ವರ್ಷದಲ್ಲೊಮ್ಮೆ ಬಂದು ಹೋಗುವ ಹೋಳಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದೇನೋ ಆಗಿದೆ. ಆದರೆ, ಹೋಳಿ ಬಿಟ್ಟು ಹೋದ ಕಲೆಯಿಂದ ಚರ್ಮದ ಸಮಸ್ಯೆಗೆ ಒಳಗಾಗುವ ಮಂದಿ ಅನೇಕ. ಬಣ್ಣಗಳಲ್ಲಿರುವ ರಾಸಾಯನಿಕಗಳಿಂದಾಗಿ ಅನೇಕರು, ಸೂಕ್ಷ್ಮ ಚರ್ಮದ ಮಂದಿಗೆ ಕಜ್ಜಿ, ತುರಿಕೆ, ಮೊಡವೆ, ಕೆಲದಿನಗಳಾದರೂ ಎಷ್ಟು ತೊಳೆದರೂ ಹೋಗದಿರುವ ಬಣ್ಣ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಹಬ್ಬ ತಂದ ಸಂತೋಷವನ್ನೆಲ್ಲ ಈ ಸಮಸ್ಯೆ ಕಸಿದುಕೊಂಡಂತಾಗಿ ಬೇಸರವೂ ಆಗಬಹುದು. ಆದರೆ, ಇದಕ್ಕಾಗಿ ತಲೆಬಿಸಿ ಮಾಡುವ ಅಗತ್ಯವಿಲ್ಲ. ಕೆಲದಿನಗಳಲ್ಲಿ ಈ ಸಮಸ್ಯೆ ಸರಿದಾರಿಗೆ ಬರುತ್ತದೆ. ಆದಷ್ಟು ಬೇಗ ಬರಬೇಕಾದಲ್ಲಿ ಕೆಲವೊಂದು ಸುಲಭವಾದ ಡಿಟಾಕ್ಸ್ ಡ್ರಿಂಕ್ ಮಾಡಿ ಕುಡಿಯಬಹುದು. ಇದರಿಂದ ಚರ್ಮ ಮತ್ತೆ ತನ್ನ ಆರೋಗ್ಯವನ್ನು ಒಳಗಿನಿಂದ ಪಡೆದುಕೊಂಡು ನಳನಳಿಸುತ್ತದೆ.
1. ಸೋರೆಕಾಯಿ ಜ್ಯೂಸ್: ಸೊರೆಕಾಯಿಯಲ್ಲಿ ಅತ್ಯಂತ ಹೆಚ್ಚು ನೀರಿದೆ. ಇದರಲ್ಲಿ ವಿಟಮಿನ್, ಸಿ, ಕೆ, ಕ್ಯಾಲ್ಶಿಯಂ, ಝಿಂಕ್ ಕೂಡಾ ಇವೆ. ಮೊಡವೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾದಲ್ಲಿ ಸೊರೆಕಾಯಿ ಜ್ಯೂಸ್ ಅತ್ಯಂತ ಒಳ್ಳೆಯದು. ಹಾಗಾಗಿ ಹೋಳಿ ಮುಗಿದ ತಕ್ಷಣ ಸೊರೆಕಾಯಿ ಜ್ಯೂಸ್ ಮಾಡಿ ಕುಡಿಯಲು ಶುರು ಮಾಡಿದರೆ ಚರ್ಮವನ್ನು ಎಂದೂ ಇಲ್ಲದಂತೆ ಕಂಗೊಳಿಸುವಂತೆ ಮಾಡುತ್ತದೆ.
2. ಸೌತೆಕಾಯಿ ಜ್ಯೂಸ್: ಸೌತೆಕಾಯಿಯು ಆಂಟಿ ಆಕ್ಸಿಡೆಂಟ್‌ನಿಂದಲೂ ಆಂಟಿ ಇನ್‌ಫ್ಲಮೇಟರಿ ಗುಣಗಳಿಂದಲೂ ಸಮೃದ್ಧವಾಗಿರುವುದರಿಂದ ಇದು ಚರ್ಮದ ಮೇಲಿನ ಬಾವು, ಉರಿಯೂತ, ಕಜ್ಜಿ, ಕಲೆ ಎಲ್ಲವನ್ನು ತೆಗೆದು ಹಾಕುತ್ತದೆ. ಚರ್ಮದ ಒಟ್ಟು ಆರೋಗ್ಯವನ್ನು ಕಾಪಾಡು ಶಕ್ತಿ ಇದಕ್ಕಿದೆ. ಹಾಗಾಗಿ ಹೋಳಿಯ ನಂತರ ಸೌತೆಕಾಯಿ ಜ್ಯೂಸ್ ಮಾಡಿ ಕುಡಿಯುವುದೂ ಕೂಡಾ ಅತ್ಯಂತ ಒಳ್ಳೆಯದು.
