Site icon Vistara News

Holi 2024: ಹೋಳಿ ಆಡಿ, ಆ ಬಳಿಕ ನಿಮ್ಮ ಚರ್ಮವನ್ನು ಹೀಗೆ ಕಾಪಾಡಿ

Holi 2024

ಇನ್ನೇನು ಹೋಳಿ (Holi 2024) ಹಬ್ಬ ಬಂತಲ್ಲ. ಬಣ್ಣದೋಕುಳಿ ಎರಚಾಡುವ ಮುನ್ನ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅರೆ! ಈಗಿಂದೇನು ತಯಾರಿ? ಆ ದಿನ ಒಂದಿಷ್ಟು ಬಣ್ಣ ಸಿದ್ಧ ಮಾಡಿಕೊಂಡರೆ ಸಾಕಾಗದೆ ಎಂದರೆ… ಓಕುಳಿ ಆಡುವುದಕ್ಕೆ ಸಾಕು. ಓಕುಳಿ ಆಡುವುದೇ ಹೌದು ಎಂದಾಗ ಸ್ವಲ್ಪ ಆಡಿ ನಿಲ್ಲಿಸುವುದು ಕಷ್ಟ. ಬಣ್ಣದ ಬೊಂಬೆಗಳಂತೆ ಮೈ-ಮುಖವೆಲ್ಲಾ ಕಾಮನಬಿಲ್ಲಿನ ರಂಗಿನಲ್ಲಿ ಅದ್ದಿಹೋದ ಮೇಲೆಯೇ ಮನಸ್ಸು ತುಂಬುವುದು. ಆದರೆ ಬಣ್ಣದಾಟದ ನಂತರ ಚರ್ಮದ ಗತಿಯೇನು?
ಎಷ್ಟು ತೊಳೆದರೂ ಹೋಗದಿರುವ ಬಣ್ಣ, ಅಲ್ಲಲ್ಲಿ ಚರ್ಮ ಕೆಂಪಾಗುವುದು, ಉರಿ, ತುರಿಕೆ, ಚರ್ಮವೆಲ್ಲ ಒಣಗಿದ, ಬಿರಿದ ಅನುಭವ… ಇವೆಲ್ಲ ಬಣ್ಣದಾಟದ ನಂತರ ಇದ್ದಿದ್ದೇ. ಅದರಲ್ಲೂ ಕೆಲವು ಗಾಢ ವರ್ಣಗಳು ಚರ್ಮದ ರಂಧ್ರಗಳನ್ನೆಲ್ಲ ಮುಚ್ಚಿ ಹಾಕಿ, ತ್ವಚೆಗೆ ಉಸಿರಾಡುವುದಕ್ಕೇ ತೊಂದರೆ ತಂದು ಬಿಡುತ್ತವೆ. ಸೂಕ್ಷ್ಮ ಚರ್ಮದವರಿಗಂತೂ ಒಂದಿನ ಆಡಿದ ಬಣ್ಣದೋಕುಳಿಯು ವಾರಗಟ್ಟಲೆ ಚರ್ಮಕ್ಕೆ ಹೊಸ ರಂಗೇರಿಸಿಬಿಡುತ್ತದೆ. ಅಂದರೆ ಕೆಂಪಾಗಿಸಿ ಅಲರ್ಜಿ ತಂದು ಬಿಡುತ್ತದೆ. ಇದನ್ನೆಲ್ಲ ನೆನಪಿಸಿಕೊಂಡರೆ ಓಕುಳಿ ಆಡುವುದೇ ಬೇಡ ಎನಿಸಿದರೆ ಅಚ್ಚರಿಯಿಲ್ಲ. ಆದರೆ ಹೋಳಿ ಹಬ್ಬಕ್ಕೆ ಪೂರ್ವದಲ್ಲೇ ಕೆಲವು ಸಿದ್ಧತೆಗಳನ್ನು ಮಾಡಿಕೊಂಡರೆ, ಚರ್ಮಕ್ಕಾಗುವ ಹಾನಿಯಲ್ಲಿ ತಪ್ಪಿಸಬಹುದು. ಬಣ್ಣದಾಟವನ್ನೂ ಆಡಬಹುದು. ಏನು ಮಾಡಬೇಕು?

