ಆರೋಗ್ಯಪೂರ್ಣವಾಗಿ ಬದುಕಬೇಕೆಂದರೆ ಬದುಕಿನ ಎಲ್ಲಾ ಅಭ್ಯಾಸಗಳೂ ಆರೋಗ್ಯದೆಡೆಗೇ ಕೊಂಡೊಯ್ಯಬೇಕು- ಈ ತತ್ವಜ್ಞಾನ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಈಗಾಗಲೇ ಇರುವಂಥ ಅಭ್ಯಾಸಗಳನ್ನು ಎಲ್ಲಿ ಮತ್ತು ಹೇಗೆ ಬದಲಿಸಬೇಕು? ಎಲ್ಲಿಂದ ಪ್ರಾರಂಭಿಸಬೇಕು ಎಂಬುದು ಕೆಲವು ಬಾರಿ ಬಗೆಹರಿಯುವುದಿಲ್ಲ. ಮುಖ್ಯವಾಗಿ ಬಾಯಿ ಬೇಡುವುದನ್ನು ಅಥವಾ ಜಿಹ್ವಾ ಚಾಪಲ್ಯವನ್ನು ತಣಿಸುತ್ತಾ ಬಂದವರಿಗೆ ಈಗ ಇದ್ದಕ್ಕಿದ್ದಂತೆ ಆರೋಗ್ಯಕರ ತಿನಿಸುಗಳು (Healthy Food) ಆದ್ಯತೆಯಾಗಬೇಕು ಎಂದರೆ- ʻನನ್ನಿಷ್ಟದ ಈರುಳ್ಳಿ ಪಕೋಡಾ, ಜಿಲೇಬಿಗಳನ್ನೆಲ್ಲಾ ಬಿಟ್ಟು ಬದುಕುವುದಾದರೂ ಹೇಗೆ?ʼ ಎಂದು ಗೋಳಾಡುವಂತಾಗುತ್ತದೆ. ಇಂಥ ಕೆಲವು ಸರಳ ಮಾರ್ಪಾಡುಗಳಿಂದ ಬದಲಾವಣೆಯನ್ನು ಪ್ರಾರಂಭಿಸಬಹುದು.
ಸಕ್ಕರೆಭರಿತ ಜ್ಯೂಸ್: ಇವುಗಳಿಂದಲೇ ಪ್ರಾರಂಭಿಸೋಣ. ಬಣ್ಣಬಣ್ಣದ ಬಾಟಲಿಗಳಲ್ಲಿರುವ ಜ್ಯೂಸ್‌ಗಳು ಕಣ್ಮನ ಸೆಳೆಯುವ ಬಗ್ಗೆ ಅನುಮಾನವೇ ಇಲ್ಲ. ಆದರೆ ನಿಸ್ಸಂದೇಹವಾಗಿ ಆರೋಗ್ಯಕ್ಕೂ ಹಾನಿಕರ. ಸಿಕ್ಕಾಪಟ್ಟೆ ಫ್ರಕ್ಟೋಸ್ ಇರುವ ಇವು ಶರೀರದ ಮೇಲೆ ನಾನಾ ರೀತಿಯಲ್ಲಿ ಪ್ರತಾಪ ತೋರಿಸುತ್ತವೆ. ಹಲ್ಲುಗಳನ್ನೂ ಹಾಳು ಮಾಡುತ್ತವೆ. ಬದಲಿಗೆ, ಸರಳವಾಗಿ ನೀರಿಗೆ ಬೇಕಾದ ಹಣ್ಣುಗಳ ರಸಗಳನ್ನು ಸೇರಿಸಿಕೊಳ್ಳಬಹುದು, ಸಿಹಿ ಇಲ್ಲದೆಯೇ! ನಿಜ ಬೆಲ್ಲ-ಸಕ್ಕರೆ ಹಾಕದೆಯೇ ಹಲವು ಫ್ಲೇವರ್‌ಗಳನ್ನು ಒಂದಕ್ಕೊಂದು ಬೆರೆಸಿದರೆ ಸೋಜಿಗದ ರುಚಿಯ ಪೇಯ ಸಿದ್ಧವಾಗುತ್ತದೆ. ಉದಾ, ಕೆಲವು ಚಮಚ ಅನಾಸಸ್ ರಸಕ್ಕೆ ಒಂದೆರಡು ಹನಿ ನಿಂಬೆರಸ ಅಥವಾ ಸಣ್ಣ ಚೂರು ಚಕ್ಕೆಯನ್ನು ನೆನೆಸಿದ ನೀರಿಗೆ ಒಂದೆರಡು ಹನಿ ಪುದೀನಾ ರಸ- ಇಂಥವು.
