ಶೂ ಆರಿಸುವುದು ಹೇಗೆ? ಇದೆಂಥ ಪ್ರಶ್ನೆ! ಅಂಗಡಿಗೆ ಹೋಗುವುದು, ಬೇಕಾದ್ದನ್ನು ಆಯ್ದುಕೊಳ್ಳುವುದು. ಮನೆಯಲ್ಲೇ ಶಾಪಿಂಗ್ ಮಾಡುವವರಾದರೆ, ಬೇಕಾದ ವೆಬ್‌ಸೈಟ್‌ನಲ್ಲಿ ಕಣ್ಣಿಗೆ ಚಂದ ಕಂಡಿದ್ದನ್ನು, ನಮ್ಮಳತೆಯಲ್ಲಿದೆಯೇ ನೋಡಿ ಕಾರ್ಟಿಗೆ ಹಾಕಿದರಾಯ್ತು. ಅದರಲ್ಲೂ ಓಡುವ ಅಥವಾ ನಡಿಗೆಯ ಶೂ ಖರೀದಿಗೆ ಮೊದಲಾದರೆ ಸಿಕ್ಕಾಪಟ್ಟೆ ಆಯ್ಕೆಗಳು ತೆರೆದುಕೊಳ್ಳುತ್ತವೆ… ಎಂದೆಲ್ಲಾ ಪ್ರವರ ಹೇಳಬಹುದು. ಆದರೆ ಅಲ್ಲಿ ಕಾಣುವುದೆಲ್ಲ ನಮ್ಮ ಕಾಲಿಗೆ ಸೂಕ್ತವಾದದ್ದೇ ಅಥವಾ ನಮ್ಮ ಕಾಲಿಗೆ (Walking Shoe Tip) ಸೂಕ್ತವಾದದ್ದನ್ನೇ ನಾವು ಆಯ್ದುಕೊಳ್ಳುತ್ತೇವೆಯೇ?
ಇನ್ನು ವಾಕಿಂಗ್ ಅಥವಾ ರನ್ನಿಂಗ್‌ಗಾಗಿ ಪಾದರಕ್ಷೆ ಬೇಕೆಂದಾದರೆ, ಈ ಬಗ್ಗೆ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ದಿನದ ವಾಕಿಂಗ್‌ಗೆ ಯಾವುದಾದರೂ ಒಂದು ಪಾದರಕ್ಷೆ ತೊಟ್ಟು ಹೋದರಾಯಿತು ಎಂಬ ಧೋರಣೆಯಿದ್ದರೆ, ಕಾಲುಗಳ ಸಮಸ್ಯೆಗೆ ಮೂಲವಾಗಬಹುದು. ಹಾಗಾದರೆ ಇದಕ್ಕಾಗಿಯೇ ವಿನ್ಯಾಸಗೊಳಿಸಿದ ಪಾದರಕ್ಷೆಗಳು (Walking Shoe Tip) ನಮಗೆ ಬೇಕೆ? ಬೇಕಾದರೆ ಯಾಕೆ? ಯಾವೆಲ್ಲ ವಿಷಯಗಳ ಕುರಿತು ನಾವು ಗಮನ ನೀಡಬೇಕು?
ಅಳತೆ ನೋಡುವುದು ಹೇಗೆ?
ಅಳತೆ ನೋಡುವಾಗ ಕುಳಿತು ನೋಡುವುದಲ್ಲ. ನಿಂತು, ನಡೆದಾಡಿ ನೋಡಿ. ಪಾದರಕ್ಷೆಗಳು ಪಾದಗಳನ್ನು ಬಿಗಿಯಾಗಿ ಅವಚಿ ಹಿಡಿದುಕೊಂಡಿರಬಾರದು. ಶೂ ಹಾಕಿದಾಗಲೇ ಪಾದಗಳನ್ನು ಸ್ವಲ್ಪ ಮೇಲೆ-ಕೆಳಗೆ, ಆಚೆ-ಈಚೆ ಆಡಿಸುವಷ್ಟು ಜಾಗ ಇರಬೇಕು. ಹೆಬ್ಬೆರಳಿನಿಂದ ಮುಂದೆ ಒಂದಿಂಚು ಜಾಗ ಇದ್ದರೆ ಸರಿ. ಹಾಗೆಂದು ಶೂ ಅಳ್ಳಕವಾಗಿ, ಓಡಿದಾಗ ಕಳಚಿ ಬರಬಾರದು. ಧರಿಸಿದಾಗ ಆರಾಮದಾಯಕ ಅನುಭವ ನೀಡಬೇಕು.
