ಹಿಂದೆ ನಮ್ಮ ಅಜ್ಜಿಯಂದಿರ ಮೇಕಪ್ ಬಾಕ್ಸುಗಳಲ್ಲಿ ಖಂಡಿತವಾಗಿಯೂ ಇರುತ್ತಿದ್ದ ಒಂದು ಡಬ್ಬಿಯೆಂದರೆ ಅದು ಜೇನುಮೇಣದ ಡಬ್ಬಿ. ಒಂದು ಕುಂಕುಮ ಕರಡಿಗೆ, ಒಂದು ಪುಟಾಣಿ ಪೌಡರಿನ ಡಬ್ಬಿ, ಕಾಡಿಗೆ, ಒಂದು ಜೇನುಮೇಣದ ಡಬ್ಬಿ, ಈ ಮೂರ್ನಾಲ್ಕು ವಸ್ತುಗಳನ್ನು ಬಿಟ್ಟರೆ ಅವರ ಬಳಿ ಹೆಚ್ಚೇನೂ ಇರುತ್ತಿರಲಿಲ್ಲ. ಕುಂಕುಮವನ್ನು ಹಣೆಗೆ ವೃತ್ತಾಕಾರದಲ್ಲಿ ಇಡಲು ಅದನ್ನು ಅಂಟಿ ಕೂರುವಂತೆ ಮಾಡಲು ಜೇನುಮೇಣವನ್ನು ಬಳಸುತ್ತಿದ್ದು, ಆ ಬಿಂದಿ ದಿನವಿಡೀ ಅಳಿಯದೆ, ಬೆವರಿಗೆ ಮಳೆಗೆ ಕರಗದೆ ಹಾಗೆಯೇ ಇರುತ್ತಿತ್ತು. ಇದನ್ನು ಬಿಟ್ಟರೆ ಆಗ ಜೇನು ಮೇಣವನ್ನು ಕಾಲು ಒಡೆದರೆ, ತುಟಿಯೊಡೆದರೆ ಹಚ್ಚಲು ಬಳಸುತ್ತಿದ್ದುದು ಗೊತ್ತೇ ಇದೆ. ವಿಶೇಷವೆಂದರೆ ಅವರಿಗೆ ಯಾವ ಸೌಂದರ್ಯ ಸಮಸ್ಯೆಗಳೂ ಇರುತ್ತಿರಲಿಲ್ಲ. ಆದರೆ, ಇಂದು ಈ ಜೇನುಮೇಣ ಎಂಬ ವಸ್ತುವೇ ಎಲ್ಲರ ಸೌಂದರ್ಯ ಸಾಧನಗಳ ಪೆಟ್ಟಿಗೆಯಿಂದ ಮಾಯವಾಗಿದೆ. ಹಾಗಾದರೆ, ಹಿಂದೆ ನಮ್ಮ ಹಿರಿಯರು ಅದರಿಂದ ಪಡೆಯುವ ಲಾಭವಾದರೂ ಏನಿರಬಹುದಿತ್ತು ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ?
ಪ್ರಕೃತಿ ತನ್ನಲ್ಲಿ ಏನೆಲ್ಲಾ ವಿಸ್ಮಯಗಳನ್ನಿಟ್ಟಿದೆ ಎಂದರೆ, ಈ ಜೇನುಹುಳ ಎಂಬುದೇ ಜೀವವೈವಿಧ್ಯದ ಕೌತುಕ. ಇದು ತಯಾರು ಮಾಡುವ ಜೇನು ಎಂಬ ಅಮೃತದ ಉಪಯೋಗ ಗೊತ್ತೇ ಇದೆ. ಆದರೆ, ಈ ಜೇನನ್ನು ಸಂಗ್ರಹಿಸಲು ಅದು ತಯಾರು ಮಾಡುವ ಜೇನುಗೂಡೂ ಕೂಡಾ ಅದ್ಭುತ ಕಲಾತ್ಮಕತೆಯೇ ಸರಿ. ಈ ಗೂಡಿನಿಂದ ಸಂಗ್ರಹಿಸುವ ಮೇಣವೇ ಜೇನುಮೇಣ (ಬೀವ್ಯಾಕ್ಸ್). ನೈಸರ್ಗಿಕವಾಗಿ ಸಿಗುವ ಈ ಮೇಣದಿಂದ ಸೌಂದರ್ಯ ಹಾಗೂ ಆರೋಗ್ಯಕ್ಕೆ ಎಷ್ಟೆಲ್ಲ ಉಪಯೋಗಗಳಿವೆ ಎಂಬುದನ್ನು ನಮ್ಮ ಪೂರ್ವಜರೇ ಕಂಡುಕೊಂಡಿದ್ದರು.
