ತೂಕ ಹೆಚ್ಚಾದ ಬಹಳಷ್ಟು ಮಂದಿಯ ಸಮಸ್ಯೆ ಎಂದರೆ ಡಬಲ್ ಚಿನ್ (double chin). ಅಂದರೆ ಮುಖದಲ್ಲಿ ಗದ್ದ ಎರಡೆರಡಾಗಿ ಕಾಣಿಸುವಷ್ಟು ತೂಕ ಏರುವುದು. ಇದರಿಂದ ಮುಖ ದಪ್ಪಗಾದಂತೆ ಕಾಣುವುದು ಬಹುತೇಕ ಎಲ್ಲರೂ ಅನುಭವಿಸುವ ಸಮಸ್ಯೆ. ಆದರೆ, ಜಪ್ಪಯ್ಯ ಎಂದರೂ ಈ ಸಮಸ್ಯೆಯಿಂದ ಪಾರಾಗುವುದು ಸಾಧ್ಯವಾಗುವುದಿಲ್ಲ. ನಾನಾ ಕಸರತ್ತುಗಳನ್ನು ಮಾಡಿಯೂ ಯಾವುದೇ ಪರಿಹಾರ ಕಾಣದಾದಾಗ ಇದಕ್ಕೆ ಸುಲಭ ಪರಿಹಾರವಿಲ್ಲ ಎಂದು ಹಲವರಿಗೆ ಅನಿಸಿರಬಹುದು. ಆದರೆ, ಪ್ರಯತ್ನಿಸಿದರೆ ಖಂಡಿತ ಫಲವಿದೆ. ಕೆಲವು ಸರಳ ವ್ಯಾಯಾಮ (exercises) ಹಾಗೂ ಯೋಗಾಸನಗಳ (yogasana) ಮೂಲಕ ಈ ಸಮಸ್ಯೆಯಿಂದ (health tips) ಪಾರಾಗಬಹುದು. ಆದರೆ, ನಿಯಮಿತವಾಗಿ ಅಭ್ಯಾಸ ಮಾಡುತ್ತಾ ಬಂದರೆ ಮಾತ್ರ ಕೆಲವೇ ದಿನಗಳಲ್ಲಿ ಮುಖದ ಈ ಸಮಸ್ಯೆ ಮಾಯವಾಗಿ, ಟೋನ್ ಆಗುತ್ತದೆ ಎಂಬುದು ಮಾತ್ರ ಅಷ್ಟೇ ನಿಜ. ಹಾಗಾದರೆ ಬನ್ನಿ, ಯಾವೆಲ್ಲ ಆಸನಗಳ (health guide) ಮೂಲಕ ಈ ಸಮಸ್ಯೆಗೆ ನಿಜದ ಪರಿಹಾರ ಕಂಡುಕೊಳ್ಳಬಹುದು (double chin solution) ನೋಡೋಣ.
1. ಸಿಂಹಾಸನ (ಲಯನ್ ಪೋಸ್): ಈ ಆಸನ ಕೊಂಚ ತಮಾಶೆಯಾಗಿ ಅನಿಸಿದರೂ ಬಹಳ ಲಾಭದಾಯಕ ಆಸನವೂ ಹೌದು. ಮಂಡಿಯೂರಿ ಸಿಂಹದ ಭಂಗಿಯಲ್ಲಿ ಕೂತು, ನಾಲಿಗೆ ಹೊರಚಾಚಿ, ಸಿಂಹದ ಮಾದರಿಯಲ್ಲಿ ಸಶಬ್ಧವಾಗಿ ಧ್ವನಿ ಹೊರಡಿಸಿ ಗರ್ಜಿಸುವ ಆಸನವಿದು. ಆದರೆ, ಗಂಟಲಿಗೆ, ಥೈರಾಯ್ಡ್ ಗ್ರಂಥಿಗೆ ಸಾಕಷ್ಟು ಉತ್ತಮ ಪರಿಣಾಮ ನೀಡಬಲ್ಲ ಆಸನವಿದು. ಅಷ್ಟೇ ಅಲ್ಲ, ಡಬಲ್ ಚಿನ್ ಸಮಸ್ಯೆ ಇರುವ ಮಂದಿಗೂ ಕೂಡಾ ಇದು ಉತ್ತಮ ವ್ಯಾಯಾಮ. ಕುತ್ತಿಗೆಯ ಸುತ್ತಮುತ್ತಲ ಮಾಂಸಖಂಡಗಳನ್ನು ಬಲಗೊಳಿಸಿ, ಶಕ್ತಿ ಹೆಚ್ಚಿಸಿ ಡಬಲ್ ಚಿನ್ ಸಮಸ್ಯೆಯನ್ನು ಬಹುಬೇಗನೆ ಸರಳವಾಗಿಸುತ್ತದೆ., ಮುಖ ಟೋನ್ ಆಗುತ್ತದೆ.
