Site icon Vistara News

Health Tips: ಹಸಿ ಅರಿಶಿನ ಕೊಂಬು ಒಳ್ಳೆಯದೋ, ಒಣಗಿಸಿದ ಅರಿಶಿನ ಪುಡಿಯೋ?

turmeric

ಅರಿಶಿನ ಎಂಬ ಹಳದಿ ಬಣ್ಣದ ಚಿನ್ನದಂಥ ಮಸಾಲೆ ಪದಾರ್ಥ ಪ್ರತಿಯೊಬ್ಬ ಭಾರತೀಯನ ಮನೆಯಲ್ಲೂ ಇದ್ದದ್ದೇ. ಅರಿಶಿನ ಗುಣದಲ್ಲೂ ಚಿನ್ನವಾದ್ದರಿಂದಲೇ, ನಿತ್ಯೋಪಯೋಗಿಯೂ ಹೌದು. ಈ ಹಳದಿ ಬಣ್ಣದ ಅರಿಶಿನ ನಮ್ಮ ನಿತ್ಯ ಆಹಾರಕ್ಕೆ ಬಣ್ಣ ಕೊಡುವುದಷ್ಟೇ ಅಲ್ಲ, ಅದರದ್ದೇ ಆದ ಘಮವನ್ನೂ ಜೊತೆಗೆ ಸಾಕಷ್ಟು ಆರೋಗ್ಯಕಾರಿ ಗುಣಗಳೊಂದಿಗೆ ನಮ್ಮನ್ನು ಸದಾ ಆರೋಗ್ಯವಾಗಿಡುವಲ್ಲಿ (Health Tips) ಮುಖ್ಯಪಾತ್ರ ವಹಿಸುತ್ತದೆ.

ಅರಿಶಿನ (turmeric) ನೆಲದಡಿಯಲ್ಲಿ ಬೆಳೆಯುವ ಬೇರು. ದಕ್ಷಿಣ ಏಷ್ಯಾದ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇದು ಭಾರತೀಯ ಅಡುಗೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಅರಿಶಿನ ಪುಡಿ ಎಲ್ಲರ ಮನೆಗಳಲ್ಲೂ ಡಬ್ಬಗಳಲ್ಲಿ ಮುಖ್ಯಸ್ಥಾನದಲ್ಲಿದ್ದರೆ, ಅರಿಶಿನ ಹಸಿಕೊಂಬಿನ ಬಳಕೆ ಮಾತ್ರ ಕಡಿಮೆಯೇ. ಆದರೂ, ವರ್ಷದ ಕೆಲವೊಂದು ಮಾಸದಲ್ಲಿ, ಅರಿಶಿನ ಹಸಿಕೊಂಬು, ಪರಿಮಳಯುಕ್ತ ಎಲೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಯಾವಾಗಲೂ, ತಾಜಾ ಆಗಿ ಸಿಗುವ ಎಲ್ಲವುಗಳು ಸ್ವಲ್ಪ ಹೆಚ್ಚೇ ಪೋಷಕಾಂಶಗಳನ್ನು ಹೊತ್ತು ಬರುವುದೆಂಬ ನಂಬಿಕೆ ನಮಗಿರುವುದರಿಂದ ಹಾಗೂ ಅದು ಸತ್ಯವೂ ಆಗಿರುವುದರಿಂದ ಅರಿಶಿನದ ವಿಚಾರದಲ್ಲೂ ಇದು ನಿಜವೇ ಎಂಬುದನ್ನು ನೋಡೋಣ.

ಅರಿಶಿನ ಪುಡಿ: ಭೂಮಿಯಡಿಯಲ್ಲಿ ಸಿಗುವ ಅರಿಶಿನ ಕೊಂಬನ್ನು ಒಣಗಿಸಿ ಪುಡಿ ಮಾಡಿದ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಅರಿಶಿನ ಪುಡಿಯೆಂಬ ಚಿನ್ನ ರುಚಿಯಲ್ಲಿ ಕೊಂಚ ಒಗರಾದರೂ, ಬಣ್ಣಕ್ಕಾಗಿ, ಹಾಗೂ ಗುಣಕ್ಕಾಗಿ ಯಾವತ್ತಿಗೂ ಮುಂದು. ಇದರಲ್ಲಿರು ಆಂಟಿಸೆಪ್ಟಿಕ್‌ ಗುಣಗಳಿಂದಾಗಿ ದೇಹದ ಸಣ್ಣಪುಟ್ಟ ಗಾಯಗಳಂತಹ ತೊಂದರೆಗಳಿಂದ ಹಿಡಿದು ಹೃದಯದ ಸಮಸ್ಯೆಯವರೆಗೆ ರೋಗ ಪರಿಹಾರ ಮಾಡುವ ಗುಣವನ್ನು ತನ್ನೊಳಗೆ ಅಡಗಿಸಿಕೊಂಡಿರುವ ದಿವ್ಯೌಷಧಿ ಇದು. ಹೃದಯದ ಕಾಯಿಲೆ, ಕ್ಯಾನ್ಸರ್‌, ಅಲ್ಜೀಮರ್‌ನಂತಹ ರೋಗಗಳಿಗೂ ಅರಿಶಿನ ಒಳ್ಳೆಯದು. ಅರಿಶಿನದಲ್ಲಿರುವ ಕುರ್ಕುಮಿನ್‌ ಎಂಬ ರಸಾಯನಿಕ ದೇಹದಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳನ್ನು ಹೆಚ್ಚಿಸುವುದರಿಂದ ಹಲವಾರು ರೋಗಗಳಿಗೆ ಇದು ಶಮನಕಾರಿಯಾಗಿ ಕೆಲಸ ಮಾಡುತ್ತದೆ.

