ತಲೆನೋವಾದಾಗ, ಜಗತ್ತಿನಲ್ಲಿ ತಲೆನೋವು ಎಂಬ ನೋವು ಯಾಕಿದೆಯೋ ಅನಿಸುತ್ತದೆ. ಹಲ್ಲು ನೋವಾದಾಗ ಇಂಥದ್ದೊಂದು ನೋವು ನನ್ನ ಶತ್ರುವಿಗೂ ಬರದಿರಲಿ ಎನ್ನುತ್ತೇವೆ. ಬಾಯಿಹುಣ್ಣು (Mouth ulcer) ಬಂದು ಉಣ್ಣಲು ಕಷ್ಟಪಡುವಾಗ, ಅಯ್ಯೋ ಬಾಯಿಹುಣ್ಣಿನಷ್ಟು ದೊಡ್ಡ ಕಷ್ಟ ಇನ್ನೊಂದಿಲ್ಲ ಎನಿಸುತ್ತದೆ. ಜೀವನದಲ್ಲಿ ಪ್ರತಿಯೊಂದು ನೋವೂ ತರುವ ಸಂಕಟ ಅಷ್ಟಿಷ್ಟಲ್ಲ. ನೆಗಡಿಯಾದಾಗ ಮೂಗು ಕೊಯ್ದು ಬಿಡುವ ಅನಿಸುವುದು ಸಹಜ ಆದರೆ ಅದರಂತೆ ಮಾಡಲಾದೀತೇ ಹೇಳಿ? ಹಾಗೆಯೇ, ಬಾಯಿಹುಣ್ಣು ಆದಾಗ ಬಾಯಿ ಮುಚ್ಚಿ ಕೂರಲು ಸಾಧ್ಯವಿಲ್ಲವಲ್ಲ. ಆದರೆ, ಬಾಯಿಯಲ್ಲಿ ಏನು ತಿನ್ನಬಹುದು, ಏನು ತಿನ್ನದಿರುವುದು ಒಳ್ಳೆಯದು ಎಂಬುದನ್ನಾದರೂ ತಿಳಿದುಕೊಳ್ಳುವುದು ಅತ್ಯವಶ್ಯಕ. ಹಾಗಾದರೆ ಬನ್ನಿ, ಬಾಯಿಹುಣ್ಣು ಅತಿಯಾಗಿ ಕಾಟ ಕೊಡುತ್ತಿದ್ದರೆ, ಯಾವೆಲ್ಲ ಆಹಾರದಿಂದ ದೂರ ಇರಬೇಕು ಎಂಬುದನ್ನು ನೋಡೋಣ.
1. ಮಸಾಲೆಯುಕ್ತ ಆಹಾರ: ಅತಿಯಾದ ಮಸಾಲೆಯುಕ್ತ ಆಹಾರ ಬಾಯಿಹುಣ್ಣನ್ನು ಉಲ್ಬಣಗೊಳಿಸುತ್ತದೆ. ಇದರಿಂದ ಹುಣ್ಣು ತೀವ್ರಸ್ವರೂಪ ತಾಳುವ ಸಂಭವ ಹೆಚ್ಚು. ಕೆಲವೊಮ್ಮೆ ಹುಣ್ಣು ತೆರೆದುಕೊಂಡು ಯಾವುದೇ ಆಹಾರ ತಿಂದರೂ ಅತೀವ ಉರಿ ಆರಂಭವಾಗಬಹುದು. ಹಾಗಾಗಿ, ಕೆಂಪು ಮೆಣಸು, ಖಾರದ ಚಟ್ನಿಗಳು, ಅತಿಯಾದ ಮಸಾಲೆ ಹಾಕಿದ ಬಾಯಲ್ಲಿ ನೀರೂರಿಸುವ ತಿನಿಸುಗಳಿಂದ ದೂರವಿರುವುದು ಒಳ್ಳೆಯದು.
2. ಸಿಟ್ರಸ್ ಹಣ್ಣುಗಳು: ಸಿಟ್ರಿಕ್ ಆಸಿಡ್ ಇರುವ ಹಣ್ಣುಗಳಾದ ನಿಂಬೆಹಣ್ಣು, ಕಿತ್ತಳೆ, ಮುಸಂಬಿ ಮತ್ತಿತರ ಹಣ್ಣುಗಳಿಂದ ಬಾಯಿಹುಣ್ಣಿನ ಸಂದರ್ಭ ದೂರವಿರುವುದು ಒಳ್ಳೆಯದು. ಇಂತಹ ಹಣ್ಣುಗಳು ಬಾಯಿಹುಣ್ಣನ್ನು ಇನ್ನಷ್ಟು ಉಲ್ಬಣಗೊಳಿಸುವ ಸಾಧಯತೆ ಹೆಚ್ಚು.
3. ಕಾರ್ಬೋನೇಟೆಡ್ ಡ್ರಿಂಕ್ಸ್: ಕಾರ್ಬೋನೇಟೆಡ್ ಡ್ರಿಂಕ್‌ಗಳ್ನು ಬಾಯಿಹುಣ್ಣು ಇರುವಾಗ ಕುಡಿಯಲೇಬಾರದು. ಇದರಲ್ಲಿರುವ ಆಸಿಡ್ ಅಂಶ ಬಾಯಿಯ ಮೆದುವಾದ ಚರ್ಮದ ಮೇಲೆ ಘಾಸಿಯುಂಟು ಮಾಡಿ ಬಾಯಿಹುಣ್ಣಿನ ನೋವು ಹೆಚ್ಚಾಗಬಹುದು. ಇದರಲ್ಲಿರುವ ಹೆಚ್ಚಿನ ಸಕ್ಕರೆಯ ಅಂಶ ಬಾಯಿಯಲ್ಲಿ ಇನ್‌ಫೆಕ್ಷನ್ ಜಾಸ್ತಿ ಮಾಡಬಹುದು.
