Site icon Vistara News

Eating chips | ಚಿಪ್ಸ್‌ ಎಂಬ ಚಟವನ್ನು ನೀವು ಗೆದ್ದರೆ ಜಗತ್ತು ಗೆದ್ದಂತೆ!

eating chips

ಪೊಟೇಟೋ ಚಿಪ್ಸ್‌ ಅಥವಾ ಆಲೂಗಡ್ಡೆ ಚಿಪ್ಸ್‌ ಎಂಬ ಮಾಯೆಯ ಸುಳಿಗೆ ಸಿಲುಕದವರಿಲ್ಲ. ಒಂದೇ ಒಂದು ಚಿಪ್ಸ್‌ ಬಾಯಿಗಿಡುತ್ತೇನೆ ಎಂದು ಹೊರಟರೆ, ಒಂದು ಪ್ಯಾಕೆಟ್‌ ಚಿಪ್ಸ್‌ ಇಡೀ ಖಾಲಿಯಾಗದೆ ನಾವು ಕೈ ತೆಗೆಯುವುದಿಲ್ಲ. ನಮಗೆ ನಾವು ಎಷ್ಟೇ ಕಡಿವಾಣ ಹಾಕಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರೂ, ಪ್ಯಾಕೆಟ್‌ ಮುಂದಿಟ್ಟಾಗ ಬಾಯಿ ಕಟ್ಟಿ ಕೂರುವ ಮನೋಸ್ಥೈರ್ಯ ಇರುವವರು ಬಹಳ ಕಡಿಮೆ. ಯಾಕೆಂದರೆ, ಇದೊಂದು ಬಿಟ್ಟರೂ ಬಿಡದ ಮಾಯೆ!

ಬಹುಶಃ ಚಿಪ್ಸ್‌ ತಯಾರಿಕಾ ಸಂಸ್ಥೆಯೂ ಇದನ್ನೇ ತಮ್ಮ ಜಾಹಿರಾತಿನಲ್ಲಿ ನಿರ್ಭಿಡೆಯಿಂದ ಹೇಳಿಕೊಳ್ಳುತ್ತವೆ. ನಮ್ಮ ಚಿಪ್ಸ್‌ ತಿನ್ನಹೊರಟರೆ ನೀವು ಒಂದೇ ಚಿಪ್ಸ್‌ ತಿನ್ನುತ್ತೇವೆಂಬ ಶಪಥವನ್ನು ಮುರಿದೇ ತೀರುತ್ತೀರಿ ಎಂದು ಅವುಗಳು ಹೇಳುತ್ತವೆ. ಅದು ನಿಜ ಕೂಡಾ, ಯಾಕೆಂದರೆ ಸತ್ಯ ಎಲ್ಲರಿಗೂ ಗೊತ್ತು.

