ನಿಮ್ಮ ಪ್ರೀತಿ ಪಾತ್ರರ ಜೊತೆ ಊಟಕ್ಕೆ ಕೂತಿರುತ್ತೀರಿ, ಹೊಟ್ಟೆ ತುಂಬಿದ ಭಾವ, ಎಲ್ಲರ ಮಧ್ಯದಲ್ಲಿ ನಿಮ್ಮದೊಂದು ಡರ್ ತೇಗು (Belching) ದೊಡ್ಡ ಶಬ್ದ ಮಾಡಿಕೊಂಡು ಮುಜುಗರ ಉಂಟು ಮಾಡುತ್ತದೆ. ತೇಗು ಸಹಜ ನಿಜವೇ. ಯಾವಾಗಲಾದರೊಮ್ಮೆ ತೇಗು ಬಂದರೆ ಅದು ಸಮಸ್ಯೆಯೂ ಅಲ್ಲ ಬಿಡಿ. ಆದರೆ ಆಗಾಗ ತೇಗು ಬರುವ ಅಭ್ಯಾಸ ಬಹಳ ಸಾರಿ ಎಲ್ಲರೆದುರು ಮುಜುಗರ ಉಂಟು ಮಾಡುತ್ತದೆ. ಜಠರದಲ್ಲಿ ಉತ್ಪತ್ತಿಯಾದ ಗ್ಯಾಸ್ ಬಾಯಿಯ ಮುಖಾಂತರ ಹೊರಗೆ ಹೋಗುವುದು ಒಳ್ಳೆಯದೇ ಆದರೂ, ಹೊಟ್ಟೆಯಲ್ಲಿ ಅಷ್ಟು ಗ್ಯಾಸ್ ಉತ್ಪತ್ತಿ ಯಾಕಾಗುತ್ತದೆ ಎಂಬುದೂ ಕೂಡಾ ಗಮನ ಕೊಡಬೇಕಾದ ಅಂಶವೇ. ಹಾಗಾದರೆ ಬನ್ನಿ, ಆಗಾಗ ತೇಗು ಬರುವುದನ್ನು ಹೇಗೆ ತಡೆಯಬಹುದು (health tips) ಎಂಬುದನ್ನು ನೋಡೋಣ.
1. ಕಾರ್ಬೋನೇಟೆಡ್ ಪೇಯಗಳಿಂದ ದೂರವಿರಿ: ಸೋಡಾ ಮತ್ತಿತರ ಕಾರ್ಬೋನೇಟೆಡ್ ಡ್ರಿಂಕ್‌ಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಇರುವುದರಿಂದ ಇದು ತೇಗು ಬರಿಸುತ್ತದೆ. ಹಾಗಾಗಿ ತೇಗಿನಿಂದ ಮುಕ್ತಿ ಬೇಕಾದವರು ಕಾರ್ಬೋನೇಟೆಡ್ ಡ್ರಿಂಕ್‌ಗಳಿಂದ ದೂರವಿರುವುದು ಒಳ್ಳೆಯದು. ಅಷ್ಟೇ ಅಲ್ಲ, ಕುಡಿಯುವಾಗಲೂ ನಿಧಾನವಾಗಿ ಕುಡಿಯುವುದು ಒಳ್ಳೆಯದು. ಇದರಿಂದ ಗ್ಯಾಸ್ ಮತ್ತಷ್ಟು ಒಳಸೇರುವುದು ತಪ್ಪುತ್ತದೆ.
2. ನಿಧಾನವಾಗಿ ತಿನ್ನಿ: ತಿನ್ನುವುದು ಹಾಗೂ ಕುಡಿಯುವ ಕ್ರಿಯೆಯನ್ನು ವೇಗವಾಗಿ ಮಾಡುವುದರಿಂದ ಗಾಳಿಯೂ ದೇಹದೊಳಕ್ಕೆ ಹೆಚ್ಚು ಪ್ರವೇಶಿಸುತ್ತದೆ. ಇದರಿಂದ ಒಳಸೇರಿದ ಗಾಳಿ ತೇಗಿನ ರೂಪದಲ್ಲಿ ಹೊರಬರುತ್ತದೆ. ಹಾಗಾಗಿ ತಿನ್ನುವಾಗ ನಿಧಾನವಾಗಿ, ಚೆನ್ನಾಗಿ ಜಗಿದು ತಿನ್ನುವುದು ಒಳ್ಳೆಯದು. ಆಗ ಆಹಾರ ಚೆನ್ನಾಗಿ ತುಣುಕುಗಳಾಗಿ ಜೀರ್ಣಕ್ರಿಯೆಗೂ ಸಹಾಯವಾಗುತ್ತದೆ. ಜೊತೆಗೆ ಹೆಚ್ಚಿನ ಗಾಳಿ ಒಳ ಹೋಗುವುದೂ ತಪ್ಪುತ್ತದೆ.
