ಆಹಾರ ಮತ್ತು ಆರೋಗ್ಯ ವಲಯದಲ್ಲಿ ʻಸೂಪರ್ ಫುಡ್ʼ ಪಟ್ಟಿಯಲ್ಲಿ ಮೊಟ್ಟೆಗೆ ದೊಡ್ಡ ಕಿರೀಟವಿದೆ. ಬೆಳಗಿನ ತಿಂಡಿಯೇ ಇರಲಿ ಅಥವಾ ರಾತ್ರಿ-ಮಧ್ಯಾಹ್ನಗಳ ಊಟವೇ ಇರಲಿ, ಇದು ಎಲ್ಲದಕ್ಕೂ ಸಲ್ಲುವಂಥದ್ದು. ಕಡಿಮೆ ಶ್ರಮದಲ್ಲಿ ಹೆಚ್ಚಿನ ಆರೋಗ್ಯ ಎನ್ನುವಂತೆ, ಮೊಟ್ಟೆಯ ಅಡುಗೆ ಅಟ್ಟುವುದು ಅಂಥ ಕಷ್ಟವೂ ಅಲ್ಲ. ಯಾವ ಊರಿಗೆ ಹೋದರೂ ಮೊಟ್ಟೆ ಖಾದ್ಯಗಳು ದೊರೆಯುವುದು ಕ್ಲಿಷ್ಟವಲ್ಲ. ಹಾಗಾಗಿ ಬ್ರಹ್ಮಚಾರಿಗಳಿಂದ ಹಿಡಿದು ಸಂಸಾರಿಗಳವರೆಗೆ ಇದಕ್ಕೆ ಸಾಕಷ್ಟು ಜನಪ್ರಿಯತೆಯಿದೆ. ಆದರೆ ಮೊಟ್ಟೆ ಖರೀದಿಗೆಂದು ಹೋದಾಗ ಕಾಡುವ ಪ್ರಶ್ನೆ- ಬಿಳಿಯ ಬಣ್ಣದ ಮೊಟ್ಟೆ ಒಳ್ಳೆಯದಾ ಅಥವಾ ಕಂದು ಬಣ್ಣದ್ದಾ?
ಇದೇನು ಕೋಳಿ ಮೊದಲಾ-ಮೊಟ್ಟೆ ಮೊದಲಾ ಎಂಬಂಥ ಪ್ರಶ್ನೆಯಲ್ಲ. ಹಾಗೆಂದೇ ತಜ್ಞರಲ್ಲಿ ಇದಕ್ಕೆ ಸ್ಪಷ್ಟ ಉತ್ತರವಿದೆ. ಮೊಟ್ಟೆಯ ಚಿಪ್ಪಿನ ಬಣ್ಣ ನಿರ್ಧಾರವಾಗುವುದು ಆಯಾ ಕೋಳಿಯ ದೇಹ ಉತ್ಪಾದಿಸುವ ವರ್ಣದ್ರವ್ಯಗಳ ಮೇಲೆ. ಅಂದರೆ, ಕೋಳಿಯೊಂದರೆ ಪುಕ್ಕದ ಬಣ್ಣದ ಮೇಲೂ ಅದರ ಮೊಟ್ಟೆಯ ಬಣ್ಣದ ಸೂಚನೆ ದೊರೆಯಬಹುದು. ಆದರೆ ಮೊಟ್ಟೆಯ ಚಿಪ್ಪಿನ ಬಣ್ಣದಿಂದ ಅದರ ಪೋಷಕಾಂಶದಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ. ಬಿಳಿ ಮತ್ತು ಕಂದು ಮೊಟ್ಟೆಗಳೆರಡರಿಂದಲೂ ಸಮಾನ ಪೋಷಣೆಯೇ ದೊರೆಯುತ್ತದೆ- ಒಂದರಲ್ಲಿ ಹೆಚ್ಚು, ಇನ್ನೊಂದರಲ್ಲಿ ಕಡಿಮೆ ಎಂದಿಲ್ಲ ಎನ್ನುತ್ತಾರೆ ಆಹಾರ ಪರಿಣಿತರು.
