ಜೇನುತುಪ್ಪವನ್ನು ಕಲಿಗಾಲದ ಅಮೃತ ಎಂದು ಹೇಳುವ ವಾಡಿಕೆಯಿದೆ. ಅಂದರೆ, ಜೇನುತುಪ್ಪ ಕೇವಲ ರುಚಿಯಲ್ಲಿ ಮಾತ್ರವಲ್ಲ, ದೇಹಕ್ಕೆ ಅದರಿಂದಾಗುವ ಆರೋಗ್ಯಕಾರಿ ಪರಿಣಾಮಗಳಲ್ಲಿಯೂ ಅದು ಅಮೃತವೇ. ಜೇನುತುಪ್ಪವನ್ನು ನಿತ್ಯದ ಬಳಕೆಯಲ್ಲಿ ಸರಿಯಾದ ಕ್ರಮದಲ್ಲಿ ಬಳಕೆ ಮಾಡಿದರೆ, ಅದರಿಂದ ಸಿಗುವ ಪ್ರಯೋಜನ ದೊಡ್ಡದು. ದೇಹವನ್ನು ಸರಿಯಾದ ಆಕಾರದಲ್ಲಿ, ತೂಕದಲ್ಲಿ ಹಾಗೂ ಆರೋಗ್ಯಕರವಾಗಿ ಇಡಬೇಕಾದಲ್ಲಿ ಜೇನುತುಪ್ಪ ತನ್ನದೇ ಆದ ಕೊಡುಗೆಯನ್ನು ನೀಡಬಲ್ಲದು. ಶೀತ, ನೆಗಡಿಯಂತಹ ದಿನನಿತ್ಯದ ಸಾಮಾನ್ಯ ಸಮಸ್ಯೆಗಳಿಂದ ಹಿಡಿದು ತೂಕ ಇಳಿಸುವವರೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಜೇನುತುಪ್ಪ ಮನೆಮದ್ದು, ನಿತ್ಯೋಪಯೋಗಿ.
ಕೊಬ್ಬು ರಹಿತ, ಕಬ್ಬಿಣ ಸತ್ವ, ಕ್ಯಾಲ್ಶಿಯಂ ಹಾಗೂ ಇತರ ಖನಿಜಾಂಶಗಳಿಂದ ಸಮೃದ್ಧವಾಗಿರುವ ಇದು ಸಕ್ಕರೆಯ ಬದಲಿಗೆ ಬಳಸಬಹುದಾದ ನೈಸರ್ಗಿಕವಾದ ಸಿಹಿ. ಟೊರೆಂಟೋ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ, ಜೇನುತುಪ್ಪದ ಪ್ರತಿನಿತ್ಯದ ಬಳಕೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಹಾಗೂ ಕೊಲೆಸ್ಟೆರಾಲ್‌ನಲ್ಲಿ ಇಳಿಕೆ ಕಂಡುಬಂದಿದ್ದಲ್ಲದೆ, ಫ್ಯಾಟಿ ಲಿವರ್ ತೊಂದರೆಗೂ ಕೊಂಚ ಪರಿಹಾರ ನೀಡಿರುವುದು ಪತ್ತೆಯಾಗಿದೆ.
ಆದರೆ, ಜೇನುತುಪ್ಪವನ್ನು ಬಳಸಲು ಕೂಡಾ ಕ್ರಮವಿದೆ. ಜೇನುತುಪ್ಪ ಒಳ್ಳೆಯದು ಎಂದುಕೊಂಡು ಎಲ್ಲದಕ್ಕೂ ಜೇನುತುಪ್ಪ ಸುರಿದುಕೊಂಡು ದಿನವೂ ತಿನ್ನುತ್ತಿದ್ದರೆ, ಖಂಡಿತ ಉತ್ತಮ ಪರಿಣಾಮ ಬೀರದು. ಹಾಗಾದರೆ ಜೇನುತುಪ್ಪವನ್ನು ಆರೋಗ್ಯಕರವಾಗಿ ನಿತ್ಯಾಹಾರದಲ್ಲಿ ಹೇಗೆಲ್ಲ ಬಳಸಬಹುದು ಎಂಬುದನ್ನು ನೋಡೋಣ.
೧. ಬಾಳೆಹಣ್ಣು ಜೇನುತುಪ್ಪ ಸ್ಮೂದಿ: ಬಾಳೆಹಣ್ಣು ಹಾಗೂ ಜೇನುತುಪ್ಪವನ್ನೊಮ್ಮೆ ಜೋಡಿ ಮಾಡಿ ನೋಡಿ. ಇವರಿಬ್ಬರ ಜೋಡಿ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತದೆ ಎಂದರೆ, ರುಚಿಯ ಜೊತೆಗೆ ಸಮೃದ್ಧ ಆಹಾರವೂ ಕೂಡಾ. ಬಾಳೆಹಣ್ಣು ಹಾಗೂ ಜೇನುತುಪ್ಪವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಸ್ಮೂದಿ ಮಾಡಿ ಕುಡಿದರೆ, ಆಹಾ ಎಂಥಾ ರುಚಿ. ವರ್ಕ್‌ಔಟ್ ಮಾಡುವ ಮುನ್ನ ಇದನ್ನು ಕುಡಿಯಬಹುದು, ಅಥವಾ ವಾಕ್ ಮಾಡಿ ಬಂದು ಕುಡಿಯಬಹುದು. ಬಾಯಿರುಚಿಗೆ ಅನ್ಯಾಯ ಮಾಡದೆ, ಹೊಟ್ಟೆಗೂ ಅನ್ಯಾಯ ಮಾಡದೆ ಹಸಿವೆಲ್ಲಾ ಮಂಗಮಾಯ ಮಾಡುವ ಸರಳೋಪಾಯವಿದು.
