Site icon Vistara News

Health tips: ಮಾನಸಿಕ ಒತ್ತಡ, ಉದ್ವೇಗ ಶಮನಕ್ಕೆ ಖಂಡಿತ ಬೇಕು ಈ ಹಣ್ಣುಗಳು!

health tips fruits for stress

ಇಂದಿನ ವೇಗದ ಜೀವನಶೈಲಿಯಲ್ಲಿ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ಒತ್ತಡ (Stress). ಏಕತಾನತೆಯ ಕೆಲಸ, ಹೆಚ್ಚಿದ ಸ್ಕ್ರೀನ್‌ಟೈಮ್‌ (Screen time), ಸಫಲತೆಯ ಹುಡುಕಾಟದ ನಾಗಾಲೋಟ, ಸ್ಪರ್ಧಾತ್ಮಕ ಜಗತ್ತು ಬಯಸುವ ಹೆಚ್ಚಿದ ಕೆಲಸ ಇತ್ಯಾದಿ ಇತ್ಯಾದಿ ನಾನಾ ಕಾರಣಗಳು, ಬದಲಾದ ಆಹಾರ ಕ್ರಮ, ನಗರ ಜೀವನ ಇತ್ಯಾದಿ ಇತ್ಯಾದಿ ಕಾರಣಗಳಿಂದಾಗಿ ಬಹುತೇಕ ಮಂದಿಯನ್ನು ಇಂದು ಮಾನಸಿಕ ಉದ್ವಿಗ್ನತೆ ಹಾಗೂ ಒತ್ತಡಗಳು ಆವರಿಸುತ್ತಿವೆ. ಕಾರಣವಿಲ್ಲದೆ ಆತಂಕ, ದುಗುಡ, ಒತ್ತಡದಿಂದಾಗಿ ಆರೋಗ್ಯದ ಏರುಪೇರು, ನೆಮ್ಮದಿ ಸಾಧ್ಯವಾಗದಿರುವುದು ಇತ್ಯಾದಿಗಳು ಸಾಮಾನ್ಯವಾಗುತ್ತಿದೆ. ಇಂತಹ ಸಮಸ್ಯೆಗೆ ಜೀವನಪದ್ಧತಿಯ ಬದಲಾವಣೆಯ ಜೊತೆಗೆ ಆಹಾರದಲ್ಲಿ ಬದಲಾವಣೆಯೂ ಕೂಡಾ ಸಮಸ್ಯೆಗೆ ಉತ್ತರವಾಗಬಲ್ಲುದು. ಸೂಕ್ತ ಮಾನಸಿಕ ತಜ್ಞರಿಂದ ಸಲಹೆ ಸೂಚನೆಗಳ ಜೊತೆಗೆ ಕೆಲವು ಹಣ್ಣು ಹಂಪಲುಗಳ ಸೇವನೆಯೂ ಕೂಡ ಒತ್ತಡದ ಜೀವನಕ್ಕೆ ನೆಮ್ಮದಿಯ ರಂಗು ತರಬಲ್ಲುದು. ಹಾಗಾದರೆ ಬನ್ನಿ, ಯಾವ ಹಣ್ಣುಗಳು ಆತಂಕ ಹಾಗೂ ಒತ್ತಡದಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಬಲ್ಲುದು ಎಂಬುದನ್ನು ನೋಡೋಣ.

1. ಬ್ಲೂಬೆರ್ರಿ: ಕಡುನೀಲಿ ಬಣ್ಣದ ಬ್ಲೂಬೆರ್ರಿ ಹಣ್ಣುಗಳು ನಮ್ಮ ದೇಶದಲ್ಲಿ ಸಾಮಾನ್ಯವಲ್ಲದಿದ್ದರೂ ಲಭ್ಯವಿವೆ. ರುಚಿಯಾದ ಈ ಹಣ್ಣು ಪೋಷಕಾಂಶಗಳಿಂದ ಸಂಪದ್ಭರಿತವಾಗಿರುವುದರಿಂದ ಕೇವಲ ದೈಹಿಕ ಲಾಬವಷ್ಟೇ ಅಲ್ಲ, ಮಾನಸಿಕ ಆರೋಗ್ಯದ ಲಾಭಗಳೂ ಇವೆ. ಬ್ಲೂಬೆರ್ರಿಯಲ್ಲಿರುವ ಆಂಥೋಸಯಾನಿನ್‌ಗೆ ಒತತಡವನ್ನು ಕಡಿಮೆ ಮಾಡುವ ಗುಣವಿದೆಯಂತೆ. ಈ ಬಗ್ಗೆ ನಡೆದಿರುವ ಸಂಶೋಧನೆಯೂ ಕೂಡಾ, ಬ್ಲೂಬೆರ್ರಿ ಸಪ್ಲಿಮೆಂಟ್‌ ನೀಡುವ ಮೂಲಕ ಒತ್ತಡ, ಖಿನ್ನತೆ ಹಾಗೂ ಇತರ ಮಾನಸಿಕ ಸಮಸ್ಯೆಗಳ ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆ ಕಂಡಿರುವುದನ್ನೂ ವರದಿ ಮಾಡಿವೆ.

2. ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಪೊಟಾಶಿಯಂನಂತೆ ಮೆಗ್ನೀಶಿಯಂ ಎಂಬ ಖನಿಜಾಂಶವೂ ಇರುವುದು ಗೊತ್ತೇ ಇದೆ. ಈ ಹಿಂದೆ ನಡೆದಿರುವ ಸಂಶೋಧನೆಗಳ ಪ್ರಕಾರ, ಮೆಗ್ನೀಶಿಯಂಗೆ ನಮ್ಮ ಮನಸ್ಸಿನ ಸ್ಥಿತಿಯನ್ನು ಉತ್ತಮಗೊಳಿಸುವ ತಾಕತ್ತಿದೆ ಎಂದು ಹೇಳಿದೆ. ಒಂದು ದೊಡ್ಡ ಬಾಳೆಹಣ್ಣಿನಲ್ಲಿ 37 ಎಂಜಿ ಮೆಗ್ನೀಶಿಯಂ ಇದ್ದು ಇದು ಅಧಿಕ ರಕ್ತದೊತ್ತಡವನ್ನೂ ಸಮತೋಲನಕ್ಕೆ ತರಲು ಸಹಾಯ ಮಾಡುತ್ತದೆ. ಇದರಿಂದ ಏರುಪೇರಾಗುವ ಮನಸ್ಥಿತಿ, ಒತ್ತಡ ಇತ್ಯಾದಿಗಳೂ ಕೂಡಾ ಹತೋಟಿಗೆ ಬರುತ್ತವೆ.

ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಕೋಲ್ಡ್ ವಾಟರ್ ಕುಡಿಯುವುದು ಅಪಾಯಕಾರಿಯೆ?

3. ಸಿಟ್ರಸ್‌ ಹಣ್ಣುಗಳು: ಸಿ ವಿಟಮಿನ್‌ ಹೇರಳವಾಗಿರುವ ಸಿಟ್ರಸ್‌ ಹಣ್ಣುಗಳಾದ ಮೂಸಂಬಿ, ಕಿತ್ತಳೆ, ನಿಂಬೆ ಇತ್ಯಾದಿಗಳೂ ಕೂಡಾ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಹೊಂದಿವೆಯಂತೆ. ಸಿ ವಿಟಮಿನ್‌ ಇರುವ ಹಣ್ಣುಗಳ ಸೇವನೆಯಿಂದ ಮಾನಸಿಕವಷ್ಟೇ ಅಲ್ಲ, ದೈಹಿಕ ಒತ್ತಡದಂತಹ ಸಮಸ್ಯೆಗಳಿಗೂ ಪರಿಹಾರ ಒದಗುತ್ತದೆ. ಒತ್ತಡದಲ್ಲಿರುವಾಗ ಬಿಡುಗಡೆಯಾಗುವ ಹಾರ್ಮೋನ್‌ ಕಾರ್ಟಿಸೋಲ್‌ನ ಮಟ್ಟವನ್ನು ಕಡಿಮೆಗೊಳಿಸುವ ಶಕ್ತಿ ವಿಟಮಿನ್‌ ಸಿ ಯಲ್ಲಿ ಇರುವುದರಿಂದ ಸಿ ವಿಟಮಿನ್‌ ಹೇರಳವಾಗಿರುವ ಹಣ್ಣುಗಳು ಒತ್ತಡ, ಮಾನಸಿಕ ತುಮುಲದಂತಹ ಸಮಸ್ಯೆಗಳಿಗೆ ಕೊಂಚ ಮಟ್ಟಿನ ಸಹಾಯ ಒದಗಿಸಬಹುದು.

ಇದಲ್ಲದೆ, ಬೇಳೆ ಕಾಳುಗಳು ಹಾಗೂ ಧಾನ್ಯಗಳೂ ಕೂಡಾ ಒತ್ತಡದಂತಹ ಸಮಸ್ಯೆಗೆ ಉತ್ತಮ ಆಹಾರ. ಮಾಂಸಾಹಾರದ ಪೈಕಿ ಸಾಲ್ಮನ್‌ ಫಿಶ್‌ ಕೂಡಾ ಒಳ್ಳೆಯದೇ. ಆದರೆ, ಈ ಹಣ್ಣುಗಳೆಲ್ಲವೂ ಒತ್ತಡಕ್ಕೆ ಒಳ್ಳೆಯದು ಎಂದುಕೊಂಡು ಕೇಔಲ ಇದರಿಂದ ಒತ್ತಡದ ಸಮಸ್ಯೆಯನ್ನು ಬಗೆಹರಿಸಲು ಹೊರಟರೆ ಅದು ಮೂರ್ಖತನವಾದೀತು. ಮಾನಸಿಕ ಸಮಸ್ಯೆ ಉಲ್ಬಣಿಸುವ ಮೊದಲೇ ವೈದ್ಯರ ನೆರವು ಖಂಡಿತಾ ಬೇಕು. ಆದರೆ, ವೈದ್ಯರ ಸಲಹೆ ಹಾಗೂ ಔಷಧಿಗಳ ಸೇವನೆಯ ಜೊತೆಗೆ ಉತ್ತಮ ಆಹಾರ ಹಾಗೂ ಶಿಸ್ತುಬದ್ಧ ಆರೋಗ್ಯಕರ ಜೀವನಶೈಲಿಯೂ ಕೂಡಾ ಇಲ್ಲಿ ಮುಖ್ಯ. ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುವ ಹಣ್ಣು ಹಂಪಲುಗಳ ಸೇವನೆ ಆರೋಗ್ಯಪೂರ್ಣ ಹಾದಿಯತ್ತ ಇರುವ ಮೆಟ್ಟಿಲನ್ನು ಸುಲಭವಾಗಿ ಏರಲು ಸಹಾಯ ಮಾಡಬಲ್ಲುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ!

ಇದನ್ನೂ ಓದಿ: Health Tips: ದಿನಕ್ಕೊಂದು ಬಾಳೆಹಣ್ಣು: ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯ ಆಹಾರ!

Exit mobile version