Site icon Vistara News

Eating habit | ಅಡುಗೆ ಮಾಡಿಕೊಳ್ಳುವಷ್ಟು ಸಮಯ ಇಲ್ಲವೇ? ಹಾಗಿದ್ದರೆ ಹೀಗೆ ಮಾಡಿ

eating

ಬೆಳಗ್ಗೆ ಎದ್ದಿರುವುದೊಂದು ಸರಿಯಾಗಿ ನೆನಪಿರುತ್ತದೆ. ಅಲ್ಲಿಂದ ಮುಂದೆ, ಹಲ್ಲುಜ್ಜು, ಸ್ನಾನ ಮಾಡು, ದೇವರಿದ್ದರೆ ಅವನಿಗೊಂದು ಸಾಷ್ಟಾಂಗ, ಟೀ-ಕಾಫಿ-ಹಾಲು ಎಂಥದ್ದೋ ಒಂದು ಗಂಟಲಿಗೆ ಸುರಿ, ಇಷ್ಟರ ನಡುವೆ ಹೊರಡುವ ತಯಾರಿ, ತಿಂಡಿಯನ್ನು (ಮಾಡಿಕೊಡುವವರಿದ್ದರೆ) ವಸ್ತ್ರ ಹಾಕಿಕೊಳ್ಳುತ್ತಲೇ ಹೊಟ್ಟೆಗಿಳಿಸು, ಅದಕ್ಕೆ ಸಮಯವಿಲ್ಲದಿದ್ದರೆ ಡಬ್ಬಾದಲ್ಲಿ ತುಂಬು, ಬ್ಯಾಗು ಕೈಗೆತ್ತಿಕೊಂಡು ರಸ್ತೆಗಿಳಿದರೆ… ಊಫ್! ಆಫೀಸು ತಲುಪುವಷ್ಟರಲ್ಲಿ ಯುದ್ಧ ಗೆದ್ದ ಅನುಭವ. ಬೆಳಗಿನ ಅವಸ್ಥೆಯೇ ಇಷ್ಟಾದರೆ, ರಾತ್ರಿಯೆಂಬಷ್ಟರಲ್ಲಿ ಎಲ್ಲಿಂದ ಮತ್ತು ಎಷ್ಟು ತ್ರಾಣ ದೇಹದಲ್ಲಿ ಉಳಿದೀತು?‌

ಇಷ್ಟೊಂದು ಗಡಿಬಿಡಿಯ ಬದುಕಿನಲ್ಲಿ ಎಲ್ಲದಕ್ಕಿಂತ ಅತಿ ಕಡಿಮೆ ಗಮನವನ್ನು ನಾವು ಕೊಡುವುದು ಆರೋಗ್ಯಕರವಾದ ಆಹಾರಶೈಲಿಗೆ. ಬೆಳಗ್ಗೆ ಏನು ತಿಂದಿದ್ದೇವೆ ಎನ್ನುವುದು ನೆನಪಿದ್ದರೆ ಪುಣ್ಯ, ಮಧ್ಯಾಹ್ನಕ್ಕೆ ಎಲ್ಲೆಂದರಲ್ಲಿ, ಸಂಜೆಗೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವಷ್ಟು ತಾಳ್ಮೆ ಇಲ್ಲದೆಯೆ ಯಾವುದೋ ಒಂದು ಫುಡ್‌ ಆಪ್‌ ಆಪ್ತ ಎನಿಸುತ್ತದೆ. ಪರಿಣಾಮ, ಔಷಧವಿಲ್ಲದೆ ನಡೆಯಲ್ಲ ಎಂಬಷ್ಟು ದೇಹಾರೋಗ್ಯ ಹದಗೆಡುತ್ತದೆ. ಹಾಗಾದರೆ ಏನು ಮಾಡಬೇಕು?