ಅಷ್ಟಕ್ಕೂ ಈ ಚಿಪ್ಸ್‌ ಮಾಯೆಯಿಂದ ನಮಗೇಕೆ ಹೊರಬರಲಾಗುವುದಿಲ್ಲ? ನಾವೇಕೆ ಇಂತಹ ನಾಲಿಗೆ ಚಪಲಕ್ಕೆ ಸಿಕ್ಕಿಬೀಳುತ್ತೇವೆ ಎಂದು ಪ್ರಶ್ನೆ ಕೇಳಿಕೊಂಡರೆ ಉತ್ತರ ಸರಳ ಹಾಗೂ ಸುಲಭ. ಯಾಕೆಂದರೆ, ಈ ಆಲೂಗಡ್ಡೆ ಚಿಪ್ಸ್‌ ಎಂಬುದು ಎರಡು ಅಂಶಗಳನ್ನು ಹೆಚ್ಚು ಹೊಂದಿದೆ. ಒಂದು ಉಪ್ಪು, ಇನ್ನೊಂದು ಕೊಬ್ಬು. ಎರಡೂ ದೇಹಕ್ಕೆ ಅತಿಯಾಗಿ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯವೇ ಆಗಿದೆ. ಹಲವಾರು ಸಂಶೋಧನೆಗಳು, ಇಂತಹ ಉಪ್ಪಿನಂಶವನ್ನು ತಿಂದರೆ ಇದು ನಮ್ಮ ದೇಹದಲ್ಲಿ ಡೋಪಮೈನ್‌ ಹಾರ್ಮೋನಿನ ಉತ್ಪತ್ತಿಯನ್ನು ಪ್ರಚೋದಿಸುವುದರ ಜೊತೆಗೆ ನಮ್ಮ ಮಿದುಳಿನ ಅಹ್ಲಾದಕರ ಅನುಭವ ಹೊಂದುವಂತೆ ಮಾಡುತ್ತದೆ. ಇದರಿಂದ ನಮ್ಮ ಮನಸ್ಸು ಮತ್ತೂ ಮತ್ತೂ ಇಂತಹ ತಿನಿಸನ್ನೇ ಬೇಡುತ್ತದೆ. ಪರಿಣಾಮ ನಮಗೇ ಅರಿವಿಲ್ಲದ ಹಾಗೆ ಬಾಯಿ ಚಪ್ಪರಿಸಿ ಈ ಚಿಪ್ಸನ್ನು ಒಂದೊಂದಾಗಿ ಬಾಯಿಗಿಡುತ್ತಲೇ ಹೋಗುತ್ತೇವೆ. ಒಂದಿಡೀ ಪ್ಯಾಕೆಟ್ಟು ಮುಗಿದ ಮೇಲಷ್ಟೇ, ನಾವಿಷ್ಟನ್ನೂ ಖಾಲಿ ಮಾಡಿದೆವು ಎಂಬ ಜ್ಞಾನೋದಯವಾಗುತ್ತದೆ ಮತ್ತು ಛೇ,ಮುಗಿದೇ ಹೋಯಿತಾ ಎಂಬ ಬೇಸರವೂ ಆಗುತ್ತದೆ.

ಬಹುತೇಕ ಎಲ್ಲ ಚಟಗಳ ಹಾಗೆ ಈ ಚಿಪ್ಸ್‌ ತಿನ್ನುವ ಚಟದಿಂದಲೂ ದೇಹಕ್ಕೇ ಯಾವ ಒಳ್ಳೆಯದೂ ಸಿಗುವುದಿಲ್ಲ. ಅತಿಯಾದ ಕೊಬ್ಬಿನಂಶದ ಜೊತೆಗೆ ಸಿಕ್ಕಾಪಟೆ ಸೋಡಿಯಂ ಹೊಂದಿರುವ ಈ ಚಿಪ್ಸ್‌ ಎಂಬ ಕುರುಕಲಿನಲ್ಲಿ ಎಷ್ಟು ಕ್ಯಾಲರಿ ಇದೆಯೆಂಬುದನ್ನು ಬಲ್ಲಿರಾ? ಒಂದೇ ಒಂದು ಔನ್ಸು ಆಲೂಗಡ್ಡೆ ಚಿಪ್ಸಿನಲ್ಲಿ ೧೫೪ ಕ್ಯಾಲರಿಯೂ, ೧೦ ಗ್ರಾಂನಷ್ಟು ಕೊಬ್ಬೂ, ೧.೧ ಎಂಜಿ ಕೊಲೆಸ್ಟೆರಾಲ್‌ ಹಾಗೂ ೧೩೬ ಎಂಜಿ ಸೋಡಿಯಂ ಹೊಂದಿದೆಯಂತೆ.

