Site icon Vistara News

Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

Home Remedies for Dengue

ಡೆಂಗ್ಯು ಎಲ್ಲೆಡೆ (Home Remedies for Dengue) ಹರಡುತ್ತಿದೆ. ನಮ್ಮನೇಲಿ ಸೊಳ್ಳೆ ಇಲ್ಲ, ಸೊಳ್ಳೆ ಕಚ್ಚಿದ್ದೇ ನೆನಪಿಲ್ಲ ಎನ್ನುವವರನ್ನೂ ಬಿಡದೆ ಈ ರೋಗ ಬಾಧಿಸುತ್ತಿದೆ. ರೋಗದ ಎಲ್ಲಾ ಲಕ್ಷಣಗಳ ಜೊತೆಗೆ, ಆತಂಕ ಹುಟ್ಟಿಸುವ ಇನ್ನೂ ಒಂದು ಲಕ್ಷಣವೆಂದರೆ ರಕ್ತದಲ್ಲಿನ ಪ್ಲೇಟ್‌ಲೆಟ್‌ ಕುಸಿಯುವುದು. ಈ ಆತಂಕ ಅತಿಯಾಗದಂತೆ ಜಾಗ್ರತೆ ಮಾಡಿದರೆ, ರೋಗಿ ಅಪಾಯಕ್ಕೆ ಸಿಲುಕದಂತೆ ಕಾಪಾಡಿಕೊಳ್ಳಬಹುದು. ಪ್ಲೇಟ್‌ಲೆಟ್‌ ಕುಸಿಯದಂತೆ ತಡೆದು, ಈಗಾಗಲೇ ಇಳಿದಿರುವ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಆಹಾರದ ಮೂಲಕ ಪ್ರಯತ್ನಿಸುವುದು ಸರಿಯಾದ ಕ್ರಮ. ಪ್ಲೇಟ್‌ಲೆಟ್‌ಗಳ ಸಂಖ್ಯೆ ತ್ವರಿತವಾಗಿ ಹೆಚ್ಚುವಂತೆ ಮಾಡುವ ಆಹಾರಗಳು ಯಾವುವು?

ನೀರು

ಎಲ್ಲಕ್ಕಿಂತ ಮುಖ್ಯವಾದ ಭಾಗವಿದು. ಜ್ವರ ಕಾಣಿಸಿಕೊಂಡ 3-4 ದಿನಗಳ ನಂತರ ದಿಢೀರನೆ ರಕ್ತದೊತ್ತಡ ಕುಸಿಯದಂತೆ ಕಾಪಾಡುವಲ್ಲಿ ಇದು ಮಹತ್ವದ್ದು. ಜೊತೆಗೆ, ಪ್ಲೇಟ್‌ಲೆಟ್‌ ಹೆಚ್ಚಿಸುವಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ರಸಭರಿತ ಹಣ್ಣುಗಳು, ಎಳನೀರು, ಹರ್ಬಲ್‌ ಚಹಾ, ಕಷಾಯಗಳು, ಸೂಪ್‌, ಬೇಳೆಯ ಕಟ್ಟು, ಅಂಬಲಿಗಳು ಮುಂತಾದ ಯಾವುದೇ ದ್ರವಾಹಾರವನ್ನು ಹೆಚ್ಚಾಗಿ ಸೇವಿಸಿ. ಜ್ವರದಿಂದ ಶೀಘ್ರ ಚೇತರಿಸಿಕೊಳ್ಳಲು ಸಹ ಇದು ನೆರವಾಗುತ್ತದೆ.

