ನಿತ್ಯವೂ ನಾವು ಕಚೇರಿಗೆ ಹೋಗುತ್ತೇವೆ. ಕಚೇರಿಯಲ್ಲಿ ಏಳೆಂಟು ಗಂಟೆಗಳ ಕಾಲ ಎಸಿ ರೂಮಿನೊಳಗೆ ಕೂರುತ್ತೇವೆ. ಹೊರ ಬಂದಾಗ ಸಹಜವಾಗಿಯೇ ನಮ್ಮ ದೇಹ ಕೋಣೆಯೊಳಗಿನ ಉಷ್ಣತೆಗೆ ಹೊಂದಿಕೊಂಡಾಗಿರುವುದರಿಂದ, ಹೊರಗಿನ ಸಾಮಾನ್ಯ ಉಷ್ಣತೆಗೆ ಹೊಂದಿಕೊಳ್ಳಲೂ ಕೂಡಾ ಪರದಾಡುತ್ತೇವೆ. ಸೆಖೆಯೆನಿಸುತ್ತದೆ. ಬೆವರುತ್ತೇವೆ. ಮನೆಯಲ್ಲಿಯೂ ಕೂಡಾ, ಹೊರಗಿನ ವಾತಾವರಣ ಹೇಗೆಯೇ ಇರಲಿ ಬಹುತೇಕರಿಗೆ ಮೂರೂ ಹೊತ್ತು ಎಸಿ ಹಾಕಿ ಕೂರುವುದು ಅಭ್ಯಾಸವಾಗಿಬಿಟ್ಟಿರುತ್ತದೆ. ಏರ್ ಕಂಡೀಷನರ್ (Air conditioner) ಇಲ್ಲದ ಜೀವನವೇ ಕಷ್ಟ ಎಂಬ ಸ್ಥಿತಿ ಕೆಲವರದ್ದು. ಯಾಕೆ ಹೀಗಾಗಿದ್ದೇವೆ? ವಾತಾವರಣದ ಸಹಜ ಉಷ್ಣತೆಯಲ್ಲಿ ಅದರ ಸಹಜತೆಯನ್ನು ಅನುಭವಿಸಲು ದಿನದಿಂದ ದಿನಕ್ಕೆ ಕಷ್ಟವಾಗುತ್ತಿರುವುದು ಯಾಕೆ? ನಮ್ಮ ದೇಹವನ್ನು ಇನ್ನಷ್ಟು ಮತ್ತಷ್ಟು ನಾಜೂಕು ಮಾಡುತ್ತಿದ್ದೇವಾ ಎಂಬಿತ್ಯಾದಿ ಪ್ರಶ್ನೆಗಳು ಖಂಡಿತವಾಗಿಯೂ ಇಲ್ಲಿ ಎದ್ದೇ ಎಳುತ್ತದೆ. ಹಾಗಾದರೆ, ಬನ್ನಿ, ನಿತ್ಯವೂ ಗಂಟೆಗಟ್ಟಲೆ ಎಸಿ ರೂಮಿನೊಳಗೆ (sitting in AC room) ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡವರಿಗೆ ಆರೋಗ್ಯದ ಮೇಲೆ (health advice) ಯಾವೆಲ್ಲ ವ್ಯತಿರಿಕ್ತ ಪರಿಣಾಮಗಳು ಬೀರಬಹುದು ಎಂಬುದನ್ನು ನೋಡೋಣ.