3. ಶುಂಠಿ- ನಿಂಬೆ ಚಹಾ: ನಿಂಬೆಹಣ್ಣು ದೇಹದ ವಿಷಕಾರಕಗಳನ್ನು ಹೊರಕ್ಕೆ ಕಳಿಸುವ ತಾಕತ್ತು ಹೊಂದಿರುವುದರಿಂದ ಹಾಗೂ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರಿಂದ ಅದು ಚರ್ಮದ ಮೇಳೆ ಉತ್ತಮ ಪರಿಣಾಮ ಬೀರುತ್ತದೆ. ಶುಂಠಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ರಕ್ತಪರಿಚಲನೆಯನ್ನು ಹೆಚ್ಚು ಮಾಡಿ, ಚರ್ಮದ ಆರೋಗ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: Healthy Nails: ಸುಂದರ ಉಗುರು ಬೇಕಾದರೆ ಇವೆಲ್ಲಾ ತಿನ್ನಬಹುದು!
4. ನಿಂಬೆ ಹಾಗೂ ಪುದಿನ ಜೊತೆ ಎಳನೀರು: ಎಳನೀರು ಬೇಸಿಗೆಯಲ್ಲಿ ಅತ್ಯಂತ ಒಳ್ಳೆಯದು. ವಿಟಮಿನ್ ಎ, ಕೆ, ಸಿಗಳಿಂದ ಸಮೃದ್ಧವಾಗಿರುವ ಇದು ಕೊಲಾಜೆನ್ ಉತ್ಪಾದನೆಯನ್ನೂ ಉದ್ದೀಪಿಸುತ್ತದೆ. ಕೊಲಾಜೆನ್ ಚರ್ಮದ ಆರೋಗ್ಯದ ಪ್ರಮುಖ ಕೀಲಿಕೈಯಾಗಿರುವುದರಿಂದ ಇದು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕೆ ಪುದಿನ ಹಾಗೂ ನಿಂಬೆರಸ ಸೇರಿಸಿ ಕುಡಿಯುವುದರಿಂದ ಹೆಚ್ಚು ಉತ್ತಮ ಫಲ ಕಾಣಬಹುದು.
5. ಕಲ್ಲಂಗಡಿ ಜ್ಯೂಸ್: ವಿಟಮಿನ್ ಎ ಅಧಿಕಾವಾಗಿರುವ ಕಲ್ಲಂಗಡಿ ಹಣ್ಣು ಹೋಳಿಯ ನಂತರ ಸೇವಿಸಬೇಕಾದ ಪ್ರಮುಖ ಹಣ್ಣು. ಇದು ಚರ್ಮವನ್ನು ರಿಪೇರಿ ಮಾಡುವ ಗುಣ ಹೊಂದಿದೆ. ಆರೋಗ್ಯಕರ ಚರ್ಮಕ್ಕೆ ಕಲ್ಲಂಗಡಿ ಹಣ್ಣು ಅತ್ಯಂತ ಮುಖ್ಯ ಕೂಡಾ. ವಿಟಮಿನ್ ಸಿ ಕೂಡಾ ಇದರಲ್ಲಿದ್ದು ಇದು ಕೊಲಾಜೆನ್ ಉತ್ಪಾದಿಸುವ ಗುಣವನ್ನು ಹೊಂದಿದೆ.
ಇದನ್ನೂ ಓದಿ: Health Tips: ಗ್ಯಾಸ್, ಹೊಟ್ಟೆಯುಬ್ಬರ ಸಮಸ್ಯೆಯ ನಿಯಂತ್ರಣಕ್ಕೆ ಸುಲಭೋಪಾಯಗಳು!