Site icon Vistara News

Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ?

Young Woman Sleeping Soundly

ಪ್ರಾಣಿ ಪಕ್ಷಿಗಳಲ್ಲಿ ನಿಶಾಚರಿಗಳನ್ನು ಕೇಳಿದ್ದೀರಿ, ನೋಡಿದ್ದೀರಿ. ಆದರೆ, ಮನುಷ್ಯ ಮಾತ್ರ ಬೆಳಗ್ಗೆ ಕೆಲಸ ಮಾಡಿ, ರಾತ್ರಿ ನಿದ್ದೆ ಮಾಡುವ ದೇಹಪ್ರಕೃತಿಯನ್ನು ಹೊಂದಿದ್ದಾನೆ ಎಂಬುದು ಸರ್ವವಿದಿತ. ಮನುಷ್ಯ, ತನ್ನ ಉದ್ಯೋಗ ಹಾಗೂ ಇತರ ಕೆಲವು ಅಗತ್ಯಗಳಿಗೆ ಅನುಸಾರವಾಗಿ (health tips) ರಾತ್ರಿ ಎಚ್ಚರವಿದ್ದು ಬೆಳಗ್ಗೆ ಮಲಗುವ ರೂಢಿ (sleeping habit) ಮಾಡಿಕೊಂಡರೂ, ನೈಸರ್ಗಿಕವಾಗಿ ಆತನ ದೇಹ ಆರೋಗ್ಯವಾಗಿರಬೇಕಾದರೆ ಆತ ರಾತ್ರಿ ಏಳೆಂಟು ಗಂಟೆ ನಿದ್ದೆ ಮಾಡುವುದು ಅತ್ಯಂತ ಒಳ್ಳೆಯದು. ಮಾನವನ ದೇಹ ಪ್ರಕೃತಿಯೇ ಹಾಗಿದೆ.

ಆದರೂ, ಕೆಲವು ಮಂದಿ ಹೇಳುವುದನ್ನು ನೀವು ಕೇಳಿರಬಹುದು. ಪರೀಕ್ಷೆಗೆ ಓದಲು, ಅಧ್ಯಯನ ಮಾಡಲು, ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಲು ತಡರಾತ್ರಿಯವರೆಗೆ ಎದ್ದಿರುವುದು ಆರಾಮದಾಯಕವಾಗಿರುತ್ತದೆ ಎಂಬುದು ಅವರ ವಾದ. ಆದರೆ, ಇನ್ನೂ ಕೆಲವು ಮಂದಿಗೆ ರಾತ್ರಿ ಬೇಗನೆ ನಿದ್ದೆ ಬಂದು, ಬೆಳಗ್ಗೆ ಬೇಗನೆದ್ದು ಓದುವ, ಬರೆಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಅಂತಹ ಮಂದಿಗೆ ಬೆಳಗ್ಗೆ ಓದಿದರೇನೇ ಚೆನ್ನಾಗಿ ನೆನಪಿನಲ್ಲುಳಿಯುವುದು. ಆದರೆ, ರಾತ್ರಿ ಹೆಚ್ಚು ಕಾಲ ಕೂರಬಲ್ಲ ಮಂದಿಗೆ ಬೆಳಗ್ಗೆ ಏಳಲು ಸಾಧ್ಯವಾಗದು ಎಂಬ ಮನಸ್ಥಿತಿಗೆ ಒಗ್ಗಿರುತ್ತಾರೆ. ಹಾಗಾದರೆ, ಯಾವುದು ಒಳ್ಳೆಯದು ಎಂಬ ಬಗ್ಗೆ ಹಲವರಿಗೆ ಜಿಜ್ಞಾಸೆಯಿದೆ. ಕೆಲವರು, ರಾತ್ರಿ ಓದಲು ಕೂರುವುದು ಒಳ್ಳೆಯದಲ್ಲ ಎಂದರೆ, ಇನ್ನೂ ಕೆಲವರು ಯಾವ ಸಮಯಕ್ಕೆ ಸುಲಭವೋ ಆರಾಮದಾಯಕವೋ ಅದನ್ನೇ ಮಾಡಬೇಕು ಎನ್ನುವವರು. ಹಾಗಾದರೆ ಬನ್ನಿ, ರಾತ್ರಿ ಅಥವಾ ಬೆಳಗ್ಗಿನ ಓದು-ಬರಹ, ಈ ಗೊಂದಲಗಳ ಮೇಲೆ ಕೊಂಚ ಬೆಳಕು ಚೆಲ್ಲೋಣ.

ಕೆಲವರಿಗೆ ರಾತ್ರಿ ಓದುವುದು ಲಾಭದಾಯಕವಾಗಿ ತೋರಬಹುದು. ಕಾರಣ ಇಷ್ಟೇ. ರಾತ್ರಿಯ ನಿಶ್ಶಬ್ಧ, ಮೌನವು ಏಕಾಗ್ರತೆಯನ್ನು ಹೆಚ್ಚಿಸಿ, ಓದುವ ಕಡೆಗಿನ ಗಮನ ಹೆಚ್ಚುತ್ತದೆ. ಇದನ್ನೇ ಬೆಳಗ್ಗೆ ಏಳುವ ಮಂದಿಯ ವಾದಕ್ಕೂ ಅನ್ವಯಿಸಬಹುದು. ವಿಷಯದ ಮೇಲಿನ ಕೇಂದ್ರೀಕರಣ ಹೆಚ್ಚು ಸಾಧ್ಯವಾಗುತ್ತದೆ. ಎಲ್ಲರೂ ಮಲಗಿರುವ ಹೊತ್ತಾದ ಕಾರಣ, ಸಿಗುವ ಸಮಯವೆಲ್ಲವನ್ನೂ ಯಾವುದೇ ಚಂಚಲತೆಯಿಲ್ಲದೆ ಬಳಸಿಕೊಳ್ಳಲು ನೆರವಾಗುತ್ತದೆ. ಓದಿದ್ದು, ಕಲಿತಿದ್ದು ಹೆಚ್ಚು ಜ್ಞಾಪಕದಲ್ಲಿ ಉಳಿಯುತ್ತದೆ, ಜೊತೆಗೆ ಇಂಥ ಶಾಂತವಾದ ಸಮಯದಲ್ಲಿ ಓದಿ, ಬರೆಯುವುದರ ಜೊತೆಗೆ ಚಿಂತನೆಗೂ ಸರಿಯಾಗಿ ಅವಕಾಶ ಸಿಗುತ್ತದೆ ಎಂಬುದು ರಾತ್ರಿ ಕೂತು ಓದುವ, ಬರೆಯುವ ಅಥವಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ವಾದ. ಇದು ನಿಜವೂ ಹೌದು.