೨. ಶುಂಠಿ ಜೇನುತುಪ್ಪದ ಚಹಾ: ಬಾಳೆಹಣ್ಣು ಹೆವೀ ಆಯ್ತು ಅನಿಸ್ತಿದ್ಯಾ ಹಾಗಾದರೆ, ಚಳಿಗಾಲದಲ್ಲಿ ಬೆಸ್ಟ್ ಶುಂಠಿ ಜೇನುತುಪ್ಪದ ಚಹಾ. ಶುಂಠಿ ತುರಿದು ನೀರಿಗೆ ಹಾಕಿ ಕುದಿಸಿ ಸೋಸಿ ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ನಿಂಬೆರಸ ಸೇರಿಸಿ ಹಬೆಯಾಡುವ ಹಾಗೆ ಕುಡಿದರೆ, ಚಳಿಗಾಲದಲ್ಲಿ ಸ್ವರ್ಗಸುಖ. ಗಂಟಲಿಗೂ ನೆಮ್ಮದಿ. ಶೀತ, ನೆಗಡಿಯೆಲ್ಲ ಒಢಿಹೋಗಿ ರಿಲೀಫ್ ಸಿಗುತ್ತದೆ.
ಇದನ್ನೂ ಓದಿ | ದಿಢೀರನೆ ತೂಕ ಏರಿಕೆ ಸಮಸ್ಯೆ ನಿಮ್ಮದೂ ಹೌದೇ? ಇಲ್ಲಿದೆ ನೋಡಿ ಪರಿಹಾರ!
೩. ಜೇನುತುಪ್ಪದ ಮಿಠಾಯಿ: ಚಳಿಗಾಲದಲ್ಲಿ ಗಂಟಲು ನೋವು, ಶೀತ, ನೆಗಡಿಯಂತ ತೊಂದರೆಗೆ ಆಗಾಗ ತಿನ್ನಲು ಇದನ್ನು ಮಾಡಿಟ್ಟುಕೊಳ್ಳಬಹುದು. ಒಂದಿಷ್ಟು ಶುಂಠಿಯನ್ನು ತುರಿದು ಅದನ್ನು ರುಬ್ಬಿ ರಸ ಹಿಂಡಿ, ಒಂದು ದೊಡ್ಡ ಬಾಣಲೆ ತೆಗೆದುಕೊಂಡು ಅದರಲ್ಲಿ ಶುಂಠಿ ರಸವನ್ನು ಹಾಕಿ, ಒಂದು ಕಪ್ ಸಕ್ಕರೆ ಹಾಕಿ. ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಕಾಲು ಕಪ್ ಜೇನುತುಪ್ಪ, ಅರ್ಧ ಚಮಚ ಚೆಕ್ಕೆ ಪುಡಿ ಹಾಕಿ. ಮಧ್ಯಮ ಉರಿಯಲ್ಲಿ ಹಾಗೆ ಬಿಟ್ಟು ಕುದಿ ಬಂದ ಮೇಲೆ, ಇದಕ್ಕೆ ಅರ್ಧ ನಿಂಬೆಹಣ್ಣು ಹಿಂಡಿ ನೂಲಿನ ಅಳತೆಗೆ ಬರುತ್ತಿದ್ದ ಹಾಗೆ ಕೆಳಗಿಳಿಸಿ. ಬಟರ್ ಪೇಪರ್ ಮೇಲೆ ಚಮಚದಲ್ಲಿ ಒಂದೊಂದೇ ಚಮಚ ಪುಟ್ಟ ಮಿಠಾಯಿಯ ಗಾತ್ರದಲ್ಲಿ ಹಾಕುತ್ತಾ ಬನ್ನಿ. ಈಗ ಹನೀ ಕ್ಯಾಂಡಿ ರೆಡಿ. ಇದನ್ನು ಮಾಡಿಟ್ಟುಕೊಂಡು ಗಂಟಲು ಕೆರೆತ, ಶೀತ, ನೆಗಡಿಯಿದ್ದಾಗ ಆಗಾಗ ತಿನ್ನಬಹುದು. ಪರಿಣಾಮಕಾರಿ ಮನೆಮದ್ದು ಕೂಡಾ.
೪. ಹನಿವಾಟರ್: ಮೇಲಿನ ಯಾವುದೂ ಬೇಡವೆಂದಿದ್ದರೆ ಕೇವಲ ಬಿಸಿನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುತ್ತಿರಬಹುದು. ಇದನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿಯುವುದರಿಂದ ತೂಕ ಇಳಿಕೆಯೂ ಸೇರಿದಂತೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಒಟ್ಟಾರೆ ದೇಹಾರೋಗ್ಯ ವೃದ್ಧಿಗೆ ಇದು ಸಹಕಾರಿ.
ಇದನ್ನೂ ಓದಿ | Breastfeeding | ಚಳಿಗಾಲದಲ್ಲಿ ಹಾಲುಣಿಸುವುದೇ ತಾಯಂದಿರಿಗೆ ಸವಾಲು! ಪರಿಹಾರ ಏನು?