ಮನೆಯೊಂದರ ಆರೋಗ್ಯದ ಕೀಲಿಕೈ ಇರುವುದು ಅಡುಗೆ ಮನೆಯಲ್ಲಿ. ನಮ್ಮ ನಿತ್ಯದ ಆಹಾರದ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿದೆ. ಆಹಾರ ಏರುಪೇರಾದರೆ ಆರೋಗ್ಯದಲ್ಲೂ ಏರುಪೇರೇ ಆಗುತ್ತದೆ. ನಮ್ಮ ಆರೋಗ್ಯವನ್ನು ಒಂದು ಮಟ್ಟಿಗೆ ಸಮಸ್ಥಿತಿಯಲ್ಲಿಡಲು, ನಮ್ಮ ಮನೆಯೊಳಗಿನ ನಿತ್ಯಾಹಾರದ ಕೆಲ ಪದಾರ್ಥಗಳು ಉತ್ತಮ ಪರಿಣಾಮಕಾರಿಯೂ ಹೌದು. ಮಸಾಲೆ ಪದಾರ್ಥಗಳು ಇವುಗಳಲ್ಲಿ ಒಂದು. ಕರಿಮೆಣಸಿನಿಂಧ ಹಿಡಿದು ಚೆಕ್ಕೆ ಲವಂಗದವರೆಗೆ ಎಲ್ಲವೂ ಶೀತ ಕಫದಂತಹ ಸಮಸ್ಯೆಗಳಿಂದ ಹಿಡಿದು ನಮ್ಮನ್ನು ರೋಗರುಜಿನಗಳಿಂದ ಕಾಪಾಡುವ ಅಮೃತವೇ ಸರಿ. ನಮ್ಮ ಮನೆಯೊಳಗಿನ ಮಸಾಲೆ ಬಟ್ಟಲ ಮಸಾಲೆಗಳು ನಮ್ಮನ್ನು ವೈದ್ಯರಿಂದ ದೂರವಿರಿಸಲು ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಯೋಣ.
ಲವಂಗ: ಲವಂಗ ಒಂದು ನೈಸರ್ಗಿಕ ಆಂಟಿಬಯಾಟಿಕ್‌ನಂತೆ ಕೆಲಸ ಮಾಡುತ್ತದೆ. ಇದಕ್ಕೆ ದೇಹದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ತಾಕತ್ತಿದೆ. ಬ್ಯಾಕ್ಟೀರಿಯಾ ಇನ್‌ಫೆಕ್ಷನ್, ಹಲ್ಲಿನ ತೊಂದರೆಗಳು, ಬಾಯಿಯ ಇನ್‌ಫೆಕ್ಷನ್‌ಗಳು, ಫುಡ್ ಪಾಯ್ಸನ್, ಗಾಯ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಜೀರಿಗೆ: ಜೀರಿಗೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣವು ನಮಗೆ ಸದಾ ಶಕ್ತಿಯನ್ನು ನೀಡಿ ಆರೋಗ್ಯವಾಗಿರಿಸುತ್ತದೆ. ಜೀರಿಗೆಯ ನಿತ್ಯೋಪಯೋಗ ಹಲವಾರು ಸಮಸ್ಯೆಗಳನ್ನು ನಮ್ಮ ಸಮೀಪಕ್ಕೆ ಬರದಂತೆ ದೂರವಿರಿಸುತ್ತದೆ. ಇದೊಂದು ಆಂಟಿಸೆಪ್ಟಿಕ್ ಏಜೆಂಟ್ ಆಗಿಯೂ ಕೆಲಸ ಮಾಡುತ್ತದೆ. ಬ್ಯಾಕ್ಟೀರಿಯಾದಿಂದಾದ ಇನ್‌ಫೆಕ್ಷನ್‌ಗಳನ್ನು ಇದು ಹೋಗಲಾಡಿಸುವುದಷ್ಟೇ ಅಲ್ಲ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರಿಸುವಿಕೆ ಮೊದಲಾದ ಸಮಸ್ಯೆಗಳಿಗೆ ಜೀರಿಗೆ ಅತ್ಯುತ್ತಮ ಮನೆಮದ್ದು.