ಹಾಗಾದರೆ, ಚಿಪ್ಸ್‌ ತಿನ್ನುವುದಕ್ಕೆ ಕಡಿವಾಣ ಹಾಕುವುದು ಸಾಧ್ಯವಿಲ್ಲವೇ? ಹಾಗೆ ಮಾಡಲು ಆತ್ಮಸ್ಥೈರ್ಯ ಹೆಚ್ಚು ಬೇಕೇ ಎಂದರೆ ಉತ್ತರ ಇದೆ. ಚಿಪ್ಸ್‌ ತಿನ್ನುವುದಕ್ಕೆ ಬ್ರೇಕ್‌ ಹಾಕಲು ಸಾಧ್ಯವಿದೆ. ಆದರೆ ಮನಸ್ಸು ಮಾಡಬೇಕು. ನಾನಿನ್ನು ಚಿಪ್ಸ್‌ ತಿನ್ನುವುದನ್ನು ಕಡಿಮೆ ಮಾಡುತ್ತೇನೆ ಅಥವಾ ಬಿಟ್ಟೆ ಬಿಡುತ್ತೇನೆ ಎಂಬ ವಾಗ್ದಾನವನ್ನು ನಿಮಗೆ ನೀವೇ ಕೊಟ್ಟುಕೊಳ್ಳುವುದು ಬಹಳ ಅಗತ್ಯ. ಕೊಟ್ಟರೆ ಸಾಲದು, ಅದರ ಪ್ರಕಾರ ನಡೆದುಕೊಳ್ಳುವ ಆತ್ಮಸ್ಥೈರ್ಯವೂ ಬೇಕು. ಆದರೂ ಕೆಲವೊಂದು ವಿಧಾನಗಳ ಮೂಲಕ ಚಿಪ್ಸ್‌ ತಿನ್ನುವುದನ್ನು ಕಡಿಮೆ ಮಾಡಿಕೊಳ್ಳಬಹುದು.

೧. ಮೊದಲು ನಿಮ್ಮ ಅಡುಗೆ ಕೋಣೆಗೆ ಬಂದು ಬೀಳುವ ಚಿಪ್ಸ್‌ ಪ್ಯಾಕೆಟ್ಟುಗಳಿಗೆ ಮುಕ್ತಿ ನೀಡಿ. ಅರ್ಥಾತ್‌, ಚಿಪ್ಸ್‌ ಕೊಂಡುಕೊಳ್ಳುವುದಕ್ಕೆ ಬ್ರೇಕ್‌ ಹಾಕಿ. ಮನೆಯಲ್ಲಿ ತಿಂಡಿ ಡಬ್ಬ ತಡಕಾಡುವಾಗ ಚಿಪ್ಸ್‌ ನಿಮ್ಮ ಕೈಗೆ ಸಿಗದಂತೆ ನೀವೇ ನಿಗಾ ಇಡಿ. ಕೊಳ್ಳುವುದನ್ನೇ ನಿಲ್ಲಿಸುವುದು ಸುಲಭ ಉಪಾಯ.

೨. ಮಧ್ಯಾಹ್ನದ ಊಟಕ್ಕೆ ಆಫೀಸಿಗೆ ಲಂಚ್‌ ಬಾಕ್ಸ್‌ ತೆಗೆದುಕೊಂಡು ಹೋಗಿ. ಕ್ಯಾಂಟೀನಿಗೆ ಹೋಗುವುದು, ಚಹಾಕ್ಕೆಂದು ಗೆಳೆಯರೊಡನೆ ಹೋಗುವಾಗ ಇಂತಹ ಚಟಗಳಿಗೆ ಕೈ ಹೋಗದಂತೆ ನಿಮ್ಮನ್ನು ನೀವೇ ಕಂಟ್ರೋಲ್‌ ಮಾಡಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಪ್ಯಾಕೆಟ್ಟಲ್ಲಿ ತಂದು ಮುಂದೆ ಇಟ್ಟುಕೊಂಡು ಕೆಲಸ ಮಾಡುವ ಅಶಿಸ್ತು ನಿಮಗಿದ್ದರೆ ಮೊದಲು ಆ ಅಭ್ಯಾಸವನ್ನು ಬಿಟ್ಟುಬಿಡಿ. ಸಲಾಡ್‌ ಮಾಡಿಕೊಂಡು ಉಳಿದ ಸಮಯದಲ್ಲಿ ಹೊಟ್ಟೆ ತುಂಬಿಸಿಕೊಳ್ಳವ ಪರ್ಯಾಯ ಉಪಾಯಗಳನ್ನು ಹುಡುಕಿ.‌

ಇದನ್ನೂ ಓದಿ | Health Care | ಕುಂಬಳಕಾಯಿ ಬಗ್ಗೆ ಅಸಡ್ಡೆಯೇ? ಅದರ ಬೀಜವೂ ಉಪಕಾರಿಯೇ!

