ಕೆಲವರಿಗೆ ಅತಿಯಾಗಿ ತಿನ್ನುವುದು ಒಂದು ಚಟ. ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಹಬ್ಬದ ವಾತಾವರಣ, ನೆಂಟರಿಷ್ಟರ ಆಗಮನ, ನಾವು ಬೇರೆಯವರ ಮನೆಗಳಿಗೆ ಭೇಟಿ ಕೊಟ್ಟು ಸಿಹಿತಿಂಡಿ ಹಂಚುವುದು ಇತ್ಯಾದಿಗಳ ಸಂಪ್ರದಾಯ, ಆಚರಣೆಗಳಿರುವುದರಿಂದ ಸಹಜವಾಗಿಯೇ ನಮಗರಿವಿಲ್ಲದಂತೆಯೋ, ಅಪರೂಪಕ್ಕೆ ಕಂಡ ಇಷ್ಟದ ತಿಂಡಿ ತಿನಿಸುಗಳ ಮೇಲಿನ ಪ್ರೀತಿಯಿಂದಲೋ, ಪ್ರೀತಿಪಾತ್ರರ ಒತ್ತಾಯಕ್ಕೆ ಬೇಡ ಹೇಳಲು ಸಾಧ್ಯವಾಗದಿರುವುದಕ್ಕೋ ನಾವು ಹೆಚ್ಚು ತಿಂದುಬಿಡುತ್ತೇವೆ. ಇದರಲ್ಲಿ ವಿಶೇಷವೇನಿಲ್ಲ. ಇದು ಎಲ್ಲರ ಜೊತೆಗೂ ನಡೆಯುವ ವಿಷಯ. ಆದರೆ, ಹಬ್ಬ ಹರಿದಿನಗಳ ಹೊರತಾಗಿ, ನಿತ್ಯವೂ ಸಾಮಾನ್ಯ ದಿನಗಳಲ್ಲಿಯೂ ಕೆಲವೊಮ್ಮೆ ಏನಾದರೊಂದು ತಿನ್ನುತ್ತಲೇ ಇರಬೇಕು ಅನಿಸಿಬಿಡುವುದುಂಟು. ಅಂತಹ ಸಂದರ್ಭ ದೇಹಕ್ಕೆ ಅಗತ್ಯವಿಲ್ಲದಿದ್ದರೂ ಏನಾದರೊಂದು ಬಾಯಿಗಿಡುತ್ತಾ ಕೊನೆಗೆ ಇದು ಮಾನಸಿಕವಾಗಿಯೂ, ದೈಹಿಕವಾಗಿಯೂ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಹೀಗಾದಾಗ ಹೊಟ್ಟೆಯುಬ್ಬರ, ಎದೆಯುರಿ, ಜೀರ್ಣಕ್ರಿಯೆಯ ತೊಂದರೆಗಳು ಮತ್ತಿತರ ಸಮಸ್ಯೆಗಳೂ ಸಾಮಾನ್ಯ. ಹಾಗಾದರೆ ಇಂತಹ ಮಂದಿ ತಮ್ಮ ಜೀರ್ಣಕ್ರಿಯೆಯ ಸುಧಾರಣೆಗೆ ಏನು ಮಾಡಬಹುದು (Health Tips) ಎಂಬುದನ್ನು ನೋಡೋಣ.
1. ಬಿಸಿ ನೀರು ಕುಡಿಯಿರಿ: ತಿಂದದ್ದು ಹೆಚ್ಚಾಗಿದೆಯೇ? ಹೊಟ್ಟೆಯುಬ್ಬರಿಸಿದಂತೆ ಅನುಭವ ಆಗುತ್ತಿದೆಯೇ? ಹಾಗಿದ್ದರೆ ಬಿಸಿ ನೀರು ಕುಡಿಯಿರಿ. ಸಿಕ್ಕಾಪಟ್ಟೆ ತಿಂದು ಈಗ ಹೊಟ್ಟೆ ಭಾರವಾದಂತೆ ಅನುಭವವಾದರೆ ಕೂಡಲೇ ಬಿಸಿನೀರು ಕುಡಿಯುವುದರಿಂದ ಬೇಗ ಕರಗುವಲ್ಲಿ ಸಹಾಯವಾಗುತ್ತದೆ. ಹೊಟ್ಟೆಯಲ್ಲಿ ನೀರಿಗೂ ಜಾಗವಿಲ್ಲ ಎಂದುಕೊಂಡು ಕುಡಿಯದೆ ಇರಬೇಡಿ. ಒಂದು ಲೋಟ ಬಿಸಿನೀರನ್ನು ನಿಧಾನವಾಗಿ ಕುಡಿದರೆ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ.
