ಬಾಯಿಯ ದುರ್ವಾಸನೆ (mouth odour) ಎಂಬುದು ಬಹಳ ಮುಜುಗರದ ವಿಚಾರವೇ ಹೌದು. ಬಾಯಿಯ ಸ್ವಚ್ಛತೆ ಪ್ರತಿಯೊಬ್ಬನೂ ಅತ್ಯಂತ ಹೆಚ್ಚು ಕಾಳಜಿ ವಹಿಸಬೇಕಾದುದು ಹೌದಾದರೂ, ಇತರರ ಮೇಲೂ ಪರಿಣಾಮ ಬೀರುವ ಅಂಶವೂ ಇದರಲ್ಲಿರುವುದು ನಿಜವೇ. ಮೊದಲ ಭೇಟಿ, ಪ್ರೀತಿಪಾತ್ರರ ಜೊತೆ ಮಾತು- ಕಥೆ- ನಗು- ತಮಾಷೆ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಬೆರೆಯುವುದು, ಪಕ್ಕದಲ್ಲಿ ಹಾದುಹೋದ ಯಾರೋ ಅಪರಿಚಿತ ಹೀಗೆ ಯಾರೊಂದಿಗೆ ಮುಖಾಮುಖಿಯಾಗಿ ಮಾತು ವಿನಿಮಯವಾದರೂ ಅಲ್ಲೊಂದು ಹೇಳಿಕೊಳ್ಳಲಾಗದ ಇರುಸು ಮುರುಸು ಕೂಡಾ ಉದ್ಭವಿಸುತ್ತದೆ. ಎದುರಿಗಿರುವ ವ್ಯಕ್ತಿ ಎಷ್ಟೇ ಆಪ್ತನಾಗಿರಲಿ, ಬಾಯಿಯಿಂದ ದುರ್ವಾಸನೆ ಬೀರುತ್ತಾ ಮುಖದ ಸಮೀಪ ಬಂದು ಮಾತಾಡಿದರೆ, ಆಗುವ ಹಿಂಸೆ ಅಷ್ಟಿಷ್ಟಲ್ಲ. ಹಾಗಾಗಿ ಪ್ರತಿಯೊಬ್ಬರೂ, ತಮ್ಮ ತಮ್ಮ ಬಾಯಿಯ ಸ್ವಚ್ಛತೆಯ ಬಗ್ಗೆ ನಿತ್ಯ ಆದ್ಯತೆ ನೀಡಬೇಕು. ಬೆಳಗ್ಗೆ ಎದ್ದ ಕೂಡಲೇ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಜ್ಜಿವುದನ್ನು ರೂಢಿಸಿಕೊಂಡರಷ್ಟೇ ಸಾಲದು, ಬಹಳ ಸಾರಿ ಗೊತ್ತೇ ಆಗದ ಕೆಲವು ಅಂಶಗಳು ಈ ಬಾಯಿವಾಸನೆಗೆ ಕಾರಣವಾಗಿರುತ್ತದೆ. ಹಾಗಾಗಿ, ಸ್ವಚ್ಛತೆಯನ್ನು ಆದ್ಯತೆಯಾಗಿಟ್ಟುಕೊಂಡು, ಸುಲಭವಾಗಿ ಸಾಧ್ಯವಿರುವ ಈ ಅಂಶಗಳನ್ನು ರೂಢಿಸಿಕೊಳ್ಳುವ ಮೂಲಕ ಬಾಯಿ ವಾಸನೆಯಿಂದ ದೂರವಿರಲು ನೀವು ಪ್ರಯತ್ನಿಸಬಹುದು.