ವಿಟಮಿನ್‌ ಸಿ

ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್‌ ಸಿ ಇರುವಂಥ ಆಹಾರಗಳು ಈಗ ಹೆಚ್ಚಾಗಿ ಬೇಕು. ಸಿ ಜೀವಸತ್ವ ಅಧಿಕವಾಗಿರುವ ಹಣ್ಣು ಮತ್ತು ತರಕಾರಿಗಳು ಆಹಾರದಲ್ಲಿ ಇದ್ದಷ್ಟೂ ಚೇತರಿಕೆ ಶೀಘ್ರವಾಗಿ ಆಗುತ್ತದೆ. ಕಿತ್ತಳೆ, ಮೂಸಂಬಿ, ನಿಂಬೆರಸ, ನೆಲ್ಲಿಕಾಯಿ, ಪಪ್ಪಾಯಿ, ಕಿವಿ ಹಣ್ಣು, ಬೆರ್ರಿಗಳೆಲ್ಲ ಆಹಾರದಲ್ಲಿ ಇರಲಿ. ಇವನ್ನೆಲ್ಲ ತಿನ್ನುವುದಕ್ಕೆ ಕಷ್ಟವಾದರೆ ಸ್ಮೂದಿ ಮಾಡಿಕೊಳ್ಳಿ. ಆದರೆ ಪ್ಲೇಟ್‌ಲೆಟ್‌ ಹೆಚ್ಚಿಸುವಲ್ಲಿ ಇವು ತೀರಾ ಅಗತ್ಯ ಎಂಬುದನ್ನು ಮರೆಯಬೇಡಿ.

ಪಪ್ಪಾಯ ಎಲೆಯ ರಸ

ಪಪ್ಪಾಯ ಹಣ್ಣುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದಂತೂ ಹೌದು. ಜೊತೆಗೆ, ಪಪ್ಪಾಯ ಎಲೆಗಳ ರಸ ಈ ಹೊತ್ತಿನಲ್ಲಿ ಸಂಜೀವಿನಿ ಎನಿಸಬಲ್ಲದು. ಪ್ಲೇಟ್‌ಲೆಟ್‌ ಸಂಖ್ಯೆಯನ್ನು ಹೆಚ್ಚಿಸುವ ಅಪೂರ್ಣ ಸಾಮರ್ಥ್ಯ ಈ ಎಲೆಗಳಿಗಿದೆ. ಹಾಗೆಯೇ ಕಿವಿ ಹಣ್ಣುಗಳ ಸೇವನೆಯೂ ಅಗತ್ಯಗಳಲ್ಲಿ ಒಂದು. ಪಪ್ಪಾಯ ಎಲೆಗಳು ರುಚಿಯಲ್ಲಿ ಕಹಿಯಾದ್ದರಿಂದ ಹಲವರಿಗೆ ಇದನ್ನು ಸೇವಿಸಲು ಆಗದಿರಬಹುದು. ಅದರಲ್ಲೂ ಜ್ವರದೊಂದಿಗೆ ವಾಂತಿಯ ಲಕ್ಷಣಗಳಿದ್ದರೆ, ಇದರ ಸೇವನೆ ಇನ್ನೂ ಕಷ್ಟ. ಹಾಗಾಗಿಯೇ ಪಪ್ಪಾಯ ಎಲೆಯ ಮಾತ್ರೆಗಳು ಸಹ ಲಭ್ಯವಿದ್ದು, ಈ ಬಗ್ಗೆ ವೈದ್ಯರಲ್ಲಿ ಮಾತನಾಡಿ.

ಕಬ್ಬಿಣಯುಕ್ತ ಆಹಾರಗಳು

ಆರೋಗ್ಯವಂತ ರಕ್ತಕಣಗಳನ್ನು ಉತ್ಪಾದನೆ ಮಾಡುವಲ್ಲಿ ಕಬ್ಬಿಣದಂಶ ಇರುವ ಆಹಾರಗಳು ಅತ್ಯವಶ್ಯ. ಹಾಗಾಗಿ ಹಸಿರು ಸೊಪ್ಪುಗಳು, ಕಾಳುಗಳು, ಇಡೀ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ನಿಜ, ಜ್ವರ ಸುಡುತ್ತಿರುವಾಗ ಇಷ್ಟೆಲ್ಲವನ್ನೂ ತಿನ್ನಲು ಯಾರಿಗೂ ಸಾಧ್ಯವಾಗುವುದಿಲ್ಲ. ಸೇರಿದಷ್ಟೇ ತಿನ್ನಿ, ಅದರಲ್ಲಿ ಸತ್ವಯುತವಾದ್ದನ್ನೇ ತಿನ್ನಿ.