1. ಒಣ ತ್ವಚೆಯ ಸಮಸ್ಯೆಯಿರುವ ಮಂದಿಗೆ ಏರ್ ಕಂಡೀಶನರ್ ಚರ್ಮಕ್ಕೆ ಒಳ್ಳೆಯದು ಮಾಡುವುದಿಲ್ಲ. ಚರ್ಮದಲ್ಲಿರುವ ಸಾಮಾನ್ಯ ನೀರಿನಂಶವನ್ನು ಅಂದರೆ ಚರ್ಮಕ್ಕೆ ಅಗತ್ಯವಿರುವ ಮಾಯ್‌ಶ್ಚರ್ ಅನ್ನು ಕಡಿಮೆ ಮಾಡುವ ಮೂಲಕ ಚರ್ಮವನ್ನು ಇನ್ನಷ್ಟು ಒಣವನ್ನಾಗಿಸುತ್ತದೆ. ಹೀಗಾಗಿ ಒಣ ಚರ್ಮದ ಸಮಸ್ಯೆಯಿರುವ ಮಂದಿ ಸಾಕಷ್ಟು ಮಾಯ್‌ಶ್ಚರೈಸರ್ ಥವಾ ಎಣ್ಣೆಯನ್ನು ಹಚ್ಚಿಕೊಂಡೇ ಎಸಿಯೊಳಗೆ ಕೂರಬೇಕು, ಇಲ್ಲದಿದ್ದರೆ, ಚಳಿಗಾಲದಲ್ಲಿ ಬಿರುಕು ಬಿಟ್ಟ ಹಾಗೆ ಚರ್ಮ ಒಡೆದುಕೊಂಡು, ತುಟಿಗಳು ಬಿರುಕುಬಿರುಕಾಗಿ ಚರ್ಮದ ಸಮಸ್ಯೆಗಳು ಎದುರಾಗಬಹುದು. ಇಲ್ಲಿ ಚರ್ಮದ ಹೆಚ್ಚು ಕಾಳಜಿ ಮಾಡಬೇಕಾಗುತ್ತದೆ.
2. ಎಸಿ ರೂಮಲ್ಲಿ ಸದಾ ಕೂರುತ್ತಾ, ತಂಪಿನಿಂದ ಒಮ್ಮೆಲೆ ಬಿಸಿಲಿಗೆ ಹೋಗಬೇಕಾಗಿ ಬಂದಾಗ ತಲೆನೋವು ಕಾಣಿಸಿಕೊಳ್ಳಬಹುದು. ಒಳಗಿನ ಉಷ್ಣತೆ ಹಾಗೂ ಹೊರಗಿನ ಉಷ್ಣತೆಗೆ ಅಜಗಜಾಂತರ ವ್ಯತ್ಯಾಸ ಇದ್ದಾಗ ಇಂಥ ತೊಂದರೆಗಳು ಸಾಮಾನ್ಯ.
3. ಸಿಕ್ ಬಿಲ್ಡಿಂಗ್ ಸಿಂಡ್ರೋಮ್ ಕೂಡಾ ಬರಬಹುದು. ಈ ಸಮಸ್ಯೆ ಏನೆಂದರೆ, ಎಸಿ ರೂಮಿನ ಒಳಗಡೆ ಸರಿಯಾದ ವಾಯು ಸಂಚಾರ ಇಲ್ಲದೆ, ಗಾಳಿಯ ಗುಣಮಟ್ಟ್ ಸರಿ ಇಲ್ಲದೆ ಇರುವಾಗ ಉಂಟಾಗುವ ಸಮಸ್ಯೆ.
4. ಎಸಿಯಿಂದಾಗುವ ಬಹುಮುಖ್ಯ ಸಮಸ್ಯೆ ಎಂದರೆ, ಕೋಣೆಯೊಳಗಿನ ಗಾಳಿಯ ಗುಣಮಟ್ಟದ್ದು. ಎಸಿ ಕೋಣೆಯೊಳಗೆ ಬ್ಯಾಕ್ಟೀರಿಯಾ, ವೈರಸ್, ಅಲರ್ಜಿಕಾರಕ ಪೋಲನ್ ಅಥವಾ ಧೂಳಿನ ಕಣಗಳು ಇತ್ಯಾದಿ ಏನೇ ಕಲುಷಿತ ಗಾಳಿಯೂ ಹೆಚ್ಚು ಹೊತ್ತು ಕೋಣೆಯ ಒಳಗೆ ಸಂಚರಿಸುತ್ತಿರುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೋಗಗಳು ಅಥವಾ, ಗಾಳಿಯಿಂದ ಬರುವ ರೋಗಗಳ ಸಾಧ್ಯತೆ ಹೆಚ್ಚು. ಪೋಲನ್ ಅಥವಾ ಧೂಳಿನ ಅಲರ್ಜಿ ಹೊಂದಿರುವ ಮಂದಿಗೂ ಕೂಡಾ ಎಸಿಯಲ್ಲಿ ಸಮಸ್ಯೆ ಹೆಚ್ಚಾಗಬಹುದು.