ಸಂಸ್ಕರಿತ ಆಹಾರ: ಹಸಿವಾದಾಗೆಲ್ಲ ನಮ್ಮ ಕೈಗೆ ಸುಲಭವಾಗಿ ಎಟುಕಬಲ್ಲ ಚಿಪ್ಸ್, ಕುಕೀಸ್ ಮುಂತಾದವುಗಳ ಚಟ ಅಂಟಿದರೆ ಬಿಡುವುದು ಕಷ್ಟವೇ. ಆದರೆ ಮುಂದುವರಿದರೆ ಇನ್ನಷ್ಟು ಕಷ್ಟ. ಇವುಗಳ ಬದಲಿಗೆ ಹಸಿವಾದಾಗ ಹಣ್ಣುಗಳು ಸರಿ. ಅದಲ್ಲದಿದ್ದರೆ ತರಕಾರಿ ಸಲಾಡ್ ಅಥವಾ ಒಣಹಣ್ಣು-ಬೀಜಗಳು, ಮತ್ತೂ ಹಸಿವಾದರೆ ಪ್ರೊಟೀನ್ ಬಾರ್ ಅಥವಾ ಶೇಂಗಾ ಚಿಕ್ಕಿಗಳು- ನೋಡಿ ಎಷ್ಟೆಲ್ಲಾ ಆಯ್ಕೆಗಳಿವೆ ನಮಗೆ! ಮಾಂಸಾಹಾರಿಗಳಾಗಿದ್ದರೆ ಸಂಸ್ಕರಿತ ರೆಡ್‌ಮೀಟ್‌ನಂಥವು ಯಾವತ್ತಿದ್ದರೂ ತೊಂದರೆ ತರುತ್ತವೆ. ಆದಷ್ಟೂ ಕೊಬ್ಬು ಕಡಿಮೆಯಿರುವ, ಸಂಸ್ಕರಿಸದ ಆಹಾರ ಕ್ಷೇಮ.
ಚಟುವಟಿಕೆ ಬೇಕು: ಇದರ ಬಗ್ಗೆ ಉಪನ್ಯಾಸವೇ ಬೇಡ. ಟಿವಿ ಮುಂದೆ ಕೂತರೆ ಎಷ್ಟೊಂದು ಚಾಲನ್‌ಗಳನ್ನು ಚಟಪಟ ಬದಲಾಯಿಸಿ, ಯಾವ್ಯಾವ ಧಾರಾವಾಹಿಯಲ್ಲಿ ಏನೇನಾಗುತ್ತಿದೆ ಎಂಬುದನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುತ್ತೇನೆ ಎಂದುಕೊಂಡರೆ- ಆ ಕ್ರಿಯಾಶೀಲತೆಯ ಬಗ್ಗೆಯಲ್ಲ ಇಲ್ಲಿ ಹೇಳುತ್ತಿರುವುದು. ನಿಮ್ಮಿಷ್ಟದ ಯಾವುದಾದರೂ ದೈಹಿಕ ಚಟುವಟಿಕೆ- ನಡಿಗೆ, ಜಾಗಿಂಗ್, ಸೈಕಲಿಂಗ್, ಯೋಗ, ಏರೋಬಿಕ್ಸ್, ಈಜು, ಝುಂಬಾ, ನಾಟ್ಯ, ಜಿಮ್- ಎಷ್ಟೊಂದು ಅವಕಾಶಗಳಿವೆ ಚಟುವಟಿಕೆಗೆ. ಆಸಕ್ತಿ-ಅನುಕೂಲಕ್ಕೆ ಸೂಕ್ತವಾದ್ದನ್ನು ಮಾಡಲೇಬೇಕು.
ಕ್ರಮ ಬದಲಿಸಿ: ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಅಡುಗೆಯನ್ನು ನೀವು ಮಾಡುವವರಾದರೆ, ಕೆಲವು ಮಾರ್ಪಾಡುಗಳನ್ನು ಖಂಡಿತಾ ಮಾಡಬಹುದು. ಕರಿದ ತಿಂಡಿಗಳ ಬದಲು ಬೇಕ್ ಮಾಡಿದ ಅಥವಾ ಹಬೆಯಲ್ಲಿ ಬೇಯಿಸಿದ ತಿಂಡಿಗಳನ್ನು ಆಯ್ಕೆ ಮಾಡಿ. ಕರಿಯಲೇ ಬೇಕೆಂದಿದದ್ದರೆ ಡೀಪ್ ಫ್ರೈಯಿಂಗ್ ಬದಲು ಏರ್ ಫ್ರೈಯಿಂಗ್ ಆಗುತ್ತದಾ ನೋಡಿ. ಫ್ರೈಡ್ ಮೋಮೋಗಳಂತೆಯೇ ಸ್ಟೀಮ್ಡ್ ಮೋಮೋಗಳೂ ರುಚಿಯಾಗಿರುತ್ತವೆ. ಆಯ್ಕೆ ನಿಮ್ಮದು.
ಇದನ್ನೂ ಓದಿ | Health Tips | ಹೊಸ ವರ್ಷದ ಕನಸು ಗುರಿಗಳ ಪೈಕಿ ಇವಿಷ್ಟು ವರ್ಷಪೂರ್ತಿ ಮುಖ್ಯವಾಗಿರಲಿ!