4. ಕೆಫಿನ್‌ಯುಕ್ತ ಚಹಾ, ಕಾಫಿ: ಕಾಫಿ ಹಾಘೂ ಚಹಾ ಪ್ರಿಯರಿಗೆ ಇದು ಹೃದಯ ಒಡೆಯುವ ಸುದ್ದಿಯಾದರೂ ಅರ್ಥ ಮಾಡಿಕೊಳ್ಳಲೇ ಬೇಕು. ಯಾಕೆಂದರೆ ಬಾಯಿಹುಣ್ಣಿಗೂ ಕೆಫಿನ್‌ಗೂ ಬದ್ಧ ವೈರ. ಇದು ಒಸಡು ಹಾಗೂ ನಾಲಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ, ಬಾಯಿಹುಣ್ಣು ಇದ್ದಾಗಲಾದರೂ ಕಾಫಿ, ಚಹಾದಿಂದ ದೂರವಿರುವುದು ಒಳ್ಳೆಯದು.
ಇದನ್ನೂ ಓದಿ: Health Tips: ರಾತ್ರಿಯೂಟದ ಸಂದರ್ಭ ಯಾವೆಲ್ಲ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ ಗೊತ್ತೇ?
5. ಆಲ್ಕೋಹಾಲ್: ಅತಿಯಾದ ಕುಡಿತ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದೇ. ಆದರೂ, ಬಹಳಷ್ಟು ಸಂದರ್ಭಗಳಲ್ಲಿ ಯಾವಾಗಲಾದರೊಮ್ಮೆ, ಗೆಳೆಯರ ಜೊತೆಗೋ, ವಿಶೇಷ ದಿನಗಳಲ್ಲೋ, ಪಾರ್ಟಿಗಳಲ್ಲೋ, ಆಫೀಸಿನ ಸಂತೋಷಕೂಟಗಳಲ್ಲೋ ಕೆಲವೊಮ್ಮೆ ಕುಡಿಯುವುದು ಸಾಮಾನ್ಯ. ಆದರೆ, ಬಾಯಿಹುಣ್ಣು ಇದ್ದಾಗ ಆಲ್ಕೋಹಾಲ್ ಸೇವಿಸದೇ ಇರುವುದು ಒಳ್ಳೆಯದು. ಇದು ನಿಮ್ಮ ಬಾಯಿಹುಣ್ಣನ್ನು ಒಣಗಲು ಬಿಡುವುದಿಲ್ಲ.
6. ಅತಿಯಾದ ಬಿಸಿ ಹಾಗೂ ತಣ್ಣಗಿನ ಆಹಾರ: ಬಾಯಿಹುಣ್ಣಿನ ಸಮಯದಲ್ಲಿ ಅತಿಯಾದ ಬಿಸಿಯ ಆಹಾರಗಳನ್ನು ಸೇವಿಸುವುದು ಕಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಅತಿಯಾದ ತಣ್ಣಗಿನ ಆಹಾರವೂ ಒಳ್ಳಯದಲ್ಲ. ಸಾಮಾನ್ಯ ಉಷ್ಣತೆಯಲ್ಲಿ ತಣಿದ ಆಹಾರವನ್ನು ಸೇವಿಸಬಹುದು. ಬಿಸಿಯಾದ ಹಾಗೂ ತಣ್ಣಗಿನ ಆಹಾರ ಬಾಯಿಹುಣ್ಣಿನ ನೋವನ್ನು ಹೆಚ್ಚು ಮಾಡುತ್ತದೆ.
ಬಾಯಿಹುಣ್ಣು ಸಾಮಾನ್ಯವಾಗಿ ಯಾವ ಔಷಧಿಯೂ ಇಲ್ಲದೆ, ತನ್ನಿಂದ ತಾನೇ ಕೆಲ ದಿನಗಳಲ್ಲಿ ಗುಣವಾಗುತ್ತದೆ. ಆದರೂ ಕೆಲವು ಆಹಾರಗಳನ್ನು ಈ ಸಂದರ್ಭದಲ್ಲಿ ಬಿಡುವುದಲ್ಲದೆ, ಕೆಲವು ಮನೆಮದ್ದುಗಳ ಮೂಲಕ ಪರಿಹರಿಸಬಹುದು. ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸುವುದೂ ಕೂಡಾ ಒಂದ ಸರಳ ಉಪಾಯ. ಇದು ನೋವನ್ನು ಕಡಿಮೆ ಮಾಡುವುದಲ್ಲದೆ ಬಾಯಿಯನ್ನು ಬೇಗ ಸಹಜ ಸ್ಥಿತಿಯತ್ತ ತರುತ್ತದೆ.ವಿಟಮಿನ್ ಬಿ ಯುಕ್ತ ಆಹಾರಗಳ ಸೇವನೆಯೂ ಈ ಸಂದರ್ಭ ಒಳ್ಳೆಯದು. ಅದಕ್ಕಾಗಿಯೇ ವಿಟಮಿನ್ ಬಿ ಕಾಂಪ್ಲೆಕ್ಸ್ ಔಷಧಿಯ ಸೇವನೆಯನ್ನೂ ವೈದ್ಯರು ಸಲಹೆ ಮಾಡುತ್ತಾರೆ. ಬಹಳ ಕಾಲ ಬಾಯಿಹುಣ್ಣು ಮಾಸದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ: Health Tips: ಮದುವೆಗಳ ಕಾಲ; ಭರ್ಜರಿ ತಿಂದು ಬಂದ ಮೇಲೆ ಹೀಗೆ ಕಾಳಜಿ ವಹಿಸಿ!