5. ಎಸಿ ಕೋಣೆಯಲ್ಲಿ ನಿರಂತರವಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯೂ ಕೂಡಾ ಕಡಿಮೆಯಾಗುತ್ತದೆ. ಎಸಿ ಹವಾಮಾನವೇ ಅಭ್ಯಾಸವಾಗುವುದರಿಂದ ದೇಹ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತದೆ. ಇದರಿಂದ ಸುಲಭವಾಗಿ ರೋಗಗಳಿಗೆ ತುತ್ತಾಗಬಹುದು. ದೇಹ ವಾತಾವರಣದಲ್ಲಿರುವ ಸಹಜವಾದ ಸಾಮಾನ್ಯ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನೂ ಕಳೆದುಕೊಳ್ಳಬಹುದು.
6. ಕೆಲವೊಮ್ಮೆ ಎಸಿ ಕೋಣೆಯನ್ನು ತೀರಾ ಚಳಿಯನ್ನಾಗಿ ಮಾಡುವುದರಿಂದ ರಾತ್ರಿ ಮಲಗುವ ಸಂದರ್ಭ ಕೆಲವರಿಗೆಇದು ಹೆಚ್ಚು ಚಳಿಯೆನಿಸಬಹುದು. ಇನ್ನೂ ಕೆಲವರಿಗೆ ಗಾಳಿಯ ಸಂಚಾರ ಇಲ್ಲವೆಂದೆನಿಸಿ ಉಸಿರುಕಟ್ಟಿದಂತಾಗಬಹುದು. ಮುಖ್ಯವಾಗಿ ಅಸ್ತಮಾ ಅಥವಾ ಉಸಿರಾಟ ಸಂಬಂಧಿ ಸಮಸ್ಯೆಗಳು ಮೊದಲೇ ಇದ್ದವರಿಗೆ ಎಸಿಯೊಳಗಿನ ಜೀವನ ಯಾತನಾಮಯವಾಗಬಹುದು.
ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!
7. ಕೆಲವರಿಗೆ ಕಣ್ಣಿನ ತೊಂದರೆಯೂ ಇದರಿಂದ ಉಂಟಾಗಬಹುದು. ಕಣ್ಣು ಒಣಗುವುದು, ಕಣ್ಣಿನೊಳಗೆ ತುರಿಕೆ ಇತ್ಯಾದಿ ಸಮಸ್ಯೆಗಳೂ ಉಂಟಾಗಬಹುದು.
೮8. ಏರ್ ಕಂಡೀಷನರ್‌ಗಳು ಕೇವಲ ಚರ್ಮವನ್ನಷ್ಟೇ ಅಲ್ಲ, ಮೂಗಿನ ಹೊಳ್ಳೆಗಳನ್ನೂ ಒಣಗಿಸುತ್ತವೆ. ಇದರಿಂದ ಮೂಗಿನ ಒಳಭಾಗದ ಚರ್ಮ ಬಿರುಕಾಗಿ ರಕ್ತ ಒಸರುವಂಥ ಸಮಸ್ಯೆಗಳೂ, ಉಸಿರಾಟದ ಸಮಸ್ಯೆಗಳೂ ಬರಬಹುದು.
9. ಎಸಿಯನ್ನು ಅತಿಯಾಗಿ ಬಳಸುಮ ಮೂಲಕ ನೀವು ಜಾಗತಿಕ ತಾಪಮಾನದ ಏರಿಕೆಗೆ ಪರೋಕ್ಷವಾಗಿ ಸಹಾಯ ಮಾಡಿದಂತಾಗುತ್ತದೆ. ಅಧಿಕವಾಗಿ ಶಕ್ತಿಯ ಬಳಕೆಯಿಂದ ವಾತಾವರಣಕ್ಕೇ ಇದು ಮಾರಕವೂ ಹೌದು.
ಇದನ್ನೂ ಓದಿ: Heath Tips For Weight Loss: ತೂಕ ಇಳಿಸುವ ಪ್ರಯತ್ನವೇ? ಹೀಗೆ ಮಾಡಿ