Site icon Vistara News

Healthy food for Kidney: ಕಿಡ್ನಿ ಸಮಸ್ಯೆಯೇ? ಈ ಆಹಾರಗಳು ಕಿಡ್ನಿ ಆರೋಗ್ಯಕ್ಕೆ ಪೂರಕ!

kidney health foods

ವಂಶವಾಹಿನಿಗಳಿಂದ (Genes) ಬರುವ ಕೆಲವು ಆರೋಗ್ಯ ಸಮಸ್ಯೆಗಳಿರುತ್ತವೆ. ಅವುಗಳಲ್ಲಿ ಹಲವನ್ನು ಪೂರ್ತಿಯಾಗಿ ವಾಸಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಅವುಗಳನ್ನು ಹತೋಟಿಯಲ್ಲಿಡಲು, ಆರೋಗ್ಯ ಸಮತೋಲನದಲ್ಲಿಡಲು (healthy life) ನಾವು ಕೆಲವು ಶಿಸ್ತುಬದ್ಧ ಆಹಾರ ಸೇವನೆ ಮಾಡಬೇಕಾಗುತ್ತದೆ. ಇಂತಹ ವಂಶವಾಹಿನಿಗಳ ಮೂಲಕ ಬರುವ ಸಮಸ್ಯೆಗಳ ಪೈಕಿ ಕಿಡ್ನಿಯ ಪಾಲಿಸಿಸ್ಟಿಕ್‌ ಕಿಡ್ನಿ ಡಿಸೀಸ್‌ (ಪಿಕೆಡಿ) ಕೂಡಾ ಒಂದು. ಕಿಡ್ನಿಯಲ್ಲಿ ಕ್ಯಾನ್ಸರ್‌ಕಾರಕವಲ್ಲದ ಗಡ್ಡೆ ಚೀಲಗಳಂಥವು ಬೆಳೆಯುವ ಈ ಆರೋಗ್ಯ ಸಮಸ್ಯೆ (kidney disease) ಬಹಳ ಸಾಮಾನ್ಯವಾದ ಕಾಯಿಲೆಯೇನೋ ಹೌದಾದರೂ, ಇದರ ಪರಿಣಾಮ ಕೆಲವೊಮ್ಮೆ ಅಸಹನೀಯವಾಗುತ್ತದೆ. ಬೆನ್ನು ನೋವು (backache), ಸೊಂಟನೋವು, ಅತಿಯಾದ ರಕ್ತದೊತ್ತಡ (blood pressure) , ಉಬ್ಬರಿಸಿದ ಹೊಟ್ಟೆ ಇತ್ಯಾದಿ ಈ ಸಮಸ್ಯೆಯ ಲಕ್ಷಣಗಳು. ಈ ತೊಂದರೆಗಳು ಕಾಣಿಸಿಕೊಳ್ಳದಂತೆ ಮಾಡಲು ಇರುವ ದಾರಿಯೊಂದೇ. ಅದು ಶಿಸ್ತುಬದ್ಧ ಆಹಾರ (healthy food) ಸೇವನೆ. ಕಿಡ್ನಿಯ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ನಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಈ ಸಮಸ್ಯೆಗಳನ್ನು ಹತೋಟಿಯಲ್ಲಿಡಬಹುದು. ಬನ್ನಿ, ಯಾವೆಲ್ಲ ಆಹಾರಗಳನ್ನು ಸೇವಿಸುವ ಮೂಲಕ ಕಿಡ್ನಿಯ ಸಮಸ್ಯೆಗಳಿಂದ (healthy food for kidney) ದೂರವಿರಬಹುದು ಎಂಬುದನ್ನು ನೋಡೋಣ.

1. ಬೆಳ್ಳುಳ್ಳಿ: ಕಿಡ್ನಿಗೆ ಸದಾ ಒಳ್ಳೆಯದನ್ನೇ ಬಯಸುವ ಪ್ರಮುಖ ಆಹಾರಗಳ ಪೈಕಿ ಬೆಳ್ಳುಳ್ಳಿಯೂ ಒಂದು. ಇದರಲ್ಲಿರುವ ಆಲಿಸಿನ್‌ ಎಂಬ ರಾಸಾಯನಿಕವು ಕಿಡ್ನಿಯ ಈ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ ಎಂಬುದನ್ನು ಸಂಶೋಧನೆಗಳೂ ಪುಷ್ಟೀಕರಿಸುತ್ತದೆ. ಕೇವಲ ಇದೊಂದೇ ಸಮಸ್ಯೆ ಅಲ್ಲ, ಕಿಡ್ನಿಯ ಎಲ್ಲ ಬಗೆಯ ಸಮಸ್ಯೆಗಳಿಗೂ ಬೆಳ್ಳುಳ್ಳಿ ಅತ್ಯುತ್ತಮ ಆಹಾರ. ಇದು ರಕ್ತದೊತ್ತಡದಂತಹ ಸಮಸ್ಯೆ ಹಾಗೂ ಕೊಲೆಸ್ಟೆರಾಲ್‌ ಸಮಸ್ಯೆಗೂ ಪರಿಹಾರ ಒದಗಿಸುವ ಮೂಲಕ ಪರೋಕ್ಷವಾಗಿ ಕಿಡ್ನಿಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

2. ಈರುಳ್ಳಿ: ನಿಮ್ಮ ದೇಹದಲ್ಲಿ ಸೋಡಿಯಂ ಅತ್ಯಂತ ಹೆಚ್ಚಾದಾಗ ಅದನ್ನು ದೇಹದಿಂದ ಹೊರಗೆ ಕಳಿಸುವ ಕೆಲಸ ಮಾಡುವ ಕಿಡ್ನಿಗೆ ಇದು ತ್ರಾಸದಾಯಕವಾಗಿ ಪರಿಣಮಿಸುತ್ತದೆ. ಹಾಗಾಗಿ, ಅಂಥ ಸಂದರ್ಭ ಈರುಳ್ಳಿ ನಿಮ್ಮ ಸಹಾಯಕ್ಕೆ ಬರುತ್ತದೆ. ಯಾಕೆಂದರೆ ಈರುಳ್ಳಿಯಲ್ಲಿ ಕಡಿಮೆ ಸೋಡಿಯಂ ಇದೆ.