ಏಲಕ್ಕಿ: ಪರಿಮಳಭರಿತ ಏಲಕ್ಕಿಯ ಆರೋಗ್ಯದ ಲಾಭ ಅನೇಕ. ಏಲಕ್ಕಿ ಕೇವಲ ಬ್ಯಾಕ್ಟೀರಿಯಾ ಮಾತ್ರವಲ್ಲ, ಫಂಗಲ್ ಇನ್‌ಫೆಕ್ಷನ್‌ಗೂ ಪರಿಣಾಮಕಾರಿ ಔಷಧಿ. ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಸಹಜ ಸ್ಥಿತಿಗೆ ಬರುವಲ್ಲಿ ಇದು ನೆರವಾಗುತ್ತದೆ. ಉಸಿರಾಟದ ತೊಂದರೆಗೂ ಇದರಲ್ಲಿ ಪರಿಣಾಮಕಾರಿ ಮಾರ್ಗವಿದೆ. ಚರ್ಮ,ಕೂದಲ ಆರೋಗ್ಯಕ್ಕೆ ಉಪಯುಕ್ತ.
ಚಕ್ಕೆ(ದಾಲ್ಚಿನಿ): ದಾಲ್ಚಿನಿ ಕೂಡಾ ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದ ಮಸಾಲೆ. ಇದು ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಪಚನಕ್ರಿಯೆಯನ್ನು ಚುರುಕುಗೊಳಿಸಿ ವಿಷಕಾರಕಗಳನ್ನು ಹೊರಕ್ಕೆ ಕಳಿಸುತ್ತದೆ. ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ. ಶೀತ, ಕೆಮ್ಮು ನೆಗಡಿಯಂತಹ ಸಮಸ್ಯೆಗಳಿಗೂ ಇದರಿಂದ ಪರಿಹಾರ ಇದೆ. ಮಿದುಳಿನ ಆರೋಗ್ಯಕ್ಕೆ ಅತ್ಯುತ್ತಮ.
ಬೆಳ್ಳುಳ್ಳಿ: ಬೆಳ್ಳುಳ್ಳಿ ರೋಗ ನಿರೋಧಕತೆಯನ್ನು ಹೆಚ್ಚು ಮಾಡುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ರಕ್ತದೊತ್ತಡ, ಕೊಲೆಸ್ಟೆರಾಲನ್ನು ಕಡಿಮೆ ಮಾಡಬಲ್ಲ ಇದೂ ಕೂಡಾ ಹೃದಯಕ್ಕೆ ಒಳ್ಳೆಯ ಗೆಳೆಯ.ಇದರಲ್ಲಿರುವ ಆಂಟಿಬಯಾಟಿಕ್ ಗುಣಗಳು ಶೀತ, ಕೆಮ್ಮು, ನೆಗಡಿ, ಜ್ವರದಂತಹ ಸಮಸ್ಯೆಗಳನ್ನು ದೂರ ಇರಿಸುತ್ತದೆ. ಮರೆವಿನ ಕಾಯಿಲೆಗಳಾದ ಅಲ್ಝೈಮರ್ ಹಾಗೂ ಡಿಮೆನ್ಶಿಯಾದಂತಹ ಸಮಸ್ಯೆಗಳು ಬರದಂತೆ ತಡೆಯುತ್ತದೆ.
ಇದನ್ನೂ ಓದಿ: Food Tips: ಅಡುಗೆಮನೆಯ ಒಗ್ಗರಣೆ ಡಬ್ಬಿ ನಿಮ್ಮ ಲೈಂಗಿಕ ಜೀವನಕ್ಕೂ ಒಗ್ಗರಣೆಯೇ!