ಸ್ಥಿರತೆ ಮತ್ತು ಆರಾಮ
ಸರಿಯಾದ ಶೂಗಳು ನಮ್ಮ ಚಟುವಟಿಕೆಯ ಉದ್ದಕ್ಕೂ ಪಾದಗಳಿಗೆ ಸರಿಯಾದ ಸ್ಥಿರತೆಯನ್ನು ನೀಡುತ್ತವೆ. ಮಾತ್ರವಲ್ಲ, ಪಾದಗಳಲ್ಲಿ ಸರಿಯಾದ ಕುಷನಿಂಗ್ ಇದ್ದರೆ ಮೊಣಕಾಲುಗಳೂ ಕ್ಷೇಮವಾಗಿರುತ್ತವೆ. ಪಾದಗಳ ಅಳತೆಗೆ ಸರಿಯಾಗಿರುವ ಮತ್ತು ಚಟುವಟಿಕೆಗೆ ಹೊಂದಾಣಿಕೆಯಾಗುವ ಶೂಗಳು ಹೆಚ್ಚಿನ ಆರಾಮ ನೀಡುತ್ತವೆ.
ಗಾಯ-ನೋವು
ಭಾರವಾದ ಅಥವಾ ಅಳ್ಳಕವಾದ ಪಾದರಕ್ಷೆಗಳಿಂದ ನಡಿಗೆಯ ಸ್ವರೂಪ ಕೆಡುತ್ತದೆ. ಹೀಗಾದರೆ ಬೆನ್ನಲ್ಲಿ, ಮೊಣಕಾಲಿನಲ್ಲಿ, ಪಾದಗಳ ಕೀಲಿನಲ್ಲಿ ಅಥವಾ ಕಾಲಿಗೆ ಸಂಬಂಧಿಸಿದ ಯಾವುದಾದರೂ ಸಂದುಗಳಲ್ಲಿ ಗಾಯವಾಗಬಹುದು. ಮಾಂಸಖಂಡಗಳು ಎಳೆದಂತಾಗಿ ನೋವು ಕಾಣಿಸಿಕೊಳ್ಳಬಹುದು. ಹಾಗಾಗಿ ಹಗುರವಾದ ಶೂಗಳನ್ನು ಆಯ್ಕೆ ಮಾಡಿಕೊಳ್ಳಿ.
ಲಾಭವಿದೆ
ವಾಕಿಂಗ್, ರನ್ನಿಂಗ್ ಮುಂತಾದ ಚಟುವಟಿಕೆಗಳಿಗೆ ಸೂಕ್ತವಾದ ಶೂಗಳ ಖರೀದಿ ಸ್ವಲ್ಪ ತುಟ್ಟಿ ಎನಿಸಬಹುದು. ಅದರಲ್ಲೂ ಒಳ್ಳೆಯ ಬ್ರ್ಯಾಂಡ್ ಶೂಗಳು ನಿಜಕ್ಕೂ ದುಬಾರಿಯೆ. ಆದರೆ ಇಂಥವುಗಳನ್ನು ಧರಿಸಿ ಸಕ್ರಿಯರಾದಾಗ ದೊರೆಯುವ ಲಾಭಕ್ಕೆ ಹೋಲಿಸಿದರೆ, ಇದಕ್ಕೆ ತೆರುವ ಬೆಲೆ ದುಬಾರಿಯೇನಲ್ಲ.