೧. ಜೇನುಮೇಣ ಬಹಳಷ್ಟು ಚರ್ಮದ ತೊಂದರೆಗಳಿಗೆ ನೈಸರ್ಗಿಕ ಪರಿಹಾರ. ಜೇನು, ಜೇನುಮೇಣ ಹಾಗೂ ಆಲಿವ್ ಎಣ್ಣೆಯ ಮಿಶ್ರಣದಿಂದ ಮಕ್ಕಳಿಗೆ ಡಯಪರ್‌ನಿಂದಾದ ಗುಳ್ಳೆಗಳಿಗೆ, ಸೋರಿಯಾಸಿಸ್ ಹಾಗೂ ಎಕ್ಸೀಮಾದಂತಹ ತೊಂದರೆಗಳಿಗೆ ಸುಲಭವಾಗಿ ಪರಿಹಾರ ಕಾಣಬಹುದು.
೨. ಜೇನುಮೇಣದಂಥ ಕೋಲ್ಡ್ ಕ್ರೀಮ್ ಇನ್ನೊಂದಿಲ್ಲ. ಚಳಿಗಾಲದಲ್ಲಿ ಬಿರುಕು ಬಿಟ್ಟ ಚರ್ಮ, ಒಡೆದ ಹಿಮ್ಮಡಿ, ರಕ್ತ ಸೋರುವ ತುಟಿ ಇವೆಲ್ಲವುಗಳಿಗೆ ರಾಮಬಾಣವಾಗಿ ಹಿಂದಿನ ಕಾಲದ ಸ್ತ್ರೀಯರು ಬಳಸುತ್ತಿದ್ದುದು ಜೇನುಮೇಣ. ಚರ್ಮ ತನ್ನಲ್ಲಿರುವ ನೀರಿನಂಶವನ್ನು ಉಳಿಸಿಕೊಂಡು ಮೃದುವಾಗಿ ನಯವಾಗಿ ಹೊಳೆಯಲು ಜೇನುಮೇಣ ಬಳಕೆಯಾಗುತ್ತಿತ್ತು. ಒರಟು ಚರ್ಮವನ್ನು ನಯವಾಗಿಸಲೂ ಇದು ಬಳಕೆಯಾಗುತ್ತಿತ್ತು. ಇದನ್ನು ಇತ್ತೀಚಿನ ಹಲವಾರು ಸಂಶೋಧನೆಗಳೂ ಎತ್ತಿ ಹಿಡಿದಿದ್ದು, ಜೇನುಮೇಣದಿಂದ ಚರ್ಮಕ್ಕೆ ಇರುವ ಲಾಭಗಳನ್ನು ಮತ್ತೆ ಮತ್ತೆ ಬಿಡಿಸಿ ಹೇಳಿವೆ. ಜೇನುಮೇಣದ ಜೊತೆ ಬಾದಾಮಿ ಎಣ್ಣೆಯನ್ನು ಸೇರಿಸಿ ಬಳಸುವುದರಿಂದ ಹೆಚ್ಚಿನ ಉಪಯೋಗವನ್ನು ಪಡೆಯಬಹುದು.
೩. ಪಿತ್ತಕೋಶದ ರಕ್ಷಕನಾಗಿಯೂ ಜೇನುಮೇಣ ವರ್ತಿಸುತ್ತದೆ ಎಂದರೆ ನಂಬುತ್ತೀರಾ? ಹೌದು. ಜೇನುಗೂಡಿನಲ್ಲಿರುವ ಆಲ್ಕೋಹಾಲ್ ಅಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಪಿತ್ತಕೋಶಕ್ಕೆ ರಕ್ಷಣೆ ನೀಡುತ್ತವೆ.