ಮೊದಲಿನ ಸಿದ್ಧತೆ

ಹೋಳಿ ಹಬ್ಬಕ್ಕೆ ಎರಡು ವಾರಗಳ ಮೊದಲು ತ್ವಚೆಯನ್ನು ಲಘುವಾಗಿ ಎಕ್ಸ್‌ಫೋಲಿಯೇಟ್‌ ಮಾಡಿ. ಇದಕ್ಕಾಗಿ ಮಾರುಕಟ್ಟೆಯ ದುಬಾರಿ ವಸ್ತುಗಳನ್ನು ತರಬೇಕೆಂದಿಲ್ಲ. ಮನೆಯಲ್ಲೇ ಕಡಲೆಹಿಟ್ಟಿಗೆ ಮೊಸರು ಕಲೆಸಿ ಮುಖಕ್ಕೆ ನವಿರಾಗಿ ಮಸಾಜ್‌ ಮಾಡಬಹುದು. ಇದರಿಂದ ಮುಖದ ಮೇಲಿನ ನಿರ್ಜೀವ ಕೋಶಗಳನ್ನು ತೆಗೆಯಲು ಸಾಧ್ಯವಿದೆ. ಆ ನಂತರದ ನಿಮ್ಮ ಆರೈಕೆಯನ್ನು ಚರ್ಮ ಹೀರಿಕೊಳ್ಳಲು ಸುಲಭವಾಗುತ್ತದೆ.
ಒಂದು ವಾರ ಮೊದಲಿನಿಂದಲೇ ಚರ್ಮಕ್ಕೆ ಬೇಕಾದ ತೇವವನ್ನು ಧಾರಾಳವಾಗಿ ನೀಡಿ. ಚೆನ್ನಾಗಿ ನೀರು ಕುಡಿಯಿರಿ. ಪರಿಮಳವಿಲ್ಲದ ಮೃದುವಾದ ಕ್ಲೆನ್ಸರ್‌ ಬಳಸಿ. ನಂತರ ಶುದ್ಧ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯಂಥ ತೈಲಗಳಿಂದ ವೃತ್ತಾಕಾರದಲ್ಲಿ ಚರ್ಮಕ್ಕೆ ಮಸಾಜ್‌ ಮಾಡಿ. ಸಾಮಾನ್ಯವಾಗಿ ಬಣ್ಣ ತಾಗುವಂಥ ದೇಹದ ಭಾಗಗಳಾದ ಕುತ್ತಿಗೆ, ಉಗುರು, ಕೈ, ತೋಳಿನಂಥ ಭಾಗಗಳಿಗೂ ಸಾಕಷ್ಟು ಮ್ಯಾಯಿಶ್ಚರೈಸರ್‌ ಹಚ್ಚಿ. ಹಬ್ಬಕ್ಕೆ ಒಂದೆರಡು ದಿನ ಮೊದಲು ಬಣ್ಣಕ್ಕೆ ತೆರೆದುಕೊಳ್ಳುವ ದೇಹದ ಭಾಗಗಳಿಗೆ ಸಾಕಷ್ಟು ತೈಲ ಲೇಪನ ಮಾಡಿ. ಇದರಿಂದ ಬಣ್ಣ ಮತ್ತು ನಿಮ್ಮ ಚರ್ಮದ ನಡುವೆ ರಕ್ಷಣಾ ಕವಚದಂತೆ ಈ ತೈಲದಂಶ ಕೆಲಸ ಮಾಡುತ್ತದೆ. ಅಂಟಿದ ಬಣ್ಣವನ್ನು ಸುಲಭವಾಗಿ ತೆಗೆಯುವುದಕ್ಕೆ ನೆರವಾಗುತ್ತದೆ.