ಇದರಿಂದಾಗುವ ಸಮಸ್ಯೆ ಎಂದರೆ, ರಾತ್ರಿ ಹೆಚ್ಚು ಹೊತ್ತು ಕೂರುವುದರಿಂದ ನಿದ್ದೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ನಿದ್ದೆ ಕಡಿಮೆಯಾಗುವುದರಿಂದ ಖಂಡಿತವಾಗಿಯೂ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಇದರಿಂದ ಜ್ಞಾಪಕಶಕ್ತಿಯ ಮೇಲೆ ಪರಿಣಾಮ ಹೆಚ್ಚು. ಸರಿಯಾಗಿ ನಿದ್ದೆ ಆಗದಿದ್ದರೆ, ಮಿದುಳು ಪಡೆದುಕೊಂಡ ಜ್ಞಾನವನ್ನು, ಮಾಹಿತಿಯನ್ನು ಸರಿಯಾಗಿ ಶೇಖರಿಸಿಡಲು ಸಾಧಯವಾಗದೆ, ಅದು ಮರೆತುಹೋಗುವ ಸಂದರ್ಭ ಹೆಚ್ಚು ಎನ್ನುತ್ತವೆ ಸಂಶೋಧನೆಗಳು. ಹಾಗಾಗಿಯೇ, ಬೆಳಗಿನ ಹೊತ್ತಿನ ಓದು ಯಾವಾಗಲೂ ಒಳ್ಳೆಯದು ಎಂಬ ವಾದ ಹಿಂದಿನಿಂದಲೂ ಇದೆ.

ರಾತ್ರಿ ಹೆಚ್ಚು ಹೊತ್ತು ಕೂತು ಓದಿ ಬರೆಯುವುದು ಬಹಳ ಜನರಿಗೆ ಅಭ್ಯಾಸವಾಗಿರಲೂಬಹುದು. ಇದರಿಂದ ರಾತ್ರಿ ಬೇಘನೆ ನಿದ್ದೆಯೇ ಬರುವುದಿಲ್ಲ ಎಂಬ ವಾದವೂ ಅವರದ್ದು. ಜೊತೆಗೆ, ಇದರಿಂದ ಏಕಾಗ್ರತೆ ನಮಗೆ ಹೆಚ್ಚು ಸಾಧ್ಯವಾಗುತ್ತದೆ ಎಂಬ ಅವರ ಮಾತು ನಿಜವೂ ಆಗಿರಬಹುದು. ʻಎಂಟು ಗಂಟೆ ನಿದ್ದೆ ಆದರಾಯಿತಲ್ಲ, ರಾತ್ರಿ ಹೊತ್ತು ಕೂತು, ಬೆಳಗ್ಗೆ ಬೇರೆ ಹೊತ್ತಿನಲ್ಲಿ ನಿದ್ದೆ ಮಾಡುವೆʼ ಎಂದೂ ಅಂದುಕೊಳ್ಳಬಹುದು. ಆದರೆ, ಇದು ನಮ್ಮ ಒಳಗಿನ ಸಮಯದ ಲೆಕ್ಕಾಚಾರವನ್ನೇ ತಪ್ಪಿಸುತ್ತದೆ. ದೇಹಕ್ಕೆ, ಮನಸ್ಸಿಗೆ, ನಮ್ಮ ಮಿದುಳಿಗೆ ನಿದ್ದೆಯ ತಾಳಮೇಳ ತಪ್ಪುತ್ತದೆ. ಇದರಿಂದ, ಒಡನೆಯೇ ಯಾವುದೇ ಸಮಸ್ಯೆ ಕಾಣದಿದ್ದರೂ ದೀರ್ಘಕಾಲಿಕ ತೊಂದರೆಗಳು ಕಾಣಬಹುದು ಎನ್ನುತ್ತದೆ ಸಂಶೋಧನೆಗಳು. ಹೀಗಾಗಿ, ರಾತ್ರಿಯೂ ಕೂಡಾ ಅತಿಯಾಗಿ ತಡ ಮಾಡುವುದು ಒಳ್ಳೆಯದಲ್ಲ. ಒಂದು ನಿರ್ಧಿಷ್ಟ ಸಮಯ ಪಾಲನೆ ನಿದ್ದೆಗೂ ಅತ್ಯಂತ ಅಗತ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಒಟ್ಟಾರೆ ಆರೋಗ್ಯಕ್ಕೆ ಮಿದುಳಿನ ಆರೋಗ್ಯ ಅತ್ಯಂತ ಮುಖ್ಯ ಕೂಡಾ.

ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!

Exit mobile version