೪. ಕೊಲೆಸ್ಟೆರಾಲ್ ಮಟ್ಟವನ್ನು ಸಮತೋಲನದಲ್ಲಿಡಲೂ ಜೇನುಮೇಣ ಸಹಾಯ ಮಾಡುತ್ತದೆ. ಸಸ್ಯಾಧಾರಿತ ಮೇಣಗಳೆಲ್ಲವೂ ಕೊಲೆಸ್ಟೆರಾಲ್ ಕಡಿಮೆಗೊಳಿಸುವಲ್ಲಿ ನೆರವಾಗುತ್ತವೆ.
ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ
೫. ನೋವುನಿವಾರಕವಾಗಿಯೂ ಜೇನುಮೇಣ ಕೆಲಸ ಮಾಡುತ್ತದೆ. ಊತ, ಬಾವುಗಳಂತಹ ತೊಂದರೆಗಳಿಗೆ, ಗಂಟುಗಳ ಬಾವುಗಳಿಗೆ ಜೇನುಮೇಣ ಹಚ್ಚಿದಲ್ಲಿ ಅದನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
೬. ಜೇನುಮೇಣದಲ್ಲಿ ವಿಟಮಿನ್ ಎ ಇರುವುದರಿಂದ ಇದು ಮೊಡವೆಗಳಿಗೂ ಉತ್ತಮ ಪರಿಹಾರ ನೀಡುತ್ತದೆ. ಇದರಲ್ಲಿರುವ ಆಂಟಿ ಸೆಪ್ಟಿಕ್ ಗುಣ ಮೊಡವೆಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
೭. ಚಳಿಗಾಲದಲ್ಲಿ ತುಟಿಗಳು ಒಡೆದು ರಕ್ತ ಸೋರುತ್ತಿದ್ದರೆ, ಒಣ ತುಟಿಗಳ ಸಮಸ್ಯೆ ನಿಮ್ಮದಾಗಿದ್ದರೆ ಜೇನುಮೇಣ ನೈಸರ್ಗಿಕ ಲಿಪ್ ಬಾಮ್. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಲಿಪ್ ಕೇರ್ ಪ್ರಾಡಕ್ಟ್‌ಗಳಿಗಿಂತ ಜೇನುಮೇಣ ನೈಸರ್ಗಿಕವಾಗಿ ತುಟಿಗಳನ್ನು ನಯವಾಗಿಸುತ್ತದೆ.
೮, ಸ್ಟ್ರೆಚ್ ಮಾರ್ಕ್‌ಗಳಿಗೂ ಜೇನುಮೇಣ ಉತ್ತಮ. ಹೆರಿಗೆಯ ನಂತರ ಕಾಣಿಸಿಕೊಳ್ಳುವ ಈ ಸಮಸ್ಯೆಗೆ ಜೇನುಮೇಣ ಹಚ್ಚುವ ಮೂಲಕ ಸ್ಟ್ರೆಚ್ ಮಾರ್ಕ್ ಕಲೆಗಳನ್ನು ಇಲ್ಲವಾಗಿಸಬಹುದು.
೯. ಫಂಗಸ್ ತೊಂದರೆಯಿಂದ ಉಂಟಾದ ಚರ್ಮದ ಸಮಸ್ಯೆಗಳಿಗೂ ಜೇನುಮೇಣ ರಾಮಬಾಣ. ಇದನ್ನು ಹಚ್ಚುವ ಮೂಲಕ ಕಚ್ಚಿ ತುರಿಕೆಗಳಂತಹ ಇನ್‌ಫೆಕ್ಷನ್‌ಗಳಿಂದ ಮುಕ್ತಿ ಕಾಣಬಹುದು.
೧೦. ಮಾನಸಿಕ ಒತ್ತಡದಿಂದ ಹೊರಬರಲು, ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ಜೇನು ಮೇಣದಿಂದ ತಯಾರಿಸಲ್ಪಟ್ಟ ಕ್ಯಾಂಡಲ್‌ಗಳನ್ನು ಉರಿಸಬಹುದು. ಇದು ರಾಸಾಯನಿಕಗಳಿಂದ ಮುಕ್ತ ನೈಸರ್ಗಿಕ ಮಾರ್ಗವಾಗಿದೆ.
ಇದನ್ನೂ ಓದಿ | Hair Care | ಕೂದಲು ಉದುರುತ್ತಿದೆಯೇ? ಹೀಗೆ ಮಾಡಿ – Hair loss? Do this