ಹೋಳಿಯ ನಂತರ

ಮೈಮೇಲಿನ ಬಣ್ಣ ಒಣಗುವ ಮುನ್ನ ತೊಳೆಯಿರಿ. ಬೆಳಗಿನಿಂದ ಸಂಜೆಯವರೆಗೆ ಬಣ್ಣ ಬಳಿದುಕೊಂಡು ಊರು ಸುತ್ತುತ್ತಿದ್ದರೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಬಣ್ಣ ತೊಳೆಯುವಾಗ ಕಠೋರವಾದ ಸೋಪು, ಕ್ಲೆನ್ಸರ್‌ಗಳನ್ನು ಬಳಸಬೇಡಿ. ಆದಷ್ಟೂ ನೈಸರ್ಗಿಕ ವಸ್ತುಗಳಿಂದ ತಯಾರಾದ ಉತ್ಪನ್ನಗಳನ್ನೇ ಬಳಸಿ. ತೈಲಾಧಾರಿತ ಕ್ಲೆನ್ಸರ್‌ಗಳು ಈ ಹೊತ್ತಿನಲ್ಲಿ ಉಪಯುಕ್ತ. ಉಗುರು ಬಿಸಿ ನೀರಿನಲ್ಲೇ ಮುಖ ತೊಳೆಯಿರಿ. ಬಿಸಿ ನೀರನ್ನು ಉಪಯೋಗಿಸಿದರೆ ಚರ್ಮದ ನೈಸರ್ಗಿಕ ಎಣ್ಣೆಯಂಶ ಹೋಗಿ, ತ್ವಚೆ ಒಣಗಿದಂತಾಗಿ ಕೆಂಪಾಗಿ ಉರಿಯುತ್ತದೆ. ತೊಳೆದ ತಕ್ಷಣ ಕೊಬ್ಬರಿ ಎಣ್ಣೆ ಹಚ್ಚಿ.

ಫೇಸ್‌ಮಾಸ್ಕ್‌

ಅಲೋವೇರಾದಂಥ ನೈಸರ್ಗಿಕ ಉತ್ಪನ್ನಗಳಿರುವ ಪೋಷಣೆಯುಕ್ತ ಫೇಸ್‌ಮಾಸ್ಕ್‌ ಉಪಯೋಗಿಸುವುದು ಒಳ್ಳೆಯದು. ಬಣ್ಣ ತೊಳೆದ ಒಂದೆರಡು ತಾಸುಗಳಲ್ಲಿ ಇದನ್ನು ಬಳಸಬಹುದು. ಮನೆಯಲ್ಲೇ ನಿಮಗೆ ಬೇಕಾದ ಫೇಸ್‌ಪ್ಯಾಕ್‌ ಮಾಡಿಕೊಳ್ಳಲೂ ಬಹುದು. ಸೌತೇಕಾಯಿ, ಓಟ್‌ಮೀಲ್‌, ತೆಂಗಿನ ಹಾಲು ಮತ್ತು ಒಂದೆರಡು ಹನಿ ಜೇನುತುಪ್ಪ ಸೇರಿಸಿದ ಫೇಸ್‌ಮಾಸ್ಕ್‌ ಚರ್ಮಕ್ಕೆ ಅಗತ್ಯವಾದ ಸತ್ವಗಳನ್ನು ಒದಗಿಸುತ್ತದೆ.

ತೇವ ಕಾಪಾಡಿ

ಕಡೆಯದಾಗಿ, ಹ್ಯಾಲುರೋನಿಕ್‌ ಸೀರಂ ಬಳಸುವ ಅಭ್ಯಾಸವಿದ್ದರೆ, ಅದನ್ನು ಈಗ ಉಪಯೋಗಿಸುವುದು ಸೂಕ್ತ. ಕೇವಲ ಮ್ಯಾಯಿಶ್ಚರೈಸರ್‌ ಸಾಕು ಎನಿಸಿದರೆ, ಸೆರಮೈಡ್‌ಯುಕ್ತ ಕ್ರೀಮ್‌ ಬಳಸಿ. ಇದರಿಂದ ತ್ವಚೆಗೆ ಆಗಿರುವ ಹಾನಿಯನ್ನು ದುರಸ್ತಿ ಮಾಡುವುದಕ್ಕೆ ಅನುಕೂಲ. ಇಡೀ ದಿನ ಕನಿಷ್ಟ 3 ಲೀ. ನೀರು ಕುಡಿಯಲು ಮರೆಯಬೇಡಿ. ಈ ಕ್ರಮಗಳನ್ನು ಅನುಸರಿಸಿದರೆ, ಓಕುಳಿ ಆಡಿದ್ದರಿಂದ ತ್ವಚೆ ಹಾಳಾಯಿತೆಂಬ ಕೊರಗಿಲ್ಲದಂತೆ ಸಂತೊಷದಿಂದ ಬಣ್ಣಗಳಲ್ಲಿ ಮಿಂದೇಳಬಹುದು.

Exit mobile version