Site icon Vistara News

Health tips: ಋತುಚಕ್ರದ ಹೊಟ್ಟೆಯುಬ್ಬರಕ್ಕೆ ಮಾಡಿ ಕುಡಿಯಿರಿ ಈ ಮ್ಯಾಜಿಕ್‌ ಡ್ರಿಂಕ್‌!

drinking water

ಪ್ರತಿ ತಿಂಗಳ ಮುಟ್ಟಿನ ನೋವು (Menstruation) ಯಾತನಾಮಯ. ಎಲ್ಲರಿಗೂ ಒಂದೇ ತೆರನಾಗಿ ಆಗಬೇಕೆಂದೇನೂ ಇಲ್ಲವಾದರೂ, ಬಹುತೇಕರಿಗೆ ಋತುಚಕ್ರದ ದಿನಗಳೆಂದರೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹೊಟ್ಟೆಯುಬ್ಬರ, ಕಾಲು ನೋವು, ಸೊಂಟ ನೋವು, ಮಾಂಸಖಂಡಗಳ ಸೆಳೆತ, ನರಸೆಳೆತ, ಶಕ್ತಿಹೀನತೆ, ಉದಾಸೀನತೆ, ಕೆಟ್ಟ ಮೂಡು, ವಿಪರೀತ ಸಿಟ್ಟು ಬರುವುದು ಇತ್ಯಾದಿ ಇತ್ಯಾದಿ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಅತಿಯಾದ ರಕ್ತಸ್ರಾವ ಕೆಲವರ ಸಮಸ್ಯೆಯಾದರೆ, ಇನ್ನೂ ಕೆಲವರದ್ದು ಹೊಟ್ಟೆನೋವಿನ ಸಮಸ್ಯೆ. ಇಂತಹ ಸಮಸ್ಯೆಗಳಿಗೆ ಕೊಂಚ ಆರಾಮದಾಯಕವೆನಿಸುವ ಸರಳ ಉಪಾಯವೊಂದಿದೆ. ಮನೆಯಲ್ಲೇ ನಾವು ನಿತ್ಯ ಪಾಲಿಸಬಹುದಾದ ಸರಳ ಉಪಾಯ. ಅದೂ ಕೇವಲ ನೀರಿನಿಂದ!

ಹೌದು. ಋತುಚಕ್ರದ ಸಂಬಂಧ ಆಗುವ ಹೊಟ್ಟೆಯುಬ್ಬರ, ಮಾಂಸಖಂಡಗಳ ಸೆಳೆತ ಇತ್ಯಾದಿಗಳಿಗೆಲ್ಲ ಕೊಂಚ ಆರಾಮವೆನಿಸುವ ಮದ್ದೊಂದಿದೆ. ಮನೆಯಲ್ಲೇ ಸುಲಭವಾಗಿ ನಿಮಿಷದಲ್ಲಿ ಮಾಡಬಹುದಾದ ಈ ನೀರು ಕೇವಲ ಋತುಚಕ್ರದ ಹೊಟ್ಟೆನೋವಿಗೆ ಮಾತ್ರ ಮುಕ್ತಿ ನೀಡುವುದಿಲ್ಲ, ಬದಲಾಗಿ ಹೊಟ್ಟೆಯ ಬೊಜ್ಜು ಕರಗಿಸಿ ತೂಕ ಇಳಿಸಲೂ ಕೂಡಾ ಸಹಾಯ ಮಾಡುತ್ತದೆ.

ಜೀರಿಗೆ, ಓಂಕಾಳು ಹಾಗೂ ಮೆಂತ್ಯಕಾಳಿನ ನೀರನ್ನು ನಿತ್ಯವೂ ಕುಡಿಯುವುದರಿಂದ ದೇಹದ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ಬದಲಾವಣೆ ಕಾಣಬಹುದಂತೆ,