1. ಬಾಯಿ ತೊಳೆಯಿರಿ: ಬಿಸಿನೀರಿನಿಂದ ಅಥವಾ ಉಪ್ಪು ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ. ಮೌತ್ ವಾಶ್ ಬಳಸಿ ಮುಕ್ಕಳಿಸಿದರು ಸರಿಯೇ. ಇದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಕ್ಕೆ ಮುಕ್ತಿ ಸಿಕ್ಕಿ ಬಾಯಿ ವಾಸನೆಯಿಂದ ಪರಿಹಾರ ಸಿಗುತ್ತದೆ. ದಿನಕ್ಕೆರಡು ಬಾರಿಯಾದರೂ ಹೀಗೆ ಮಾಡಿ.
2. ನಾಲಿಗೆ ಕ್ಲೀನ್ ಮಾಡಿ: ಬಹಳಷ್ಟು ಮಂದಿ ಹಲ್ಲಿನ ಸ್ವಚ್ಛತೆಗೆ ಗಮನ ನೀಡಿದಷ್ಟು ನಾಲಿಗೆಯ ಸ್ವಚ್ಛತೆಯ ಬಗ್ಗೆ ಗಮನ ನೀಡುವುದಿಲ್ಲ. ಹಾಗಾಗಿ ನಾಲಿಗೆ ಬ್ಯಾಕ್ಟೀರಿಯಾಗಳ ಆವಾಸಸ್ಥಾನವಾಗಿ ಬದಲಾಗಿಬಿಡುತ್ತದೆ. ಹಲ್ಲುಜ್ಜಿದ ಕೂಡಲೇ ನಾಲಿಗೆಯನ್ನು ಸ್ವಚ್ಛ ಮಾಡುವುದನ್ನು ಮರೆಯಬೇಡಿ.
3. ಸೋಂಪು: ಸಾಂಪ್ರದಾಯಿಕವಾಗಿ ಊಟವಾದ ಮೇಲೆ ಸೋಂಪು ಕೊಡುವುದು ಅಭ್ಯಾಸ. ಇದರ ಕಾರಣವೂ ಇದೇ. ಬಾಯಿಯನ್ನು ಫ್ರೆಶ್ ಆಗಿಡುವಲ್ಲಿ ಇದರ ಪಾತ್ರ ದೊಡ್ಡದು. ಇದರಲ್ಲಿರುವ ಪರಿಮಳಯುಕ್ತ ತೈಲವು ಬಾಯಿಯಲ್ಲಿ ಬಹಳಕಾಲ ಇರುವುದರಿಂದ ಬಾಯಿಯನ್ನು ಬಹಳ ಹೊತ್ತು ತಾಜಾ ಆಗಿಡುತ್ತದೆ. ಆದರೆ ಸಕ್ಕರೆ ಸಹಿತವಾಗಿರುವ, ಬಣ್ಣದ ಸೋಂಪುಗಳಿಗಿಂತ ಸಾದಾ, ಬಣ್ಣ ಹಾಗೂ ಸಕ್ಕರೆರಹಿತ ಸೋಂಪನ್ನೇ ಬಳಸಿ.
4. ಲವಂಗ: ಬಾಯಿಗೆ ಸಂಬಂಧಪಟ್ಟ ತೊಂದರೆಗಳಿಗೆ ಸಾಂಪ್ರದಾಯಿಕವಾಗಿ ಹಲವು ವರ್ಷಗಳಿಂದ ಲವಂಗದ ಬಳಕೆ ಎಲ್ಲರಿಗೂ ಗೊತ್ತಿರುವಂಥದ್ದೇ. ಹಾಗಾಗಿ, ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಒಂದು ಲವಂಗವನ್ನು ಬಾಯಲ್ಲಿಟ್ಟುಕೊಂಡು ಜಗಿಯುತ್ತಿರಿ. ಕೆಟ್ಟವಾಸನೆಯಿಂದ ಮುಕ್ತಿ ಸಿಗುತ್ತದೆ.
