದೆ. ಕೊಲೆಸ್ಟೆರಾಲ್‌ ಮಟ್ಟವನ್ನು ಕಡಿಮೆಗೊಳಿಸಬಲ್ಲ, ಹೃದಯದ ಸಮಸ್ಯೆಯ ಅಪಾಯವನ್ನೂ ತಗ್ಗಿಸಬಲ್ಲ, ಅಧಿಕ ರಕ್ತದೊತ್ತಡವನ್ನು  ಸಮತೋಲನಕ್ಕೆ ತರಬಲ್ಲ  ಗುಣಗಳು ಬಾಳೆಹಣ್ಣಿನಲ್ಲಿವೆ.

2. ಬಾಳೆಹಣ್ಣಿನಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: Food Tips: ಮೊಳಕೆ ಕಾಳುಗಳನ್ನು ಕೆಡದಂತೆ ಹೆಚ್ಚು ಕಾಲ ಇಡಲು ಇಲ್ಲಿವೆ ಟಿಪ್ಸ್‌!

3. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಅಧಿಕ ಪ್ರಮಾಣದಲ್ಲಿರುವುದರಿಂದ ಹೈಪರ್‌ ಟೆನ್ಶನ್‌ ಸಮಸ್ಯೆಯನ್ನು ಹೊಂದಿದ ಮಂದಿಗೆ ಅತ್ಯಂತ ಅಗತ್ಯವಾಗಿ ಬೇಕಾದ ಹಣ್ಣಾಗಿದೆ. ಇದು ಅಧಿಕ ರಕ್ತದೊತ್ತಡ ಸಮಸ್ಯೆಗೂ ಉತ್ತಮ ಸಹಾಯ ಮಾಡುತ್ತದೆ. ಒಂದು ಸಾಮಾನ್ಯ ಗಾತ್ರದ ಬಾಳೆಹಣ್ಣು ೪೫೦ ಮಿಲಿಗ್ರಾಂನಷ್ಟು ಪೊಟಾಶಿಯಂ ಅನ್ನು ದೇಹಕ್ಕೆ ನೀಡುತ್ತದೆ.

4. ಬಾಳೆಹಣ್ಣಿನ ಇನ್ನೊಂದು ಉತ್ತಮ ಗುಣ ಎಂದರೆ ಇದರಲ್ಲಿ ಕಡಿಮೆ ಸೋಡಿಯಂ ಇರುವುದು. ರಕ್ತದೊತ್ತಡದ ಸಮಸ್ಯೆಯಿರುವ ಮಂದಿಗೆ ಒತ್ತಡವನ್ನು ಸಮತೋಲನಗೊಳಿಸಲು ಇದು ಉತ್ತಮ ಹಣ್ಣು. ಪೊಟಾಶಿಯಂ ಹೆಚ್ಚಿರುವ ಆಹಾರ ಸೇವನೆ ಮಾಡಿದಾಗ ನಮ್ಮ ದೇಹದಿಂದ ಹೆಚ್ಚು ಸೋಡಿಯಂ ಅಂಶ ಮೂತ್ರದ ಮೂಲಕ ಹೋಗುತ್ತದೆ. ಇದು ಅಧಿಕ ರಕ್ತದೊತ್ತಡದ ಮಂದಿಗೆ ಸಹಾಯವಾಗುತ್ತದೆ.

ಹಾಗಾದರೆ ಬಾಳೆಹಣ್ಣನ್ನು ಹೇಗೆ ತಿನ್ನಬಹುದು ಎಂಬ ಪ್ರಶ್ನೆ ಈಗ ನಿಮ್ಮದು. ದಿನಕ್ಕೆ ಒಂದು ಸಾಮಾನ್ಯ ಗಾತ್ರದ ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದು. ಇದರಿಂದ ಹೆಚ್ಚು ಸಮಸ್ಯೆಗಳೇನೂ ಆಗದು. ಇದು ಅಧಿಕ ರಕ್ತದೊತ್ತಡವಿರುವ ಮಂದಿಗೆ ಸಹಾಯವಾಗುತ್ತದೆ. ಬೆಳಗಿನ ಉಪಹಾರದ ಜೊತೆ, ಅಥವಾ ಮಧ್ಯಾಹ್ನ ಊಟಕ್ಕೂ ಮೊದಲಿನ ಸ್ನ್ಯಾಕ್‌ ಆಗಿ ಬಾಳೆಹಣ್ಣನ್ನು ತಿನ್ನಬಹುದು. ಇದಲ್ಲದಿದ್ದರೆ, ಬಾಳೆಹಣ್ಣಿನ ಸ್ಮೂದಿ ಮಾಡಿಯೂ ಕುಡಿಯಬಹುದು. ಆದರೆ, ಮದುಮೇಹದಂತಹ ಸಮಸ್ಯೆ ಇರುವ ಮಂದಿ ಬಾಳೆಹಣ್ಣು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇದನ್ನೂ ಓದಿ: Food Tips: ಗರಿಗರಿ ಫ್ರೆಂಚ್‌ ಫ್ರೈಸ್‌ ಮನೆಯಲ್ಲೇ ಮಾಡಲು ಇಲ್ಲಿವೆ ಪಂಚಸೂತ್ರಗಳು!

Exit mobile version