Site icon Vistara News

Mouth Ulcer | ಬಾಳು ಹಣ್ಣಾಗುವ ಮೊದಲು ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು

mouth ulcer

ಹೊನ್ನಿದ್ದವನಿಗೆ ಹುಣ್ಣಿದ್ದವನಿಗೆ ನೆಮ್ಮದಿಯಿಲ್ಲ ಅನ್ನೋದು ಗಾದೆ. ಹೊನ್ನಿನ ವಿಷಯ ಸರಿಯೆ, ಹುಣ್ಣಿನ ವಿಷಯದಲ್ಲಂತೂ ಈ ಮಾತು ಹದಿನಾರಾಣೆ ಸತ್ಯ. ಅದರಲ್ಲೂ ಹುಣ್ಣು ಬಾಯಲ್ಲಿ ಬಂತೂಂತ ಆದರೆ ನೆಮ್ಮದಿ ಮಾತ್ರವಲ್ಲ, ಊಟ-ತಿಂಡಿ, ಮಾತು-ಕತೆ ಎಲ್ಲವೂ ತುಟ್ಟಿ. ಬಾಯಿ ಹುಣ್ಣು ಎಲ್ಲರಿಗೂ ಒಂದಿಲ್ಲೊಂದು ಸಂದರ್ಭದಲ್ಲಿ ಆಗಿಯೇ ಇರುವಂಥದ್ದು. ಹೇಳಿಕೊಳ್ಳುವುದಕ್ಕೆ ದೊಡ್ಡ ರೋಗವೇನೂ ಅಲ್ಲದಿದ್ದರೂ, ಎಷ್ಟು ಸಾಧ್ಯವೋ ಅಷ್ಟು ನೋವು, ತೊಂದರೆಯನ್ನು ಕೊಡುತ್ತದೆ ಈ ಸಣ್ಣ ಹುಣ್ಣು. ಒಮ್ಮೆ ಬಾಯಲ್ಲಿ ಕಾಣಿಸಿಕೊಂಡರೆ ಆರೆಂಟು ದಿನ ಖಚಿತವಾಗಿ ಗೋಳಾಡಿಸುವ ಈ ವ್ರಣ ಬರುವುದೇಕೆ, ಬಂದರೇನು ಮಾಡಬಹುದು ಎಂಬಂಥ ಕೆಲವು ವಿಚಾರಗಳು ಇಲ್ಲಿವೆ.

ಬರುವುದೇಕೆ?: ಕೆನ್ನೆಯ ಒಳ ಭಾಗವನ್ನು ಆಕಸ್ಮಿಕವಾಗಿ ಕಚ್ಚಿಕೊಂಡಾಗ, ಹಾಕಿಸಿಕೊಂಡ ಹಲ್ಲು ಅಥವಾ ಬ್ರೇಸಸ್‌ ಬಾಯಿಯ ಒಳಭಾಗದಲ್ಲಿ ಉಜ್ಜಿದರೆ, ನೈಜ ಹಲ್ಲು ಅಥವಾ ತುಂಬಿಸಿಕೊಂಡ ಹಲ್ಲಿನ ತುದಿ ಮೊನಚಾಗಿದ್ದರೆ, ತಿನ್ನುವಾಗ ಯಾವುದಾದರೂ ಆಹಾರದಿಂದ ಬಾಯೊಳಗೆ ಕೊರೆದಂತಾದರೆ, ಬಾಯಿಯ ಸ್ವಚ್ಛತೆ ಸರಿಯಾಗಿ ನಿರ್ವಹಿಸದಿದ್ದರೆ, ಕೆಲವೊಮ್ಮೆ ಮಲಬದ್ಧತೆಯಿಂದ, ಕೆಲವು ಅಗತ್ಯ ಪೋಷಕಾಂಶಗಳ ಕೊರತೆಯಿಂದ … ಹೀಗೆ ಇದಕ್ಕೆ ಕಾರಣಗಳು ಹಲವು.

ಬಾಯಿ ಹುಣ್ಣುಗಳಲ್ಲಿಯೂ ಕೆಲವು ರೀತಿಯಿವೆ. ಇವುಗಳ ಉಪಶಮನಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ಔಷಧಗಳು ಲಭ್ಯವಿವೆ. ಜೊತೆಗೆ, ಸಾಂಪ್ರದಾಯಿಕ ಮನೆಮದ್ದುಗಳೂ ಕೊಂಚ ಉಪಶಮನ ನೀಡುತ್ತವೆ. ಅಂಥ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

ಉಪ್ಪುನೀರು: ಉಗುರು ಬಿಸಿಯಿರುವ ಉಪ್ಪುನೀರಿನಿಂದ ಚನ್ನಾಗಿ ಬಾಯಿ ಮುಕ್ಕಳಿಸಬಹುದು. ದಿನಕ್ಕೆ ಹಲವಾರು ಬಾರಿ ಇದನ್ನು ಮಾಡಬೇಕಾಗುತ್ತದೆ. ಇದರಿಂದ ವ್ರಣದಲ್ಲಿರುವ ಊತ, ನೋವು ಶಮನಗೊಳ್ಳುತ್ತದೆ. ಬಾಯಲ್ಲಿ ಉಪ್ಪಿನ ರುಚಿ ಇರುವುದು ಸಹ್ಯವಾಗದಿದ್ದರೆ, ನಂತರ ಸ್ವಚ್ಛವಾದ ಬಿಸಿನೀರಿನಿಂದಲೂ ಬಾಯಿ ಮುಕ್ಕಳಿಸಬಹುದು.