5. ಚೂಯಿಂಗ್‌ಗಮ್: ಹೌದು, ಚೂಯಿಂಗ್ ಗಮ್ ಕೂಡಾ ಬಹಳ ಸಾರಿ ಉಪಯೋಗಕ್ಕೆ ಬರುತ್ತದೆ. ಕೆಟ್ಟ ವಾಸನೆ ತೆಗೆಯಲು, ಪುದಿನದಂತಹ ಫ್ಲೇವರ್‌ಗಳ ಚೂಯಿಂಗ್‌ಗಮ್ ಬಾಯಿಯಲ್ಲಿ ತಾಜಾ ಉಸಿರನ್ನು ನೀಡುತ್ತದೆ.
ಇದನ್ನೂ ಓದಿ: Health Tips: ಸಿಪ್ಪೆ ಎಂಬ ಪೋಷಕಾಂಶಗಳ ಪ್ಯಾಕೇಜ್: ತರಕಾರಿ ಹಣ್ಣುಗಳ ಸಿಪ್ಪೆಯನ್ನು ತಿಪ್ಪೆಗೆ ಎಸೆಯದಿರಿ!
6. ನೀರು ಕುಡಿಯಿರಿ: ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಕೇವಲ ದೇಹವನ್ನು ಹೈಡ್ರೇಟ್ ಆಗಿಡಲು ನೀರು ಕುಡಿಯುವುದು ಉತ್ತಮ ಅಭ್ಯಾಸ ಎಂದು ನೀವಂದುಕೊಂಡಿದ್ದೀರಾ? ನೀರು ಕುಡಿಯುವುದರಿಂದ ಹಲವು ಬೇರೆ ಉಪಯೋಗಗಳೂ ಇವೆ. ಬಾಯಿ ಒಣಗಿದ್ದರೆ, ಎಷ್ಟೋ ಹೊತ್ತು ನೀರು ಕುಡಿಯದೆ ಇರುವುದರಿಂದ ಕೆಟ್ಟ ವಾಸನೆ ಬರಲು ಅರಂಭಿಸುತ್ತದೆ. ಹಾಗಾಗಿ ನೀರು ಆಹಾಗ ಕುಡಿಯುವ ಮೂಲಕ ಬಾಯಿಯನ್ನು ಒಣವಾಗಿಸದೆ, ಒದ್ದೆಯಾಗಿರಿಸುವ ಮೂಲಕ ಕೆಟ್ಟ ವಾಸನೆ ಬರದಂತೆ ತಡೆಗಟ್ಟಬಹುದು.
7. ಸಿಟ್ರಸ್ ಹಣ್ಣುಗಳು: ನಿಂಬೆಹಣ್ಣು, ಕಿತ್ತಳೆ, ಮೂಸಂಬಿ ಮತ್ತಿತರ ಸಿಟ್ಸ್ ಹಣ್ಣುಗಳು ಹಲ್ಲಿನ ಆರೋಗ್ಯಕ್ಕೆ ಉತ್ತಮ. ನಿಮ್ಮ ದಿನನಿತ್ಯದ ಆಹಾರದಲ್ಲಿ ಸಿಟ್ರಸ್ ಹಣ್ಣುಗಳ ಪಾತ್ರ ಬಹುಮುಖ್ಯ.
8. ಬ್ಯ್ಲಾಕ್ ಟೀ: ಬ್ಲ್ಯಾಕ್ ಟೀ ಬಾಯಿಯ ದುರ್ವಾಸನೆಗೆ ಒಳ್ಳೆಯ ಮನೆಮದ್ದು. ಇದನ್ನು ಕುಡಿಯುವ ಮೂಲಕ ಕೆಟ್ಟ ವಾಸನೆಯ ಸಮಸ್ಯೆಯಿಂದ ದೂರ ಇರಬಹುದು.
ಇದನ್ನೂ ಓದಿ: Health Tips: ಮೊಸರಿನ ಜೊತೆಗೆ ಯಾವೆಲ್ಲ ಆಹಾರಗಳನ್ನು ತಿನ್ನಬಾರದಂತೆ ಗೊತ್ತೇ?