3. ಸಕ್ಕರೆ ಕಡಿಮೆ ಮಾಡಿ: ಸಕ್ಕರೆಯುಕ್ತ ಕ್ಯಾಂಡಿಗಳ ಸೇವನೆ ಕಡಿಮೆ ಮಾಡಿ. ಕ್ಯಾಂಡಿ, ಚಾಕೋಲೇಟುಗಳನ್ನು ತಿನ್ನುವುದರಿಂದ, ಚೀಪುವುದರಿಂದ ಗಾಳಿ ಒಳಸೇರುವ ಸಂಭವ ಹೆಚ್ಚು. ಹಾಗಾಗಿ ಇವುಗಳನ್ನು ತಿನ್ನುವುದನ್ನು ಕಡಿಮೆ ಮಾಡಿದರೆ ಒಳ್ಳೆಯದು.
4. ಗ್ಯಾಸ್‌ಕಾರಕ ಆಹಾರಗಳಿಂದ ದೂರವಿರಿ: ಬೀನ್ಸ್, ಕ್ಯಾಬೇಜ್, ಈರುಳ್ಳಿ ಮತ್ತಿತರ ಗ್ಯಾಸ್‌ಕಾರಕ ತರಕಾರಿ, ಆಹಾರಗಳಿಂದ ದೂರವಿರುವುದು ಒಳ್ಳೆಯದು.
5. ಊಟ ಮಾಡುವಾಗ ಸರಿಯಾಗಿ ಕುಳಿತುಕೊಳ್ಳಿ: ಸರಿಯಾಗಿ ಕುಳಿತು ತಿನ್ನುವುದು ಬಹಳ ಮುಖ್ಯ. ಬೆನ್ನು ಬಗ್ಗಿಸದೆ, ನೇರವಾಗಿ ಕುಳಿತು ಊಟ ಮಾಡುವುದು ಬಹಳ ಮುಖ್ಯ. ಇದರಿಂದ ಒತ್ತಡ ಕಡಿಮೆಯಾಗಿ ತೇಗು ಬರುವುದು ಕಡಿಮೆಯಾಗುತ್ತದೆ.
ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಬೇಸಿಗೆಯಲ್ಲಿ ಯಾವುದು ಹಿತಕರ?
6. ಒತ್ತಡ ಕಡಿಮೆ ಮಾಡಿ: ಒತ್ತಡ, ಋಣಾತ್ಮಕ ಆಲೋಚನೆಗಳಿಂದ ದೂರವಿರಿ. ಖಂಡಿತವಾಗಿಯೂ ಇವುಗಳು ದೇಹದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಯೋಗ, ಧ್ಯಾನ, ಹಾಗೂ ಇತರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಒತ್ತಡ ಕಡಿಮೆ ಮಾಡಿಕೊಂಡು ಖುಷಿಯನ್ನು ಹೆಚ್ಚಿಸಬಹುದು.
7. ಅಗತ್ಯಕ್ಕಿಂತ ಹೆಚ್ಚು ತಿನ್ನಬೇಡಿ: ಅತಿಯಾಗಿ ತಿನ್ನುವುದರಿಂದಲೂ ತೇಗು ಬರುತ್ತದೆ. ಅತಿ ಹೆಚ್ಚಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಕಷ್ಟವಾಗಿ ಸರಿಯಾಗಿ ಜೀರ್ಣವಾಗದೆ ಗ್ಯಾಸ್ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ತೇಗು ಹೆಚ್ಚಾಗುತ್ತದೆ. ಹಾಗಾಗಿ ಸಣ್ಣ ಸಣ್ಣ ಊಟಗಳನ್ನು ವಿಭಾಗಿಸಿ ತಿನ್ನುವುದು ಇಂಥವರಿಗೆ ಹೆಚ್ಚು ಪ್ರಯೋಚನವಾಗಬಹುದು. ಒಮ್ಮೆಯೇ ಹೆಚ್ಚು ತಿನ್ನುವ ಬದಲು ಸ್ವಲ್ಪ ಸ್ವಲ್ಪವೇ ವಿಭಾಗಿಸಿಕೊಂಡು ತಿನ್ನುವ ಮೂಲಕ ಹೆಚ್ಚು ತಿನ್ನುವ ಚಟವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿಬಹುದು.
ಇವೆಲ್ಲವೂ ಸಾಮಾನ್ಯ ತೇಗಿಗಿಂತ ಕೊಂಚ ಹೆಚ್ಚು ಗ್ಯಾಸ್ ತೊಂದರೆ ಉಂಟಾಗುತ್ತಿದ್ದರೆ ಮಾತ್ರ ಪ್ರಯೋಜನಕ್ಕೆ ಬರಬಹುದು. ಅತಿಯಾಗಿ ತೇಗು ಬರುತ್ತಲೇ ಇದ್ದರೆ, ವೈದ್ಯರನ್ನು ಸಂಪರ್ಕಿಸಿ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ: Health Tips: ಬೇಸಿಗೆಯ ಆಹಾರದಲ್ಲಿ ನಿಮಗೆ ಗೊತ್ತಿಲ್ಲದೆ ಈ ತಪ್ಪುಗಳಾಗಬಹುದು!