3. ಮೂಲಂಗಿ: ಮೂಲಂಗಿ ಕೂಡಾ ಕಿಡ್ನಿಗೆ ಒಳ್ಳೆಯದು. ಇದು ಕಿಡ್ನಿಯ ಕ್ಲೀನಿಂಗ್‌ ಏಜೆಂಟ್‌ನಂತೆ ವರ್ತಿಸುತ್ತದೆ. ಕಿಡ್ನಿಯಲ್ಲಿರುವ ಕಶ್ಮಲಗಳನ್ನೆಲ್ಲಾ ಹೊರಗೆ ಎತ್ತಿ ಎಸೆಯುವ ಕಾರ್ಯವನ್ನು ಇದು ಮಾಡುತ್ತದೆ.

4. ಅನನಾಸು: ಅನನಾಸಿನಲ್ಲಿ ಕಡಿಮೆ ಪ್ರಮಾಣದ ಪೊಟಾಶಿಯಂ, ಫಾಸ್ಪರಸ್‌, ಹಾಗೂ ಸೋಡಿಯಂ ಇರುವುದರಿಂದ ಇದು ಕಿಡ್ನಿಗೆ ಒಳ್ಳೆಯದನ್ನೇ ಬಗೆಯುತ್ತದೆ.

5. ಕ್ಯಾಬೇಜ್‌: ಕಿಡ್ನಿ ಸಂಬಂಧಿತ ಯಾವುದೇ ಸಮಸ್ಯೆ ಇದ್ದರೂ ಕ್ಯಾಬೇಜನ್ನು ಹೆಚ್ಚು ಚಿಂತಿಸದೆ ತಿನ್ನಬಹುದು. ಯಾಕೆಂದರೆ ಕ್ಯಾಬೇಜು ಕಿಡ್ನಿಯ ಆರೋಗ್ಯಕ್ಕೆ ಪೂರಕ. ಇದರಲ್ಲಿ ಪೊಟಾಶಿಯಂ ಕಡಿಮೆ ಇದ್ದು, ಫೋಲಿಕ್‌ ಆಸಿಡ್‌, ವಿಟಮಿನ್‌ ಬಿ6 ಹೇರಳವಾಗಿ ಇರುವುದರಿಂದ ಇದು ಕಿಡ್ನಿಯ ಸಮಸ್ಯೆಗಳ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ.

6. ಚಿಕನ್:‌ ಪ್ರೊಟೀನ್‌ನ ಅತ್ಯುತ್ತಮ ಮೂಲವಾಗಿರುವ ಇದು ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಚಿಕನ್‌ ಕಿಡ್ನಿಗೆ ಒಳ್ಳೆಯದು ಎಂದುಕೊಂಡು ನಿತ್ಯ ಚಿಕನ್‌ ತಿಂದರೆ ಖಂಡಿತವಾಗಿ ಅಡ್ಡ ಪರಿಣಾಮ ಎದುರಿಸಬೇಕಾದೀತು. ಮಿತವಾಗಿ ತಿನ್ನುವುದು ಯಾವತ್ತಿಗೂ ಒಳ್ಳೆಯದು, ನೆನಪಿಡಿ.

7. ಮೀನು: ಮೀನು ಕೂಡಾ ಕಿಡ್ನಿಗೆ ಒಳ್ಳೆಯದನ್ನೇ ಮಾಡುತ್ತದೆ. ಆದರೆ, ಮೀನು ಕೂಡಾ ಕಿಡ್ನಿಗೆ ಒಳ್ಳೆಯದೆಂದು ಮೀನನ್ನೇ ತಿನ್ನುತ್ತಿದ್ದರೆ, ಖಂಡಿತಾ ಇದರಿಂದ ಒಳ್ಳೆಯದಾಗದು. ಯಾಕೆಂದರೆ ಮೀನಿನಲ್ಲಿರುವ ಅತ್ಯಂತ ಹೆಚ್ಚಿನ ಪ್ರೊಟೀನು ರಕ್ತದಲ್ಲಿ ಕಲ್ಮಶಗಳನ್ನು ಸೃಷ್ಟಿಸಬಹುದು. ಹಾಗಾಗಿ, ಕಿಡ್ನಿಯ ಆರೋಗ್ಯದ ದೃಷ್ಠಿಯಿಂದ ನೀವು ಮೀನು ತಿನ್ನುವ ಯೋಚನೆ ಮಾಡಿದ್ದರೆ, ಸಂಬಂಧಪಟ್ಟ ವೈದ್ಯರನ್ನು ಅಥವಾ ಡಯಟೀಶಿಯನ್‌ ಅವರನ್ನು ಸಂಪರ್ಕಿಸಿ, ಅವರ ಸಲಹೆಯ ಮೇರೆಗೆ ಮುಂದುವರಿಯಿರಿ.

ಇದನ್ನೂ ಓದಿ: Kidney Stones: ಕಿಡ್ನಿ ಕಲ್ಲಿನ ಬಗ್ಗೆ ನಾವು ಈ ವಿಷಯ ತಿಳಿದಿರಬೇಕು

Exit mobile version