೩. ಒಮ್ಮೆ ಬಾಯಿಗಿಡುವ ಮುಂಚೆ ಎರಡು ಬಾರಿ ಯೋಚಿಸಿ. ನೀವು ಬಾಯಿಗೆ ಇಡುವ ಮೊದಲು ಯಾವ ಆಹಾರವನ್ನು ಇಡುತ್ತಿದ್ದೀರಿ ಎಂಬ ಬಗ್ಗೆ ಸ್ವಲ್ಪ ಗಮನ ಹರಿಸಲು ಆರಂಭಿಸಿ. ಆಗ ತನ್ನಿಂದತಾನೇ ನೀವು ಜಾಗರೂಕತೆ ವಹಿಸಲು ಆರಂಭಿಸುತ್ತೀರಿ.

೪. ಚಿಪ್ಸ್‌ ಮನೆಯಲ್ಲಿದ್ದರೂ, ತಿನ್ನಬೇಕೆಂದು ಅನಿಸಿದರೂ ಇಡೀ ಪ್ಯಾಕೆಟ್ಟನ್ನು ಮುಂದಿರಿಸಿಕೊಂಡು ಎರಡೇ ಚಿಪ್ಸ್‌ ತಿನ್ನುತ್ತೇನೆ ಎಂದು ನಿಮ್ಮ ಮೇಲೆ ನಂಬಿಕೆ ಇಟ್ಟು ಕೂರಬೇಡಿ. ಪ್ಯಾಕೆಟ್ಟಿನಿಂದ ಒಂದಿಷ್ಟು ಮಾತ್ರ ಚಿಪ್ಸನ್ನು ಬೇರೆ ಬೌಲ್‌ಗೆ ಸುರುವಿ ತಂದು ಕೂರಿ. ಆಗ ಇಡೀ ಪ್ಯಾಕೆಟ್ಟನ್ನು ನೀವು ಒಮ್ಮೆಲೇ ಖಾಲಿ ಮಾಡುವುದಿಲ್ಲ. ಬೌಲ್‌ ಖಾಲಿಯಾಗುವ ಸಂದರ್ಭ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತೀರಿ!

೫. ಯಾರಾದರೊಬ್ಬರ ನೆರವನ್ನು ಪಡೆಯಿರಿ. ಇಬ್ಬರೂ ಜೊತೆಯಾಗಿ ನಿರ್ಧಾರ ತೆಗೆದುಕೊಳ್ಳಿ. ಆಗ ಒಬ್ಬರಿಗೊಬ್ಬರು ದಾರಿ ತಪ್ಪಿದಾಗ ಎಚ್ಚರಿಸುವ ಪರಿಪಾಟ ಬೆಳೆಯುತ್ತದೆ. ಕೊಂಚ ಆಲೋಚನಯಾದರೂ, ಮಾಡಲೇಬೇಕೆಂಬ ಸ್ಪೂರ್ತಿಯಾದರೂ ಹುಟ್ಟುತ್ತದೆ.

೬. ಅಷ್ಟಕ್ಕೂ ಕುರುಕಲು ತಿನ್ನಲೇಬೇಕೆನಿಸಿದರೆ, ಆರೋಗ್ಯಕರ ಕುರುಕಲನ್ನು ಪರ್ಯಾಯವಾಗಿ ಹುಡುಕಿ. ಮನೆಯಲ್ಲಿಯೇ ಏನಾದರೂ ಮಾಡಲು ಅಭ್ಯಾಸ ಮಾಡಿ.

ಇದನ್ನೂ ಓದಿ | Momos craze | ನೀವು ಮೋಮೋಸ್‌ ಪ್ರಿಯರೇ? ಹಾಗಾದರೆ ತಿನ್ನುವ ಮೊದಲು ಇದನ್ನೋದಿ!

Exit mobile version