ʻGut is the butt of every problemʼ ಎಂಬ ಮಾತಿದೆ. ಅಂದರೆ ಸರ್ವರೋಗಕ್ಕೂ ಹೊಟ್ಟೆಯೇ ಮೂಲ ಎಂಬ ಈ ಮಾತು ಸುಳ್ಳೇನಲ್ಲ. ಆಹಾರಕ್ರಮ ಸರಿಯಿದ್ದರೆ ದೊಡ್ಡ ಪ್ರಮಾಣದಲ್ಲಿ ಅನಾರೋಗ್ಯವನ್ನು ಮೆಟ್ಟಿನಿಲ್ಲಬಹುದು. ನಮ್ಮ ಊಟದ ತಟ್ಟೆಯಲ್ಲಿ ಪ್ರೊಟೀನ್‌, ನಾರು, ಕೊಬ್ಬು ಮತ್ತು ಶರ್ಕರಪಿಷ್ಟಾದಿಗಳು ಎಷ್ಟಿರಬೇಕು ಎಂಬ ಗಿಳಿಪಾಠವನ್ನು ಎಲ್ಲರೂ ಒಪ್ಪಿಸುತ್ತಾರೆ. ಆದರೆ ಎಷ್ಟು ಮಂದಿ ಇದನ್ನು ಅನುಸರಿಸುತ್ತಾರೆ ಎಂಬುದು ಪ್ರಶ್ನೆ. ಆಹಾರ ಕ್ರಮವನ್ನು ಸರಿದೂಗಿಸಿಕೊಂಡು ಹೋಗುವ ಕೆಲವು ಸರಳ ವಿಧಾನಗಳು ಇಲ್ಲಿವೆ.

ಉಪವಾಸ… ಬೆಳಗ್ಗೆ ಅಲ್ಲ!: ಏಕಾದಶಿಗೆ ಮಾಡಿಕೊಳ್ಳಿ ಸಾಕು. ಹಾಗಂತ ದ್ವಾದಶಿಗೆ ಗಡದ್ದು ಪಾರಣೆ ಮಾಡಿದ್ರೆ, ಸರ್ವ ಬಣ್ಣ ಮಸಿ ನುಂಗಿದಂತಾದೀತು, ಎಚ್ಚರ. ಸಿಕ್ಕಿದ್ದೆಲ್ಲಾ ತಿನ್ನುವ ಬಯಕೆಯನ್ನು ಹಸಿದಾಗ ಹತ್ತಿಕ್ಕುವುದು ಬಹಳ ಕಷ್ಟ. ಅದರಲ್ಲೂ ಬೆಳಗಿನ ತಿಂಡಿಯನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ. ಹಾಗಂತ ನೆನಪಿಡಿ, ಹಿಂದಿನ ದಿನ ಸಂಜೆ ಬೇಕರಿಯಿಂದ ತಂದಿದ್ದ ಸಮೋಸವನ್ನು ಬೆಳಗ್ಗೆ ತಿಂಡಿಗೆ ಮುಕ್ಕುವುದಲ್ಲ. ತಿಂಡಿ ಮಾಡುವುದಕ್ಕೆ ಸಮಯವಿಲ್ಲದಿದ್ದರೆ, ಕ್ಷಿಪ್ರವಾಗಿ ಮಾಡಿ ಸೇವಿಸಬಹುದಾದ ರಾಗಿ ತಿಳಿಯೂ ಉತ್ತಮ ಆಯ್ಕೆ. ಮಾರನೇ ದಿನದ ಪ್ಲಾನಿಂಗ್‌ನಲ್ಲಿ ಬೆಳಗಿನ ಉಪಹಾರದ ಪ್ಲಾನಿಂಗ್‌ ಸಹ ಸೇರಿಸಿಕೊಳ್ಳಿ. ದಿನದಿನಕ್ಕೆ ಉಪಾಹಾರದ ತಯಾರಿ ಅಸಾಧ್ಯ ಎನಿಸಿದರೆ, ಪ್ರೊಟೀನ್‌ ಬಾರ್‌ ಅಥವಾ ಮನೆಯಲ್ಲೇ ಮಾಡಬಹುದಾದ ಡ್ರೈ ಫ್ರೂಟ್-ನಟ್‌ ಉಂಡೆಗಳು ನಿಜಕ್ಕೂ ಆರೋಗ್ಯಕರ. ಕೆಲಸದ ಒತ್ತಡದಲ್ಲಿ ನಿದ್ದೆಯೂ ಸರಿಯಾಗದೆ, ಬೆಳಗಿನ ತಿಂಡಿಯೂ ಸರಿಯಾಗದಿದ್ದರೆ ಆರೋಗ್ಯ ಕೆಡಲು ಹೆಚ್ಚಿನ ಸಮಯ ಬೇಡ.