“ಎರಡೂ ಬಣ್ಣದ ಚಿಪ್ಪಿನ ಮೊಟ್ಟೆಗಳಲ್ಲಿ ಸಂಪೂರ್ಣ ಪೋಷಣೆ ದೊರೆಯುತ್ತದೆ. ಚಿಪ್ಪಿನ ಬಣ್ಣದಿಂದ ಏನೂ ವ್ಯತ್ಯಾಸ ಆಗುವುದಿಲ್ಲ. ಎರಡೂ ಬಣ್ಣದ ಮೊಟ್ಟೆಗಳಲ್ಲಿ ಕೋಲಿನ್, ಫೋಲೇಟ್, ಕಬ್ಬಿಣ, ಸತು, ಸೆಲೆನಿಯಂ, ಎ ಮತ್ತು ಬಿ೧೨ ಜೀವಸತ್ವಗಳು ಧಾರಾಳವಾಗಿ ದೊರೆಯುತ್ತವೆ. ಪ್ರೋಟೀನಂತೂ ಹೇರಳವಾಗಿದೆ. ಆಹಾರ ಮತ್ತು ಜೀವಿಸುವ ವಾತಾವರಣಗಳು ಆಯಾ ಕೋಳಿಗಳು ಇಡುವ ಮೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆಯೆ ಹೊರತು ಅದರ ದೇಹದ ವರ್ಣದ್ರವ್ಯವಲ್ಲ” ಎಂಬುದು ತಜ್ಞರ ಖಚಿತ ನುಡಿ.
ಮತ್ತೇಕೆ ತುಟ್ಟಿ?: ಜನ ಕಂದು ಮೊಟ್ಟೆಗಳು ಬಿಳಿಯದ್ದಕ್ಕಿಂತ ಹೆಚ್ಚು ಪೌಷ್ಟಿಕ ಎಂಬ ಭಾವನೆ ಹೊಂದುವುದಕ್ಕೆ ಕಾರಣ, ಅವುಗಳ ಬೆಲೆಯಲ್ಲಿ ಇರುವ ವ್ಯತ್ಯಾಸ. ಕೆಲವೊಮ್ಮೆ ಕಂದು ಮೊಟ್ಟೆಯ ಧಾರಣೆ ಬಿಳಿಯದಕ್ಕಿಂತ ಹೆಚ್ಚಿದ್ದೀತು. ಈ ತಳಿಯ ಕೋಳಿಗಳು ದೊಡ್ಡ ಗಾತ್ರದಲ್ಲಿ ಮತ್ತು ಕಡಿಮೆ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇದರಿಂದ ನಿರ್ವಹಣಾ ವೆಚ್ಚ ಸಹಜವಾಗಿ ಹೆಚ್ಚುತ್ತದೆ. ಹಾಗಾಗಿ ಹೆಚ್ಚಿನ ಬೆಲೆಯ ಮೊಟ್ಟೆಗಳು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಎಂಬ ಭಾವನೆ ಹಲವರಲ್ಲಿದೆ. ಆದಷ್ಟೂ ತಾಜಾ ಇರುವ ಮೊಟ್ಟೆಗಳನ್ನು ಖರೀದಿಸುವತ್ತ ಗಮನ ನೀಡಬೇಕೇ ಹೊರತು ಅವುಗಳ ಬಣ್ಣವನ್ನು ನಿರ್ಧರಿಸಿ ಖರೀದಿಸುವುದಲ್ಲ ಎಂಬುದು ಆಹಾರ ಮತ್ತು ಆರೋಗ್ಯ ಪರಿಣಿತರ ಅಂಬೋಣ.
ಇದನ್ನೂ ಓದಿ| Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