ದಿನನಿತ್ಯದ ಅಡುಗೆಗಳಾದ ಪಲ್ಯ, ಸಾರು, ಸಾಂಬಾರು, ದಾಲ್‌, ಸಬ್ಜಿಗಳಲ್ಲೆಲ್ಲ ಅರಿಶಿನ ಬಳಕೆಯಾಗುವುದಲ್ಲದೆ, ಮುಖ್ಯ ವಸ್ತು ಕೂಡಾ. ಇದು ಅಡುಗೆಯ ರುಚಿಯನ್ನೂ ಘಮವನ್ನೂ ಹೆಚ್ಚಿಸುತ್ತದೆ. ಅರಿಶಿನ ನೀರು ಅಥವಾ ಅರಿಶಿನ ಟೀ ಮಾಡಿ ಕುಡಿಯುವುದರಿಂದ ದೇಹಕ್ಕೆ ಆರೋಗ್ಯಕರ ಲಾಭಗಳಿವೆ. ಇದು ಕೇಕ್‌, ಮಫಿನ್‌, ಸ್ಮೂದಿಗಳಂತಹ ಅನೇಕ ಅಡುಗೆಗಳಿಗೆ ನೈಸರ್ಗಿಕ ಬಣ್ಣವನ್ನೂ ನೀಡುತ್ತದೆ.

ಅರಿಶಿನ ಕೊಂಬು: ಹಸಿ ಅರಿಶಿನ ಕೊಂಬು ಕೊಯ್ಲಾದ ತಕ್ಷಣ ಚಳಿಗಾಲದಲ್ಲಿ ಸಾಮಾನ್ಯವಾಗಿ ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಎರಡೂ ಒಂದೇ ಆದರೂ ಹಸಿ ಅರಿಶಿನವನ್ನು ಬಳಸುವುದು ಕೊಂಚ ತ್ರಾಸದಾಯಕ. ಆದರೆ ಗುಣದಲ್ಲಿ ಹಸಿ ಅರಿಶಿನ ಒಣ ಅರಿಶಿನ ಪುಡಿಗಿಂತಲೂ ಒಳ್ಳೆಯದು. ಹಸಿ ಅರಿಶಿನದಲ್ಲಿ ಕುರ್ಕುಮಿನ್‌ ರಾಸಾಯನಿಕದ ಅಂಶ ಹೆಚ್ಚಿರುವುದರಿಂದ ಇದರಿಂದ ಲಭ್ಯವಾಗುವ ಆರೋಗ್ಯದ ಪರಿಣಾಮಗಳು ಅಧಿಕ. ಇದರಿಂದ ದಕ್ಕುವ ರೋಗ ನಿರೋಧಕ ಶಕ್ತಿ ಅರಿಶಿನ ಪುಡಿಗಿಂತ ಹೆಚ್ಚು. ಇದು ಪಚನಕ್ರಿಯೆಯನ್ನೂ ಉತ್ತೇಜಿಸಿ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ಹೊಟ್ಟೆ ಸಂಬಂಧೀ ತೊಂದರೆಗಳಿರುವ ಮಂದಿಗೆ ಹಸಿ ಅರಿಶಿನದ ಉಪಯೋಗ ಅತ್ಯಂತ ಒಳ್ಳೆಯದು. ಆಂಟಿ ಇನ್‌ಫ್ಲಮೇಟರಿ ಗುಣಗಳು ಇದರಲ್ಲಿ ಹೆಚ್ಚಿರುವುದರಿಂದ ಗಾಯ ಮಾಸಲು ಇದರ ಉಪಯೋಗ ಒಳ್ಳೆಯದು. ನಿತ್ಯವೂ ಹಾಲಿಗೆ ಹಸಿ ಅರಿಶಿನ ಜಜ್ಜಿ ಹಾಕಿ ಕುಡಿಯುವುದರಿಂದ ಶೀತ, ನೆಗಡಿ, ಕೆಮ್ಮು, ಜ್ವರಗಳಿಂದ ದೂರವಿರಬಹುದು. ಹಸಿ ಅರಿಶಿನ, ತುಪ್ಪ ಹಾಗೂ ಬೆಲ್ಲದ ಮಿಶ್ರಣದ ಅರಿಶಿನ ಗೋಲ್ಡನ್‌ ಹಾಲು ದೇಹಕ್ಕೆ ಒಳ್ಳೆಯದು. ಹಸಿ ಅರಿಶಿನದ ಪಲ್ಯ, ಹಸಿ ಅರಿಶಿನದ ಉಪ್ಪಿನಕಾಯಿಯೂ ಉತ್ತರ ಭಾರತದಲ್ಲಿ ಬಹು ಪ್ರಸಿದ್ಧ ಅಡುಗೆಯ ಬಗೆಗಳು. 

ಇದನ್ನೂ ಓದಿ: Monsoon Health Tips : ಮಳೆಗಾಲದಲ್ಲಿ ವೈರಲ್‌ ಸೋಂಕು ತಡೆಯುವುದು ಹೇಗೆ?

Exit mobile version