ಕಾಳುಮೆಣಸು: ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಇದು ರೋಗ ನಿರೋಧಕತೆಯನ್ನು ಹೆಚ್ಚು ಮಾಡುವ ಇನ್ನೊಂದು ದಿವ್ಯ ಮಸಾಲೆ ಪದಾರ್ಥ. ನಮ್ಮ ಮಿದುಳಿನ ಆರೋಗ್ಯಕ್ಕೆ ಇದರ ಕಾಣಿಕೆಯಿದೆ. ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಕೊಲೆಸ್ಟೆರಾಲ್ ಮಟ್ಟವನ್ನೂ ಕಡಿಮೆ ಮಾಡುತ್ತದೆ.
ಶುಂಠಿ: ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶುಂಠಿ ಶಮನಕಾರಿ. ಪಚನಕ್ರಿಯೆಯನ್ನು ಚುರುಕಾಗಿಸುವ ಗುಣ ಇದರಲ್ಲಿದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಕಳಿಸುತ್ತದೆ. ಡಿಮೆನ್ಶಿಯಾ, ಖಿನ್ನತೆ ಮತ್ತಿತರ ಮಾನಸಿಕ ಸಮಸ್ಯೆಗಳಿಗೂ ಶುಂಠಿಯಿಂದ ಲಾಭಗಳಿವೆ. ಮೋಷನ್ ಸಿಕ್‌ನೆಸ್, ಪ್ರಯಾಣದ ವೇಳೆ ಸುಸ್ತು, ಶೀತ, ತಲೆನೋವು ಮತ್ತಿತರ ಎಲ್ಲ ಸಮಸ್ಯೆಗಳಲ್ಲೂ ತನ್ನಲ್ಲಿ ಪರಿಹಾರ ಇಟ್ಟುಕೊಂಡಿರುವ ಶುಂಠಿ ಒಂದು ದಿವ್ಯೌಷಧ.
ಒರಿಗಾನೋ: ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಇದರಿಂದಲೂ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ವೈರಲ್ ಇನ್ಫೆಕ್ಷನ್‌ಗೆ ಇದು ಪರಿಣಾಮಕಾರಿ ಮನೆ ಔಷಧ. ಕ್ಯಾನ್ಸರ್ ನಾಶಕ ಗುಣಗಳೂ ಇದರಲ್ಲಿದೆ. ಶೀತ, ಕಫ, ನೆಗಡಿಯಂತಹ ಸಾಮಾನ್ಯ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಜೀರ್ಣಕ್ರಿಯೆಯನ್ನು ಚುರುಕಾಗಿಸುವ ಸಾಮರ್ಥ್ಯ ಇದರಲ್ಲಿದೆ.
ಅರಿಶಿನ: ತನ್ನ ಬಣ್ಣದಿಂದ ಚಿತ್ತಾಕರ್ಷಕವಷ್ಟೇ ಅಲ್ಲ, ನಿತ್ಯ ಸಂಜೀವಿನಿಯಂತೆ ಮನೆಯಲ್ಲಿರುವ ಅತ್ಯಂತ ಉಪಯುಕ್ತ ಮಸಾಲೆಯಿದು. ಆಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿರುವ ಇದು ಅನೇಕ ಇನ್ಫೆಕ್ಷನ್‌ಗಳಿಂದ ಕಾಪಾಡುತ್ತದೆ. ಕೊಲೆಸ್ಟೆರಾಲ್ ಮಟ್ಟವನ್ನು ತಗ್ಗಿಸುತ್ತದೆ. ಚರ್ಮದ ಕಾಯಿಲೆಗಳಿಗೆ, ಗಾಯಕ್ಕೆ ಇದು ಅತ್ಯುತ್ತಮ. ಶೀತ, ಕಫ, ನೆಗಡಿಯನ್ನು ದೂರವಿರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Indian spices | ಮಸಾಲೆ ಪರಿಮಳ ಸದಾ ಘಮಘಮ ಅಂತಾ ಇರಬೇಕಿದ್ದರೆ ಹೀಗೆ ಮಾಡಿ