2. ಭುಜಂಗಾಸನ (ಕೋಬ್ರಾ ಪೋಸ್): ಭುಜಂಗಾಸನ ಮಾಡುವುದರಿಂದ ಕುತ್ತಿಗೆಯ ಭಾಗದ ಮಾಂಸಖಂಡಗಳಿಗೆ ಉತ್ತಮ ವ್ಯಾಯಾಮ ದೊರೆತು ಆ ಭಾಗದಲ್ಲಿ ಸಂಗ್ರಹವಾದ ಕೊಬ್ಬು ಕರಗಲು ಸಾಕಷ್ಟು ನೆರವಾಗುತ್ತದೆ. ನಿತ್ಯವೂ ಭುಜಂಗಾಸನ ಅಭ್ಯಾಸ ಮಾಡುವುದರಿಂದ ಕೇವಲ ಬೆನ್ನು ಮತ್ತಿತರ ಮಾಂಸಖಂಡಗಳಿಗೆ ಮಾತ್ರವಲ್ಲ, ಕುತ್ತಿಗೆಯ ಭಾಗಕ್ಕೂ ಸಾಕಷ್ಟು ವ್ಯಾಯಾಮ ದೊರೆಯುವುದರಿಂದ ಡಬಲ್ ಚಿನ್ ಸಮಸ್ಯೆಗೂ ಈ ವ್ಯಾಯಾಮದಿಂದ ಪರಿಹಾರ ಸಿಗುತ್ತದೆ.
3. ಉಷ್ಟ್ರಾಸನ (ಕ್ಯಾಮಲ್ ಪೋಸ್): ಹೊಟ್ಟೆಯಲ್ಲಿ ಬಂದ ಬೊಜ್ಜಿರಬಹುದು, ಸೊಂಟದ ಸುತ್ತ ಬೆಳೆಸಿಕೊಂಡ ಬೊಜ್ಜಿರಬಹುದು, ಡಬಲ್ ಚಿನ್ ಇರಬಹುದು, ಯಾವುದೇ ಬಗೆಯ ಬೊಜ್ಜಿನ ಸಮಸ್ಯೆಗೂ ಅತ್ಯಂತ ಪರಿಣಾಮಕಾರಿ ಆಸನವೆಂದರೆ ಅದು ಉಷ್ಟ್ರಾಸನ. ಕ್ಯಾಮಲ್ ಅಂದರೆ ಒಂಟೆ ಪೋಸ್ ಎಂಬ ಹೆಸರೂ ಇದಕ್ಕಿದೆ. ಇದು ನೋಡಲು ಸರಳವೆನಿಸಿದರೂ, ಮಾಡಲು ಕೊಂಚ ಕಷ್ಟವಾಗಿರುವುದರಿಂದ ಹಾಗೂ, ಎಲ್ಲರೂ ಸುಲಭವಾಗಿ ಮಾಡಬಲ್ಲ ಆಸನವಾಗಿಲ್ಲವಾದ್ದರಿಂದ, ಇತರರ ಅಥವಾ ತರಬೇತುದಾರರ ನೆರವಿಲ್ಲದೆ ಇದನ್ನು ಮಾಡಬಾರದು. ಮಾಡಿ ಅಭ್ಯಾಸವಿದ್ದರೆ, ಅಥವಾ ಅರ್ಧ ಉಷ್ಟ್ರಾಸನದ ಮೂಲಕ ನಿಧಾನವಾಗಿ ಆಸನ ಕಲಿಕೆ ಮಾಡಬಹುದು. ಹೊಟ್ಟೆ, ಸೊಂಟ, ಎದೆ, ಕುತ್ತಿಗೆ ಸೇರಿದಂತೆ ದೇಹದ ಎಲ್ಲ ಭಾಗಗಳಿಗೂ ಸರಿಯಾದ ವ್ಯಾಯಾಮ ಇದರಿಂದ ದೊರೆಯುತ್ತದೆ. ಕುತ್ತಿಗೆಯ ಭಾಗಕ್ಕೆ ಮುಖ್ಯವಾಗಿ ಉತ್ತಮ ವ್ಯಾಯಾಮ ಸಿಗುವುದರಿಂದ ಡಬಲ್ ಚಿನ್‌ನಂತಹ ಸಮಸ್ಯೆಗೂ ಇದರಿಂದ ಪರಿಹಾರ ಸಿಗುತ್ತದೆ.