ಕುಂಬಳಕಾಯಿ ಬೀಜ

ಈ ಸಣ್ಣ ಬೀಜಗಳಲ್ಲಿ ಮೆಗ್ನೀಶಿಯಂ, ಕಬ್ಬಿಣ ಮತ್ತು ಸತುವಿನ ಅಂಶಗಳು ಸಹಜವಾಗಿಯೇ ಹೆಚ್ಚಾಗಿವೆ. ಹಾಗಾಗಿ ಇವುಗಳನ್ನು ಇದ್ದಂತೆಯೇ ಅಗಿದು ತಿನ್ನಬಹುದು, ಪುಡಿ ಮಾಡಿ ಬೇರೆಯ ಖಾದ್ಯಗಳೊಂದಿಗೆ ಸೇರಿಸಿಕೊಳ್ಳಬಹುದು, ಚಿಟಿಕೆ ಉಪ್ಪು ಹಾಕಿ ಹುರಿದು ಸೇವಿಸಬಹುದು. ಪ್ಲೇಟ್‌ಲೆಟ್‌ ಹೆಚ್ಚಿಸುವಲ್ಲಿ ಇಂಥ ಸೂಪರ್‌ಫುಡ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಕೆಫೇನ್‌, ಆಲ್ಕೋಹಾಲ್‌

ಬೇಕಾದ ಆಹಾರಗಳೇನು ಎಂಬುದನ್ನು ತಿಳಿದಿದ್ದೇವೆ. ಹಾಗೆಯೇ ಬೇಡದ್ದೇನು ಎಂಬುದನ್ನೂ ಅರ್ಥ ಮಾಡಿಕೊಳ್ಳುವುದು ಮುಖ್ಯ. ಯಾವುದೇ ಸಂಸ್ಕರಿತ ಆಹಾರಗಳನ್ನು ಹತ್ತಿರ ಸೇರಿಸಬೇಡಿ. ಸಕ್ಕರೆಯನ್ನು ಮಿತಗೊಳಿಸಿ. ಕರಿದ, ಜಿಡ್ಡಿನ ಆಹಾರಗಳು ಈ ಸಮಯಕ್ಕಲ್ಲ. ದ್ರವಾಹಾರ ಬೇಕು ಎನ್ನುವ ನೆವ ಮಾಡಿಕೊಂಡು ಕಾಫಿ, ಟೀ, ಸೋಡಾದಂಥವನ್ನು ಕುಡಿದರೆ ಆರೋಗ್ಯ ಹಳ್ಳ ಹಿಡಿಯುತ್ತದೆ, ಜೋಕೆ. ಆಲ್ಕೋಹಾಲ್‌ ಈವರೆಗೆ ಇಲ್ಲದ ಸಮಸ್ಯೆಗಳನ್ನೂ ಹತ್ತಿರ ತರಬಹುದು.

ಇದನ್ನೂ ಓದಿ: Brain Eating Amoeba: ಮೆದುಳು ತಿನ್ನುವ ಅಮೀಬಾದಿಂದ ನಮಗೂ ಅಪಾಯ ಇದೆಯೆ?

ವಿಶ್ರಾಂತಿ

ಚೆನ್ನಾಗಿ ನಿದ್ದೆ ಮಾಡಿ, ಡೆಂಗು ಜ್ವರದಿಂದ ಬಳಲಿರುವ ದೇಹಕ್ಕೆ ವಿಪರೀತ ಎನ್ನುವಷ್ಟು ವಿಶ್ರಾಂತಿ ಬೇಕು. ಬಾಯಿಗೆ ಸೇರಿದಷ್ಟು ಸತ್ವಯುತ ಆಹಾರ ಸೇವಿಸಿ, ದ್ರವಾಹಾರ ಹೆಚ್ಚಿದ್ದಷ್ಟೂ ಅನುಕೂಲ. ಸೋಂಕು ತೀವ್ರವಾಗದಂತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರೆ, ಅರ್ಧ ರೋಗವೇ ಕಡಿಮೆಯಾದಂತೆ. ಇಷ್ಟಾಗಿಯೂ ಲಕ್ಷಣಗಳು ಮುಂದುವರಿದರೆ ತ್ವರಿತವಾಗಿ ವೈದ್ಯರಲ್ಲಿ ತೆರಳಿ.

Exit mobile version