ಇದನ್ನೂ ಓದಿ | Good sleep | ಪ್ರತಿ ಮಧ್ಯರಾತ್ರಿ ಒಂದೇ ಸಮಯಕ್ಕೆ ಎಚ್ಚರಾಗೋದು ಯಾಕೆ?!

ಪ್ರಯಾಣ ಅನಿವಾರ್ಯವೇ?: ತೊಂದರೆಯಿಲ್ಲ. ಒಂದಿಷ್ಟು ಡ್ರೈ ಸ್ನ್ಯಾಕ್‌ ಜೊತೆಗಿಟ್ಟುಕೊಳ್ಳುವುದನ್ನು ಯಾವತ್ತೂ ಮರೆಯಬೇಡಿ. ಇಂಥ ಅನಿವಾರ್ಯತೆಯಲ್ಲಿ ಬಾದಾಮಿ, ಒಣದ್ರಾಕ್ಷಿ, ಪಿಸ್ತಾ, ಅಂಜೂರ ಅಥವಾ ಪ್ರೊಟೀನ್‌ ಬಾರ್‌ಗಳು ಉತ್ತಮ ಸಂಗಾತಿಗಳಾಗಬಲ್ಲವು. ಇದರಿಂದ ಪ್ರಯಾಣದ ಹಾದಿಯಲ್ಲಿ ಹೊಟ್ಟೆ ಹಸಿಯದಂತೆ ತಡೆಯಬಹುದು. ಹಾಗೇನಾದರೆ ಹೊಟ್ಟೆ ಸಿಕ್ಕಾಪಟ್ಟೆ ಹಸಿದರೆ, ಮುಂದೆ ಸಿಕ್ಕುವ ಊಟವನ್ನು ಏನು-ಎತ್ತ ಯೋಚಿಸದೆ ಕಂಠಮಟ್ಟ ಬಾರಿಸುವುದು ನಿಶ್ಚಿತ. ಇನ್ನು ದೇಶಗಳ ನಡುವೆ ಸುತ್ತಾಡುವ ಅನಿವಾರ್ಯತೆಯಿದ್ದರೆ, ಯಾವ ದೇಶದಲ್ಲಿ ಎಷ್ಟೇ ಗಂಟೆ ಆಗಿದ್ದರೂ, ನಿಮ್ಮ ಒಂದು ಗಡಿಯಾರವನ್ನಾದರೂ ಭಾರತದ ಸಮಯಕ್ಕೆ ಇಟ್ಟುಕೊಳ್ಳಿ. ಇದರಿಂದ ಶರೀರ ಹೊಸ ಸಮಯಕ್ಕೆ ಹೊಂದಿಕೊಳ್ಳುವವರೆಗೆ ಊಟ-ತಿಂಡಿಯನ್ನು ಸರಿಯಾಗಿ ನಿಭಾಯಿಸಬಹುದು.