ನಿತ್ಯವೂ ಜೀರಿಗೆಯ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ನಿಧಾನವಾಗಿ ಚುರುಕಾಗುತ್ತದೆಯಂತೆ. ಒಳ್ಳೆಯ ಜೀರ್ಣವ್ಯವಸ್ಥೆಯಿದ್ದರೆ ನಮ್ಮ ಹತ್ತು ಹಲವು ಸಣ್ಣಸಣ್ಣ ಸಮಸ್ಯೆಗಳು ಸರಿಯಾಗುವುದರೊಂದಿಗೆ ಹೊಟ್ಟೆಯುಬ್ಬರದಂತಹ ಆಗಾಗ ಕಾಡುವ ಸಮಸ್ಯೆಗಳೂ ದೂರಾಗುತ್ತವೆ. ಜೀರಿಗೆಯಲ್ಲಿರುವ ಥೈಮಾಲ್‌ ಎಂಬ ಅಂಶವು ಗ್ಯಾಸ್ಟ್ರಿಕ್‌ ಗ್ರಂಥಿಗಳಿಗೆ ಚುರುಕು ಮುಟ್ಟಿಸಿ ಪಚನಕ್ರಿಯೆಯನ್ನು ವೇಗವಾಗಿಸುತ್ತದೆ. ಮುಟ್ಟಿನ ಸಮಯದ ಹೊಟ್ಟೆಯುಬ್ಬರವನ್ನೂ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ದೇಹದಲ್ಲಿನ ವಿಷಕಾರಿ ಕಲ್ಮಶಗಳನ್ನು ಹೊರಕ್ಕೆ ಹಾಕಿ, ಕೆಟ್ಟ ಕೊಲೆಸ್ಟೆರಾಲ್‌ ಕರಗಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: Period problems | ಚಳಿಗಾಲದಲ್ಲೇ ಮುಟ್ಟಿನ ತೊಂದರೆಗಳು ಉಲ್ಬಣಿಸುವುದ್ಯಾಕೆ? ಇಲ್ಲಿವೆ ಪರಿಹಾರಗಳು!

ಜೀರಿಗೆ ಹಾಗೂ ಓಂಕಾಳಿನ ನೀರು ನಿತ್ಯವೂ ಕುಡಿಯುವುದರಿಂದ ಕೇವಲ ಇಷ್ಟೇ ಉಪಯೋಗಗಳಲ್ಲ. ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಹಾಗಾದರೆ ಬನ್ನಿ, ಈ ಬೆಳಗಿನ ಡಿಟಾಕ್ಸ್‌ ಫೇಯವನ್ನು ಮಾಡುವುದು ಹೇಗೆ ಎಂದು ನೋಡೋಣ.

ಕಾಲು ಚಮಚ ಜೀರಿಗೆ, ಕಾಲು ಚಮಚ ಮೆಂತ್ಯಕಾಳು ಹಾಗೂ ಕಾಲು ಚಮಚ ಓಂಕಾಳುನ್ನು ನೀರಿಗೆ ಹಾಕಿ ರಾತ್ರಿ ನೆನೆಸಿಡಿ. ರಾತ್ರಿ ಪೂರ ಅವು ನೆನೆಯಲಿ. ನಂತರ ಬೆಳಗ್ಗೆ ಎದ್ದು ಇದನ್ನು ಸೋಸಿಕೊಳ್ಳಿ. ನಂತರ ಈ ನೀರನ್ನು ಕುಡಿಯಿರಿ. ದಿನವೂ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಸಾಕಷ್ಟು ಬದಲಾವಣೆ ನಿಮಗೆ ಕಾಣಬಹುದು. ನೀವು ಚಹಾ ಪ್ರೇಮಿಗಳಾಗಿದ್ದರೆ, ಇದೇ ಮೂರಿ ವಸ್ತುಗಳನ್ನು ಹಾಕಿ ಚಹಾ ಮಾಡಿಕೊಳ್ಳಬಹುದು. ಜೀರಿಗೆ, ಮೆಂತ್ಯಕಾಳು  ಹಾಗೂ ಓಂಕಾಳನ್ನು ನೀರಿಗೆ ಹಾಕಿ ಕುದಿಸಿ ಸೋಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆಹಣ್ಣು ಹಿಂಡಿ ಕುಡಿಯಬಹುದು. ಇದಕ್ಕೆ ಒಂದು ಚಮಚ ಜೇನುತುಪ್ಪ ಅಥವಾ ಒಂದು ಚಮಚ ಬೆಲ್ಲದ ಹುಡಿಯನ್ನು ಹಾಕಿ ರುಚಿ ಹೆಚ್ಚಿಸಬಹುದು. ಆ ಮೂಲಕ ಋತುಚಕ್ರದ ದಿನಗಳಲ್ಲಿ ಹೊಟ್ಟೆಯುಬ್ಬರಕ್ಕೆ ಹಾಗೂ ಹೊಟ್ಟೆಯಲ್ಲಿರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Health Tips: ಪ್ರತಿ ಮಹಿಳೆಯನ್ನೂ ಮೌನವಾಗಿ ಕಾಡುವ ಆರೋಗ್ಯ ಸಮಸ್ಯೆಗಳಿವು! ನಿರ್ಲಕ್ಷ್ಯ ಬೇಡ

Exit mobile version