ಜೇನುತುಪ್ಪ: ಶುದ್ಧ ಜೇನುತುಪ್ಪವನ್ನು ನೇರವಾಗಿ ಹುಣ್ಣಿರುವ ಭಾಗಕ್ಕೇ ಹಚ್ಚಬಹುದು. ಜೊಲ್ಲಿನೊಂದಿಗೆ ಇದು ಹೊಟ್ಟೆಗೆ ಹೋಗುವುದರಿಂದ, ಮತ್ತೆ ಮತ್ತೆ ಹಚ್ಚಬೇಕಾಗುತ್ತದೆ. ಸೂಕ್ಷ್ಮಜೀವಿಗಳಿಗೆ ಕಡಿವಾಣ ಹಾಕುವ ಜೇನುತುಪ್ಪದ ಸಾಮರ್ಥ್ಯದಿಂದ ಹುಣ್ಣಿನಲ್ಲಿರುವ ಊತ ಮತ್ತು ನೋವು ಕಡಿಮೆಯಾಗುತ್ತದೆ.

ಕೊಬ್ಬರಿ ಎಣ್ಣೆ: ಹುಣ್ಣಿನ ನೋವು, ಊತ ಕಡಿಮೆಯಾಗುವುದಕ್ಕೆ ಕೊಬ್ಬರಿ ಎಣ್ಣೆ ಬಳಸುವ ವಿಧಾನವೂ ಇದೆ. ರಾತ್ರಿ ಮಲಗುವಾಗ ನೋವಿರುವ ಜಾಗಕ್ಕೆ ಢಾಳಾಗಿ ಎಣ್ಣೆ ಸವರಬಹುದು. ಇದರಿಂದ ಪದೇಪದೆ ಎಂಜಲು ನುಂಗುವ ತಾಪತ್ರಯವೂ ತಪ್ಪುತ್ತದೆ. ತೆಂಗಿನ ಹಾಲಿನಿಂದಲೂ ಬಾಯಿ ಮುಕ್ಕಳಿಸುವ ಕ್ರಮ ಕೆಲವು ಕಡೆ ಬಳಕೆಯಲ್ಲಿದೆ. ಆದರೆ ಇವ್ಯಾವುವೂ ತಕ್ಷಣ ಹುಣ್ಣು ನಿವಾರಿಸುವಂಥ ಮಾಯಾಮದ್ದುಗಳಲ್ಲ. ತಕ್ಕಮಟ್ಟಿಗೆ ತೊಂದರೆಗೆ ಉಪಶಮನ ನೀಡಬಲ್ಲವು.

ಲವಂಗದೆಣ್ಣೆ: ಬಾಯಿಯ ಬಹಳಷ್ಟು ತೊಂದರೆಗಳಿಗೆ ಲವಂಗದೆಣ್ಣೆಯನ್ನು ಮದ್ದಾಗಿ ಬಳಸಲಾಗುತ್ತದೆ. ಹಲ್ಲು ನೋವು, ಒಸಡಿನ ಬಾವು ಮುಂತಾದ ತೊಂದರೆಗಳಿಗೆ ಇದ್ದು ಒಳ್ಳೆಯ ಔಷಧ. ಇದನ್ನು ಬಳಸುವ ಮುನ್ನ ಚನ್ನಾಗಿ ಬಾಯಿ ಸ್ವಚ್ಛಗೊಳಿಸಿ. ನಂತರ ಸಣ್ಣ ಹತ್ತಿಯಲ್ಲಿ ಎಣ್ಣೆಯನ್ನು ಹನಿಸಿ, ನೇರವಾಗಿ ಬಾಯೊಳಗೆ ಇಟ್ಟುಕೊಳ್ಳಬಹುದು. ಲವಂಗದಲ್ಲಿರುವ ಯುಜೆನಾಲ್‌ನಂಥ ಸತ್ವಗಳು ನೋವು-ಬಾವುಗಳನ್ನು ಕಡಿಮೆ ಮಾಡುತ್ತವೆ.

ಅರಿಶಿನ: ಇದನ್ನು ನೀರಿನಲ್ಲಿ ಬೆರೆಸಿ ಪೇಸ್ಟ್‌ ರೀತಿಯಲ್ಲಿ ಮಾಡಿ ನೇರವಾಗಿ ವ್ರಣಕ್ಕೆ ಹಚ್ಚಬಹುದು. ಆದರೆ ಇದರಿಂದ ಮೊದಲಿಗೆ ಆಗುವ ಉರಿಯನ್ನು ಸಹಿಸಿಕೊಳ್ಳಲು ಗುಂಡಿಗೆ ಗಟ್ಟಿ ಬೇಕು. ಹುಣ್ಣಿನಲ್ಲಿ ಯಾವುದೇ ಸೋಂಕಿದ್ದರೆ ಕಡಿಮೆ ಮಾಡಲು ಅರಿಶಿನ ಸಹಾಯ ಮಾಡುತ್ತದೆ.

ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!

ಕಿತ್ತಳೆ ಹಣ್ಣಿನ ರಸ: ವಿಟಮಿನ್‌ ಸಿ ಕೊರತೆಯಿಂದಾಗಿಯೂ ಬಾಯಿ ಹುಣ್ಣು ಬರುವ ಸಾಧ್ಯತೆಯಿದೆ. ಹಾಗಾಗಿ ಕಿತ್ತಳೆ ರಸವನ್ನು ಸೇವಿಸಬಹುದು. ಇದರಿಂದ ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಒಟ್ಟಾರೆಯಾಗಿ ದೇಹಾರೋಗ್ಯಕ್ಕೂ ಲಾಭವಾಗುವುದು.

Exit mobile version