ಕೊಲೆಸ್ಟೆರಾಲ್ ಸಮಸ್ಯೆ ಇಂದು ಬಹುತೇಕರು ಅನುಭವಿಸುವ ಸಮಸ್ಯೆ. ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಲೆಸ್ಟೆರಾಲ್ ಇರುವುದು ಸಮಸ್ಯೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ದೇಹಕ್ಕೆ ಬೇಕಾಗುವ ಕೊಲೆಸ್ಟೆರಾಲ್ ಉತ್ಪಾದನೆಯಾಗುವುದು ಪಿತ್ತಕೋಶದಲ್ಲಿ. ಪ್ರಾಣಿ ಜನ್ಯ ಆಹಾರ ಮೂಲದಿಂದ ಹೆಚ್ಚು ಕೊಲೆಸ್ಟೆರಾಲ್ ಉತ್ಪಾದನೆಯಾದರೆ, ಸಸ್ಯಜನ್ಯ ಆಹಾರದಿಂದ ಈ ಸಾಧ್ಯತೆ ಕೊಂಚ ಕಡಿಮೆ. ಟ್ರಾನ್ಸ್ ಹಾಗೂ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಆಹಾರಗಳಿಂದ ಪಿತ್ತಕೋಶದಲ್ಲಿ ಹೆಚ್ಚು ಕೊಲೆಸ್ಟೆರಾಲ್ ಉತ್ಪಾದನೆಯಾಗುತ್ತದೆ. ಆದರೆ, ಇಂದಿನ ಜೀವನಶೈಲಿ, ಆಹಾರಕ್ರಮಗಳಿಂದ ಸಣ್ಣವಯಸ್ಸಿನಲ್ಲಿಯೇ ಕೊಲೆಸ್ಟೆರಾಲ್ ಸಮಸ್ಯೆಯನ್ನು ಹೊಂದಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ದೇಹದಲ್ಲಿ ಹೆಚ್ಚು ಕೊಲೆಸ್ಟೆರಾಲ್ ಉತ್ಪಾದನೆಗೆ ಪ್ರೇರೇಪಿಸುತ್ತದೆ. ಅದಕ್ಕಾಗಿಯೇ, ಕೊಲೆಸ್ಟೆರಾಲ್ ಹೆಚ್ಚಿದ್ದಾಗ ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ಜಾಗ್ರತೆ ವಹಿಸುವ ಸಲಹೆಯನ್ನು ಎಲ್ಲರಿಂದ ಕೇಳುತ್ತೇವೆ. ಎಣ್ಣೆ ಬಳಕೆ ಕಡಿಮೆಯಿರಲಿ ಎಂಬುದು ವೈದ್ಯರಿಂದ ಹಿಡಿದು ಎಲ್ಲರಿಂದ ಬರುವ ಉಚಿತ ಸಲಹೆ. ಹಾಗಾದರೆ, ನಿತ್ಯ ಬಳಕೆಗೆ ಯಾವ ಎಣ್ಣೆ ಬಳಸಬಹುದು ಎಂಬ ಸಂದೇಹಗಳು ಸಾಮಾನ್ಯ. ತಿಳಿದಷ್ಟೂ ಪ್ರಶ್ನೆಗಳು ಹೆಚ್ಚುವುದು. ಯಾಕೆಂದರೆ ಇದು ಮುಗಿಯದ ಮಾಹಿತಿಗಳ ಖಜಾನೆ.ಹಾಗಾದರೆ, ಕೊಲೆಸ್ಟೆರಾಲ್ ಸಮತೋಲನದಲ್ಲಿಡಲು ಯಾವ ಎಣ್ಣೆಯನ್ನು ಹಿತಮಿತವಾಗಿ ಅಡುಗೆಗೆ ಬಳಸಬಹುದು ಎಂಬುದನ್ನು ಇಲ್ಲಿ ನೋಡೋಣ.
