Site icon Vistara News

Immunity Tips: ನಿಮ್ಮ ಈ ಎಲ್ಲ ಅಭ್ಯಾಸಗಳು ರೋಗನಿರೋಧಕ ವ್ಯವಸ್ಥೆಯನ್ನೇ ದುರ್ಬಲಗೊಳಿಸಬಹುದು!

immunity

ಎಲ್ಲ ಇದೆ, ಆದರೆ, ಆರೋಗ್ಯ (health problems) ಮಾತ್ರ ಇಲ್ಲ ಎಂದು ಕೆಲವರು ಹೇಳುವುದನ್ನು ನೀವು ಕೇಳಿರಬಹುದು. ಮನುಷ್ಯನಿಗೆ ಆರೋಗ್ಯದಷ್ಟು ಮುಖ್ಯವಾದುದು ಜಗತ್ತಿನಲ್ಲಿ ಇನ್ನೊಂದಿಲ್ಲ. ಅದಕ್ಕೇ ಹಿರಿಯರು ಆರೋಗ್ಯಕ್ಕಿಂತ ಹೆಚ್ಚಿನ ಭಾಗ್ಯವಿಲ್ಲ ಎಂದೂ ಹೇಳಿದ್ದಾರೆ. ಆರೋಗ್ಯವಿದ್ದರೆ ಮಾತ್ರ ಸಕಲ ಸಂಪತ್ತನ್ನೂ ಅನುಭವಿಸುವ ಸಂತೋಷ ದಕ್ಕೀತು. ಆರೋಗ್ಯವಿಲ್ಲದಿದ್ದರೆ, ಯಾವುದೂ ಸಾಧ್ಯವೇ ಇಲ್ಲ. ಬಹಳ ಸಲ ನೀವು ಗಮನಿಸಿರಬಹುದು. ನಮಗೆ ಆಗಾಗ ಏನಾದರೊಂದು ಆರೋಗ್ಯ ಸಮಸ್ಯೆ ಕಾಡುತ್ತದೆ. ಪದೇ ಪದೇ ಶೀತ, ನೆಗಡಿ, ಜ್ವರ ಅಥವಾ ಇನ್ಯಾವುದೋ ಆರೋಗ್ಯ ಸಮಸ್ಯೆ ನಮ್ಮನ್ನು ಆಗಾಗ ಬೆನ್ನುಬಿಡದೆ ಕಾಟ ಕೊಡುತ್ತದೆ. ಈಗಷ್ಟೇ ಗುಣಮುಖರಾಗಿ ತಿಂಗಳೊಂದು ಕಳೆವಷ್ಟರಲ್ಲಿ, ಸಣ್ಣ ಮಳೆಗೆ ನೆನೆದ ತಕ್ಷಣ ಗಂಟಲು ನೋವು ವಕ್ಕರಿಸಿಕೊಂಡುಬಿಟ್ಟಿರುತ್ತದೆ. ಗಂಟಲು ನೋವು ಜ್ವರಕ್ಕೆ ತಿರುಗುತ್ತದೆ. ಒಂದು ವಾರ ನಮ್ಮನ್ನು ಇನ್ನಿಲ್ಲದಂತೆ ಹಣ್ಣಾಗಿಸುತ್ತದೆ. ಸಣ್ಣದೊಂದು ಶೀತಗಾಳಿಗೆ ನಾವು ನಡುಗಿ ಹೋಗುತ್ತೇವೆ. ಒಂದು ದಿನ ಸ್ವಲ್ಪ ಹೆಚ್ಚು ಕೆಲಸ ಮಾಡಿದರೆ ಸಾಕು, ಬೆಟ್ಟ ಹತ್ತಿ ಬಂದಷ್ಟು ಸುಸ್ತಾಗಿಬಿಡುತ್ತದೆ. ಯಾಕೆ ಹೀಗೆ? ದೇಹದಲ್ಲಿ ರೋಗ ನಿರೋಧಕ ಶಕ್ತಿ (immunity tips) ಕೆಲಸ ಮಾಡುತ್ತಿಲ್ಲವೇ ಎಂಬ ಸಂಶಯ ಕಾಡದೆ ಇರದು. ಹಾಗಾದರೆ ಬನ್ನಿ, ನಿಮ್ಮ ಯಾವೆಲ್ಲ ನಿತ್ಯದ ಅಭ್ಯಾಸಗಳು (healthy practices) ನಿಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸಬಹುದು (weak immunity) ಎಂಬುದನ್ನು ನೋಡೋಣ.