ಪರಿಹಾರ
ತಲೆಯಿಂದ ಉಂಗುಷ್ಟದವರೆಗೆ ಯಾವುದೇ ನೋವಿನೊಂದಿಗೆ ವೈದ್ಯರ ಬಳಿ ಹೋದಾಗಲೂ, ಧರಿಸುವ ಪಾದರಕ್ಷೆಯನ್ನೂ ಅವರು ಪರಿಶೀಲಿಸುವುದಿದೆ. ಕಾರಣ, ತಲೆನೋವಿನಿಂದ ಹಿಡಿದು ಪಾದಗಳವರೆಗೆ ನಾನಾ ಸ್ವರೂಪದ ನೋವುಗಳು ಕೆಟ್ಟ ಪಾದರಕ್ಷೆಗಳಿಂದ ಬರಬಹುದು. ನಮ್ಮ ಶೂಗಳನ್ನು ಬದಲಿಸುತ್ತಿದ್ದಂತೆ ದೇಹದ ನೋವುಗಳು ಶಮನವಾದ ಉದಾಹರಣೆಗಳಿವೆ
ಸರಿಯಾದ ಪಾದರಕ್ಷೆ
ನಮ್ಮ ಪಾದಗಳು ಬೆಳಗಿನ ಅಳತೆಯಲ್ಲಿ ಸಂಜೆ ಇರುವುದಿಲ್ಲ. ಅಂದರೆ ಬೆಳಗಿಗೆ ಹೋಲಿಸಿದಲ್ಲಿ, ಸಂಜೆಯಾಗುತ್ತಿದ್ದಂತೆ ಪಾದಗಳು ಸ್ವಲ್ಪ ಅಗಲವಾಗಿ ಉಬ್ಬಿದಂತಾಗುತ್ತವೆ. ಹಾಗಾಗಿ ಪಾದಗಳ ಅಳತೆಯನ್ನು ಸಂಜೆ ಹೊತ್ತು ತೆಗೆಯಿರಿ. ಶೂಗಳನ್ನು ಖರೀದಿ ಮಾಡುವಾಗ, ಸಾಕ್ಸ್ ಹಾಕಿಯೇ ಅಳತೆ ನೋಡಿ. ಪಾದಗಳ ಅಡಿಯಲ್ಲಿರುವ ಕಮಾನುಗಳಿಗೆ ಶೂಗಳ ವಿನ್ಯಾಸ ಹೊಂದಿಕೆ ಆಗುತ್ತದೆಯೇ ಎಂಬುದನ್ನು ಪರಿಶೀಲಿಸಿ. ಹೈ-ಆರ್ಚ್ ಮತ್ತು ಲೋ-ಆರ್ಚ್ ಪಾದಗಳಿಗೆ ಪ್ರತ್ಯೇಕ ವಿನ್ಯಾಸದ ಪಾದರಕ್ಷೆಗಳು ಲಭ್ಯವಿದೆ. ನಿಮ್ಮ ಅಗತ್ಯವೇನು ಎಂಬುದನ್ನು ಅರಿತುಕೊಳ್ಳಿ.
ಏನೇನಾಗಬಹುದು?
ಈಗ ದಿನಬಳಕೆಯ ಪಾದರಕ್ಷೆಗಳ ಬಗ್ಗೆ ಹೇಳುವುದಾದರೆ, ಅತೀ ಎತ್ತರದ ಅಥವಾ ಚೂಪಾದ ಹೀಲ್‌ಗಳಿರುವ ಪಾದರಕ್ಷೆಗಳಿಂದ ಬೆನ್ನುನೋವು, ತಲೆನೋವು, ಪಾದಗಳ ಕೀಲಿನಲ್ಲಿ ನೋವು-ಗಾಯ ಕಾಡಬಹುದು. ಒರಟು ಮತ್ತು ಚಪ್ಪಟೆಯಾದ ಪಾದರಕ್ಷೆಗಳು ಮೊಣಕಾಲು ಮತ್ತು ಸೊಂಟದ ಕೀಲಿನಲ್ಲಿ ಸಮಸ್ಯೆಗಳನ್ನು ತರಬಹುದು. ಅಳ್ಳಕವಾದ ಪಾದರಕ್ಷೆಗಳಿಂದಾಗಿ ಹಿಮ್ಮಡಿಯಲ್ಲಿ ತೊಂದರೆ ಕಾಣಬಹುದು. ಈಗಾಗಲೇ ಬಳಸುತ್ತಿರುವ ಶೂಗಳ ಅಟ್ಟೆ ಸವೆದಿದ್ದರೆ, ಪಾದರಕ್ಷೆಯನ್ನು ಬದಲಿಸಬೇಕು. ಇಲ್ಲದಿದ್ದರೆ, ಅದನ್ನು ಯಾವ ಉದ್ದೇಕ್ಕೆಂದು ಬಳಸುತ್ತಿದ್ದೀರೋ ಆ ಪ್ರಯೋಜನ ದೊರೆಯದೆ ಹೋಗಬಹುದು.
ಇದನ್ನೂ ಓದಿ: Sugar Free Living: ಸಕ್ಕರೆ ತಿನ್ನುವುದನ್ನು ಬಿಟ್ಟರೆ ಏನಾಗುತ್ತದೆ?