2. ಹರ್ಬಲ್ ಟೀ: ಓಂಕಾಳು, ಜೀರಿಗೆ, ಶುಂಠಿ ಇತ್ಯಾದಿಗಳನ್ನು ನೀರಿಗೆ ಹಾಕಿ ಕುದಿಸಿ ಸೋಸಿ ಆ ನೀರನ್ನು ಬಿಸಿಯಾಗಿ ಹಾಗೆಯೇ ಕುಡಿಯುವುದರಿಂದಲೂ ಜೀರ್ಣಕ್ರಿಯೆ ವೇಗವನ್ನು ಪಡೆದುಕೊಳ್ಳುತ್ತದೆ. ಗ್ರೀನ್ ಟೀ ಕುಡಿದರೂ ಒಕೆ. ಮನೆಯಲ್ಲಿ ಬೇರೆ ಬಗೆಯ ಹರ್ಬಲ್ ಟೀ ಇದ್ದರೂ ಕುಡಿಯಬಹುದು. ಊಟದ ನಂತರ ಕೂಡಲೇ ಕುಡಿಯುವುದು ಒಳ್ಳೆಯದು.
3. ಮುಂದಿನ ಊಟ ಲಘುವಾಗಿರಲಿ: ಹೆಚ್ಚು ತಿನ್ನುವುದು ಎಂದರೆ, ನಿಮ್ಮ ಜೀರ್ಣಾಂಗವ್ಯೂಹಕ್ಕೆ ಹೆಚ್ಚು ಕೆಲಸ ಕೊಡುವುದು, ಅದನ್ನು ಒತ್ತಡಕ್ಕೆ ದೂಡುವುದು. ಹಾಗಾಗಿ, ಅತಿಯಾಗಿ ಕೆಲಸ ಮಾಡಿದ ಜೀರ್ಣಾಂಗವ್ಯೂಹಕ್ಕೆ ಸ್ವಲ್ಪ ರೆಸ್ಟ್ ಕೊಡಬೇಕಾದ್ದು ಅತ್ಯಂತ ಅಗತ್ಯ. ಮಧ್ಯಾಹ್ನ ಅತಿಯಾಗಿ ತಿಂದಾಗ ರಾತ್ರಿ ಊಟ ಲಘುವಾಗಿರಲಿ. ಒಂದು ಸೂಪ್, ಅಥವಾ ಟೋಸ್ಟ್, ಅಥವಾ ಕೇವಲ ಬೇಯಿಸಿದ ತರಕಾರಿಯೋ, ಯಾವುದಾದರೊಂದು ಹಣ್ಣೋ ತಿನ್ನಬಹುದು.
4. ನಾರಿನಂಶದ ಆಹಾರ ತಿನ್ನಿ: ಹೊಟ್ಟೆ ತುಂಬ ಊಟ ಮಾಡಿದ್ದರೆ, ಉಂಡಿದ್ದು ಜಾಸ್ತಿಯಾದಾಗ ನಂತರ ಉಣ್ಣುವ ಆಹಾರದ ಆಯ್ಕೆಯನ್ನು ಜಾಗರೂಕತೆಯಿಂದ ಮಾಡಿ. ನಾರಿನಂಶ ಹೆಚ್ಚಿರುವ, ಸುಲಭವಾಗಿ ಕರಗಬಲ್ಲ, ಜೀರ್ಣಕ್ರಿಯೆ ಸುಲಭವಾಗುವ ಆಹಾರವನ್ನು ಸೇವಿಸಿ.
5. ನಡೆಯಿರಿ: ನಾವು ನಡೆಯುವುದರ ಪ್ರಾಮುಖ್ಯತೆಯನ್ನು ಅಷ್ಟಾಗಿ ಅರ್ಥ ಮಾಡಿಕೊಂಡಿಲ್ಲ. ಹೆಚ್ಚು ಉಂಡರೆ, ಹೋಗಿ ಮಲಗಿಬಿಡುವ ಬದಲು ನಿಧಾನವಾಗಿಯಾದರೂ ಒಂದಿಪ್ಪತ್ತು ನಿಮಿಷ ನಡೆಯಿರಿ. ಜೀರ್ಣಕ್ರಿಯೆ ವೇಗವನ್ನು ಪಡೆದುಕೊಂಡು ಹೊಟ್ಟೆ ಎಷ್ಟೋ ಹಗುರವಾದ ಅನುಭವವಾಗುತ್ತದೆ. ಆದರೆ, ತಿಂದ ಕೂಡಲೇ ವಾಕಿಂಗ್ ಬಿಟ್ಟು ಬೇರೆ ವ್ಯಾಯಾಮ ಮಾಡಲು ಹೊರಡಬೇಡಿ.
6. ಹುಳಿ ಬಂದ ಆಹಾರವನ್ನು ಸೇವಿಸಿ: ಮಜ್ಜಿಗೆ, ಲಸ್ಸಿ ಮತ್ತಿತರ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ.
ಇದನ್ನೂ ಓದಿ: Sleepwalking: ನಿದ್ದೆಯಲ್ಲಿ ನಡೆಯುವುದಕ್ಕೆ ಕಾರಣಗಳೇನು?