೧. ಮದ್ಯಪಾನ: ಜೀವನದಲ್ಲಿ ಗೆಳೆಯರು ಮುಖ್ಯ. ಸುಖ ಸಂತೋಷ ಮುಖ್ಯ. ಹಾಗಂತ ನಿತ್ಯವೂ ಗುಂಡು ಪಾರ್ಟಿ ಮಾಡಿದರೆ ಒಳ್ಳೆಯದೇ? ಖಂಡಿತಾ ಇಲ್ಲ. ಮದ್ಯಪಾನ ಎಲ್ಲೋ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೊಮ್ಮೆ ಮಾಡುವವರ ಬಗೆಗೆ ಈ ಮಾತಲ್ಲ. ಆದರೆ, ನಿತ್ಯವೂ ಅಥವಾ ವಾರದಲ್ಲಿ ಮೂರ್ನಾಲ್ಕು ಸಲ ಅಥವಾ ಪ್ರತಿ ವಾರಾಂತ್ಯ ಮದ್ಯಪಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ ಖಂಡಿತಾ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಮದ್ಯಪಾನದಿಂದ ದೂರವಿರಿ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನೇ ಕುಗ್ಗಿಸುತ್ತದೆ.

೨. ಧೂಮಪಾನ: ಧೂಮಪಾನವೂ (smoking) ಮದ್ಯಪಾನದಂತೆಯೇ, ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಇನ್ನೊಂದು ಅಂಶ. ಇದು ಕೇವಲ ಶ್ವಾಸಕೋಶಕ್ಕೆ ಮಾತ್ರ ಸಂಬಂಧಿಸಿದ್ದು ಅಂದುಕೊಂಡರೆ ತಪ್ಪಾದೀತು. ಈ ಕೆಟ್ಟ ಚಟ, ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

೩. ನಿದ್ದೆಯ ಕೊರತೆ: ಅತಿಯಾಗಿ ಕೆಲಸ ಕೆಲಸ ಎಂದು ಒತ್ತಡವನ್ನು ನಿಮ್ಮ ಮೇಲೆ ಹೇರಿಕೊಳ್ಳುತ್ತಿದ್ದೀರಾ? ರಾತ್ರಿ ಹೆಚ್ಚು ಹೊತ್ತು ನಿದ್ದೆಗೆಟ್ಟು (sleep deprivation) ಕೆಲಸ ಮಾಡುತ್ತಿದ್ದೀರಾ? ಅಥವಾ ತಡರಾತ್ರಿಯವರೆಗೆ ನೆಟ್‌ಫ್ಲಿಕ್ಸ್‌, ಪ್ರೈಮ್‌ ಎಂದುಕೊಂಡು ನಿದ್ದೆ ಹಾಳು ಮಾಡಿಕೊಳ್ಳುತ್ತಿದ್ದೀರಾ? ನಿಮಗೆ ಸರಿಯಾದ ನಿದ್ದೆ ಸಿಗುತ್ತಿಲ್ಲವೆಂದಾದಲ್ಲಿ ಅದೂ ಕೂಡಾ ನಿಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

೪. ಅತಿಯಾದ ಜಂಕ್‌ ಸೇವನೆ: ಅತಿಯಾದ ಜಂಕ್‌ ಸೇವನೆ (junk food) ಇತ್ತೀಚಿಗೆ ಅತ್ಯಂತ ಹೆಚ್ಚಾಗಿದೆ. ಅನಾರೋಗ್ಯಕರ ಆಹಾರದಿಂದ ಆರೋಗ್ಯವನ್ನು ಹೇಗೆ ಬಯಸಬಹುದು ಹೇಳಿ? ಹಾಗಾಗಿ, ತಿನ್ನುವ ಆಹಾರದ ಮೇಲೆ ನಿಗಾ ಇರಲಿ.