೧. ಎಳ್ಳೆಣ್ಣೆ: ಕಡಿಮೆ ಕೊಲೆಸ್ಟೆರಾಲ್ ಇರುವ ಎಳ್ಳೆಣ್ಣೆಯಲ್ಲಿ ಸ್ಮೋಕಿಂಗ್ ಪಾಯಿಂಟ್ ಕಡಿಮೆ. ಇದರಲ್ಲಿ ಸಮತೂಕದ ಕೊಬ್ಬು ಇದೆ. ಅಡುಗೆಗೆ, ಸಲಾಡ್ ಡ್ರೆಸ್ಸಿಂಗ್‌ಗೆ ಎಳ್ಳೆಣ್ಣೆಯನ್ನು ಬಳಸುವುದು ಹಲವೆಡೆ ಚಾಲ್ತಿಯಲ್ಲಿದೆ. ಕೊಂಚ ಬೇರೆಯೇ ಪರಿಮಳವಿರುವುದರಿಂದ ಇದು ಹಲವರಿಗೆ ಇಷ್ಟವಾಗದು. ಆದರೆ, ಆರೋಗ್ಯದ ದೃಷ್ಠಿಯಿಂದ ಎಳ್ಳೆಣ್ಣೆ ಉತ್ತಮ.
೨. ಕಡಲೆ ಎಣ್ಣೆ: ಕೋಲ್ಡ್ ಪ್ರೆಸ್ಸ್ಡ್ ಕಡಲೆ ಎಣ್ಣೆಯೂ ಕೊಲೆಸ್ಟೆರಾಲ್ ಸಮಸ್ಯೆಯಿರುವ ಮಂದಿಗೆ ಉತ್ತಮ ಆಯ್ಕೆ. ಇದು ಹೆಚ್ಚು ಸ್ಮೋಕಿಂಗ್ ಪಾಯಿಂಟ್ ಇರುವ ಎಣ್ಣೆಯಾದ್ದರಿಂದ ಗ್ರಿಲ್ ಮಾಡಲು, ತರಕಾರಿಗಳನ್ನು ರೋಸ್ಟ್ ಮಾಡಲು, ಮಾಂಸ ಹುರಿಯಲು ಬಳಸುವುದು ಒಳ್ಳೆಯದು. ಎಣ್ಣೆಯಲ್ಲಿ ಕರಿದ ತಿಂಡಿ ಮಾಡಲು ಕಡಲೆ ಎಣ್ಣೆಯಲ್ಲಿ ಕರಿಯಬಹುದಾದರೂ, ಜನರು ಬಳಸುತ್ತಿರುವುದು ಹೌದಾದರೂ ಇದು ಒಳ್ಳೆಯ ಆಯ್ಕೆಯಲ್ಲ. ಯಾಕೆಂದರೆ, ಎಣ್ಣೆಯಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸಿಗುವುದಿಲ್ಲ.
ಇದನ್ನೂ ಓದಿ | Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!
೩. ಆಲಿವ್ ಎಣ್ಣೆ: ಇದರಲ್ಲಿ ಕೊಲೆಸ್ಟೆರಾಲ್ ಸ್ವಲ್ಪವೂ ಇಲ್ಲವಾದ್ದರಿಂದ ಬಹುತೇಕರು ಆಲಿವ್ ಎಣ್ಣೆ ಕೊಲೆಸ್ಟೆರಾಲ್ ತೊಂದರೆ ಇರುವ ಮಂದಿಗೆ ಒಳ್ಲೆಯದು ಎಂದು ಹೇಳುತ್ತಲೇ ಬಂದಿದ್ದಾರೆ. ಇದೊಂದು ಅತ್ಯುತ್ತಮ ಆರೋಗ್ಯಕರ ಆಯ್ಕೆ ನಿಜ. ಕೋಲ್ಡ್ ಪ್ರೆಸ್ಡ್ ಆಲಿವ್ ಎಣ್ಣೆ ಒಳ್ಳೆಯದು. ಎಕ್ಟ್ರಾ ವರ್ಜಿನ್ ಆಲಿವ್ ಎಣ್ಣೆಯ ಸ್ಮೋಕಿಂಗ್ ಪಾಯಿಂಟ್ ಹೆಚ್ಚೇನಿನ್ನವಾದ್ದರಿಂದ, ಇದನ್ನು ಕಡಿಮೆ ಉಷ್ಣತೆಯಲ್ಲಿ ಮಾಡುವ ಅಡುಗೆಗಳಿಗೆ ಬಳಸಿದರೆ ಒಳ್ಳೆಯದು. ಸಲಾಡ್, ಪಾಸ್ತಾ ಡ್ರೆಸ್ಸಿಂಗ್ ಇತ್ಯಾದಿಗಳಿಗೆ ಇದು ಪರ್ಫೆಕ್ಟ್.