4. ಮತ್ಸ್ಯಾಸನ (ಫಿಶ್ ಪೋಸ್): ಮತ್ಸ್ಯ ಅಂದರೆ ಮೀನು, ಮೀನಿನ ಭಂಗಿಯ ಆಸನವಿದು. ಮುಖ್ಯವಾಗಿ ಈ ಆಸನದ ಮುಖ್ಯ ಅಂಗವೇ ಕುತ್ತಿಗೆಯ ಭಾಗವಾಗಿರುವುದರಿಂದ ಕುತ್ತಿಗೆಯ ಸಮಸ್ಯೆಗಳಿಗೆಲ್ಲವೂ ಇದರಿಂದ ಪರಿಹಾರ ಒದಗುತ್ತದೆ. ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳು, ಗಂಟಲ ಸಮಸ್ಯೆಗಳು ಇತ್ಯಾದಿಗಳಿಗೂ ಈ ಆಸನ ಒಳ್ಳೆಯದು. ಪೂರ್ಣ ಮತ್ಯ್ಸಾಸನ ಮಾಡಲು ಕಷ್ಟವಾದರೆ ಅರ್ಧ ಮತ್ಸ್ಯಾಸನ ಮಾಡುವ ಮೂಲಕವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.ಹೊಟ್ಟೆಯ ಭಾಗದ ಸ್ನಾಯುಗಳಿಗೂ ಇದು ಅತ್ಯುತ್ತಮ ಆಸನ.
5. ಫಿಶ್ ಫೇಸ್: ಚಿಕ್ಕ ಮಕ್ಕಳಿದ್ದಾದ ತುಟಿಯನ್ನು ಒಳಗೆಳೆದುಕೊಂಡು ಮೀನಿನಾಕಾರದ ಭಂಗಿಯನ್ನು ಬಾಯಿಯಿಂದ ಮಾಡಿ ತೋರಿಸುತ್ತಿದ್ದೆವಲ್ಲ, ಆಗ ಅದು ತಮಾಷೆಯಾಗಿರಬಹುದು, ಈಗ ಮಾಡಿದರೂ ತಮಾಷೆಯೆನಿಸಬಹುದು. ಆದರೆ ಅದರಿಂದ ನಿಜವಾಗಿಯೂ ಮುಖದ ಸ್ನಾಯುಗಳಿಗೆ, ಗದ್ದ, ಗಲ್ಲ, ಕುತ್ತಿಗೆಯ ಭಾಗದ ಸ್ನಾಯುಗಳಿಗೆ ಉಪಯೋಗಗಳಿವೆ. ಮುಖ್ಯವಾಗಿ, ಮುಖದ ಸ್ನಾಯುಗಳನ್ನು ಬಳಸಿಕೊಂಡು ಮಾಡುವ ಈ ಬಗೆಯ ಕೆಲ ವ್ಯಾಯಾಮಗಳಿಂದ ಡಬಲ್ ಚಿನ್ ನಂತಹ ಸಮಸ್ಯೆಗಳು ಪರಿಹಾರವಾಗಬಹುದು.
6. ನಗು: ನಿಮಗೆ ಗೊತ್ತೆ ನಗು ಕೇವಲ ಮಾನಸಿಕವಾಗಿ ಮಾತ್ರ ಚೈತನ್ಯದ ಗುಳಿಗೆ ಎಂದು ನೀವಂದುಕೊಂಡರೆ ಅದು ಮೂರ್ಖತನ. ನಗುವಿನಿಂದ ಮುಖದ ಸ್ನಾಯುಗಳಿಗೆ, ಮಾಂಸಖಂಡಗಳಿಗೆ ಸಾಕಷ್ಟು ವ್ಯಾಯಾಮ ದೊರೆಯುತ್ತದೆ. ಹಾಗಾಗಿ, ಸಮಯವಿದ್ದಾಗಲೆಲ್ಲ ಜೊರಾಗಿ ನಕ್ಕುಬಿಡಿ. ಮಾನಸಿಕವಾಗಿ ಅಷ್ಟೇ ಅಲ್ಲ, ದೈಹಿಕವಾಗಿಯೂ ನಗುವಿನ ಲಾಭವನ್ನು ನಿಮ್ಮ ಮುಖ ಪಡೆಯುತ್ತದೆ. ಮುಖದ ಸ್ನಾಯುಗಳು ಟೋನ್ ಆಗಿ ನೀವು ಕಳೆಕಳೆಯಾಗಿ ಕಾಣಿಸುತ್ತೀರಿ.
ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?