೫. ಅತಿಯಾದ ಒತ್ತಡ: ಅತಿಯಾದ ಕೆಲಸ, ಮಾನಸಿಕ ನೆಮ್ಮದಿ ಇತ್ತದಿರುವುದು, ಹೆಚ್ಚಿದ ಜವಾಬ್ದಾರಿಗಳು ಮನುಷ್ಯನಿಗೆ ಒತ್ತಡವನ್ನು ತರಿಸುತ್ತದೆ. ಇದರಿಂದ ನಿದ್ದೆಯ ಸಮಸ್ಯೆಯೂ ಬರಬಹುದು. ಹೀಗಾಗಿ ಇದೂ ಕೂಡಾ ನೇರವಾಗಿ ನಮ್ಮ ರೋಗನಿರೋಧಕ ವ್ಯವಸ್ಥೆಯನ್ನೇ ಹದಗೆಡಿಸುತ್ತದೆ.

ಇದನ್ನೂ ಓದಿ: Health Tips For Rainy Season: ಮಳೆಗಾಲದಲ್ಲಿ ಹೆಚ್ಚುವ ನೋವುಗಳನ್ನು ಕಡಿಮೆ ಮಾಡುವುದು ಹೇಗೆ?

೬. ಅತಿಯಾದ ವ್ಯಾಯಾಮ: ಫಿಟ್‌ನೆಸ್‌ ಅನ್ನು ಅತಿಯಾಗಿ ಹಚ್ಚಿಕೊಂಡರೂ ಅದು ಸಮಸ್ಯೆಯೇ. ನಮ್ಮ ದೇಹಕ್ಕೆ ಅಗತ್ಯವಿರುವಷ್ಟು, ನಮ್ಮ ದೇಹ ಭರಿಸಿಕೊಳ್ಳುವಷ್ಟು ಮಾತ್ರ ವ್ಯಾಯಾಮ ಮಾಡಿ. ನಿತ್ಯವೂ ಫಿಟ್‌ನೆಸ್‌ ಹೆಸರಿನಲ್ಲಿ ದೇಹ ದಂಡಿಸುವುದರಿಂದಲೂ ಮಾಂಸಖಂಡಗಳಿಗೆ ಹಾನಿಯಾಗಿ, ಸುಸ್ತು ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಕುಗ್ಗಬಹುದು.

೭. ಅತಿಯಾದ ಸ್ಕ್ರೀನ್‌ಟೈಮ್:‌ ಅತಿಯಾಗಿ ಫೋನ್‌, ಗ್ಯಾಜೆಟ್‌ ಬಳಸುವುದರಿಂದಲೂ ನಿದ್ರಾಹೀನತೆ, ಮೈಗ್ರೇನ್‌ ಇತ್ಯಾದಿ ಸಮಸ್ಯೆಗಳು ಉಂಟಾಗಿ ರೋಗನಿರೋಧಕ ಶಕ್ತಿಯೇ ದುರ್ಬಲವಾಗಬಹುದು.

೮. ಅತಿಯಾಗಿ ಕಾಫಿ ಕುಡಿಯುವುದು: ಅತಿಯಾದ ಕಾಫಿ ಸೇವನೆಯಿಂದ ಹೈಪರ್‌ಟೆನ್ಶನ್‌, ಹೃದಯ ಬಡಿತ ಹೆಚ್ಚಾಗುವುದು ಇತ್ಯಾದಿ ಸಮಸ್ಯೆ ಬರಬಹುದು. ಇದೂ ಕೂಡಾ ರೋಗನಿರೋಧಕತೆ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Benefits Of Eating Okra: ಬೆಂಡೆಕಾಯಿ ತಿಂದರೆ ಏನೆಲ್ಲ ಪ್ರಯೋಜನ?

Exit mobile version