೪. ಚಿಯಾ ಬೀಜದೆಣ್ಣೆ: ಹೊಂಬಣ್ಣದ ಈ ಎಣ್ಣೆ ಹೃದಯ ಸ್ನೇಹಿ. ಇದರಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿ ಇರುವುದರಿಂದ ಸಲಾಡ್ ಡ್ರೆಸ್ಸಿಂಗ್, ಪಾಸ್ತಾ, ಒಗ್ಗರಣೆ ಎಲ್ಲವಕ್ಕೂ ಬಳಸಬಹುದು. ಇದರ ಸ್ಮೋಕಿಂಗ್ ಪಾಯಿಂಟ್ ಬಹಳ ಜಾಸ್ತಿ. ಹಾಗೂ ಪರಿಮಳ ವಾಸನೆಯಿಲ್ಲದ ಎಣ್ನೆ. ಚಿಯಾ ಬೀಜಗಳಲ್ಲಿ ಅತ್ಯಂತ ಹೆಚ್ಚು ನಾರಿನಂಶ ಇದ್ದರೂ ಎಣ್ಣೆಯಲ್ಲಿ ಈ ಅಂಶ ಇಲ್ಲ.
೫. ಅವಕಾಡೋ ಎಣ್ಣೆ: ಬೆಣ್ಣೆ ಹಣ್ಣು ಅಥವಾ ಅವಕಾಡೋ ಹಣ್ಣಿನಿಂದಲೂ ಎಣ್ಣೆ ತೆಗೆಯುತ್ತಾರೆ ಎಂದರೆ ನಂಬುತ್ತೀರಾ? ಹೌದು. ಬೆಣ್ಣೆ ಹಣ್ಣಿನ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬು ಇದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು ಇದು ಹೃದಯಕ್ಕೆ ಒಳ್ಳೆಯದು. ಲುಟೈನ್ ಎಂಬ ಆಂಟಿ ಆಕ್ಸಿಡೆಂಟ್ ಇದರಲ್ಲಿರುವುದರಿಂದ ಹಾಗೂ ಇದು ನಮ್ಮ ದೇಹದಲ್ಲಿ ತಾನೇ ಉತ್ಪತ್ತಿಯಾಗುದಿಲ್ಲವಾದ್ದರಿಂದ ಇದು ಸಿಗುವ ಅತ್ಯುತ್ತಮ ಆಯ್ಕೆ ಇದು. ಆದರೆ ಇದು ಅತ್ಯಂತ ದುಬಾರಿ ಎಣ್ಣೆಯಾದ್ದರಿಂದ ದಿನಬಳಕೆಗೆ ಸಾಮಾನ್ಯರ ಕೈಗೆ ಎಟುಕದು.
ಇದನ್ನೂ ಓದಿ | Period problems | ಚಳಿಗಾಲದಲ್ಲೇ ಮುಟ್ಟಿನ ತೊಂದರೆಗಳು ಉಲ್ಬಣಿಸುವುದ್ಯಾಕೆ? ಇಲ್ಲಿವೆ ಪರಿಹಾರಗಳು!