ಮದುವೆ ಊಟವೇ?: ಎಲ್ಲರಿಗೂ ಇಷ್ಟದ್ದೇ. ಹಾಗಂತ ಅಲ್ಲಿ ತಿನ್ನುವುದಕ್ಕೂ ಪಾಪ-ಪುಣ್ಯ ಇರಿಸಿಕೊಳ್ಳಿ. ಇದರರ್ಥ ಮದುವೆ ಮನೆಯಲ್ಲೂ ಡಯಟ್‌ ಮಾಡಿ ಎಂದಲ್ಲ! ಆದರೆ ಸಂಜೆ ದೊಡ್ಡ ಊಟಕ್ಕೆ ಹೋಗಲೆಂದು ಮಧ್ಯಾಹ್ನದ ಊಟವನ್ನು ಬಿಟ್ಟು, ʻಕ್ಯಾಲರಿ ಉಳಿಸಿದೆʼ ಎಂದುಕೊಳ್ಳಬೇಡಿ. ಇದರಿಂದ ಸಂಜೆ ಮಿತಿಮೀರಿ ತಿನ್ನುವಂತಾಗಿ, ʻಕ್ಯಾಲರಿ ತುರುಕಿದೆʼ ಎಂಬಂತಾಗುತ್ತದೆ. ನಿಮ್ಮಿಷ್ಟದ ಸಿಹಿಯನ್ನು ಹೆಚ್ಚು ತಿನ್ನಬೇಕೆನಿಸಿದರೆ, ಬಜ್ಜಿ-ಬೋಂಡಕ್ಕೆ ತಡೆಯೊಡ್ಡಿ. ಸಹಜವಾಗಿ ಪಚನವಾಗುವಷ್ಟು ತಿಂದರೆ ಸಾಲದೆ? ತಿಂದಿದ್ದು ಜೀರ್ಣವಾಗುವುದಕ್ಕೂ ಔಷಧಿ ಬೇಕು ಎಂಬಂತೆ ಆಗಬಾರದಲ್ಲ. ಇಂಥ ಯಾವುದೇ ಸಾಮಾಜಿಕ ಭೇಟಿಗಳು ತಿನ್ನುವುದಕ್ಕೆ ಮಾತ್ರ ಅಲ್ಲ, ಅಲ್ಲಿ ಸಿಕ್ಕ ಬಂಧು-ಮಿತ್ರರೊಂದಿಗೆ ಮಾತಾಡಿ, ಒಡನಾಡಿ. ಬದುಕಿನಲ್ಲಿ ಎಲ್ಲವೂ ಇರಬೇಕು.

ಇದನ್ನೂ ಓದಿ | Allergy types | ಅಲರ್ಜಿಯ ಮರ್ಜಿಯಲ್ಲಿ ಬದುಕುವ ಕಲೆ

ಏಕಾಂಗಿಯೇ?: ಇಂದಿನ ಬದುಕಿಗೆ ಇದೇನು ಹೊಸದಲ್ಲ ಬಿಡಿ. ಕಳೆದೆರಡು ವರ್ಷಗಳಲ್ಲಿ ನಾವೆಲ್ಲರೂ ಒಂದಿಲ್ಲೊಂದು ಬಾರಿ ಕ್ವಾರಂಟೈನ್‌ ಒಳಗಾಗಿಯೇ ಇರಬಹುದು. ಇನ್ನು ಸದಾ ಪ್ರಯಾಣ ಮಾಡುವವರಿಗಂತೂ ಇದು ಅನಿವಾರ್ಯವೂ ಹೌದು. ಹೀಗೆ ಎಲ್ಲರಿಂದ ದೂರವಾಗಿ ದಿನಗಟ್ಟಲೆ ಅಥವಾ ವಾರಗಟ್ಟಲೆ ಕಳೆಯುವುದು ಅಗತ್ಯ ಎನ್ನುವಾಗ ದೊಡ್ಡ ಸಮಸ್ಯೆಯಾಗುವುದು ಆಹಾರದ್ದು. ಇದಕ್ಕೂ ಕೆಲವು ವ್ಯವಸ್ಥೆ ಮಾಡಿಕೊಳ್ಳಬಹುದು. ಒಣ ಹಣ್ಣುಗಳು, ಹಲವು ಧಾನ್ಯಗಳನ್ನು ಹೊಂದಿದ ಬ್ರೆಡ್‌ಗಳು, ಬಿಸಿ ನೀರು ಮಾತ್ರದಿಂದಲೇ ತಯಾರಾಗುವ ಉಪ್ಪಿಟ್ಟು-ಅವಲಕ್ಕಿಯಂಥ ಆಯ್ಕೆಗಳು, ಧಾನ್ಯಗಳ ಸೀರಿಯಲ್‌ ಅಥವಾ ಹುರಿಟ್ಟುಗಳು, ಪ್ರೊಟೀನ್‌ ಉಂಡೆಗಳು… ಸಹಾಯಕವಾಗಬಹುದು. ಇವುಗಳಿಂದಲೇ ವ್ಯಷ್ಟಿ ಕಳೆಯಲು ಸಾಧ್ಯ ಎಂದಲ್ಲ. ಆದರೆ ಶರೀರ ಸೋಲದಂತೆ ತಡೆಯಲು ನೆರವಾಗಬಲ್ಲವು. ನೆನಪಿಡಿ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಹಿರಿಯರ ಮಾತು ಸುಳ್ಳಲ್ಲ.

Exit mobile version